ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಹಿಂದುತ್ವವಾದಿ ಕೋಮು ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ನಿರೀಕ್ಷಣಾ ಜಾಮೀನು ದೊರೆತಿದೆ. ರಾಯಚೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೂಲಿಬೆಲೆಗೆ ನಿರೀಕ್ಷಣಾ ಜಾಮೀನು ನೀಡಿದೆ.
ಇದೇ ವರ್ಷದ ಜನವರಿ 18ರಂದು ರಾಯಚೂರಿನ ಸಿರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೂಲಿಬೆಲೆ, ಖರ್ಗೆ ಅವರ ಕುರಿತು ಅಪಮಾನಕರ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಜಾತಿ ನಿಂದನೆ ಆರೋಪದ ಮೇಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಬೆನ್ನಲ್ಲೇ, ತಮ್ಮನ್ನು ಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ, ನ್ಯಾಯಾಲಯಕ್ಕೆ ಸೂಲಿಬೆಲೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೂಲಿಬೆಲೆ, “ಕಲಬುರಗಿಯಲ್ಲಿ ಖರ್ಗೆ ಸಾಹೇಬರ ಕಾಲದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆಸ್ಪತ್ರೆ ಮೇಲ್ಭಾಗವನ್ನು ಡ್ರೋನ್ ಕ್ಯಾಮರಾ ಮೂಲಕ ನೋಡಿದರೆ ಕಟ್ಟಡಗಳ ಆಕಾರದಲ್ಲಿ ‘ಮೊದಲ ಅಕ್ಷರ ಖ, ಎರಡನೇ ಅಕ್ಷರ ಗೆ, ಮೂರನೆಯದು ಅರ್ಕವತ್ತು’ ಕಾಣಿಸುತ್ತದೆ. ಆ ಕಟ್ಟಡ ಖರ್ಗೆ ಅಂತಾ ಇದೆ. ಕಟ್ಟಡ ಇರೋವರೆಗೆ ಅವರ ಹೆಸರು ಉಳಿಯಬೇಕೆಂದು ಹೀಗೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅವರ ಸ್ವಂತ ದುಡ್ಡಿಂದ, ಪಕ್ಷ ದುಡ್ಡಿಂದ ಕಟ್ಟಿಲ್ಲ. ಜನರ ತೆರಿಗೆ ದುಡ್ಡಲ್ಲಿ ತಮ್ಮ ಹೆಸರು ಶಾಶ್ವತಗೊಳಿಸುವಂತ ಅಯೋಗ್ಯರಿದ್ದಾರೆ” ಎಂದಿದ್ದರು.