ಮಲೆನಾಡಿನ ಜನವಿರೋಧಿ ಅರಣ್ಯ ಕಾಯ್ದೆಯನ್ನು ಕೈಬಿಡುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಮಲೆನಾಡಿನ ರೈತ, ಕಾರ್ಮಿಕ ಹಿತರಕ್ಷಣಾ ಸಮಿತಿಯ ನಿಯೋಗ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಸಲ್ಲಿಸಿತು.
ಬೆಂಗಳೂರಿನ ವಿಕಾಸಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ನೀಡಿದ್ದು, “ಮಲೆನಾಡಿನಲ್ಲಿ ಬದುಕುತ್ತಿರುವ ಜನರ ಪರಿಸ್ಥಿತಿ ಹದಗೆಟ್ಟಿದೆ. ಪರಿಸರ ಸಂರಕ್ಷಣೆ ಹೆಸರಿನಲ್ಲಿ ಸಾವಿರಾರು ಬಡ ಕುಟುಂಬಗಳು ಬೀದಿಗೆ ಬಂದಿವೆ. ಕಸ್ತೂರಿ ರಂಗನ್, ಮಾಧವ ಗಾಡ್ಗೀಳ್ ವರದಿ ಮುಂದಿಟ್ಟುಕೊಂಡು ಕಂದಾಯ ಭೂಮಿಯನ್ನು ಅರಣ್ಯ ಭೂಮಿಯೆಂದು ಘೋಷಿಸಿರುವುದು ಸರಿಯಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಡೀಮ್ಡ್ ಫಾರೆಸ್ಟ್, ರಿಸರ್ವ್ ಫಾರೆಸ್ಟ್ ಮಾಡಿರುವುದನ್ನು ಸೂಕ್ಷ್ಮವಾಗಿ ಮತ್ತೆ ಪರಿಶೀಲನೆ ಮಾಡಬೇಕು. ಇಲ್ಲಿ ವಾಸ್ತವವಾಗಿ ಅನುಭವಿಸುತ್ತಿರುವುದನ್ನು ಸರ್ಕಾರ ಗಮನಿಸಬೇಕು. ಸೂಕ್ತವಾದ ರೀತಿಯಲ್ಲಿ ಅರಣ್ಯ ಕಾಯ್ದೆ ತಿದ್ದುಪಡಿ ಮಾಡಬೇಕು. ರಾಜ್ಯದಲ್ಲಿ ಈ ಸಮಸ್ಯೆಗೆ ಒಂದು ಸಮಿತಿ ರಚನೆ ಮಾಡಿ ಮಲೆನಾಡಿನ ಜನರ ಸಮಸ್ಯೆ ಬಗೆಹರಿಸಬೇಕು” ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವರು ಮಾತನಾಡಿ, “ನಾವು ಮಲೆನಾಡಿನ ಸಮಸ್ಯೆಯನ್ನು ಆಲಿಸಿದ್ದೇವೆ. ಸರ್ಕಾರ ಜಾರಿ ಮಾಡಿರುವ ವರದಿಯನ್ನು ನಮ್ಮಲ್ಲಿ ತೆಗೆದು ಹಾಕಲು ಸಾಧ್ಯವಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಮಾತ್ರ ಸಾಧ್ಯ. ನಿಮ್ಮ ಕ್ಷೇತ್ರದ ಲೋಕಸಭಾ ಸದಸ್ಯರು ಗಮನವಹಿಸಿ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಹಿಳೆಯರು ಮೂಢನಂಬಿಕೆಗೆ ಒಳಗಾಗದೆ, ವೈಚಾರಿಕ ಮನೋಭಾವ ಬೆಳಿಸಿಕೊಳ್ಳಬೇಕು: ಸಚಿವ ಹೆಚ್ ಸಿ ಮಹದೇವಪ್ಪ
“ನೀವು ಕೇಳಿದಂತೆ ರಾಜ್ಯದಲ್ಲಿ ಕೂಡಲೇ ಒಂದು ಸಮಿತಿ ರಚನೆ ಮಾಡಲು ಸಾಧ್ಯವಿಲ್ಲ. ಮೊದಲು ಕೇಂದ್ರದಿಂದ ಅರಣ್ಯ ಕಾಯ್ದೆ ವರದಿಗಳನ್ನು ಅಲ್ಲಿ ಸರಿಪಡಿಸಿದ ನಂತರ ನಾವು ಸಮಿತಿ ರಚನೆ ಮಾಡಲು ಸಾಧ್ಯವಾಗುತ್ತದೆ. ಈ ಕುರಿತು ನಾವು ಸಾಧ್ಯವಾದಷ್ಟು ಸರ್ಕಾರದ ಗಮನಕ್ಕೆ ತರುತ್ತೇವೆ. ಎಲ್ಲೆಲ್ಲಿ ಈ ಸಮಸ್ಯೆಯಿದೆ ಎಂಬುದನ್ನು ಪರಿಶೀಲಿಸಿ ಬಗೆಹರಿಸಲು ಕ್ರಮವಹಿಸುತ್ತೇವೆ” ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು.