ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿನ ಸಾಲು ಸಾಲು ಅಕ್ರಮ, ಅವ್ಯವಸ್ಥೆಗಳನ್ನು ಸರಿಪಡಿಸುವಲ್ಲಿ ಸೂಕ್ತ ಕ್ರಮಕೈಗೊಳ್ಳಲು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರನ್ನು ಅಮಾನತು ಮಾಡಲಾಗಿದೆ.
ಅಂಗನವಾಡಿ ಮಕ್ಕಳಿಗೆ ನೀಡಬೇಕಾದ ಮೊಟ್ಟೆಗಳನ್ನು ವಿಡಿಯೊ ಮಾಡುವವರೆಗೆ ಮಾತ್ರ ನೀಡಿ, ಮರಳಿ ಪಡೆದಿದ್ದು. ಅಂಗನವಾಡಿ ಆಹಾರ ಪದಾರ್ಥಗಳು ಹೋಟೆಲ್ನಲ್ಲಿ ಸಿಕ್ಕಿದ್ದು, ಅಂಗನವಾಡಿ ಮೇಲ್ಛಾವಣಿ ಕುಸಿದು ಬಿದ್ದು ಮಕ್ಕಳು ಗಾಯಗೊಂಡಿದ್ದು ಸೇರಿದಂತೆ ಹತ್ತಾರು ಅವಾಂತರ, ಅಕ್ರಮಗಳು ನಡೆದಿದ್ದವು. ಈ ವರದಿಗಳಿಗೆ ಕಾರಣ ಕೇಳಿ ಕೆಲ ದಿನಗಳ ಹಿಂದೆಯೇ ಉಪ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಉಪನಿರ್ದೇಶಕ ತಿಪ್ಪಣ್ಣ ಸಿರಸಂಗಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪದೇ ಪದೇ ತೀವ್ರ ತೆರನಾದ ಕರ್ತವ್ಯಲೋಪ ಎಸಗಿದ್ದು, ಇಲಾಖೆ ವಿಚಾರಣೆಯನ್ನು ಬಾಕಿಯಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಇವರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲʼ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಕೆ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದಾರೆ.