ಮೋದಿ-ಆರ್‌ಎಸ್‌ಎಸ್‌ ಒಳಜಗಳ: ಕಗ್ಗಂಟಾಗಿಯೇ ಉಳಿದ ಬಿಜೆಪಿ ಅಧ್ಯಕ್ಷ ಹುದ್ದೆ!

Date:

Advertisements

ಬಿಜೆಪಿಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ ನಡ್ಡಾ) ಅವರ ಅಧಿಕಾರಾವಧಿ ಜನವರಿ ತಿಂಗಳಿಗೆ ಕೊನೆಗೊಂಡಿದೆ. ಆದರೆ, ಲೋಕಸಭಾ ಚುನವಣೆ ಹಿನ್ನೆಲೆ ಅವರ ಅಧಿಕಾರದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿತ್ತು. ಆ ಅವಧಿಯೂ ಮುಗಿದಿದ್ದು, ಇನ್ನೂ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿಲ್ಲ. ಮೋದಿ ಬಣ ಮತ್ತು ಆರ್‌ಎಸ್‌ಎಸ್‌ ನಡುವಿನ ಜಟಾಪಟಿಯಿಂದಾಗಿ ಹುದ್ದೆಯು ಕಗ್ಗಂಟಾಗಿ ಉಳಿದಿದೆ. ಕೇಂದ್ರ ಆರೋಗ್ಯ ಸಚಿವರಾಗಿರುವ ನಡ್ಡಾ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.

ಈವರೆಗೆ, ಮೋದಿ ಕಡೆಯವರು ಮತ್ತು ಎಸ್‌ಎಸ್‌ಎಸ್‌ ನಡುವೆ ಹಲವು ಸುತ್ತುಗಳ ಮಾತುಕತೆಗಳು ನಡೆದಿವೆ. ಆದರೆ, ಒಮ್ಮತಕ್ಕೆ ಬರಲಾಗಿಲ್ಲ. ಇದೀಗ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಚುನಾವಣೆಗಳು ನಡೆಯುತ್ತಿವೆ. ನವೆಂಬರ್‌ನಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ಚುನಾವಣೆ ನಡೆಯಲಿದೆ. ಆ ಚುನಾವಣೆಯ ಬಳಿಕ, ಬಿಜೆಪಿ ಅಧ್ಯಕ್ಷೀಯ ಹುದ್ದೆಯ ಮಾತುಕತೆ ನಡೆಸಲು ಬಿಜೆಪಿ-ಆರ್‌ಎಸ್‌ಎಸ್‌ ಮುಂದಾಗಿವೆ.

ಅಂದಹಾಗೆ, ಕಳೆದ ತಿಂಗಳು ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಉಭಯ ಪಕ್ಷಗಳು ಭೇಟಿಯಾಗಿದ್ದವು. ರಾಜನಾಥ್ ಸಿಂಗ್‌ ಜೊತೆಗೆ, ಅಮಿತ್ ಶಾ ಮತ್ತು ಬಿ.ಎಲ್. ಸಂತೋಷ್ ಅವರು ಬಿಜೆಪಿ ಪರವಾಗಿ ಹಾಜರಿದ್ದರು. ಆರ್‌ಎಸ್‌ಎಸ್‌ ಪ್ರತಿನಿಧಿಗಳಾಗಿ, ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮತ್ತು ಮುಂದಿನ ಸರ್‌ ಸಂಘಚಾಲಕ್ ಅರುಣ್ ಕುಮಾರ್ ಭಾಗಿಯಾಗಿದ್ದರು. 5 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬಿಜೆಪಿಯಿಂದ ಹಲವು ಹೆಸರುಗಳು ಪರಿಗಣನೆಗೆ ಬಂದಿದ್ದವು. ಆದರೆ, ಆರ್‌ಎಸ್‌ಎಸ್‌ ಆ ಹೆಸರುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ನಿರಾಕರಿಸಿದೆ.

Advertisements

ಸಂಘದ ಸಂಪ್ರದಾಯದಂತೆ ಬಿಜೆಪಿ ಅಧ್ಯಕ್ಷ ಹುದ್ದೆಗೆ ಆರ್‌ಎಸ್‌ಎಸ್‌ ನಿರ್ದಿಷ್ಟ ಹೆಸರುಗಳನ್ನು ಸೂಚಿಸುವುದಿಲ್ಲ. ಹೆಸರುಗಳನ್ನು ಬಿಜೆಪಿಯೇ ಪ್ರಸ್ತಾಪಿಸುತ್ತದೆ. ಆ ಪ್ರಸ್ತಾವನೆಗಳನ್ನು ಸೌಹಾರ್ದಯುತವಾಗಿ ಪರಿಗಣಿಸಿ, ಅನುಮೋದಿಸಲಾಗುತ್ತದೆ. ಈವರೆಗೆ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ, ಬಾರಿ ಎಲ್ಲವೂ ತಲೆಕೆಳಗಾಗುತ್ತಿವೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆ ಮುಗಿಯುವವರೆಗೆ ಕಾಯಲು ಬಿಜೆಪಿ-ಆರ್‌ಎಸ್‌ಎಸ್‌ ಸಮನ್ವಯ ಸಭೆ ನಿರ್ಧರಿಸಿದೆ ಎಂದು ವರದಿಯಾಗಿದೆ. ಬಿಜೆಪಿಯ ಪ್ರಸ್ತಾಪಿತ ವ್ಯಕ್ತಿಗಳು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಬಲ್ಲರು ಎಂದು ಭಾವಿಸಿದ್ದರೂ, ಆರ್‌ಎಸ್‌ಎಸ್‌ ಒತ್ತು ಕೊಡುವುದು ರಾಜಕೀಯ ಅನುಭವ ಮತ್ತು ಸ್ವಾಯತ್ತತೆಯ ಜೊತೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ವ್ಯಕ್ತಿಗಳಿಗೆ ಎಂದು ಹೇಳಲಾಗಿದೆ.

ಈ ಹಿಂದೆ ನಡೆದ ಸಭೆಗೂ ಮುನ್ನವೇ, ಅಧ್ಯಕ್ಷರ ಆಯ್ಕೆಗೆ ಒಮ್ಮತದ ಒಪ್ಪಿಗೆಯಾಗುವವರೆಗೆ ಹಂಗಾಮಿ ಅಥವಾ ಕಾರ್ಯಾಧ್ಯಕ್ಷರನ್ನು ಘೋಷಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿದ್ದವು. ಆದರೆ, ಕಾರ್ಯಾಧ್ಯಕ್ಷರ ಘೋಷಣೆಯೂ ಈವರೆಗೆ ಆಗಿಲ್ಲ.

ಪಕ್ಷದ ಅಧ್ಯಕ್ಷ ಹುದ್ದೆಗೆ ಬಿಜೆಪಿಯು ಎಂಟು-ಒಂಬತ್ತು ಹೆಸರುಗಳನ್ನು ಪ್ರಸ್ತಾಪಿಸಿದೆ. ಅವರಲ್ಲಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್, ಎಬಿವಿಪಿ ಮಾಜಿ ಅಧ್ಯಕ್ಷ ವಿನೋದ್ ತಾವ್ಡೆ ಅವರು ಆರ್‌ಎಸ್‌ಎಸ್ ನಾಯಕ ಹೊಸಬಾಳೆ ಅವರ ನಿಖಟವರ್ತಿಗಳಾಗಿದ್ದಾರೆ. ಇತರ ಹೆಸರುಗಳಲ್ಲಿ ಸಿ.ಆರ್ ಪಾಟೀಲ್, ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್, ರಾಜನಾಥ್ ಸಿಂಗ್, ಭೂಪೇಂದರ್ ಯಾದವ್, ದೇವೇಂದ್ರ ಫಡ್ನವಿಸ್ ಮತ್ತು ಧರ್ಮೇಂದ್ರ ಪ್ರಧಾನ್ ಅವರಿದ್ದಾರೆ. ಇವರೆಲ್ಲರೂ ಮೋದಿ ಪಡೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಆದಾಗ್ಯೂ, ಚೌಹಾಣ್ ಮತ್ತು ರಾಜನಾಥ್ ಸಿಂಗ್ ಅವರು ಹಿರಿಯ ಸಚಿವರಾಗಿದ್ದು, ಆರ್‌ಎಸ್‌ಎಸ್‌ ಜೊತೆಗೂ ಉತ್ತಮ ಒಡನಾಟ, ಒಲವು ಹೊಂದಿದ್ದಾರೆ. ಆದರೂ, ಈ ಇಬ್ಬರನ್ನೂ ತಮ್ಮ ಸಂಪುಟದಿಂದ ಹೊರಕಳಿಸಲು ಪ್ರಧಾನಿ ಮೋದಿ ಹಿಂದೇಟು ಹಾಕುತ್ತಿದ್ದಾರೆ.

image 16 1

ಬಿಜೆಪಿಗರಿಗೆ ನಡ್ಡಾ ಅವರಂತಹವರು ಅಧ್ಯಕ್ಷರಾಗಿ ಬೇಕು. ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಡಿಯಲ್ಲಿ ಪಕ್ಷವನ್ನು ಮುನ್ನಡೆಸಬೇಕು. ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಅಧ್ಯಕ್ಷರಾಗಿ ಅವರು ಬೆಂಬಲಿಸುವಂತಿರಬೇಕು. ಅಂದರೆ, ಅರ್ಥಾತ್ – ಚುನಾವಣಾ ಆಯೋಗ, ಸಿಎಜಿ, ಇಡಿ, ಸಿಬಿಐ, ಸಿಐಸಿ, ಸಿವಿಸಿನಂತಹ ಶಾಸನಬದ್ಧ ಸಂಸ್ಥೆಗಳು ಹೇಗೆ ಕೇಂದ್ರದ ಆಣತಿಯಲ್ಲಿ ಕೈಗೊಂಬೆಯಂತೆ ಕೆಲಸ ಮಾಡುತ್ತಿವೆಯೋ, ಅದೇ ರೀತಿ ಬಿಜೆಪಿಯೂ ಕೂಡ ಪಕ್ಷವಾಗಿ ಮೋದಿ ಸರ್ಕಾರದ ನಿರ್ಧಾರಗಳಿಗೆ ‘ಹ್ಮೂಂ’ಗುಟ್ಟಬೇಕು ಎಂಬುದು ಅವರ ಬಯಕೆ. ಅದರಂತೆಯೇ, ಹೆಸರುಗಳನ್ನು ಬಿಜೆಪಿ ಪ್ರಸ್ತಾಪಿಸುತ್ತಿದೆ.

ಆದರೆ, ಇದನ್ನು ಆರ್‌ಎಸ್‌ಎಸ್‌ ಒಪ್ಪುತ್ತಿಲ್ಲ. ಪಕ್ಷವು ಸ್ವತಂತ್ರವಾಗಿ ಸರ್ಕಾರಕ್ಕೆ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಲಹೆ, ಸೂಚನೆಗಳನ್ನು ನೀಡುವಂತಿರಬೇಕು ಎಂದು ಆರ್‌ಎಸ್‌ಎಸ್‌ ಬಯಸುತ್ತಿದೆ.

ಅಂತಹ ಸ್ವತಂತ್ರವನ್ನು ವಾಜಪೇಯಿ ಆಡಳಿತಾವಧಿಯಲ್ಲಿ ಬಿಜೆಪಿ ಹೊಂದಿತ್ತು. ವಾಜಪೇಯಿ ಸರ್ಕಾರಕ್ಕೆ ಸ್ವತಂತ್ರವಾಗಿ ಸಲಹೆಗಳನ್ನು ನೀಡುತ್ತಿತ್ತು. ವಿಮಾ ನಿಯಂತ್ರಣ ಮಸೂದೆ ಮತ್ತು ಬೆಲೆ ಏರಿಕೆಯಂತಹ ವಿಷಯಗಳಲ್ಲಿ ವಿರೋಧವನ್ನೂ ವ್ಯಕ್ತಪಡಿಸಿತ್ತು. 2001 ಜುಲೈ 31ರಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಸರ್ಕಾರದ ನಿರ್ಧಾರಗಳ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದಕ್ಕೆ, ವಾಜಪೇಯಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು. ಆದಾಗ್ಯೂ, ಸರ್ಕಾರವನ್ನು ಬೆಂಬಲಿಸುತ್ತಲೇ, ಬಿಜೆಪಿ ವಿಮರ್ಶೆಯನ್ನೂ ಮಾಡುತ್ತಿತ್ತು.

ಆದರೆ, ಈಗ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಬಿಜೆಪಿ ಸಭೆಗಳಿಗೆ ಮೋದಿ ಅವರ ಕೇವಲ ಭಾಷಣ ಮಾಡಲು ಮಾತ್ರವೇ ಹಾಜರಾಗುತ್ತಾರೆ. ಸಭೆಗಳಲ್ಲಿ ಅವರು ಅಭಿಪ್ರಾಯವನ್ನು ಆಲಿಸುವುದಿಲ್ಲ. ಸಲಹೆಗಳನ್ನು ಸ್ವೀಕರಿಸುವುದಿಲ್ಲ ಎಂಬ ಆರೋಪಗಳಿವೆ. ಹೀಗಾಗಿ, ಬಿಜೆಪಿಯಲ್ಲಿ ರಚನಾತ್ಮಕ ಪಾತ್ರವನ್ನು ಪುನಃಸ್ಥಾಪಿಸಲು ಆರ್‌ಎಸ್‌ಎಸ್‌ ಬಯಸಿದೆ. ಇದಕ್ಕೆ, ಮೋದಿ-ಶಾ ಬಗ್ಗುತ್ತಿಲ್ಲ.

ಗಮನಾರ್ಹವಾಗಿ, 1980ರಲ್ಲಿ ಬಿಜೆಪಿ ರಚನೆಯಾದಾಗಿನಿಂದಲೂ ಪಕ್ಷದೊಂದಿಗೆ ಆರ್‌ಎಸ್‌ಎಸ್‌ ಸ್ನೇಹದಿಂದಿದೆ. ತನ್ನ ರಾಜಕೀಯ ಘಟಕವನ್ನು ಸಂಘಟಿಸುವಲ್ಲಿ, ಪ್ರಚಾರ ಮಾಡುವಲ್ಲಿ ತನ್ನ ಪ್ರಚಾರಕಗಳನ್ನು ಪಕ್ಷಕ್ಕೆ ಕಳಿಸಿದೆ. ಪಕ್ಷದ ಆರಂಭಿಕ ವರ್ಷಗಳಲ್ಲಿ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರನ್ನು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗುತ್ತಿತ್ತು. ಅವರು ಪಕ್ಷ ಮತ್ತು ಸಂಘದ ನಡುವೆ ಸಂಯೋಜಕರಾಗಿ ಅಥವಾ ‘ರಾಜಕೀಯ ಕಮಿಷನರ್’ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಹೀಗಾಗಿಯೇ, ಬಿಜೆಪಿ ಅಧ್ಯಕ್ಷರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿಯ ಆಯ್ಕೆಯಲ್ಲಿ ಆರ್‌ಎಸ್‌ಎಸ್‌ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಿಂದೆ, ಅಮಿತ್ ಶಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದಾಗಲೂ, ಅಮಿತ್ ಶಾ ಪಕ್ಷ ಮತ್ತು ಸಂಘದ ನಡುವಿನ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗುತ್ತಾರೆಂದೇ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಅಮಿತ್ ಶಾ ಗೃಹ ಮಂತ್ರಿಯಾದರು, ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಿದರು. ಅಂದಿನಿಂದ ಅವರ ವರ್ತನೆ ಬದಲಾಯಿತು. ಮೋದಿ-ಶಾ ಜೋಡಿ, ಸಂಘವನ್ನು ಕಡೆಗಣಿಸಿ, ತಮ್ಮದೇ ರಾಜ್ಯಭಾರ ನಡೆಸಲು ಮುಂದಾದರು.

ಈ ವರದಿ ಓದಿದ್ದೀರಾ?: ಹರಿಯಾಣ ಚುನಾವಣೆ | ಕಾಂಗ್ರೆಸ್‌ ಕಡೆಗೆ ಬೀಸಲಿದೆ ಬಹುಮತದ ಬಿರುಗಾಳಿ…

ಈ ನಡುವೆ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಕೆಲವು ಮುಜುಗರದ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಮೂಲಕ ಸಂಘಕ್ಕಾಗಿರುವ ಗಾಯಕ್ಕೆ ಉಪ್ಪು ಸವರಿದಿದ್ದಾರೆ. ”2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ, 75 ವರ್ಷದ ನಿವೃತ್ತಿ ನಿಯಮ ತಂದು ಎಲ್‌.ಕೆ ಅಡ್ವಾಣಿ ಅವರಂತಹ ದಿಗ್ಗಜರನ್ನು ದೂರವಿಟ್ಟಿದ್ದರು. ಮುಂದಿನ ವರ್ಷ, ಮೋದಿ ಅವರಿಗೂ 75 ವರ್ಷ ವಯಸ್ಸಾಗಲಿದೆ. ಆದರೆ, ಈ ನಿವೃತ್ತಿ ನಿಯಮ ಮೋದಿಗೆ ಅನ್ವಯಿಸುವುದಿಲ್ಲ. ಬಿಜೆಪಿಯ ಸಂವಿಧಾನದಲ್ಲಿ ಎಲ್ಲಿಯೂ ನಿವೃತ್ತಿ ನಿಯಮದ ಬಗ್ಗೆ ಬರೆದಿಲ್ಲವೆಂದು ಅಮಿತ್ ಶಾ ವಾದಿಸಿದ್ದಾರೆ. ಇಂತಹ ಭಿನ್ನಾಭಿಪ್ರಾಯವನ್ನು ಆರ್‌ಎಸ್‌ಎಸ್‌ ಒಪ್ಪುತ್ತದೆಯೇ” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

”ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳನ್ನು ಒಡೆಯಲು, ವಿಪಕ್ಷಗಳ ನಾಯಕರನ್ನು ಜೈಲಿಗೆ ಹಾಕಲು ಮೋದಿ ಸರ್ಕಾರವು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಅನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ರಾಜಕೀಯ ನೈತಿಕತೆಯ ಬಗ್ಗೆ ಮಾತನಾಡುವ ಮೋಹನ್ ಭಾಗತ್ ಅವರು ಈ ದುರುಪಯೋಗವನ್ನು ಅನುಮೋದಿಸುತ್ತಾರಾ? ಈ ಹಿಂದೆ, ಭ್ರಷ್ಟಾಚಾರದ ಆರೋಪ ಹೊತ್ತಿದ್ದವರನ್ನು ಮೋದಿಯವರು ಬಿಜೆಪಿಗೆ ಬರಮಾಡಿಕೊಳ್ಳುತ್ತಿದ್ದಾರೆ. ಇದನ್ನು ಆರ್‌ಎಸ್‌ಎಸ್‌ ಮುಖ್ಯಸ್ಥರು ಒಪ್ಪುತ್ತಾರೆಯೇ? ಭ್ರಷ್ಟರು ಬಿಜೆಪಿ ಸೇರಿದ ಕೂಡಲೇ ಕ್ಲೀನ್ ಆಗಿಬಿಡುತ್ತಾರೆಯೇ” ಎಂದೂ ಕೇಜ್ರಿವಾಲ್ ಕೇಳಿದ್ದಾರೆ.

ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಮೋದಿ ಪಡೆ ಮತ್ತು ಆರ್‌ಎಸ್‌ಎಸ್‌ ನಡುವಿನ ಜಟಾಪಟಿಯ ವೇಳೆ, ಕೇಜ್ರಿವಾಲ್ ಅವರ ಪ್ರಶ್ನೆಗಳು ಆರ್‌ಎಸ್‌ಎಸ್‌ಅನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಮುಜುಗರಕ್ಕೀಡು ಮಾಡಿದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ ಅವರು ಈ ವರ್ಷದ ಅಂತ್ಯದವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುವ ಎಲ್ಲ ಸಾಧ್ಯತೆಗಳೂ ಇವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X