ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿ ಜನತಾ ದಳ (ಯುನೈಟೆಡ್) ನಾಯಕರೊಬ್ಬರು ಜೆಡಿಯು ಕಚೇರಿಯ ಹೊರಭಾಗದಲ್ಲಿ ಪೋಸ್ಟರ್ ಒಂದನ್ನು ಹಾಕಿದ್ದಾರೆ. ಪಾಟ್ನಾದ ಹಲವು ಸ್ಥಳಗಳಲ್ಲಿಯೂ ಪೋಸ್ಟರ್ ಹಾಕಿದ್ದಾರೆ.
ಜೆಡಿಯು ವರಿಷ್ಠ ನಿತೀಶ್ ಕುಮಾರ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುತ್ತಿದ್ದ ಬಿರ್ಚಂದ್ ಪಟೇಲ್ ಮಾರ್ಗದಲ್ಲಿರುವ ಜೆಡಿಯು ಕಚೇರಿಯ ಪ್ರವೇಶ ದ್ವಾರದ ಪಕ್ಕದಲ್ಲಿ ನಿತೀಶ್ ಕುಮಾರ್‌ಗೆ ಭಾರತ ರತ್ನ ನೀಡಬೇಕು ಎಂಬ ಆಗ್ರಹದ ಪೋಸ್ಟರ್ ಅನ್ನು ಹಾಕಲಾಗಿದೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ಜೆಡಿಯು ನಾಯಕರೊಬ್ಬರು, “ಭಾರತ ರತ್ನದ ಬೇಡಿಕೆಯು ಜೆಡಿಯುನ ಅಧಿಕೃತ ನಿಲುವು ಎಂದು ನಾವು ಹೇಳಲಾರೆವು. ಬಹುಶಃ ಕೆಲವು ನಾಯಕರುಗಳ ಬೇಡಿಕೆ ಆಗಿರಬಹುದು. ಆದರೆ ನಿತೀಶ್ ಕುಮಾರ್ ಅತ್ಯುನ್ನತ ಗೌರವಕ್ಕೆ ಅರ್ಹರು ಎಂದು ಪ್ರತಿಯೊಬ್ಬ ಜೆಡಿಯು ಕಾರ್ಯಕರ್ತರು ನಂಬುತ್ತಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್ ಅವರನ್ನು ‘ಮಿಮಿಕ್’ ಮಾಡಿದ ಆರ್‌ಜೆಡಿ ಎಂಎಲ್‌ಸಿ ಸದನದಿಂದ ಉಚ್ಚಾಟನೆ
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ನೇತೃತ್ವ ವಹಿಸಲಿರುವ ಕುಮಾರ್ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೃಷಿ ಮತ್ತು ರೈಲ್ವೆಯಂತಹ ಪ್ರಮುಖ ಖಾತೆಯನ್ನು ನಿರ್ವಹಿಸಿದ್ದರು.
ಯಾವ ಸಾಧನೆಗೆ ಭಾರತ ರತ್ನ ಎಂದ ನೆಟ್ಟಿಗರು
ಇನ್ನು ಈ ಪೋಸ್ಟರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಒಂದು ಕಡೆ ಬಿಹಾರ ಪ್ರವಾಹವನ್ನು ಎದುರಿಸುತ್ತಿದೆ. ಸಾವಿರಾರು ಜನರು ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದಾರೆ. ಇನ್ನೊಂದು ಕಡೆ ರಾಜಕೀಯ ನಾಯಕರು ಸಿಎಂ ನಿತೀಶ್ ಕುಮಾರ್‌ಗೆ ಭಾರತ ರತ್ನ ನೀಡಬೇಕು ಎಂದು ಜೆಡಿಯು ನಾಯಕರು ಆಗ್ರಹಿಸುತ್ತಿದ್ದಾರೆ” ಎಂದು ದಿಲೀಪ್ ಕುಮಾರ್ ಚೌಧರಿ ಎಂಬ ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಆಧ್ಯಾತ್ಮಿಕತೆಯತ್ತ ಸಾಗುತ್ತಿದ್ದೇನೆ: ರಾಜಕೀಯ ಪ್ರವೇಶ ವದಂತಿಗೆ ತೆರೆ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ
“ಹೌದು ಬಿಜೆಪಿಯು ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚಿಸಲು ಸಹಾಯ ಮಾಡಿದ ನಿತೀಶ್ ಕುಮಾರ್ ಅವರಿಗೆ ಭಾರತ ರತ್ನ ನೀಡಲೇಬೇಕು. ಬಿಜೆಪಿ ತನ್ನ ಸರ್ಕಾರ ಉಳಿಸಲು ಭಾರತ ರತ್ನ ನೀಡಲೂ ಬಹುದು” ಎಂದು ಮತ್ತೋರ್ವ ನೆಟ್ಟಿಗರು ವ್ಯಕ್ತವಾಡಿದ್ದರೆ, “ಯಾವ ಖುಷಿಗೆ ಭಾರತ ರತ್ನ ನೀಡಬೇಕು? ಬಿಹಾರವನ್ನು 20 ವರ್ಷದಿಂದ ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದಾರೆ. ಯಾವ ಸಾಧನೆಗಾಗಿ ಭಾರತ ರತ್ನ ನೀಡಬೇಕು” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇನ್ನು ಬಿಹಾರದಲ್ಲಿ ಕಳೆದ ಹಲವು ತಿಂಗಳುಗಳಿಂದ ಅಲ್ಲಲ್ಲಿ ಸೇತುವೆ ಕುಸಿತವಾಗುತ್ತಿರುವುದನ್ನು ಕೂಡಾ ನೆಟ್ಟಿಗರು ಪ್ರಸ್ತಾಪಿಸಿದ್ದಾರೆ. ಬಿಹಾರದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ 17ಕ್ಕೂ ಅಧಿಕ ಸೇತುವೆ ಕುಸಿದಿದೆ. ಇದಕ್ಕೆ ಕಳಪೆ ಕಾಮಗಾರಿ ಮತ್ತು ಸರಿಯಾದ ಸಮಯಕ್ಕೆ ಸೇತುವೆ ರಿಪೇರಿ ಕಾರ್ಯ ನಿರ್ವಹಿಸದಿರುವುದು ಕಾರಣ ಎಂದು ಆರೋಪಿಸಲಾಗಿದೆ. ಬಿಹಾರದಲ್ಲಿ ಸಾಲು ಸಾಲು ಸೇತುವೆ ಕುಸಿತದ ದಾಖಲೆ ಬರೆದ ನಿತೀಶ್ ಕುಮಾರ್ ಅವರಿಗೆ ಭಾರತ ರತ್ನ ಮಾತ್ರ ನೀಡುವುದಲ್ಲ ಗಿನ್ನಿಸ್ ದಾಖಲೆಗೆ ಅವರ ಹೆಸರು ಸೇರಿಸಬೇಕು ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
One Side Bihar is Facing Floods Where Thousands Facing Floods And The Other Side Political Leaders, demanding "Bharat Ratna for CM Nitish Kumar" were put up by Janata Dal (United) leaders outside the party office in Patna#BiharFlood #Bihar #BiharPolitics #BiharFlood2024 pic.twitter.com/75g1brILV5
— Dilip kumar Choudhary (@Dilipkumar_PTI) October 5, 2024
