ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ದಿಡೀರ್ ರಾಜೀನಾಮೆ ನೀಡಿರುವುದರ ಹಿಂದಿನ ಕಾರಣಗಳು ಏನು ಎಂಬುದು ಜಿಲ್ಲೆಯ ಜನರಲ್ಲಿ ಕುತೂಹಲ ಮೂಡಿಸಿದ್ದು ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ತಮ್ಮ ಬೆಂಬಲಿಗರ ಜೊತೆ ಉಪಾಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು ರಮೇಶ್ ಕತ್ತಿ ರಾಜಿನಾಮೆಗೆ ಕಾರಣವಾಯಿತೆ ಎಂಬ ಅನುಮಾನಗಳು ಮೂಡಿವೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡಿಸಿಸಿ ಬ್ಯಾಂಕಿನ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಣ್ಣಾ ಸಾಹೇಬ್ ಜೊಲ್ಲೆ ಸಭೆಯಲ್ಲಿ ಪಟ್ಟು ಹಿಡಿದಿದ್ದರಿಂದ ರಮೇಶ್ ಕತ್ತಿ ಈ ಕುರಿತು ಎಲ್ಲ ನಿರ್ದೇಶಕ, ಸಹಮತ ಮೂಡಿಲ್ಲ ಮತ್ತು ಇದಕ್ಕೆ ಅವಕಾಶ ಇಲ್ಲ. ಎಲ್ಲರೂ ಒಮ್ಮತದಿಂದ ಬನ್ನಿ ಎಂದು ಖಡಾಖಂಡಿತವಾಗಿ ಹೇಳಿದ್ದರಿಂದ ಅಣ್ಣಾ ಸಾಹೇಬ್ ಜೊಲ್ಲೆ ಸಾಮಾನ್ಯ ಸಭೆ ಬಹಿಷ್ಕರಿಸಿ ತಮ್ಮ ಬೆಂಬಲಿಗರ ಜೊತೆ ಉಪಾಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ಮಾಡಿದ್ದರ ಕಾರಣ, ಅಸಮಾಧಾನಗೊಂಡು ರಮೇಶ್ ಕತ್ತಿ ಒಳ ರಾಜಕಾರಣಕ್ಕೆ ಬೆಸತ್ತು ರಾಜೀನಾಮೆ ನೀಡಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಈ ಕುರಿತು ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ, ರಮೇಶ್ ಕತ್ತಿಯವರು 2015ರಿಂದ 2024ರ ವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅವಧಿ ಇನ್ನೂ ಒಂದು ವರ್ಷ ಬಾಕಿಯಿದೆ. ಬ್ಯಾಂಕಿನ ನಿರ್ದೇಶಕರು ಪ್ರತ್ಯೇಕ ಸಭೆ ನಡೆಸಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಬಗ್ಗೆ ತೀರ್ಮಾನ ಮಾಡಿರಲಿಲ್ಲ. ಆದರೆ, ಬ್ಯಾಂಕಿನ ನಿರ್ದೇಶಕರು, ಹಿರಿಯರಿಗೆ ಗೌರವ ಕೊಟ್ಟು ರಮೇಶ ಕತ್ತಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದರು.
ಇದನ್ನೂ ಓದಿ ಬೆಳಗಾವಿ | ಬೈಕ್ ಮತ್ತು ಬಸ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಸಾವು
ರಮೇಶ ಕತ್ತಿ ತಮ್ಮ ಅಧಿಕಾರಾವಧಿಯಲ್ಲಿ ಕಳೆದ ವರ್ಷ ರಾಜ್ಯದಲ್ಲೇ ಬೆಳಗಾವಿ ಡಿಸಿಸಿ ಬ್ಯಾಂಕ್ ನಂಬರ್ 1ನೇ ಸ್ಥಾನದಲ್ಲಿದೆ. ಮತ್ತು ₹30 ಕೋಟಿ ನಿವ್ವಳ ಲಾಭ ಗಳಿಸಿದೆ. ಕತ್ತಿ ಅವರು ಉತ್ತಮ ಆಡಳಿತವನ್ನೂ ನೀಡಿದ್ದಾರೆ. 2025ರ ನವೆಂಬರ್ ತಿಂಗಳಲ್ಲಿ ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಯಲಿದೆ. ಮುಂದಿನ ಅಧ್ಯಕ್ಷರನ್ನು ಸಚಿವ ಸತೀಶ್ ಜಾರಕಿಹೊಳಿ, ಡಾ.ಪ್ರಭಾಕರ ಕೋರೆ, ಲಕ್ಷ್ಮಣ ಸವದಿ ರಮೇಶ್ ಜಾರಕಿಹೊಳಿ, ರಮೇಶ್ ಕತ್ತಿ ನೇತೃತ್ವದಲ್ಲಿ ನೂತನ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.