ಹರಿಯಾಣ ಚುನಾವಣೆ | ಮುಖ್ಯಮಂತ್ರಿ ರೇಸ್‌ನಲ್ಲಿ ಸುರ್ಜೆವಾಲಾ; ಚುನಾವಣಾ ಕಣದಲ್ಲಿ ಪುತ್ರನ ಹೋರಾಟ

Date:

Advertisements

ಅಕ್ಟೋಬರ್ 5, ಶನಿವಾರ ಹರಿಯಾಣ ವಿಧಾನಸಭೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆಬಿದ್ದಿದೆ. ಹರಿಯಾಣದಲ್ಲಿ ಭಾರೀ ಚರ್ಚೆಯಲ್ಲಿರುವ ಕೆಲವು ಕ್ಷೇತ್ರಗಳ ಪೈಕಿ, ಕೈತಾಲ್ ವಿಧಾನಸಭಾ ಕ್ಷೇತ್ರ ಕೂಡ ಮುನ್ನೆಲೆಯಲ್ಲಿದೆ. 2019ರಲ್ಲಿ ಆ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದ ಹಾಲಿ ಕಾಂಗ್ರೆಸ್‌ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಮ್ಮ ಪುತ್ರ ಆದಿತ್ಯ ಸುರ್ಜೇವಾಲಾರನ್ನು ಕಣಕ್ಕಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದರೆ ತಾವೂ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿ ಎಂಬ ಸಂದೇಶವನ್ನು ರವಾನಿಸಿರುವ ಸುರ್ಜೇವಾಲಾ, ತಮ್ಮ ಮಗನ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಸುರ್ಜೇವಾಲಾ ಅವರ ಪುತ್ರ ಆದಿತ್ಯ ಅವರು ಇತ್ತೀಚೆಗೆ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ಇದು ಆದಿತ್ಯ ಅವರ ಚೊಚ್ಚಲ ಚುನಾವಣಾ ಸ್ಪರ್ಧೆಯಾಗಿದೆ. ಮಾತ್ರವಲ್ಲದೆ, ಹರಿಯಾಣ ಚುನಾವಣಾ ಕಣದಲ್ಲಿರುವ ಅತ್ಯಂತ ಕಿರಿಯ ಅಭ್ಯರ್ಥಿಯೂ ಆಗಿದ್ದಾರೆ.

25 ವರ್ಷ ವಯಸ್ಸಿನ ಆದಿತ್ಯ, ಈ ಹಿಂದೆ, ತಮ್ಮ ತಂದೆ ರಣದೀಪ್ ಸುರ್ಜೇವಾಲಾ ಪ್ರತಿನಿಧಿಸಿದ್ದ ಕೈತಾಲ್‌ನಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರವನ್ನು ಹಾಲಿ ಬಿಜೆಪಿ ಶಾಸಕಿ ಲೀಲಾ ರಾಮ್ ಪ್ರತಿನಿಧಿಸುತ್ತಿದ್ದಾರೆ. ಪ್ರಸ್ತುತ ಚುನಾವಣೆಯಲ್ಲೂ ಅವರೇ ಬಿಜೆಪಿ ಅಭ್ಯರ್ಥಿಯೂ ಆಗಿದ್ದಾರೆ. 2019ರಲ್ಲಿ ಲೀಲಾ ಅವರು ಸುರ್ಜೇವಾಲಾ ಅವರನ್ನು 1,246 ಮತಗಳಿಂದ ಸೋಲಿಸಿದ್ದರು. ಇದೀಗ, ಸುರ್ಜೇವಾಲಾ ಅವರ ಪುತ್ರನ  ವಿರುದ್ಧವೂ ಗೆಲುವು ಸಾಧಿಸಲು ಹೆಣಗಾಡುತ್ತಿದ್ದಾರೆ.

Advertisements

ಸುರ್ಜೇವಾಲಾರನ್ನು ಲೀಲಾ ಸೋಲಿಸುವುದಕ್ಕೂ ಮುನ್ನ, ಕೈತಾಲ್ ಕ್ಷೇತ್ರವು ಸುರ್ಜೇವಾಲಾ ಕುಟುಂಬದ ಭದ್ರಕೋಟೆಯಾಗಿತ್ತು. 2005ರಲ್ಲಿ ರಣದೀಪ್ ಸುರ್ಜೇವಾಲಾರ ತಂದೆ ಶಂಶೇರ್ ಸಿಂಗ್ ಸುರ್ಜೆವಾಲಾ ಅವರು ಈ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಬಳಿಕ, 2009 ಮತ್ತು 2014ರಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಇದೇ ಕ್ಷೇತ್ರದಿಂದ ಶಾಸಕರಾಗಿದ್ದರು. ಇದೀಗ, ಸುರ್ಜೇವಾಲಾ ಕುಟುಂಬದ ಮೂರನೇ ತಲೆಮಾರಿನ ಆದಿತ್ಯ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ತಮ್ಮ ರಾಜಕೀಯ ಆರಂಭಕ್ಕೆ ಮುನ್ನುಡಿ ಬರೆಯಲು ಯತ್ನಿಸುತ್ತಿದ್ದಾರೆ.

ಅಂದಹಾಗೆ, ಬೆಂಗಳೂರಿನ ‘ದಿ ಇಂಟರ್‌ನ್ಯಾಶನಲ್ ಸ್ಕೂಲ್‌’ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದ ಆದಿತ್ಯ, ಕಳೆದ ವರ್ಷವಷ್ಟೇ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅವರು ಹರಿಯಾಣ, ಹರಿಯಾಣದಾಚೆಗಿನ ರಜ್ಯ ಹಾಗೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಅವರು ರಾಜಕೀಯ ದೃಷ್ಠಿಕೋನ ಪಡೆಯಲು ನೆರವಾಗಿದೆ ಎಂದು ಆದಿತ್ಯ ಹೇಳಿಕೊಂಡಿದ್ದಾರೆ.

“ನಾನು ಚಿಕ್ಕವನಿದ್ದಾಗಿನಿಂದಲೇ ನನ್ನ ಅಜ್ಜ ಮತ್ತು ನನ್ನ ತಂದೆ ಹರಿಯಾಣದ ಜನರಿಗೆ ಸೇವೆ ಸಲ್ಲಿಸುತ್ತಿರುವುದನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಅವರಂತೆ ಕೆಲಸ ಮಾಡಲು ಕೃತಜ್ಞನಾಗಿದ್ದೇನೆ. ನಾವು ಅಭಿವೃದ್ಧಿ ಮತ್ತು ಬದಲಾವಣೆಯನ್ನು ಒಟ್ಟಿಗೆ ತರಬಹುದು. ಅದಕ್ಕಾಗಿ ದುಡಿಯಬೇಕು” ಎಂದು ಆದಿತ್ಯ ಹೇಳಿದ್ದಾರೆ.

ಗಮನಾರ್ಹವಾಗಿ, ಕೈತಾಲ್ ವಿಧಾನಸಭಾ ಕ್ಷೇತ್ರವು ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಕುರುಕ್ಷೇತ್ರದಿಂದ ಸ್ಪರ್ಧಿಸಿದ್ದ ಸುರ್ಜೇವಾಲಾ ಸಂಸದರಾಗಿದ್ದಾರೆ. ಅವರು ಈಗ, ಹರಿಯಾಣದಲ್ಲಿ ಕಾಂಗ್ರೆಸ್‌ ಗೆದ್ದರೆ, ಮುಖ್ಯಮಂತ್ರಿ ಹುದ್ದೆಗಾಗಿ ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ, ಹರಿಯಾಣ ಕಾಂಗ್ರೆಸ್‌ನಲ್ಲಿ ಸುರ್ಜೇವಾಲಾ ಬಣ ಮತ್ತು ಭೂಪಿಂದರ್ ಹೂಡಾ ಬಣದ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳಿವೆ.

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 70 ಕ್ಷೇತ್ರಗಳ ಟಿಕೆಟ್ ಹಂಚಿಕೆಯಲ್ಲಿ ಹೂಡಾ ಹಿಡಿತ ಸಾಧಿಸಿದ್ದಾರೆ. ಅವರೂ ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಕೈತಾಳದಲ್ಲಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಿರುವ ಸುರ್ಜೇವಾಲಾ, ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಚಲಾಯಿಸಲು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಬೇಕು ಎಂಬ ಕಡ್ಡಾಯವಿಲ್ಲ ಎಂದಿದ್ದಾರೆ. ತಮ್ಮ ಮಗನ ಗೆಲುವು ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವಿನ ಬಳಿಕ ತಮಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕರೆ, ಬಳಿಕ ವಿಧಾನಸಭೆಯಲ್ಲಿ ಸ್ಥಾನ ಪಡೆಯುವ ಬಗ್ಗೆ ಸುರ್ಜೇವಾಲಾ ಯೋಜಿಸಿದ್ದಾರೆ.

ಈ ವರದಿ ಓದಿದ್ದೀರಾ?: ಯಾರು ಈ ಜಗ್ಗಿ ವಾಸುದೇವ್? ಈತ ನಿಜಕ್ಕೂ ಸದ್ಗುರುನಾ?

“ಅಕ್ಟೋಬರ್ 5ರಂದು ನಡೆಯಲಿರುವ ಮತದಾನವು ಜನರ ಜೀವನವನ್ನು ಸುಧಾರಿಸುತ್ತದೆ. ಯುವಜನರಿಗೆ ಹೊಸ ಮಾರ್ಗಗಳನ್ನು ಹುಡುಕಿಕೊಡುತ್ತದೆ. ಬಿಜೆಪಿ ಆಡಳಿತದಿಂದ ಎದುರಾಗಿರುವ ಹಣದುಬ್ಬರನ್ನು ನಿಯಂತ್ರಿಸಲು, ಸಣ್ಣ ವ್ಯಾಪಾರ, ಅಂಗಡಿ ಮಾಲೀಕರ ಬದುಕು ಹಸನಾಗಿಸಲು ದಾರಿ ತೋರುತ್ತದೆ” ಎಂದು ಸುರ್ಜೇವಾಲಾ ಹೇಳಿದ್ದಾರೆ.

ತಮ್ಮ ಮಗನೇ ಅಭ್ಯರ್ಥಿಯಾಗಿದ್ದರೂ, ತಾವೇ ಅಭ್ಯರ್ಥಿಯೆಂಬಂತೆ ಸುರ್ಜೇವಾಲಾ ಕ್ಷೇತ್ರದಲ್ಲಿ ಎಡೆಬಿಡದೆ ಸುತ್ತಿತ್ತಿದ್ದಾರೆ. ಎಲ್ಲೆಡೆ ತಮ್ಮ ಉಪಸ್ಥಿತಿಯನ್ನು ತೋರಿಸುತ್ತಿದ್ದಾರೆ.

ಸುರ್ಜೇವಾಲಾ ಕುಟುಂಬದ ಮೂರನೇ ತಲೆ ಮಾಡಿನ ಆದಿತ್ಯ ಸ್ಪರ್ಧೆಯನ್ನು ಬಿಜೆಪಿ ಟೀಕಿಸುತ್ತಿದೆ “ಕೈತಾಲ್ ಕ್ಷೇತ್ರವು ಆದಿತ್ಯ ಅವರ ತಂದೆ ಮತ್ತು ಅಜ್ಜನ ಒಡೆತನದಲ್ಲಿದೆಯೇ” ಎಂದು ಬಿಜೆಪಿ ಪ್ರಶ್ನಿಸಿದೆ.

ಆದಾಗ್ಯೂ, “ನಾನು ತಮ್ಮ ತಂದೆ ಅಥವಾ ಪಕ್ಷದ ಒತ್ತಡದಿಂದ ರಾಜಕಾರಣಕ್ಕೆ ಬಂದಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಯುವ ತಲೆಮಾರಿನ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಯುವ ನಾಯಕತ್ವದಲ್ಲಿ ನನ್ನ ಪಾತ್ರವೂ ಇರಬೇಕು. ಕಾಂಗ್ರೆಸ್‌ನ ಹಿರಿಯೊಂದಿಗೆ ಕೆಲಸ ಮಾಡಲು, ರಾಜ್ಯ ಮತ್ತು ಕೈತಾಲ್‌ನಲ್ಲಿನ ಬದಲಾವಣೆಗಾಗಿ ಸ್ಪರ್ಧಿಸಿದ್ದೇನೆ” ಎಂದು ಆದಿತ್ಯ ಹೇಳಿಕೊಂಡಿದ್ದಾರೆ.

ರಣದೀಪ್ ಸುರ್ಜೇವಾಲಾ ಅವರು ವಿಧಾನಸಭೆಯಲ್ಲಿ ಸ್ಪರ್ಧಿಸದಿದ್ದರೂ, ತಮ್ಮ ಪುತ್ರನ ಮೂಲಕ ವಿಧಾನಸಭೆಯಲ್ಲಿ ತಮ್ಮ ಹೋರಾಟವನ್ನು ಪ್ರತಿಬಿಂಬಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿ ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನೂ ಮಾಡಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್‌ ಗೆಲ್ಲುವುದು ಬಹುತೇಕ ಖಚಿತ ಎಂಬ ಅಭಿಪ್ರಾಯಗಳೂ ಇವೆ. ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆಯೇ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದರೆ, ಸುರ್ಜೇವಾಲಾಗೆ ಮುಖ್ಯಮಂತ್ರಿ ಹುದ್ದೆ ಸಿಗುವುದೇ, ಇಲ್ಲ ಹೂಡಾ ಪಾಲಾಗುವುದೇ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X