ಕೋಟ್ಯಂತರ ಮೌಲ್ಯದ ಹಳೇ ನೋಟುಗಳನ್ನು ನಾಶಪಡಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಈ ಹಳೇ ನೋಟುಗಳನ್ನು ಆರ್ಬಿಐಗೆ ನೀಡಿ ಬದಲಾವಣೆಗೆ ಮುಂದಾಗಿದ್ದು ಆರ್‌ಬಿಐ ಕೂಡ ಹಳೇ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದೆ. ಈ ಹಿನ್ನೆಲೆ ಇದೀಗ ಹಳೇ ನೋಟುಗಳಿಗೆ ಬೆಂಕಿ ಇಡಲು ಪೊಲೀಸರು ತೀರ್ಮಾನಿಸಿದ್ದು ಕೋರ್ಟ್ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಪೊಲೀಸರ ಬಳಿ ಐದು ಕೋಟಿಗೂ ಅಧಿಕ ಹಳೆಯ ನೋಟಿನ ಕಂತೆಗಳಿವೆ. 1 ಸಾವಿರ ಹಾಗೂ 500 ಮುಖಬೆಲೆಯ ಹಳೇ ನೋಟುಗಳಿಗೆ ಇವುಗಳಿಗೆ ನಯಾಪೈಸೆ ಬೆಲೆ ಇಲ್ಲ. ಆ ನೋಟುಗಳೀಗ ಕೇವಲ ಕಾಗದದ ಚೂರಷ್ಟೇ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
ಬೆಂಗಳೂರಿನ ಹಲವು ಪ್ರಕರಣದಲ್ಲಿ 5 ಕೋಟಿಗೂ ಅಧಿಕ ಹಳೆಯ ನೋಟುಗಳನ್ನು ಮುಟ್ಟುಗೋಲು ಮಾಡಲಾಗಿದೆ. ಬೇರೆ ಬೇರೆ ಪ್ರಕರಣದಲ್ಲಿ ಹಳೇ ನೋಟುಗಳು ಪತ್ತೆಯಾಗಿವೆ. ನೋಟು ಅಮಾನ್ಯೀಕರಣ ಬಳಿಕ ಹಳೇ ನೋಟುಗಳು ಬೆಲೆ ಕಳೆದುಕೊಂಡಿವೆ. ನೋಟು ಅಮಾನ್ಯೀಕರಣ ಬಳಿಕ ಬದಲಾವಣೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಕೊಟ್ಟ ಕಾಲಾವಕಾಶ ಕೂಡ ಮುಗಿದು ಹೋಗಿದೆ. ಹೀಗಾಗಿ ಹಳೇ ನೋಟುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ತಿಳಿಸಿದೆ.
ಹಳೇ ನೋಟು ಹಿನ್ನೆಲೆ ಪೊಲೀಸರು ಬ್ಯಾಂಕ್ನಲ್ಲಿ ಠೇವಣಿ ಮಾಡಲು ಆಗುತ್ತಿಲ್ಲ. ಅತ್ತ ಆರ್‌ಬಿಐ ಕೂಡ ಈ ಹಣವನ್ನು ಸ್ವೀಕಾರ ಮಾಡುತ್ತಿಲ್ಲ. ಹೀಗಾಗಿಯೇ ಹಳೇ ನೋಟುಗಳನ್ನ ಸುಟ್ಟು ಹಾಕಲು ಪೊಲೀಸರು ನಿರ್ಧರಿಸಿದ್ದಾರೆ. ಕೋರ್ಟ್ ಅನುಮತಿ ಪಡೆದ ಬಳಿಕ ಪೊಲೀಸರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೋರ್ಟ್ ಅನುಮತಿ ಕೊಟ್ಟರೆ ಪೊಲೀಸರು ಹಳೇ ನೋಟು ನಾಶಪಡಿಸಲಿದ್ದಾರೆ.
