ಈ ದಿನ ಸಂಪಾದಕೀಯ | ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯೇ ಮೋದಿಯವರ ಎರಡು ಅವಧಿಯ ಸಾಧನೆಯೇ?

Date:

Advertisements

ಅಮೆರಿಕದ USCIRF ವರದಿಯು “2024ರ ಲೋಕಸಭಾ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಪ್ರಧಾನಿ ಮೋದಿಯವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ನಂತರ ಮುಸ್ಲಿಮರ ಮೇಲೆ ದಾಳಿಗಳು ಹೆಚ್ಚಾಗಿವೆ. ಅದರಲ್ಲೂ 3ನೇ ಹಂತದ ಮತದಾನದ ನಂತರ ಮೋದಿಯವರು ಕನಿಷ್ಠ 100 ಸಭೆಗಳಲ್ಲಿ ಮುಸ್ಲಿಂ ದ್ವೇಷದ ಮಾತುಗಳನ್ನಾಡಿದ್ದಾರೆ” ಎಂದು ಹೇಳಿದೆ. ಹಾಗಿದ್ದರೆ ಭಾರತಕ್ಕೆ ಈ ಕಳಂಕ, ಅಪಕೀರ್ತಿಯ ನೇರ ಹೊಣೆ ಮೋದಿಯವರೇ ಹೊರಬೇಕಲ್ಲವೇ?

ಕಳೆದ ಹತ್ತು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಬಹುತೇಕ ವಿಭಾಗಗಳಲ್ಲಿ ಕುಸಿಯುತ್ತ ಸಾಗಿದೆ. ಅ ಬಡತನದ ಸೂಚ್ಯಂಕವೇ ಇರಬಹುದು, ಅಪೌಷ್ಟಿಕತೆ, ಪತ್ರಿಕಾ ಸ್ವಾತಂತ್ರ್ಯ, ಮಹಿಳಾ ಸುರಕ್ಷತೆ, ಪ್ರವಾಸಿಗಳ ಸುರಕ್ಷತೆ ಹೀಗೆ ಪ್ರತಿವರ್ಷ ವಿಶ್ವಸಂಸ್ಥೆ ಹೊರಡಿಸುವ ಸೂಚ್ಯಂಕ ಪಟ್ಟಿಯಲ್ಲಿ ನಿರಂತರವಾಗಿ ಕುಸಿತ ಕಂಡಿದೆ. ಮತ್ತೆ ಪ್ರತಿ ಸಲ ಇಂತಹ ವರದಿ ಬಂದಾಗ ತನ್ನ ಕಳಪೆ ಪ್ರದರ್ಶನದ ಬಗ್ಗೆ ತಲೆ ತಗ್ಗಿಸಿ ಅದರ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಕಡೆ ಅಡಿ ಇಡುವ ಬದಲು ಮೋದಿ ಸರ್ಕಾರ ಅಂತಹ ವರದಿಯನ್ನೇ ಅನುಮಾನಿಸುವ ಮತ್ತು ಅದನ್ನು ಕಡೆಗಣಿಸಿ ಯಥಾಪ್ರಕಾರ ನಡೆದುಕೊಳ್ಳುವ ಚಾಳಿ ಮುಂದುವರಿಸಿದೆ. ಪರಿಣಾಮವಾಗಿ ಎಂದೂ ಸುಧಾರಿಸದ ಮಟ್ಟಿಗೆ ಈ ದೇಶವಾಸಿಗಳ ಮೂಲಭೂತ ಹಕ್ಕುಗಳ ಹರಣವಾಗುತ್ತಿದೆ. ಅಸಮರ್ಪಕ ನೀತಿಯ ಕಾರಣಕ್ಕೆ ಬಡತನ, ನಿರುದ್ಯೋಗ, ಬೆಲೆಯೇರಿಕೆ ಹೆಚ್ಚಾದರೆ, ಬಿಜೆಪಿಯ ಕಟ್ಟರ್ ಹಿಂದುತ್ವದ ಕಾರಣಕ್ಕೆ ಧಾರ್ಮಿಕ ಅಸಹಿಷ್ಣುತೆ ಕೂಡಾ ಹೆಚ್ಚಾಗಿದೆ. ಹಬ್ಬ, ಆಚರಣೆ, ಸಂಪ್ರದಾಯದ ಹೆಸರಲ್ಲಿ ಒಂದು ಧರ್ಮದ ವೈಭವೀಕರಣ ಮಾಡಲಾಗುತ್ತಿದೆ. ಬೇರೆ ಧರ್ಮದವರನ್ನು ರಾಷ್ಟ್ರವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ಅವುಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಲಾಗುತ್ತಿದೆ. ಪರಿಣಾಮವಾಗಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ತೀವ್ರವಾಗಿ ಉಲ್ಲಂಘನೆಯಾಗುತ್ತಿದೆ ಎಂದು ಅಧ್ಯಯನ ವರದಿಗಳು ಹೇಳುತ್ತಿವೆ.

ಇದೀಗ ಬಂದ ವರದಿಯ ಪ್ರಕಾರ “ಧಾರ್ಮಿಕ ಸ್ವಾತಂತ್ರ್ಯ ತೀವ್ರ ಉಲ್ಲಂಘನೆಯಾಗುತ್ತಿರುವ ದೇಶ” ಎಂಬ ಹಣೆ ಪಟ್ಟಿ ಭಾರತದ ಮೇಲೆ ಅಧಿಕೃತವಾಗಿ ಬಿದ್ದಿದೆ. ಅಮೆರಿಕದ ʼಅಂತರ ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ನಿಯೋಗ (USCIRF)ವು ಅಮೆರಿಕ ಸರ್ಕಾರಕ್ಕೆ ಸಲ್ಲಿಸಿದ ತನ್ನ ವಾರ್ಷಿಕ ವರದಿಯಲ್ಲಿ ಈ ಶಿಫಾರಸು ಮಾಡಿದೆ. ತನ್ನ ಒಡೆದಾಳುವ ರಾಷ್ಟ್ರೀಯತೆಯ ನೀತಿ, ರಾಜಕಾರಣಿಗಳ ದ್ವೇಷ ಭಾಷಣಗಳು ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯವು ದಿನೇ ದಿನೇ ಕ್ಷೀಣಿಸುತ್ತಿದೆ. ಕೋಮು ಸಂಘರ್ಷಗಳನ್ನು ಬಿಜೆಪಿ ನೇತೃತ್ವದ ಭಾರತ ಸರ್ಕಾರ ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಇದು ʼಅಂತರರಾಷ್ಟ್ರೀಯ ಧಾರ್ಮಿಕ ಕಾಯ್ದೆʼ (ಐಆರ್‌ಎಫ್‌ಎ) ಯ ಉಲ್ಲಂಘನೆ ಎಂದಿದೆ.

Advertisements

ಇಷ್ಟೇ ಆದರೆ ಇದರಲ್ಲಿ ಅಚ್ಚರಿಪಡುವಂಥದ್ದೇನೂ ಇಲ್ಲ, ಎಲ್ಲವೂ ಗೊತ್ತಿರೋದೇ ಎಂದು ಸುಮ್ಮನಾಗಬಹುದು. ಆದರೆ ವರದಿಯು “ದೇಶದಲ್ಲಿನ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ದಲಿತರು, ಸಿಖ್‌, ಜೈನ, ಯಹೂದಿ ಹಾಗೂ ಆದಿವಾಸಿಗಳ ಮೇಲೆ ಭಾರತ ಸರ್ಕಾರವು ವ್ಯವಸ್ಥಿತವಾಗಿ ದಾಳಿ ನಡೆಸುತ್ತಿದೆ” ಎಂದು ಹೇಳಿದೆ. ಇದು ಮೋದಿ ಆಡಳಿತದ ಮೇಲೆ ಮಾಡಿರುವ ನೇರ ಆರೋಪವಾಗಿದೆ. ಅಮೆರಿಕ ವಿದೇಶಾಂಗ ಸಚಿವಾಲಯ ಈ ವರದಿಯನ್ನು ತಡೆ ಹಿಡಿದಿದೆ.

ಅಲ್ಪಸಂಖ್ಯಾತದ ಮೇಲೆ ದೇಶದಲ್ಲಿ ನಡೆದ ಹಲವು ಹಿಂಸಾತ್ಮಕ ದಾಳಿಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುಎಪಿಎ (ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ), ಪೌರತ್ವ (ತಿದ್ದುಪಡಿ) ಕಾಯ್ದೆ, ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾನೂನುಗಳನ್ನು ಬಳಸಿಕೊಂಡು ಅಲ್ಪಸಂಖ್ಯಾತರನ್ನು ಮತ್ತು ಅವರ ಹಕ್ಕುಗಳ ರಕ್ಷಣೆಗೆ ಹೋರಾಡುವವರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದೆ.

ಯಥಾ ಪ್ರಕಾರ ಭಾರತ ಸರ್ಕಾರ ಈ ವರದಿಯನ್ನು ತಳ್ಳಿ ಹಾಕಿದೆ. “ರಾಜಕೀಯ ಅಜೆಂಡಾ ಇಟ್ಟುಕೊಂಡು ಪಕ್ಷಪಾತಿ ಧೋರಣೆಯುಳ್ಳ ಆಯೋಗ ಇದಾಗಿದೆ. ಅಮೆರಿಕದಲ್ಲಿರುವ ಮಾನವಹಕ್ಕುಗಳ ಉಲ್ಲಂಘನೆಯ ವಿಚಾರಗಳ ಬಗ್ಗೆ ಗಮನಹರಿಸಿ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಪ್ರತಿಕ್ರಿಯಿಸಿದ್ದಾರೆ.

ಮೋದಿ ಮೊದಲ ಬಾರಿಗೆ ಪ್ರಧಾನಿಯಾದ ನಂತರ ದೇಶದಲ್ಲಿ ಹಿಂದೂ ಕೋಮುವಾದಿಗಳು, ಮೂಲಭೂತವಾದಿಗಳ ಅಟ್ಟಹಾಸಗಳನ್ನು ಇಡೀ ದೇಶವೇ ಕಂಡಿದೆ. ಗುಂಪು ಹಲ್ಲೆ, ಗೋಮಾಂಸದ ಹೆಸರಿನಲ್ಲಿ ಹಲ್ಲೆ, ಹತ್ಯೆ, ಲವ್‌ ಜಿಹಾದ್‌ ಹೆಸರಿನಲ್ಲಿ ಯುವಜನರ ಮೇಲೆ ದಾಳಿ, ಮಸೀದಿಗಳ ಮೇಲೆ ದಾಳಿ, ಧ್ವಜ ಕಿತ್ತು ಹಾಕುವುದು, ಆಝಾನ್‌ ಮತ್ತು ಹಲಾಲ್‌ ಮಾಂಸದ ವಿರುದ್ಧ ಕೋಮುವಾದಿ ಶಕ್ತಿಗಳ ಅಭಿಯಾನ… ಹೀಗೇ ಮುಂದುವರಿದು ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್‌ ಮೇಲೂ ದಾಳಿಗಳಾದವು. ಕರ್ನಾಟಕದ ಉಡುಪಿಯ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಕ್ಕೆ ಅನುಮತಿ ಕೊಡಬೇಕು ಎಂದು ಮಾಡಿಕೊಂಡ ಮನವಿಗೆ ಕಾಲೇಜು ಆಡಳಿತ ಮಂಡಳಿ ತಳೆದ ನಿಲುವು, ಅದರ ವಿರುದ್ಧ ನಡೆದ ಪ್ರತಿಭಟನೆಗಳು ಇಡೀ ವಿಶ್ವದ ಗಮನ ಸೆಳೆದಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಈ ಎಲ್ಲಾ ಅಭಿಯಾನಗಳು ನಡೆದುವು. ಮುಂದುವರಿದು ದೇವಸ್ಥಾನದ ಜಾತ್ರೆಯಲ್ಲಿ ಮುಕ್ತವಾಗಿ ಎಲ್ಲಾ ಧರ್ಮದ ವ್ಯಾಪಾರಿಗಳಿಗೆ ಮಳಿಗೆ ತೆರೆಯಲು ಇದ್ದ ಅವಕಾಶವನ್ನು ಕರ್ನಾಟಕದ ಹಿಂದೂಪರ ಸಂಘಟನೆಗಳು ಕಿತ್ತುಕೊಂಡವು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೂ ಅದಕ್ಕೆ ಕಡಿವಾಣ ಬಿದ್ದಿಲ್ಲ. ಈ ವರ್ಷ ಗಣೇಶೋತ್ಸವದ ಹೆಸರಿನಲ್ಲಿ ಅತಿ ಹೆಚ್ಚು ಕಡೆ ಗಲಭೆಗಳಾದವು. ಎರಡೂ ಕಡೆಯ ಮತೀಯವಾದಿಗಳು ಎಸೆದ ಕಲ್ಲುಗಳ ಏಟು ತಗುಲಿರುವುದು ಭಾರತದ ಬಹುತ್ವದ ಆತ್ಮಕ್ಕೆ.

ಮಂಡ್ಯದ ನಾಗಲಮಂಗಲದ ಗಲಭೆ ವಿಚಾರದಲ್ಲಿ ಬೆಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದಾಗ ಬೀದಿಯಲ್ಲಿ ಬಿಟ್ಟು ಹೋದ ಗಣೇಶ ಮೂರ್ತಿಯನ್ನು ಪೊಲೀಸರು ವಾಹನದಲ್ಲಿ ಕೊಂಡೊಯ್ದ ಚಿತ್ರಗಳನ್ನು ಬಿಜೆಪಿ ಐಟಿ ಸೆಲ್ ಗಣೇಶನ ಬಂಧನ ಎಂದು ತಿರುಚಿ ದ್ವೇಷಕ್ಕಾಗಿ ಹಂಚಿಕೊಂಡರೆ, ಅದನ್ನೇ ಹರಿಯಾಣದ ಚುನಾವಣಾ ಪ್ರಚಾರಕ್ಕೆ ಅಸ್ತ್ರ ಮಾಡಿಕೊಂಡ ಈ ದೇಶದ ಪ್ರಧಾನಿ ಮೋದಿ ʼಗಣೇಶನನ್ನೂ ಕಾಂಗ್ರೆಸ್‌ ಸರ್ಕಾರ ಬಂಧಿಸಿದೆʼ ಎಂದು ಸಾವಿರಾರು ಜನರ ಮುಂದೆ ಸುಳ್ಳು ಹಬ್ಬಿಸಿದರು. ಇದು ಸರ್ಕಾರಿ ಪ್ರಾಯೋಜಿತ ಕೋಮುದ್ವೇಷ ಅಲ್ಲವೇ?

ದೇಶದಲ್ಲಿ ‘ಇಸ್ಲಾಮೋಫೋಬಿಯಾ’ದ ವಿರುದ್ಧ ಪ್ರಧಾನಿಯಾಗಿ ಒಂದೇ ಒಂದು ಮಾತೂ ಆಡದ ಮೋದಿ, ಮುಸ್ಲಿಂ ರಾಷ್ಟ್ರಗಳಿಗೆ ತೆರಳಿ ಅಲ್ಲಿನ ಮುಖ್ಯಸ್ಥರನ್ನು ಬಿಗಿದಪ್ಪಿ ದೇಶದ ಮುಸ್ಲಿಮರಿಗೆ ಯಾವ ಸಂದೇಶ ರವಾನಿಸಿದರು? ಪ್ರತಿ ತಿಂಗಳು ರೇಡಿಯೋದಲ್ಲಿ ಮನದ ಮಾತು ಆಡುವ ಮೋದಿಯವರು ಇಂತಹ ದೌರ್ಜನ್ಯಗಳನ್ನು ಖಂಡಿಸಿ ದೇಶವಾಸಿಗಳಿಗೆ ಅಭಯ ನೀಡುವ ಕೆಲಸ ಯಾಕೆ ಮಾಡಿಲ್ಲ? “ಭಾರತ ಸರ್ಕಾರವು ವ್ಯವಸ್ಥಿತವಾಗಿ ದಾಳಿ ನಡೆಸುತ್ತಿದೆ” ಎಂಬ ಅಮೆರಿಕದ ವರದಿಯ ಉಲ್ಲೇಖ ಪ್ರಧಾನಿಯವರ ಈ ನಡೆಗೆ ಕನ್ನಡಿ ಹಿಡಿದಿದೆ.

ಮೋದಿಯವರು ಮಾತನಾಡಲಾರರು. ಯಾಕೆಂದರೆ, ಅವರೇ ಇಸ್ಲಾಮೋಫೋಬಿಯಾದಿಂದ ನರಳುತ್ತಿದ್ದಾರೆ. ಅಮೆರಿಕದ ಈ ವರದಿ ಲೋಕಸಭಾ ಚುನಾವಣೆಯ ಮೋದಿಯವರ ಮುಸ್ಲಿಂ ದ್ವೇಷದ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದೆ. 2024ರ ಜನವರಿಯಿಂದ ಮಾರ್ಚ್‌ವರೆಗೆ ಅಲ್ಪಸಂಖ್ಯಾತರ ಮೇಲೆ 161ದಾಳಿಗಳಾಗಿವೆ ಎಂದು ವರದಿ ಗುರುತಿಸಿದೆ. ಅದರಲ್ಲಿ ಮತಾಂತರದ ಶಂಕೆಯಲ್ಲಿ ಕ್ರಿಶ್ಚಿಯನ್ನರ ಮೇಲೆ ಛತ್ತೀಸ್‌ಗಡದಲ್ಲಿ 47 ಮತ್ತು ಉತ್ತರ ಪ್ರದೇಶದಲ್ಲಿ 20 ಘಟನೆಗಳು ನಡೆದಿವೆ. ಲೋಕಸಭಾ ಚುನಾವಣೆಯ ಪ್ರಚಾರ ಭಾಷಣದಲ್ಲಿ ಪ್ರಧಾನಿ ಮೋದಿಯವರು ಮುಸ್ಲಿಮರನ್ನು ಟಾರ್ಗೆಟ್‌ ಮಾಡಿ ನೀಡಿದ್ದ ಹೇಳಿಕೆಗಳ ನಂತರ ಮುಸ್ಲಿಮರ ಮೇಲೆ ದಾಳಿಗಳು ಹೆಚ್ಚಾಗಿವೆ. ಅದರಲ್ಲೂ ಮೂರನೇ ಹಂತದ ಮತದಾನದ ನಂತರ ಮೋದಿಯವರು ಕನಿಷ್ಠ ನೂರು ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದಾರೆ ಎಂದು ಹೇಳಿದೆ. ಹಾಗಿದ್ದರೆ ಭಾರತಕ್ಕೆ ಈ ಕಳಂಕ ತಂದ ಅಪಕೀರ್ತಿಯ ನೇರ ಹೊಣೆ ಮೋದಿಯವರೇ ಹೊರಬೇಕಲ್ಲವೇ?

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಂಘಪರಿವಾರದವರೇ ಅಚ್ಚರಿಪಡುವಂತೆ ಮೋದಿ ಅವರು ಮುಸ್ಲಿಮರ ಮೇಲೆ ನೇರಾನೇರ ವಾಗ್ದಾಳಿ ಮಾಡಿದ್ದರು. ಅವರ ಗುರಿ ಕಾಂಗ್ರೆಸ್‌ ಮಾತ್ರ ಆಗಿರಲಿಲ್ಲ. ಚಾರ್‌ ಸೌ ಪಾರ್‌ ಗುರಿ ಮುಟ್ಟುವ ತವಕದಲ್ಲಿ ಅವರೊಳಗಿನ ಮುಸ್ಲಿಂ ದ್ವೇಷ ಹೊರಬಂದಿತ್ತು. ಆರೆಸ್ಸೆಸ್‌ ಮತ್ತು ಬಿಜೆಪಿಯ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಪೂರಕವಾಗಿಯೇ ಈ ಎಲ್ಲ ಹುನ್ನಾರ ನಡೆಯುತ್ತಿದೆ. ಒಂದು ರಾಷ್ಟ್ರ- ಒಂದು ಚುನಾವಣೆ, ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ದತೆ, ಇವೆಲ್ಲ ಹಿಂದೂ ರಾಷ್ಟ್ರಕ್ಕೆ ಒಂದೊಂದೇ ಮೆಟ್ಟಿಲುಗಳು.

ಅಮೆರಿಕದ ಈ ವರದಿ ಮಣಿಪುರದ ಹಿಂಸಾಚಾರವನ್ನು ಗಮನಿಸಿದೆ. ಮಣಿಪುರದಲ್ಲಿ ಎರಡು ಜನಾಂಗಗಳ ನಡುವೆ ಒಂದೂವರೆ ವರ್ಷದಿಂದ ಹಿಂಸಾಚಾರ ನಿರಂತರ ನಡೆಯುತ್ತಿದೆ. ಅಲ್ಲಿ ಬಿಜೆಪಿ ಸರ್ಕಾರವಿದೆ. ಡಬ್ಬಲ್‌ ಎಂಜಿನ್‌ ಸರ್ಕಾರ ಒಂದು ಪುಟ್ಟ ರಾಜ್ಯದ ಜನಾಂಗೀಯ ಹಿಂಸಾಚಾರ ತಡೆಯಲು ವಿಫಲವಾಗಿದೆ ಅಥವಾ ಸರ್ಕಾರವೇ ಮುಂದೆ ನಿಂತು ಪ್ರಾಯೋಜಿತ ಹಿಂಸಾಚಾರ ನಡೆಸುತ್ತಿದೆ. ಈ ಎರಡರಲ್ಲಿ ಯಾವುದಾದರೂ ಒಂದನ್ನು ಒಪ್ಪಲೇಬೇಕು. ಹಿಂಸಾಚಾರ ನಡೆಯುತ್ತಿದ್ದಾಗ ದೇಶದ ಪ್ರಧಾನಿ ಅತ್ತ ತಲೆ ಹಾಕಿಲ್ಲ. ಆನಂತರ ಬಂದ ಲೋಕಸಭಾ ಚುನಾವಣೆಯ ಪ್ರಚಾರಕ್ಕೂ ಮೋದಿ ಅಲ್ಲಿಗೆ ಹೋಗಿಲ್ಲ. ಮೂರನೇ ಅವಧಿಗೆ ಪ್ರಧಾನಿಯಾದ ನಂತರವೂ ಹೋಗುವ ಮನಸ್ಸು ಮಾಡಿಲ್ಲ. ಈಗಲೂ ಅಲ್ಲಿ ಹಿಂಸಾಚಾರ ನಿಂತಿಲ್ಲ. ಗಾಂಧಿ ಜಯಂತಿಯ ದಿನ ಕಸ ಗುಡಿಸಿ ಫೋಟೋ- ವಿಡಿಯೋ ತೆಗೆಸಿಕೊಳ್ಳುವ ಮೋದಿಯವರು, ಮಣಿಪುರದಲ್ಲಿ ಶಾಂತಿ ಸ್ಥಾಪಿಸುವ ಯಾವ ಪ್ರಯತ್ನವನ್ನೂ ಮಾಡದೇ ಹೇಗೆ ಪ್ರಧಾನಿ ಕುರ್ಚಿಯಲ್ಲಿ ಕೂರುತ್ತಾರೆ? ಮಣಿಪುರ ಭಾರತದ ನೆಲ ಅಲ್ಲವೇ? ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಅಮೆರಿಕದ ವರದಿಯನ್ನು ತಿರಸ್ಕರಿಸಲಿ.

ಇದನ್ನೂ ಓದಿ ಒಳಮೀಸಲಾತಿ ತೀರ್ಪಿನ ಮರುಪರಿಶೀಲನೆ ಕೋರಿದ್ದ ಅರ್ಜಿಗಳ ವಜಾ: ಸುಪ್ರೀಂ ಕೋರ್ಟ್‌

ಅಮೆರಿಕದ ವರದಿ ನೂಹ್‌ ಹಿಂಸಾಚಾರ, ಲವ್‌ ಜಿಹಾದ್‌ ಹೆಸರಿನ ಧಾರ್ಮಿಕ ಅಸಹಿಷ್ಣುತೆಯನ್ನೂ ಗಮನಿಸಿದೆ. ಹಿಂಸೆಗೆ ಪ್ರಚೋದನೆ ನೀಡಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ನೀಡುವ ವ್ಯಕ್ತಿಗಳು ಅಮೆರಿಕವನ್ನು ಪ್ರವೇಶಿಸದಂತೆ ನಿರ್ಬಂಧ ಹೇರಬೇಕು, ಈ ವಿಚಾರದಲ್ಲಿ ಭಾರತ ಸುಧಾರಿಸಿಕೊಂಡರಷ್ಟೇ ಅವರಿಗೆ ಹಣಕಾಸಿನ ನೆರವು ಮತ್ತು ಶಸ್ತ್ರಾಸ್ತ್ರ ಪೂರೈಕೆ ಮಾಡಬೇಕು ಎಂದು ವರದಿ ಶಿಫಾರಸ್ಸು ಮಾಡಿದೆ. ಇದನ್ನು ಅಮೆರಿಕ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ ಭಾರತದ ಮೇಲೆ ಅದರ ಪರಿಣಾಮವೂ ಗಂಭೀರ ಎನಿಸಲಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X