ರಾಜ್ಯದಲ್ಲಿ ಲೋಕಸಭೆ ಚುನಾವಣೆ 2024ರ ಬಳಿಕ ಕರ್ನಾಟಕದಲ್ಲಿ ಉಪ ಚುನಾವಣೆ ನಡೆಯಲಿರುವ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ಸಹ ಒಂದಾಗಿದೆ. ಉಪಚುನಾವಣೆ ಚರ್ಚೆಯ ನಡುವೆಯೇ ಜನಾರ್ದನ ರೆಡ್ಡಿ ಅವರಿಗೆ ಈ ವರೆಗೆ ಬಳ್ಳಾರಿ ಪ್ರವೇಶಕ್ಕೆ ವಿಧಿಸಲಾಗಿದ್ದ ತಡೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ಮುಕ್ತವಾಗಿ ಪ್ರವೇಶಿಸಬಹುದು ಎಂದು ಅಂತಿಮ ತೀರ್ಪು ನೀಡಿದೆ. ಈ ನಡುವೆ ಕಾಂಗ್ರೆಸ್ ಭದ್ರಕೋಟೆಗೆ ರೆಡ್ಡಿ ಪ್ರವೇಶದಿಂದಾಗಿ ಮತ್ತೆ ಬಿಜೆಪಿ ಪಾಲಾಗಲಿದೆಯಾ ಎಂಬ ಅನುಮಾನ ಕಾಡತೊಡಗಿದೆ.
ಅಕ್ರಮ ಗಣಿಗಾರಿಕೆ ಆರೋಪದಲ್ಲಿ 2011ರ ಸೆ. 5 ರಂದು ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಜನಾರ್ದನ ರೆಡ್ಡಿ, 2015ರಲ್ಲಿ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದಿದ್ದರು. ಆದರೆ, ಅವರು ಬಳ್ಳಾರಿ ಜಿಲ್ಲೆ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿತ್ತು.
ಈ ಮಧ್ಯೆ ಮಗಳ ಮದುವೆ, ಹೆರಿಗೆ, ಮೊಮ್ಮಗಳ ನಾಮಕರಣ ಸೇರಿದಂತೆ ಇತರೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಲ್ಕೈದು ಬಾರಿ ಕೋರ್ಟ್ ಅನುಮತಿಯೊಂದಿಗೆ ಅವರು ಬಳ್ಳಾರಿಗೆ ಬಂದಿದ್ದರು. ಸದ್ಯ ಅವರು ಬಳ್ಳಾರಿ ಪ್ರವೇಶಿಸಲು ಇದ್ದ ಎಲ್ಲ ಷರತ್ತುಗಳನ್ನೂ ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ಖಾಯಂ ಉಳಿಯಲು ಅವಕಾಶ ನೀಡಿರುವುದು ಅವರ ರೆಡ್ಡಿ ಬೆಂಬಲಿಗರಲ್ಲಿ ಹರ್ಷ ಮೂಡಿಸಿದೆ.
ಕಳೆದ ಎರಡು ಚುನಾವಣೆಯಲ್ಲಿ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸಮಯದಲ್ಲಿ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಹೀನಾಯ ಸೋಲಾಗಿರುವುದು ಬಿಜೆಪಿ ನಾಯಕರಲ್ಲಿ ಅತ್ಯಂತ ಬೇಸರ ತಂದಿದೆ. ಜನಾರ್ದನ ರೆಡ್ಡಿಗೆ ಬಳ್ಳಾರಿ ಮುಕ್ತ ಪ್ರವೇಶ ಎಂದು ಮಹತ್ತರ ವಾದ ತೀರ್ಪಿನಿಂದ ಸಂಡೂರು ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಗೆಲುವುದಕ್ಕೆ ಕೆಲಸ ಮಾಡಲಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ರೆಡ್ಡಿ ಆಗಮನದಿಂದ ಈ ಬಾರಿ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆಯಾ? ಬಿಜೆಪಿ ಗೆಲುವು ಸಾಧಿಸಲಿದೆಯೇ ಎಂಬ ಮಾತು, ಚರ್ಚೆಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ.
2023 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಶಿಲ್ಪಾ ರಾಘವೇಂದ್ರ ಬಿಜೆಪಿಯ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಅವರು 49,701 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್‌ನ ಇ. ತುಕಾರಾಂ 85,223 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ, ಸಂಸದರಾಗಿ ಆಯ್ಕೆಯಾಗಿದ್ದಾರೆ. ಈಗ ತೆರವಾದ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಸಂಡೂರು ಕ್ಷೇತ್ರದಲ್ಲಿ ಹಾಲಿ ಸಂಸದ ತುಕಾರಾಂ ಸತತ ನಾಲ್ಕು ಬಾರಿ ಗೆದ್ದು, ‘ಹ್ಯಾಟ್ರಿಕ್ ಹೀರೊ’ ಆಗಿದ್ದಾರೆ. ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ.

ಸಂಡೂರು ಕ್ಷೇತಕ್ಕೆ ಘಟಾನುಘಟಿ ಅಮಿತ್ ಶಾ ಅವರಂತಹ ಹಿರಿಯ ರಾಜಕಾರಣಿ ವ್ಯಕ್ತಿಗಳು ಬಂದರೂ ಕೂಡ ಬಿಜೆಪಿ ಗೆಲ್ಲಿಸುವುದಕ್ಕೆ ಆಗಿರಲಿಲ್ಲ. ಈ ಬಾರಿ ರೆಡ್ಡಿ ಪ್ರವೇಶದಿಂದ ಸಂಡೂರಿನಲ್ಲಿ ಗೆಲುವು ಆಗಲಿದೆ ಎಂದು ಕೇಳಿ ಬರುತ್ತಿದೆಯಾದರೂ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದ ಅಷ್ಟು ಸುಲಭವಿಲ್ಲ ಎಂಬ ಮಾತುಗಳು ಕೂಡ ಜನರ ನಡುವೆ ಚರ್ಚೆಯಲ್ಲಿದೆ.
ಇದನ್ನು ಓದಿದ್ದೀರಾ? ಬೀದರ್ | ಸ್ಮಶಾನದ ಬಳಿ ಆಸ್ಪತ್ರೆ : ಮಗುವಿಗೆ ಕೇಡಾಗುತ್ತೆ ಎಂಬ ಕಾರಣಕ್ಕೆ ಹೆರಿಗೆಗೆ ಬಾರದ ಗರ್ಭಿಣಿಯರು!
ಸಂಡೂರು ಉಪ ಚುನಾವಣೆಯ ದಿನದಿಂದ ದಿನಕ್ಕೆ ಹಿರಿಯ ಮುಖಂಡರು, ಕಾರ್ಯಕರ್ತರು, ತಳಮಟ್ಟದಲ್ಲಿ ಚುರುಕಾಗಿ ಕೆಲಸ ಕಾರ್ಯ ತೊಡಗಿಸಿಕೊಂಡಿದ್ದಾರೆ. ಅಭ್ಯರ್ಥಿ ಯಾರು ಅಂತ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಇನ್ನೂ ಅಂತಿಮವಾಗಿಲ್ಲ. ಹೀಗಾಗಿ, ಸಂಡೂರು ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿಯ ಉಪಚುನಾವಣೆಯ ವೇಳೆಯಲ್ಲಿಯೇ ಕಾಂಗ್ರೆಸ್ ಭದ್ರಕೋಟೆಗೆ ಜನಾರ್ದನ ರೆಡ್ಡಿ ಪ್ರವೇಶದಿಂದಾಗಿ ಏನಾದರೂ ಬದಲಾವಣೆ ಆಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್