ಸರ್ಕಾರಿ ಶಾಲೆಯ ಶಿಕ್ಷಕ, ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಕೊಂದಿರುವ ದುರ್ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಶಿಕ್ಷಕ ಸುನೀಲ್, ಅವರ ಪತ್ನಿ ಪೂನಂ (32), ದೃಷ್ಟಿ (6) ಮತ್ತು ಅವರ ಒಂದು ವರ್ಷದ ಮಗಳನ್ನು ಹತ್ಯೆಗೈಯಲಾಗಿದೆ. ಒಂದು ತಿಂಗಳ ಹಿಂದೆ ಸುನೀಲ್ ಅವರ ಬಲಿಷ್ಠ ಜಾತಿಯ ವ್ಯಕ್ತಿಯೊಬ್ಬನ ವರುದ್ಧ ದಲಿತ ದೌರ್ಜನ್ಯದ ಆರೋಪದ ಮೇಲೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಿಸಿತ್ತು. ಆ ಕಾರಣಕ್ಕಾಗಿಯೇ, ಅವರ ಕುಟುಂಬವನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಶಿಕ್ಷಕ ಸುನೀಲ್ ಅವರು ರಾಯ್ ಬರೇಲಿ ಮೂಲದವರಾಗಿದ್ದು, ಅಮೇಥಿಯ ಪನ್ಹೌನಾದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಪತ್ನಿ ಪೂನಂ ಅವರಿಗೆ ರಾಯ್ ಬರೇಲಿಯಲ್ಲಿ ಚಂದನ್ ವರ್ಮಾ ಎಂಬಾತ ‘ಈವ್ ಟೀಸಿಂಗ್’ ಮಾಡಿದ್ದಾನೆಂದು ಆರೋಪಿಸಿ, ಆಗಸ್ಟ್ 18ರಂದು ಸುನೀಲ್ ದೂರು ದಾಖಲಿಸಿದ್ದರು. ಪ್ರಕರಣದ ದಾಖಲಾದ ಬಳಿಕ ತಮ್ಮ ಮೇಲೆ ಯಾವುದೇ ಅಹಿತಕರ ಘಟನೆ, ದಾಳಿಗಳು ನಡೆದರೆ, ಅದಕ್ಕೆ ಚಂದನ್ ವರ್ಮಾನೇ ಜವಾಬ್ದಾರನೆಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.
ಶುಕ್ರವಾರ ರಾತ್ರಿ, ಅಮೇಥಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸುನೀಲ್ ಅವರ ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು ಸುನೀಲ್, ಅವರ ಪತ್ನಿ ಹಾಗೂ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಾಲ್ವರನ್ನೂ ಹತ್ಯೆಗೈದಿದ್ದಾರೆ.
ದುರ್ಘಟನೆ ನಡೆದಿರುವ ಸ್ಥಳಕ್ಕೆ ಅಮೇಥಿ ಜಿಲ್ಲಾಧಿಕಾರಿ ನಿಶಾ ಅನಂತ್, ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಸಿಂಗ್ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ನೆರೆಹೊರೆಯವರು ಹೇಳುವಂತೆ, ರಾತ್ರಿ ಭಾರೀ ಗುಂಡಿನ ಸದ್ದು ಕೇಳಿಬಂದಿದೆ. ಎಲ್ಲರೂ ಹೊರ ಬಂದು ನೋಡುವ ವೇಳೆಗೆ, ಕುಟುಂಬದ ನಾಲ್ವರೂ ಮೃತಪಟ್ಟಿದ್ದರು. ಅವರ ಮೃತದೇಹಗಳು ಮನೆಯ ಹಿಂಭಾಗ ಬಿದ್ದಿದ್ದವು.
ಪ್ರಕರಣದ ಬಗ್ಗೆ ತನಿಖೆ ನಡೆಸಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ. ತನಿಖೆಗೆ ಸಹಾಯ ಮಾಡಲು ಸ್ಥಳೀಯ ಗುಪ್ತಚರ ಘಟಕ ಮತ್ತು ವಿಶೇಷ ಕಾರ್ಯಾಚರಣೆ ತಂಡಗಳನ್ನೂ ಕೂಡ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಕೋರರನ್ನು ಗುರುತಿಸುವ ಪ್ರಯತ್ನದ ಭಾಗವಾಗಿ ನಾವು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.