ಭಾರತದ ನೆರೆಯ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕಳೆದ ವರ್ಷ, ಶ್ರೀಲಂಕಾದಲ್ಲಿ ನಿರುದ್ಯೋಗ, ಹಣದುಬ್ಬರ, ಅಗತ್ಯ ವಸ್ತುಗಳ ಕೊರತೆಯಿಂದಾಗಿ ಅಲ್ಲಿನ ಜನರು ಮಾಜಿ ಪ್ರಧಾನಿ ಗೊಟಬಯ ರಾಜಪಕ್ಸೆ ನೇತೃತ್ವದ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ದೇಶದಲ್ಲಿ ಅಲ್ಲೋಲ-ಕಲ್ಲೋಲವೇ ಸೃಷ್ಟಿಯಾಗಿತ್ತು. ಶ್ರೀಲಂಕಾದ ಆರ್ಥಿಕತೆ ಸುಧಾರಣೆಗೆ ಚೀನಾ, ಭಾರತ ಸೇರಿದಂತೆ ನಾನಾ ರಾಷ್ಟ್ರಗಳ ನೆರವು ನೀಡಲು ಮುಂದಾಗಿದ್ದವು. ಇದೀಗ, ಶ್ರೀಲಂಕಾ ಆರ್ಥಿಕ ಚೇತರಿಕೆಯ ಹಾದಿಯಲ್ಲಿದೆ. ಇನ್ನು, ಬಾಂಗ್ಲಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಮೀಸಲಾತಿ ವಿರುದ್ಧದ ಹೋರಾಟವು ಅಲ್ಲಿನ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ತೊರೆಯುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನವೂ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಭಾರೀ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತದೆ.
ಪಾಕಿಸ್ತಾನದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಾಣುತ್ತಿದೆ. ಹಣದುಬ್ಬರ ಹೆಚ್ಚುತ್ತಿದ್ದು, ಗಣನೀಯ ವ್ಯಾಪಾರ ಕೊರತೆ ಸೇರಿದಂತೆ ಗಮನಾರ್ಹ ಆರ್ಥಿಕ ಸವಾಲುಗಳು ಎದುರಾಗಿವೆ. ನಿರಂತರವಾಗಿ ಸಾಲ ತೆಗೆದೇ ಅಲ್ಲಿನ ಸರ್ಕಾರ ನಡೆಸಲಾಗುತ್ತಿದೆ. ಐಎಂಎಫ್‌ನಿಂದ ಭಾರೀ ಮೊತ್ತದ ಸಾಲವನ್ನು ಪಾಕಿಸ್ತಾನ ಪಡೆದುಕೊಂಡಿದೆ. ಮತ್ತೆ ಐಎಂಎಫ್ ಪಾಕಿಸ್ತಾನಕ್ಕೆ ಸಾಲ ನೀಡಬೇಂದರೆ, ಹಲವು ಶರತ್ತುಗಳನ್ನು ವಿಧಿಸುತ್ತಿದೆ.
ಪಾಕಿಸ್ತಾನದಲ್ಲಿ ಒಂದೆಡೆ ಆರ್ಥಿಕ ಬಿಕ್ಕಟ್ಟು, ಮತ್ತೊಂದೆಡೆ ಹೇರಳವಾದ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಕಳೆದ ಆಗಸ್ಟ್ 5ರಂದು ಪಾಕಿಸ್ತಾನ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಮಾತ್ರವಲ್ಲದೆ, ಅವರಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಇತ್ತ, ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮೂಲ ಸೌಕರ್ಯಗಳ ಕೊರತೆ, ಕಡಿಮೆ ವೇತನದಂತಹ ಸಮಸ್ಯೆಗಳು ಪಾಕಿಸ್ತಾನವನ್ನು ಕಾಡುತ್ತಿವೆ.
ಸ್ವಾತಂತ್ರ್ಯ ನಂತರದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ಬರೋಬ್ಬರಿ 25 ಬಾರಿ ಸಾಲ ಪಡೆದುಕೊಂಡಿದೆ. ಸಾಲದ ಮೇಲೆ ಸಾಲ ಪಡೆದು, ಪಾಕಿಸ್ತಾನ ಸಾಲದ ಋಣವನ್ನೂ ಹೆಚ್ಚಿಸಿಕೊಂಡಿದೆ. ಹೀಗಾಗಿ, ಮತ್ತೆ ಸಾಲ ಕೊಡಲು ಐಎಂಎಫ್ ಹಿಂದೇಟು ಹಾಕುತ್ತಿದೆ. ಪಾಕಿಸ್ತಾನದ ಮೇಲೆ ಕೆಲ ಷರತ್ತುಗಳನ್ನು ಹೇರಿದೆ. ಹಲವು ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ, ಸರ್ಕಾರವು ತನ್ನ ಬೊಕ್ಕಸದಲ್ಲಿ ಹೆಚ್ಚು ಹಣವನ್ನು ಇಟ್ಟುಕೊಳ್ಳಬೇಕು ಎಂದು ಐಎಂಎಫ್ ಷರತ್ತು ವಿಧಿಸಿತ್ತು. ಹೀಗಾಗಿಯೇ, ಪಾಕಿಸ್ತಾನ ಈಗಾಗಲೇ ಆರು ಸಚಿವಾಲಯಗಳನ್ನು ರದ್ದುಗೊಳಿಸಿ, ಇನ್ನೆರಡು ಸಚಿವಾಲಯಗಳ ವಿಲೀನ ಮಾಡುವ ನಿರ್ಧಾರವನ್ನು ಪಾಕ್ ಸರ್ಕಾರ ಘೋಷಣೆ ಮಾಡಿದೆ. ಅದಾಗ್ಯೂ, ಆರ್ಥಿಕತೆ ಸರಿದಾರಿಗೆ ಬರುವಲ್ಲಿ ಎಡವಿದೆ. ಪ್ರಸ್ತುತ, ಆರ್ಥಿಕ ವೆಚ್ಚವನ್ನ ಕಡಿಮೆ ಮಾಡಲು ಸುಮಾರು ಒಂದುವರೆ ಲಕ್ಷ ಸರ್ಕಾರಿ ಉದ್ಯೋಗಗಳನ್ನ ಕಡಿತಗೊಳಿಸಲು ಪಾಕ್ ಸರ್ಕಾರ ನಿರ್ಧಾರ ಮಾಡಿದೆ.
ಜೊತೆಗೆ, ಕೆಲವು ಖರ್ಚುಗಳನ್ನು ಕಡಿತಗೊಳಿಸಲು, ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸಲು, ಕೃಷಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕವಲ್ಲದ ವಲಯಗಳಿಗೆ ತೆರಿಗೆ ವಿಧಿಸಲು, ಸಬ್ಸಿಡಿಗಳನ್ನು ಮಿತಿಗೊಳಿಸಲು ಹಾಗೂ ಕೆಲವು ಹಣಕಾಸಿನ ಜವಾಬ್ದಾರಿಗಳನ್ನು ಆಯಾ ಪ್ರಾಂತ್ಯಗಳಿಗೆ ವರ್ಗಾಯಿಸಲು ಪಾಕ್ ಸರ್ಕಾರ ಮುಂದಾಗಿದೆ.
ಪಾಕಿಸ್ತಾನ ಇಷ್ಟೆಲ್ಲ ಕಸರತ್ತುಗಳನ್ನು ಮಾಡಿದ ಬಳಿಕ ಐಎಂಎಫ್ ಮತ್ತೆ ಪಾಕಿಸ್ತಾನಕ್ಕೆ ಸಾಲ ನೀಡಲು ಸೆ.26ರಂದು ಒಪ್ಪಿಕೊಂಡಿದೆ. ಒಟ್ಟು 7 ಶತಕೋಟಿ (ಬಿಲಿಯನ್) ಡಾಲರ್ ಸಾಲ ನೀಡಲು ಐಎಂಎಫ್ ಒಪ್ಪಿಕೊಂಡಿದೆ. ಅದರಲ್ಲಿ, ಮೊದಲ ಕಂತಿನಲ್ಲಿ 1 ಬಿಲಿಯನ್ ಡಾಲರ್ ಹಣವನ್ನೂ ಬಿಡುಗಡೆ ಮಾಡಿದೆ.
ಐಎಂಎಫ್‌ನಿಂದ ಸಾಲ ಪಡೆದಿರುವ ಪಾಕ್, ಕೆಲವು ಆರ್ಥಿಕ ಸುಧಾರಣೆಯ ಕ್ರಮಗಳನ್ನು ಕೈಗೊಂಡಿದೆ. ದೇಶದ ಸ್ಥಿತಿಯನ್ನು ಮತ್ತೆ ಹಳಿಗೆ ತರಲು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.
ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, “ನಾವು ತೆರಿಗೆ ಆದಾಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೇವೆ. ಕಳೆದ ವರ್ಷ ಸರಿಸುಮಾರು 3,00,000 ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದರು. ಈ ವರ್ಷ 7,32,000 ಹೊಸ ತೆರಿಗೆದಾರರು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು ತೆರಿಗೆದಾರರ ಸಂಖ್ಯೆ 16 ಲಕ್ಷದಿಂದ 32 ಲಕ್ಷಕ್ಕೆ ಏರಿಕೆಯಾಗಿದ್ದಾರೆ. ತೆರಿಗೆ ಪಾವತಿಸದವರಿಗೆ ಇನ್ನು ಮುಂದೆ ಆಸ್ತಿ ಅಥವಾ ವಾಹನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ” ಎಂದಿದ್ದಾರೆ.
ಕಳೆದ 6 ತಿಂಗಳಿಗೆ ಹೋಲಿಸಿದರೆ, ದೇಶದ ಆರ್ಥಿಕತೆ ಕೊಂಚ ಸುಧಾರಿಸಿದೆ ಎಂದು ಪಾಕ್ ಹೇಳಿಕೊಂಡಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹವು ಅತ್ಯಧಿಕ ಮಟ್ಟವನ್ನು ತಲುಪಿದೆ. ರಾಷ್ಟ್ರೀಯ ರಫ್ತು ಮತ್ತು ಐಟಿ ರಫ್ತು ಎರಡರಲ್ಲೂ ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದೇವೆ. ಆರ್ಥಿಕತೆಯ ಬಲದ ಬಗ್ಗೆ ಹೂಡಿಕೆದಾರರ ವಿಶ್ವಾಸವೇ ನಮ್ಮ ಪ್ರಮುಖ ಯಶಸ್ಸು ಎಂದು ಸಚಿವ ಔರಂಗಜೇಬ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ತನ್ನ ಗ್ರಾಹಕ ಬೆಲೆ ಸೂಚ್ಯಂಕವನ್ನು ಪ್ರಕಟಿಸಿದೆ. ಅದರಲ್ಲಿ, ಹಣದುಬ್ಬರವು 6.7%ಗೆ ಇಳಿಕೆಯಾಗಿದೆ ಎಂದು ಹೇಳಿಕೊಂಡಿದೆ. ಈ ಹಣದುಬ್ಬರವನ್ನು 2025ರ ಸೆಪ್ಟೆಂಬರ್ ವೇಳೆಗೆ 5%ಗೆ ಇಳಿಸುವ ಗುರಿ ಇದೆ ಎಂದೂ ಅಂಕಿಅಂಶಗಳು ಹೇಳುತ್ತಿವೆ.
ಅಂದಹಾಗೆ, ಪಾಕಿಸ್ತಾನದ ಹಣದುಬ್ಬರವು ಕಳೆದ ವರ್ಷದ ಆಗಸ್ಟ್‌ನಲ್ಲಿ 9.6% ಇತ್ತು. ಇದು, ಕಳೆದ ನಾಲ್ಕು ವರ್ಷಗಳಲ್ಲಿಯೇ ಅತ್ಯಧಿಕವಾಗಿತ್ತು. ಇದೀಗ, ಪಾಕ್ ಸರ್ಕಾರದ ಆರ್ಥಿಕ ತಂಡವು ದೇಶದ ಆರ್ಥಿಕ ದೃಷ್ಟಿಕೋನವನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಪ್ರಧಾನಿ ಷರೀಫ್ ನೇತೃತ್ವದ ಸರ್ಕಾರವು ಪಾಕ್‌ನ ಆರ್ಥಿಕತೆಯನ್ನು ಸರಿಪಡಿಸಲು ಮತ್ತು ಜನಸಾಮಾನ್ಯರ ಮೇಲಿನ ಹೊರೆ ಕಡಿಮೆ ಮಾಡಲು ಹೆಣಗಾಡುತ್ತಿದೆ. ಆದರೆ, ಉದ್ಯೋಗ ಕಡಿತ, ತೆರಿಗೆ ಹೊರೆಯು ಹೆಚ್ಚುತ್ತಲೇ ಇದೆ.
ಈ ಸುದ್ದಿ ಓದಿದ್ದೀರಾ? ಇಸ್ರೇಲ್-ಇರಾನ್ ಸಂಘರ್ಷ | ಅಮೆರಿಕಾ ಕುತಂತ್ರಕ್ಕೆ ಇಸ್ರೇಲ್ ದಾಳ
ಪಾಕಿಸ್ತಾನವು 1950ರ ನಂತರ ಈವರೆಗೆ, ಒಟ್ಟು 223.86 ಶತಕೋಟಿ ಡಾಲರ್ ಸಾಲ ಮಾಡಿದೆ. ಇದು, ಪಾಕಿಸ್ತಾನದ ಜಿಡಿಪಿಯ 74.3% ಆಗಿದೆ. ಈ ಪ್ರಮಾಣದ ಬೃಹತ್ ಸಾಲ ಮಾಡಿರುವ ಪಾಕಿಸ್ತಾನ, ಆರ್ಥಿಕವಾಗಿ ಸುಧಾರಿಸಿಕೊಳ್ಳುವುದು, ಜೊತೆಗೆ ಋಣಮುಕ್ತವಾಗುವುದು ಸವಾಲಾಗಿದೆ. ಇದೇ ಹೊತ್ತಿನಲ್ಲಿನ ಪಾಕಿಸ್ತಾನದಲ್ಲಿ ಹೆಚ್ಚು ಹೋಡಿಕೆ ಮಾಡಲು ಚೀನಾ ಮುಂದಾಗಿದೆ. ಪಾಕ್-ಚೀನಾ ಜಂಟಿಯಾಗಿ ಯೋಜನೆಗಳನ್ನು ರೂಪಿಸುತ್ತಿವೆ.
ಪಾಕಿಸ್ತಾನದಂತೆಯೇ ಶ್ರೀಲಂಕಾ ಕೂಡ ಆರ್ಥಿಕ ಆಧೋಗತಿಯತ್ತ ಸಾಗುತ್ತಿದೆ. ಭಾರತದ ನೆರೆಯ ರಾಷ್ಟ್ರಗಳ ಆರ್ಥಿಕವಾಗಿ ಕುಸಿಯುತ್ತಿವೆ. ಮಾತ್ರವಲ್ಲ, ಇದೇ ವೇಳೆ, ಭಾರತದ ಆರ್ಥಿಕತೆಯೂ ಕುಸಿತ ಕಾಣುತ್ತಿದೆ. ಭಾರತದಲ್ಲೂ ನಿರುದ್ಯೋಗ, ಬೆಲೆ ಏರಿಕೆ, ಹಣ ದುಬ್ಬರ ಹೆಚ್ಚುತ್ತಲೇ ಇದೆ. ನೆರೆಯ ರಾಷ್ಟ್ರ ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ನೋಡಿ, ಭಾರತ ಪಾಠ ಕಲಿಯದಿದ್ದರೆ, ಮುಂದೆ ಭಾರತಕ್ಕೂ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
How much money you will make