70 ರ ದಶಕದ ನಂತರ ನಡೆದ ಸಾಮಾಜಿಕ, ಆರ್ಥಿಕ ಸ್ಥಿತ್ಯಂತರಗಳನ್ನು ಅರ್ಥ ಮಾಡಿಕೊಂಡು ಚಳವಳಿ ಕಟ್ಟಬೇಕಿದೆ. ಶೋಷಿತರ ನಡುವೆ ಇರುವ ಅಸಹನೆಯನ್ನು ಹೋಗಲಾಡಿಸಿ, ಸೌಹಾರ್ದತೆ ಮೂಡಿಸದಿದ್ದರೆ,ಸಮ ಸಮಾಜ ನಿರ್ಮಾಣದ ದಲಿತ ಸಂಘರ್ಷ ಸಮಿತಿಯ ಕನಸು ನನಸಾಗಲು ಸಾಧ್ಯವಿಲ್ಲ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ತುಮಕೂರು ನಗರದ ಏಂಪ್ರೆಸ್ ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ವತಿಯಿಂದ ಆಯೋಜಿಸಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಎಲ್ಲರನ್ನು ಒಳಗೊಂಡಾಗ ಮಾತ್ರ ಸಮಾನತೆಯ ರಥ ಮುಂದೆ ಸಾಗಲು ಸಾಧ್ಯ.ಇದೇ ಅಂಬೇಡ್ಕರ್ ಅವರ ಆಶಯವೂ ಆಗಿತ್ತು.ಮೀಸಲಾತಿಯನ್ನು ಕೆಲವೇ ಜಾತಿಗಳ ಕಬಳಿಸುತ್ತಿವೆ.ಪರಿಶಿಷ್ಟರ 101 ಜಾತಿಗಳಲ್ಲಿ 101ನೇ ಜಾತಿಗೂ ಅದರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಲಭ್ಯವಾಗಬೇಕು.ಹಾಗೆಯೇ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡಗಳಲ್ಲಿಯೂ ಮೀಸಲಾತಿ ಅಲ್ಲಿನ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು.ಇದನ್ನೇ ಅಂಬೇಡ್ಕರ್ ಎಲ್ಲರನ್ನು ಒಳಗೊಂಡ ಅಭಿವೃದ್ದಿ ಎಂದು ಪ್ರತಿಪಾದಿಸಿದ್ದರು ಎಂದರು
ದಸಂಸ ಹುಟ್ಟಿದ 1976ರ 20ನೇ ಶತಮಾನದಲ್ಲಿ ಸಾಮಾಜಿಕ ಸಮಸ್ಯೆಗಳಾದ ಅಸ್ಪೃಷ್ಯತೆ, ಮಹಿಳಾ ದೌರ್ಜನ್ಯ, ವರದಕ್ಷಿಣೆ ಇಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಟ ಮಾಡಬೇಕಾಗಿತ್ತು.ಆದರೆ 21 ಶತಮಾನದಲ್ಲಿ ಜಾಗತೀಕರಣನದ ಫಲವಾಗಿ ಅರ್ಥಿಕ ಸುಧಾರಣೆಯತ್ತ ಹೋರಾಟ ರೂಪಿಸಬೇಕಾಗಿದೆ. ಬಂಡವಾಳ ಶಾಹಿಗಳ ವಿರುದ್ದ ಸಂಘಟಿತರಾಗಿ ಹೋರಾಟ ರೂಪಿಸಬೇಕಾಗಿದೆ. ಮಾನವೀಯತೆಯನ್ನು ನುಂಗಿ ಹಾಕಿ,ಮತೀಯತೆ,ಮಠೀಯತೆ ವಿರುದ್ದ ಹೋರಾಡಬೇಕಿದೆ. ಜಾತಿವಿನಾಶದ ಪರವಾಗಿ ಹೋರಾಡುತ್ತಿದ್ದ ಜನರು, ಜಾತಿಯತೆಯ ವಿರುದ್ದ ಗಟ್ಟಿಯಾದ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. 20ನೇ ಶತಮಾನ ಸಂಘಟನೆಯ ಯುಗವಾದರೆ,21ನೇ ಶತಮಾನ ವಿಘಟನೆಯ ಯುಗವಾಗಿದೆ.ಬಂಡವಾಳಶಾಹಿ, ಪುರೋಹಿತಶಾಹಿ ವಿರುದ್ದ ಹೋರಾಟ ನಡೆಸುವುದರ ಜೊತೆಗೆ,ಸಮೂಹ ಪ್ರಜ್ಞೆಯಿಂದ ವ್ಯಕ್ತಿ ಪ್ರಜ್ಞೆಯತ್ತ ಜಾರುತ್ತಿರುವ ಯುವ ಸಮುದಾಯವನ್ನು ತಡೆಯುವ ಪ್ರಯತ್ನಗಳ ನಡೆಯಬೇಕಾಗಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ನುಡಿದರು.

ರಾಜಕೀಯ ಪಕ್ಷಗಳಲ್ಲಿ ಕವಲುಗಳು ಇರುವಂತೆ ದಲಿತ ಸಂಘರ್ಷ ಸಮಿತಿಯಲ್ಲಿಯೂ ಹಲವಾರು ಕವಲುಗಳಿವೆ.ಆದರೆ ಅವೆಲ್ಲವುಗಳ ಗುರಿ ಸಮ ಸಮಾಜ ನಿರ್ಮಾಣವೇ ಆಗಿದೆ. ನಾಯಕನೆಂದರೆ ಎಂದರೆ ಮೈಕ್ ಹಿಡಿದು ಭಾಷಣ ಬಿಗಿಯುವದಲ್ಲ. ಮನಸ್ಸುಗಳನ್ನು ಕಟ್ಟುವವನೇ ನಿಜವಾದ ಲೀಡರ್. ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರ ಸವಾರಿ ಮಾಡುತ್ತಿರುವ ಈ ಕಾಲದಲ್ಲಿ ಎಲ್ಲರನ್ನು ಒಳಗೊಂಡ ಸಂಘಟನೆ ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ. ಅಂಬೇಡ್ಕರ್ ಹೇಗೆ ದಲಿತ ಅಸ್ಮಿತೆಯನ್ನು ಇಟ್ಟುಕೊಂಡೇ ಕಾರ್ಮಿಕರು, ಮಹಿಳೆಯರು, ಹಿಂದುಳಿದ ವರ್ಗದವರ ಪರವಾಗಿಯೂ ದನಿ ಎತ್ತುತಿದ್ದರೋ, ಅದೇ ರೀತಿ ದಲಿತ ಸಂಘರ್ಷ ಸಮಿತಿಯ ನಾಯಕರು,ತಮ್ಮ ಹಕ್ಕುಗಳ ಜೊತೆಗೆ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು,ಮಹಿಳೆಯರು,ಕಾರ್ಮಿಕರ ಹಕ್ಕುಗಳ ಬಗ್ಗೆಯೂ ಮಾತನಾಡಬೇಕಿದೆ,ಬೀದಿ ಭಾರತ ಸ್ವಚ್ಚವಾದರೆ ಸಾಲದು, ಭಾವ ಭಾರತವೂ ಸ್ವಚ್ಚವಾಗಬೇಕಿದೆ ಎಂದರು.
ಗಾಂಧಿ ಮತ್ತು ಅಂಬೇಡ್ಕರ್ ಎರಡು ನಮ್ಮ ಮುಂದಿರುವ ಪ್ರಜ್ಞೆಗಳು. ಗಾಂಧಿ ಸೂಟು, ಬೂಟು ಹಾಕುವ ಸಮುದಾಯದಲ್ಲಿ ಹುಟ್ಟಿ,ತನ್ನಂತಹವರಿಂದ ಅನ್ಯಾಯಕ್ಕೆ ಒಳಗಾದ ಜನರ ಜೊತೆ ಅರೆ ಬೆತ್ತಲೆಯಾಗಿ ನಿಂತು ಪಾಪ ಕಳೆದುಕೊಂಡರೆ, ಅರೆಬೆತ್ತಲೆ ಸಮುದಾಯದಲ್ಲಿ ಹುಟ್ಟಿದ ಅಂಬೇಡ್ಕರ್ ಸೂಟು ಬೂಟು ಹಾಕುವ ಮೂಲಕ ಸಮುದಾಯದ ಜಾಗೃತ ಪ್ರಜ್ಞೆಯ ಪ್ರತೀಕವಾಗಿ ಕಂಗೊಳಿಸುತ್ತಾರೆ. ಬುದ್ದ, ಬಸವಣ್ಣಣ, ನಾಲ್ಮುಡಿ ಕೃಷ್ಣರಾಜ ಒಡೆಯರ್, ಕುದ್ಮಲ್ ರಂಗರಾವ್ ಇವರುಗಳ ಗಾಂಧಿಯ ಸಾಲಿಗೆ ಸೇರುತ್ತಾರೆ.ಸಾಮಾಜಿಕ ಶ್ರೇಣಿಕರಣ ಹಾಗೂ ಸಂಪತ್ತಿನ ಕ್ರೂಢಿಕರಣದ ವಿರುದ್ದ ಹೋರಾಡಲು ದಸಂಸ ತನ್ನಲ್ಲಿನ ದಲಿತ ಪ್ರಜ್ಞೆಯನ್ನು ಮರು ವ್ಯಾಖ್ಯಾನಿಸಿಕೊಳ್ಳಬೇಕಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ನುಡಿದರು.

ದಲಿತ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪ ಅವರ ಪತ್ನಿ ಇಂದಿರಾ ಕೃಷ್ಣಪ್ಪ ಮಾತನಾಡಿ, ಇಂದಿನ ರಾಜ್ಯಮಟ್ಟದ ಮಹಾ ಅಧಿವೇಶನ 50 ವರ್ಷಗಳ ದಸಂಸದ ಇದುವರೆಗಿನ ಸಾಧನೆ ಮತ್ತು ಮುಂದಿನ ನಡೆಗಳ ಕುರಿತು ಪುನರಾವಲೋಕನ ಮಾಡಿಕೊಳ್ಳುವ ವೇದಿಕೆಯಾಗಿದೆ.ನಾವು ನಡೆದು ಬಂದ ದಾರಿಯನ್ನು ಅವಲೋಕಿಸುತ್ತಲೇ,ನಮ್ಮ ಮುಂದಿರುವ ಸವಾಲು ಗಳನ್ನು ಮೆಟ್ಟಿನಿಲ್ಲಲ್ಲು ದಾರಿ ಕಂಡುಕೊಳ್ಳಬೇಕಿದೆ.ಅರ್ಥಿಕ ಅಸಮಾನತೆ, ಏಕಮುಖ ಚಲನೆ, ಸಂವಿಧಾನದ ವಿರೋಧಿ ನಡೆಗಳು, ಮನುವಾದದ ಸ್ಥಾಪನೆಯ ವಿರುದ್ದ ಎಲ್ಲರನ್ನು ಸಂಘಟಿಸಿ ಮುನ್ನೆಡೆಸುವ ಸವಾಲು ನಮ್ಮ ಮುಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ವಹಿಸಿದ್ದರು.
ಹಿರಿಯರಾದ ಕೆ.ದೊರೆರಾಜು, ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ, ಹಿರಿಯ ದಸಂಸ ಮುಖಂಡ ಕುಂದೂರು ತಿಮ್ಮಯ್ಯ, ಡಾ.ಬಸವರಾಜು, ವಿರೂಪಾಕ್ಷ ಡ್ಯಾಗೇರಹಳ್ಳಿ, ,ಮುರುಳಿ ಕುಂದೂರು,ಚೇಳೂರು ಶಿವನಂಜಪ್ಪ,ಗಾನ ಅಶ್ವಥ್, ಮಲ್ಲೇಶ್ ಅಂಬುಗ, ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬುರ್, ತಾಯಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ, ಮುಖಂಡರಾದ ರವೀಂದ್ರ ಹೊಸಕೋಟೆ, ಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
