ಇಂದು ಅಂಗೈಯಲ್ಲೇ ಎಲ್ಲವೂ ಅನ್ನೋ ಅಷ್ಟರಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಆದರೆ, ಕೆಲವು ಅನಿಷ್ಠ ಪದ್ಧತಿಗಳು ಈ ಸಮಾಜದಲ್ಲಿ ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಇಲ್ಲೊಂದು ಸರ್ಕಾರಿ ಆಸ್ಪತ್ರೆಯೇ ತಾಜಾ ಉದಾಹರಣೆಯಾಗಿದೆ.
ಸ್ಮಶಾನದ ಬಳಿ ಇರುವ ಆಸ್ಪತ್ರೆಯಲ್ಲಿ ಮಗು ಜನಿಸಿದ್ರೆ ಕೇಡಾಗುತ್ತದೆಯೆಂದು ಹೆದರಿ ಕಳೆದು ಮೂರು ವರ್ಷಗಳಿಂದ ಈ ಆಸ್ಪತ್ರೆಗೆ ಯಾರೊಬ್ಬ ಗರ್ಭಿಣಿಯರು ಹೆರಿಗೆಗೆ ಬರುವುದಿಲ್ಲ. ಇದು ಬೀದರ್ ತಾಲೂಕಿನ ಬಗದಲ್ ಗ್ರಾಮದ ಹೊರವಲಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೌಢ್ಯತೆಯ ಅನಾವರಣವಾಗಿದೆ.
ʼಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಮ್ಮು, ನೆಗಡಿ, ಜ್ವರದಿಂದ ಬಳಲುವ ರೋಗಿಗಳು ಮಾತ್ರ ಇಲ್ಲಿ ಚಿಕಿತ್ಸೆಗೆ ಬರುತ್ತಾರೆ. ಸ್ಮಶಾನದಲ್ಲಿನ ಆಸ್ಪತ್ರೆಯಲ್ಲಿ ಮಗು ಜನಿಸಿದರೆ ಮಗುವಿನ ಮುಂದಿನ ಭವಿಷ್ಯ ಚೆನ್ನಾಗಿರಲ್ಲ ಎಂಬ ಕಾರಣಕ್ಕೆ ಹೆರಿಗೆಗೆ ಬರಲು ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ಬಡ ರೋಗಿಗಳ ಉಪಯೋಗಕ್ಕಾಗಿ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಿಂದ ಹೈಟೆಕ್ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗಿದೆ. 2020ರಲ್ಲಿ ಉದ್ಘಾಟನೆಯಾದ ಈ ಆಸ್ಪತ್ರೆ ಸುತ್ತಲೂ ಸ್ಮಶಾನ ಇದೆ. ಈ ಒಂದೇ ಕಾರಣದಿಂದ ಹೆರಿಗೆಗೆ ಬರಲು ಹೆದರುತ್ತಾರೆ. ಇನ್ನು ಹೊರ ರೋಗಿಗಳು ಸಹ ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ಚಿಕಿತ್ಸೆ ಪಡೆಯಲು ಬರ್ತಾರೆ, ರಾತ್ರಿಯಾದರೆ ಯಾರೊಬ್ಬರೂ ಕೂಡ ಆಸ್ಪತ್ರೆ ಕಡೆ ಸುಳಿಯದಂತಹ ಪರಿಸ್ಥಿತಿಯಿಂದ ಇದು ʼಡೇ ಕೇರ್ʼ ಆಸ್ಪತ್ರೆ ಎಂಬಂತಾಗಿದೆ.

ಜಿಲ್ಲಾ ಕೇಂದ್ರದಿಂದ 25 ಕಿ.ಮೀ ಆಸುಪಾಸಿನಲ್ಲಿರುವ ಬಗದಲ್ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಸುಮಾರು 2000ಕ್ಕಿಂತ ಅಧಿಕ ಮನೆಗಳಿವೆ. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೆಚ್ಚು ಜನಸಂಖ್ಯೆ ಹೊಂದಿರುವ ಊರು ಇದಾಗಿದೆ. ವಿಶ್ವಕ್ಕೆ ಸಮಾನತೆ ತತ್ವ ಸಾರಿದ ಬಸವಾದಿ ಶರಣರ ನೆಲದಲ್ಲಿಯೇ ಮೌಢ್ಯ ಆಚರಣೆ ಇನ್ನೂ ಚಾಲ್ತಿಯಲ್ಲಿರುವುದು ವಿಪರ್ಯಾಸವೇ ಸರಿ.
ಈ ಕುರಿತು ಬಗದಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂದೀಪ ಘೋಡೆ ಈದಿನ.ಕಾಮ್ ಜೊತೆ ಮಾತನಾಡಿ, ʼಕಳೆದ ಮೂರು ವರ್ಷಗಳ ಹಿಂದೆ ಉದ್ಘಾಟನೆಯಾದ ಆರೋಗ್ಯ ಕೇಂದ್ರ ಎಲ್ಲ ಸೌಲಭ್ಯ ಹೊಂದಿದೆ. ಆದರೆ, ಆಸ್ಪತ್ರೆ ಸುತ್ತ ಸ್ಮಶಾನ ಇರುವ ಹಿನ್ನಲೆ ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿಯಿಂದ ಸಾಕಷ್ಟು ಜಾಗೃತಿ ಮೂಡಿಸಿದರೂ ಸಹ ಹೆರಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆʼ ಎಂದು ಹೇಳಿದರು.

ʼಈ ಆರೋಗ್ಯ ಕೇಂದ್ರಕ್ಕೆ ಸುತ್ತಲಿನ 12ಕ್ಕೂ ಅಧಿಕ ಗ್ರಾಮಗಳ ರೋಗಿಗಳು ಬರುತ್ತಾರೆ. ಪ್ರತಿದಿನ 60-70 ಓಪಿಡಿ ಇದೆ. ಗರ್ಭಿಣಿಯರು ಬೆಳಿಗ್ಗೆಯಿಂದ ಸಂಜೆಯವರೆಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ ಹೆರಿಗೆಗಾಗಿ ಬಗದಲ್ ಗ್ರಾಮದಲ್ಲಿರುವ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುತ್ತಾರೆ. ಈ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಜನರು ಬದಲಾಗದೆ ಮೌಢ್ಯ ಅನುಸರಿಸುತ್ತಿದ್ದಾರೆʼ ಎಂದು ಹೇಳಿದರು.
ಲಕ್ಷಾಂತರ ರೂಪಾಯಿ ವೆಚ್ಚದಿಂದ ಸುಸ್ಸಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ತಾಂತ್ರಿಕ ಸೌಲಭ್ಯವನ್ನು ಹೊಂದಿದೆ, ವೈದ್ಯ ಸಿಬ್ಬಂದಿ ಕೂಡ ಇದ್ದಾರೆ. ಆದರೆ, ಮೌಢ್ಯತೆ ಕಾರಣದಿಂದ ಹೊಸ ಆಸ್ಪತ್ರೆಗೆ ಬಾರದೇ ಎಲ್ಲರೂ ಹೆರಿಗೆಗಾಗಿ ಮೂಲ ಸೌಕರ್ಯ ಇಲ್ಲದಿರುವ ಗ್ರಾಮದ ಹಳೆ ಆರೋಗ್ಯ ಕೇಂದ್ರಕ್ಕೆ ತೆರಳುತ್ತಾರೆ. ಹೊಸ ಆಸ್ಪತ್ರೆಗೆ ಯಾಕೆ ಹೋಗಲ್ಲ ಎಂದು ಕೇಳಿದರೆ, ʼದವಖಾನೆ ಬಾಜು ಕುಣಿ ಅವಾರಿ, ಅದಕ್ಕಂಜಿ ಯಾರೂ ಹೋಗಲ್ಲʼ ಎಂಬುದು ಗ್ರಾಮಸ್ಥರ ಮಾಮೂಲಿ ಉತ್ತರ ಸಿಗುತ್ತದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಕ್ಟೋಬರ್ 7, 9ರಂದು ಎರಡು ಕಂತಿನ ʼಗೃಹಲಕ್ಷ್ಮಿʼ ಹಣ ಜಮೆ : ಹೆಬ್ಬಾಳ್ಕರ್
ಈ ಕುರಿತು ಪ್ರತಿಕ್ರಿಯೆಗಾಗಿ ಬೀದರ್ ಡಿಎಚ್‌ಒ ಡಾ.ಧ್ಯಾನೇಶ್ವರ ನೀರಗುಡಿ ಅವರನ್ನು ಈದಿನ.ಕಾಮ್ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.
‘ಸ್ಮಶಾನ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮದಿಂದ ಹೊರವಲಯದಲ್ಲಿದ್ದು ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ. ಆಸ್ಪತ್ರೆಗೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಎದೆಯೆತ್ತರಕ್ಕೆ ಮುಳ್ಳುಕಂಟಿಗಳು ಬೆಳೆದಿರುವ ಕಾರಣಕ್ಕೆ ಆಸ್ಪತ್ರೆಗೆ ಒಬ್ಬರೇ ಹೋಗಲಾರದಂಥ ಪರಿಸ್ಥಿತಿ ಇದೆ’ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.