ರೈತರ ಸಮಸ್ಯೆಗಳು ರಾಜಕೀಯ ದಾಳಕ್ಕೆ ಬಳಕೆಯಾಗುತ್ತಿರುವುದನ್ನು ಅರಿತು ಒಗ್ಗಟ್ಟು ಮೂಡಿಸಲು ನಿರಂತರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಹದಾಯಿ ನಿರಂತರ ಹೋರಾಟ ವೇದಿಕೆಯಿಂದ ರೈತ ಸೇನೆ ಕರ್ನಾಟಕ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ರೈತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. ಬಳಿಕ ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪವಿಭಾಗಾಧಿಕಾರಿ ಗಂಗಪ್ಪ, ತಹಶೀಲ್ದಾರ್ ಶ್ರೀಶೈಲ ತಳವಾರ ಅವರಿಗೆ ಮನವಿ ಸಲ್ಲಿಸಿದರು.
“ಕೆಲವು ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಬಾಲಂಗೋಚಿಯಂತೆ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ದಾಳಕ್ಕೆ ಬಳಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ರೈತ ಸಂಘಟನೆಗಳಲ್ಲಿರುವ ಒಡಕಿನ ಕಾರಣಕ್ಕೆ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಬದಲಿಗೆ ರೈತ ಸಂಘಟನೆಗಳ ಸಂಖ್ಯೆ ಹೆಚ್ಚಾಗಿವೆ” ಎಂದರು.
“ರೈತರ ಹೋರಾಟ ಪ್ರತಿಷ್ಠೆಯ ವಿಷಯವಾಗಬಾರದು. ಬದಲಾಗಿ ರೈತರ ಹಿತ ಕಾಯುವಂತಿರಬೇಕು. ಹೃದಯವಂತಿಕೆ ತೋರಿ ಸಾಮೂಹಿಕ ಸಮಸ್ಯೆಗಳ ಪರಿಹಾರಕ್ಕೆ ಒಂದಾಗಿ ಹೋರಾಟ ಮಾಡಬೇಕು. ಎಲ್ಲ ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳನ್ನು ರಾಜಕೀಯ ದಾಳಕ್ಕೆ ಬಳಸಿಕೊಳ್ಳುತ್ತಿವೆ. ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ಕಾನೂನುಗಳು ಜಾರಿಯಾಗುತ್ತಿವೆ. ಇದರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ” ಎಂದು ಹೇಳಿದರು.
ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, “ರೈತರಿಗಾಗಿ ಹೋರಾಟ ನಡೆಸಲಾಗುತ್ತಿದೆ. ಆದರೆ ಈ ಹೋರಾಟವನ್ನು ಆರಂಭದಿಂದಲೂ ಹತ್ತಿಕ್ಕುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ. ಈಗಲೂ ಮುಂದುವರಿದರೆ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಸಿದರು.
“ಮಹದಾಯಿ ಸಮಸ್ಯೆ ರಾಜಕೀಯವಾಗಿ ಬಳಸಿಕೊಳಲು ಯತ್ನಿಸಿದರೆ ನಾವು ಸುಮ್ಮನಿರುವುದಿಲ್ಲ. ನೀರಾವರಿ ಕಾಲುವೆಗಳ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಲಾಗುವುದು” ಎಂದರು.
ತಮಿಳುನಾಡು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ ಆರ್ ಪಾಂಡ್ಯನ್ ಸಮಾವೇಶ ಉದ್ಘಾಟಿಸಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ಇದನ್ನು ಹೊಡೆದೋಡಿಸಲು ಸಂಘಟಿತ ಹೋರಾಟ ಅಗತ್ಯವಿದೆ” ಎಂದು ಹೇಳಿದರು.
ತಮಿಳುನಾಡಿನ ರೈತ ಸಂಘಟನೆ ಒಕ್ಕೂಟದ ನಾಯಕಿ ಸುಧಾ ಧರ್ಮಲಿಂಗಂ ಮಾತನಾಡಿ, “ಮಹಿಳೆಯರು ಪುರುಷರಷ್ಟೇ ಕೃಷಿಯಲ್ಲಿ ಭಾಗವಹಿಸುತ್ತಿದ್ದಾರೆ. ಅದರೆ ಅವರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಇದನ್ನು ಪಡೆಯಲು ಈ ಸಂಘಟನೆ ಜೊತೆ ಕೈಜೋಡಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಲೆನಾಡಿನ ಪ್ರಮುಖ ಬಿಕ್ಕಟ್ಟು, ಪರಿಹಾರ ಮಾರ್ಗ ಕುರಿತು ಶಾಸಕರ ಭವನ-2ರಲ್ಲಿ ದುಂಡು ಮೇಜಿನ ಸಭೆ
ಸಮಾವೇಶಕ್ಕೂ ಮೊದಲು ಪುರಸಭೆಯಿಂದ ಮಹದಾಯಿ ಹೋರಾಟದ ವೇದಿಕೆವರೆಗೆ ರೈತರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸಮಾವೇಶದಲ್ಲಿ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕರಬಸಪ್ಪ, ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಸುರೇಶ ಪಾಟೀಲ, ಕಲಬುರಗಿ ದಯಾನಂದ ಪಾಟೀಲ, ಮಹೇಶ ಬೆಳಗಾಂವಕರ, ಸಿ ಎಸ್ ಪಾಟೀಲ, ಸಂಗಮೇಶ ಕೊಳ್ಳಿಯವರ, ಪರಶುರಾಮ ಎತ್ತಿನಗುಡ್ಡ, ಚಿಕ್ಕಮಗಳೂರಿನ ಎಚ್ ಎನ್ ಸೋಮಶೇಖರಯ್ಯ, ಕಡೂರಿನ ಎಸ್ ಎಂ ಅಜಯ್‌ಕುಮಾರ್, ಮೈಸೂರಿನ ಶಿವಸ್ವಾಮಿ, ಮಹದೇವಸ್ವಾಮಿ, ನಾಗಣ್ಣ, ಚಿಕ್ಕಬಳ್ಳಾಪುರದ ಗೋವಿಂದರಡ್ಠಿ, ಕೊಪ್ಪಳದ ಅಂದಪ್ಪ ಹುಬ್ಬಳ್ಳಿ, ಉಮೇಶ ಗೋವನಕೊಪ್ಪ, ಮಲ್ಲಣ್ಣ ಅಲೇಕಾರ, ಸಣ್ಣಫಕೀರಪ್ಪ ಜೋಗಣ್ಣವರ, ವೀರಬಸಪ್ಪ ಹೂಗಾರ, ಹನಮಂತ ಮಡಿವಾಳರ, ಲೀಲಕ್ಕ ಹಸಬಿ ಇದ್ದರು.