ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರು ದಾಸ್ತಾನು ಮಾಡಿದ್ದ ಕಡಲೆ ಮತ್ತು ಹೆಸರು ಕಾಳು ಚೀಲಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಬಿನ್ ವಿಕಾಸಕುಮಾರ ತಿಳಿಸಿದರು.
ಧಾರವಾಡ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಣ್ಣಿಗೇರಿ ಉಗ್ರಾಣದಲ್ಲಿ ದಾಸ್ತಾನು ಮಾಡಿದ್ದ ಚೀಲಗಳು ಕಳ್ಳತನ ಆಗಿರುವ ಹಿನ್ನೆಲೆಯಲ್ಲಿ, ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿ, ಇಬ್ಬರು ಸರ್ಕಾರಿ ಅಧಿಕಾರಿಗಳೇ ಶಾಮೀಲಾಗಿರುವುದನ್ನು ಪತ್ತೆ ಮಾಡಿವೆ. ಈ ಕುರಿತು ಕಡಲೆ ಮತ್ತು ಹೆಸರು ಬೇಳೆ ಚೀಲಗಳನ್ನು ಮರಳಿ ಕೊಡಿಸುವಂತೆ ರೈತರು ಬೇಡಿಕೆ ಇಟ್ಟಿದ್ದರು. ಅಲ್ಲಿನ ಅಧಿಕಾರಿ ಮರಳಿ ಕೊಡದೆ ಇದ್ದಾಗ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಪ್ರಭಾರ ಉಗ್ರಾಣ ವ್ಯವಸ್ಥಾಪಕ ಆಕಾಶ ಸುಭಾಸ ಮುಶಣ್ಣವರ ಹಾಗೂ ಸಹೋದ್ಯೋಗಿ ಶಶಿಕುಮಾರ ಬಸಯ್ಯ ಹಿರೇಮಠ ಈ ಇಬ್ಬರು ಆರೋಪಿಗಳನ್ನು ಪೋಲಿಸ್ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯ ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಮಾಣಿ ಗೋದಾಮಿಗೆ ತೆರಳಿ ಪರಿಶೀಲಿಸಿದಾಗ 4,141 ಚೀಲಗಳು ಕಾಣೆಯಾಗಿದ್ದವು. ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದರು.
ಆರೋಪಿಗಳು ಕಡಲೆ ಮತ್ತು ಹೆಸರು ಕಾಳಿನ ಚೀಲಗಳನ್ನು ಗದಗ ಮತ್ತು ಧಾರವಾಡದ ವಿವಿಧ ಟ್ರೇಡರ್‌ಗಳಿಗೆ ಮಾರಾಟ ಮಾಡಿದ್ದರು. ಇದುವರೆಗೆ 1,859 ಚೀಲಗಳನ್ನು ಜಪ್ತಿ ಮಾಡಲಾಗಿದ್ದು, ಉಗ್ರಾಣದಲ್ಲಿದ್ದ ದಾಸ್ತಾನಿಗೆ ಕೊಟ್ಟಿ ದಾಖಲೆ ಸೃಷ್ಟಿಸಿ ಅಣ್ಣಿಗೇರಿಯ ರೆಡ್ಡಿ ಬ್ಯಾಂಕ್ ಹಾಗೂ ಗದಗ ಸೆಂಟ್ರಲ್ ಬ್ಯಾಂಕುಗಳಲ್ಲಿ ಸುಮಾರು 37 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ತನಿಖೆ ನಡೆಸಿದ ಪೋಲಿಸ್ ಅಧಿಕಾರಿಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಆರಕ್ಷಕ ಅಧೀಕ್ಷಕ ನಾರಾಯಣ ಬರಮನಿ ಹಾಗೂ ಅಧಿಕಾರಿಗಳು ಇದ್ದರು.