ಬಂಗಾಳಕೊಲ್ಲಿಯ ಟರ್ಫ್ ಎಫೆಕ್ಟ್ನಿಂದ ಬೆಂಗಳೂರಿನಲ್ಲಿ ಕಳೆದ ಮೂರು ದಿನದಿಂದ ಮಳೆಯಾಗುತ್ತಿದೆ. ಕತ್ತಲಾಗುತ್ತಿದ್ದಂತೆ ಎಂಟ್ರಿಯಾಗುವ ಮಳೆಯ ಆರ್ಭಟಕ್ಕೆ ರಾಜಧಾನಿಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ.
ನಿನ್ನೆ ರಾತ್ರಿ ಸುರಿದ ಮಳೆಯಿಂದ ನಗರದಲ್ಲಿ ಹಲವು ರಸ್ತೆಗಳು ಜಲಾವೃತವಾದವು. ಕೆಲವು ಕಡೆ ತಡೆಗೋಡೆ ಕುಸಿದು ಅಪಾರ್ಟ್‌ಮೆಂಟ್ ಒಳಗೆ ನೀರು ನುಗ್ಗಿದೆ. ನಗರದಲ್ಲಿ ಸರಾಸರಿ 36 ಮಿ.ಮೀ. ಮಳೆ ದಾಖಲಾಗಿದ್ದು, ಜನಜೀವನ ತತ್ತರಿಸಿದೆ.
ಮಳೆಗೆ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್ ಜಲಾವೃತವಾಗಿದ್ದು, 603 ಫ್ಲಾಟ್ಗಳಿದ್ದು, 2ಸಾವಿರ ನಿವಾಸಿಗಳಿಗೆ ಜಲದಿಗ್ಬಂಧನ ಉಂಟಾಗಿತ್ತು. ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನ ಸ್ಥಳಾಂತರಿಸಲಾಗದೆ. ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ನಲ್ಲಿ 80 ಕ್ಕೂ ಹೆಚ್ಚು ಕಾರು, ನೂರಕ್ಕೂ ಹೆಚ್ಚು ಬೈಕ್ಗಳು ನೀರಿನಲ್ಲಿ ಮುಳುಗಿವೆ.
ಟ್ರ್ಯಾಕ್ಟರ್, ಬೋಟ್ ಮೂಲಕ ಆಹಾರ, ನೀರನ್ನ ಪೂರೈಸಲಾಗಿದೆ.ಮಹಾಮಳೆಯಿಂದ ಬಸವೇಶ್ವರನಗರದಲ್ಲಿರುವ ವೃದ್ಧಾಶ್ರಮಕ್ಕೆ ನೀರು ನುಗ್ಗಿತ್ತು. ಇದರಿಂದ 15ಕ್ಕೂ ಅಧಿಕ ವೃದ್ಧರು ಪರದಾಡಿದ್ದಾರೆ. ಬಸವೇಶ್ವರ ನಗರದ 8ಬಿ ಮುಖ್ಯರಸ್ತೆ ಹೊಳೆಯಂತಾಗಿತ್ತು. ಹಾಗಾಗಿ ಫ್ಲೈವುಡ್ ಹಾಗೂ ಗ್ಲಾಸ್ ಅಂಗಡಿ ಸಂಪೂರ್ಣ ಜಲಾವೃತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
ಬಿನ್ನಿಪೇಟೆಯಲ್ಲೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಬಿನ್ನಿ ಇಟಾ ಮಾಲ್ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದಿದೆ. ಇದರಿಂದ ವಿದ್ಯುತ್ ಕಂಬ ವಾಲಿದ್ದು, 15 ಮನೆ ನಿವಾಸಿಗಳು ಹೊರಗೆ ಬಾರದ ಸ್ಥಿತಿಯಲ್ಲಿ ಸಿಲುಕಿದರು. ಹತ್ತುಕ್ಕೂ ಹೆಚ್ಚು ಬೈಕ್ಗಳು ಜಖಂ ಆಗಿವೆ. ಅದೇ ರೀತಿಯಾಗಿ ಯಲಹಂಕದ ಅಟ್ಟೂರಿನಲ್ಲಿ ಮಳೆ ಅಬ್ಬರಿಸಿದೆ. ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ನೀರನ್ನ ಹೊರ ಹಾಕಲು ಕುಟುಂಬದವರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ.
ಟಿ.ದಾಸರಹಳ್ಳಿಯ ಮಹೇಶ್ವರಿನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ದಿನಸಿ, ಬಟ್ಟೆ ನೀರುಪಾಲಾಗಿವೆ. ವರುಣಾರ್ಭಟಕ್ಕೆ ಬೆಂಗಳೂರು-ಹೊಸೂರು ಹೆದ್ದಾರಿ ಕೆರೆಯಂತಾಗಿದೆ. ನೀರಲ್ಲಿ ಸಿಲುಕಿ ಕಾರು ಚಾಲಕ ಪರದಾಡಿದ್ದಾರೆ. ರಸ್ತೆ ಜಲಾವೃತವಾಗಿದ್ರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ಮಳೆಗೆ ಸರ್ಜಾಪುರ ಮುಖ್ಯರಸ್ತೆ ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ನಿಂತು ಜನ ಪರದಾಡುತ್ತಿದ್ದಾರೆ. ರೈಲ್ವೆ ಟ್ರ್ಯಾಕ್ಗೆ ನೀರು ಬರುತ್ತೆ ಅಂತ ರೈಲ್ವೇ ಇಲಾಖೆ ನೀರು ಹರಿಯುವ ಜಾಗ ಮುಚ್ಚಿದ್ದು ಫಜೀತಿ ತಂದಿದೆ. ರಾಜಾಜಿನಗರದಲ್ಲೂ ಮಳೆ ಧಾರಾಕಾರವಾಗಿ ಸುರಿಯಿತ್ತು. ಮಂಜುನಾಥ ನಗರದಲ್ಲಿ ಹತ್ತಾರು ಬೈಕ್ಗಳು ಮುಳುಗಡೆಯಾಗಿದ್ವು. ರಸ್ತೆ ಬದಿ ಅಂಗಡಿಗಳಿಗೂ ಮಳೆ ನೀರು ನುಗ್ಗಿ ನಿವಾಸಿಗಳು ಪರದಾಡಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಅ.10 ಭಾರೀ ಮಳೆಯಾಗಬಹುದು. ಮುಂದಿನ ನಾಲ್ಕೈದು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೊಟ್ಟೆಗೆಪಾಳ್ಯ ; 113 ಮಿ.ಮೀ
ಹಂಪಿನಗರ : 108 ಮಿ.ಮೀ
ನಾಗಪುರ : 107.5 ಮಿ.ಮೀ
ಚೌಡೇಶ್ವರಿ : 79.5 ಮಿ.ಮೀ
ಮಾರುತಿಮಂದಿರ : 75.5 ಮಿ.ಮೀ
ನಂದಿನಿ ಲೇಔಟ್ : 71.5 ಮಿ.ಮೀ
ರಾಜಾಜಿನಗರ : 59 ಮಿ.ಮೀ
ನಾಯಂಡಹಳ್ಳಿ : 46 ಮಿ.ಮೀ
ಹೆಚ್‌ಎಎಲ್ ವಿಮಾನ ನಿಲ್ದಾಣ : 45 ಮಿ.ಮೀ
ವಿದ್ಯಾರಣ್ಯಪುರ : 45 ಮಿ.ಮೀ
ಪುಟ್ಟೇನಹಳ್ಳಿ : 42.5 ಮಿ.ಮೀ
ಆರ್‌ಆರ್ ನಗರ : 42.5 ಮಿ.ಮೀ
ರಾಜಮಹಲ್ ಗುಟ್ಟಹಳ್ಳಿ : 42.5 ಮಿ.ಮೀ
