ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಢಾಣಾಪುರ ಗ್ರಾಮದಲ್ಲಿ ಭಾರೀ ಮಳೆಗೆ ಮಣ್ಣಿನ ಮನೆ ಏಕಾಏಕಿ ಕುಸಿದಿದ್ದು, ಮಣ್ಣಿನಡಿ ಸಿಲುಕಿದ್ದ ಮ್ಯಾರಥಾನ್ ಓಟಗಾರರೊಬ್ಬರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ಭಾರೀ ಮಳೆಯಾಗಿದ್ದು, ಢಾಣಾಪುರ ಗ್ರಾಮದ ಕುಸಿದ ಮಣ್ಣಿನ ಮನೆಯಲ್ಲಿ ಮ್ಯಾರಥಾನ್ ಓಟಗಾರ 45 ವರ್ಷದ ಪ್ರಕಾಶ ಮತ್ತು ಅವರ ಅಕ್ಕ ಮಾತ್ರ ವಾಸವಿದ್ದರು ಎಂದು ತಿಳಿದುಬಂದಿದೆ.
ಸ್ಥಳೀಯ ನಿವಾಸಿ ಹನುಮೇಶ್ ಬಾವಿಕಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೊಪ್ಪಳ ಜಿಲ್ಲಾದ್ಯಂತ ಭಾರೀ ಮಳೆಯಾಗಿದೆ. ರಾತ್ರಿಪೂರ್ತಿ ಸುರಿದ ಮಳೆಗೆ ತೋಯ್ದಿದ್ದ ಮಣ್ಣಿನ ಮನೆಯ ಗೋಡೆ ಏಕಾಏಕಿ ಕುಸಿದಿದೆ. ಘಟನೆ ನಡೆದಾಗ ಬೆಳಗಿನ ಜಾವವಾಗಿದ್ದರಿಂದ ಪ್ರಕಾಶ ಅವರ ಅಕ್ಕ ಮನೆಯಿಂದ ಹೊರಬಂದು ಕೆಲಸ ಮಾಡುತ್ತಿದ್ದರು. ತಮ್ಮ ಪ್ರಕಾಶ ಅವರು ಮನೆಯೊಳಗೆ ಚಾರ್ಜ್ ಇಟ್ಟಿದ್ದ ಮೊಬೈಲ್ ತರಲು ಒಳಗಡೆ ಹೋದಾಗ ಮನೆ ಕುಸಿದು ಅವರ ಮೇಲೆ ಬಿದ್ದಿದೆ. ಇದರಿಂದ ದೇಹದ ಮುಕ್ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿತ್ತು. ತಕ್ಷಣವೇ ಅಕ್ಕಪಕ್ಕದವರು ಬಂದು ರಕ್ಷಿಸಿದ್ದು, ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ತಿಳಿಸಿದರು.
“ಇವರು ಕ್ರೀಡಾಪಟುವಾಗಿದ್ದು, ಮ್ಯಾರಥಾನ್ ಕ್ರೀಡೆಯಲ್ಲಿ 45 ಕಿ.ಮೀವರೆಗಿನ ರನ್ನಿಂಗ್ ರೇಸ್‌ನಲ್ಲಿ ಭಾಗವಹಿಸುತ್ತಿದ್ದರು. ತುಂಬಾ ಬಡವರು, ಜೀವನ ನಡೆಸುವದೇ ಸವಾಲಾಗಿದೆ. ಇದೀಗ ಅವರ ಮೇಲೆ ಇಡೀ ಗೋಡೆ ಕುಸಿದಿರುವುದರಿಂದ ಅವರ ಬೆನ್ನು, ಕಾಲಿನ ಭಾಗಕ್ಕೆ ಸಾಕಷ್ಟು ಪೆಟ್ಟಾಗಿದೆ. ಆಸ್ಪತ್ರೆಯಲ್ಲಿ ಆಪರೇಷನ್ ಮಾಡಬೇಕೆಂದು ಹೇಳುತ್ತಿದ್ದಾರೆ. ಆದರೆ ಅವರ ಬಳಿ ಅಷ್ಟು ಹಣವಿಲ್ಲ. ಯಾರಾದರೂ ಧನಸಹಾಯ ಮಾಡಿದರೆ ಅವರಿಗೆ ಅನುಕೂಲವಾಲಿದೆ” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಈಜು ಬಾರದೆ ನೀರಿನಲ್ಲಿ ಮುಳುಗಿ ಯುವಕ ಸಾವು
“ಗ್ಯಾರಂಟಿ ಯೋಜನೆಯ ಮುಖಂಡ ಶ್ರೀನಿವಾಸ್ ಎಂಬುವವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಗ್ಯ ವಿಚಾರಿಸಿ ₹5000 ನೀಡಿದ್ದಾರೆ. ಇನ್ನುಳಿದ ಖರ್ಚುಗಳಿಗೆ ಹಣ ಹೊಂದಿಸುವವರಿಲ್ಲ. ಅವರ ಅಕ್ಕನಿಗೂ ವಯಸ್ಸಾಗಿದೆ” ಎಂದು ಮರುಗಿದರು.