ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ, ಇದ್ದಕ್ಕಿದ್ದ ಹಾಗೆ ವಿಕ್ಟೋರಿಯಾ ಮಹಾರಾಣಿ ಕೆರೆಯ ನೀರು ಸಣ್ಣ ನೀರಾವರಿ ಕಾಲುವೆ ಮೂಲಕ ಹರಿದು ಬಂದು, ಉಳ್ಳಾಗಡ್ಡಿ ರಾಶಿಗೆ ನುಗ್ಗಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಯಲು ಜಾಗದಲ್ಲಿ ಉಳ್ಳಾಗಡ್ಡಿ ಸ್ವಚ್ಛಗೊಳಿಸಿ ಮಾರುಕಟ್ಟೆಗೆ ಕಳಿಸಲು ಸಿದ್ದಮಾಡಿಕೊಂಡಿದ್ದರು.
ಒಂದು ಎಕರೆಗೆ ಅರವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಖರ್ಚು ಬರುತ್ತದೆ. ಈರುಳ್ಳಿ ಬೆಲೆ ಇಳಿಕೆಯ ಆತಂಕದ ನಡುವೆಯೂ ಉತ್ತಮ ನೀರಿಕ್ಷೆಯಲ್ಲಿದ್ದ ರೈತರು, ಕಾಲುವೆ ನೀರು ಉಳ್ಳಾಗಡ್ಡಿ ರಾಶಿಗೆ ನುಗ್ಗಿದ ಪರಿಣಾಮ ನಿರೀಕ್ಷೆ ಹುಸಿಗೊಳಿಸಿದೆ.
ಸಾಲ ಮಾಡಿ ಉತ್ತಮ ಬೀಜ, ಗೊಬ್ಬರ ಜೊತೆಗೆ ಕಳೆ ತಗೆದು ಉಳ್ಳಾಗಡ್ಡಿ ಬೆಳೆ ಬೆಳೆದಿದ್ದರು. ಉಳ್ಳಾಗಡ್ಡಿಯನ್ನು ಕಿತ್ತು, ಸ್ವಚ್ಛಗೊಳಿಸಿ ಒಣ ಹಾಕಿ, ಚೀಲದಲ್ಲಿ ತುಂಬುತ್ತಿದ್ದರು. ಇದ್ದಕ್ಕಿದ್ದ ಹಾಗೆ ಕಾಲುವೆಯಿಂದ ಹರಿದ ನೀರು, ಉಳ್ಳಾಗಡ್ಡಿ ರಾಶಿಯನ್ನು ತೊಯ್ದು ಹೋಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ. ಉಳ್ಳಾಗಡ್ಡಿ ರಕ್ಷಣೆ ಮಾಡಿಕೊಳ್ಳಲು ರೈತರು ಹಾಗೂ ಕೂಲಿ ಕಾರ್ಮಿಕರು ಹರಸಾಹಸ ಪಡುವುದನ್ನು ನೋಡಿ ಸಾರ್ವಜನಿಕರು ಮಮ್ಮಲ ಮರುಗಿದರು.
ಈ ದಿನ.ಕಾಮ್‌ನೊಂದಿಗೆ ರೈತ ಮಹಿಳೆ ಜಯಶ್ರೀ ಮಾತನಾಡಿ, “ಈ ಸಲ ಉಳ್ಳಾಗಡ್ಡಿ ಚಲೋ ಬಂದಿತ್ತು. ನಾಲ್ಕು ಗಾಡಿ ಉಳ್ಳಾಗಡ್ಡಿ ಆಗಿದ್ದವು. ಒಳ್ಳೆ ಬೆಲೆ ಬರುತ್ತೆ ಅಂತ ಉಳ್ಳಾಗಡ್ಡಿ ಕಿತ್ತು, ಸ್ವಚ್ಛ ಮಾಡಿ ಚೀಲ ತುಂಬುತ್ತಿದ್ದೆವು. ಕಾಲುವೆ ನೀರು ಬಂದು ಹಾಳಾಗೈತಿ, ಉಳಿದ ಚಲೋ ಗಡ್ಡಿ ಆರಿಸಾಕ ಹತ್ತೀವಿ” ಎಂದು ಅಳಲನ್ನು ತೋಡಿಕೊಂಡಳು.
ಈ ಸುದ್ದಿ ಓದಿದ್ದೀರಾ? ಗದಗ | ಸಮಯಕ್ಕೆ ಸರಿಯಾಗಿ ಬಾರದ ಬಸ್: ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
“ನಮ್ಮ ಕೆರೆಯಿಂದ ನೂರಾರು ರೈತರ ಸಾವಿರಾರು ಎಕರೆಗೆ ಪ್ರದೇಶ ನೀರಾವರಿಯಾಗಲಿದೆ. ನಮ್ಮ ಗ್ರಾಮದ ಕೆರೆ ಮತ್ತು ಕಾಲುವೆ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ನಮ್ಮಊರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯದಿಂದ ನೋಡುತ್ತಿದ್ದಾರೆ. ಹಿಂಗ ರೈತರ ಉಳ್ಳಾಗಡ್ಡಿ ರಾಶಿಗೆ ನೀರು ಹೊಕ್ಕರ ಯಾರ್ ಜವಾಬ್ದಾರಿ” ಎಂದು ರೈತ ಶ್ರಿಕಾಂತ ಪ್ಯಾಟಿ ಅಸಮಾಧಾನ ವ್ಯಕ್ತಪಡಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.