ಕೋಲ್ಕತ್ತಾದ ಆರ್.ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ, ಕೆಲಸದ ಸ್ಥಳಗಳಲ್ಲಿ ಸುರಕ್ಷತೆಗಾಗಿ ಒತ್ತಾಯಿಸಿ ಟ್ರೈನಿ ವೈದ್ಯರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇದೀಗ, ತಮ್ಮ ಹೋರಾಟವನ್ನು ಉಪವಾಸ ಸತ್ಯಾಗ್ರಹಕ್ಕೆ ಬದಲಿಸಿದ್ದು, ಭಾನುವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಅತ್ಯಾಚಾರ-ಕೊಲೆಗೀಡಾದ ಸಹೋದ್ಯೋಗಿಗೆ ನ್ಯಾಯ ಒದಗಿಸಬೇಕು. ಆರ್.ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕು. ಆರೋಗ್ಯ ಕಾರ್ಯಕರ್ತರಿಗೆ ಕೆಲಸದ ಸ್ಥಳದಲ್ಲಿ ಭದ್ರತೆ ಒದಗಿಸಬೇಕು. ಆರೋಗ್ಯ ಸೌಲಭ್ಯಗಳಲ್ಲಿರುವ ‘ಬೆದರಿಕೆ ಸಂಸ್ಕೃತಿ’ಯನ್ನು ಕೊನೆಗಾಣಿಸಬೇಕು ಎಂದು ಪ್ರತಿಭಟನಾನಿರತ ವೈದ್ಯರು ಒತ್ತಾಯಿಸಿದ್ದಾರೆ. ತಮ್ಮ ಈ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಶನಿವಾರ ರಾತ್ರಿ 8:30ರವರಗೆ ಗಡುವು ನೀಡಿದ್ದರು. ಆದರೆ, ಸರ್ಕಾರವು ತಮ್ಮ ಬೇಡಿಕೆಗಳನ್ನು ಇನ್ನೂ ಈಡೇರಿಸದ ಕಾರಣ, ಇದೀಗ ಆರು ಮಂದಿ ಟ್ರೈನಿ ವೈದ್ಯರು ಉಪವಾಸ ಸತ್ಯಾಗ್ರಹ ಆರಂಬಿಸಿದ್ದಾರೆ.
ಅವರ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಸಾರ್ವಜನಿಕರು, ಹಿರಿಯ ವೈದ್ಯರು ಸೇರಿದಂತೆ ಎಲ್ಲರೂ ಪ್ರತಿಭಟನಾ ಸ್ಥಳದಲ್ಲಿ ನೆರದಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಉಪವಾಸ ಸತ್ಯಾಗ್ರಹದ ವೇಳೆ ತಮ್ಮ ಸಹೋದ್ಯೋಗಿಗಳಲ್ಲಿ ಯಾರಾದರೂ ಅಸ್ವಸ್ಥರಾದರೆ ರಾಜ್ಯವೇ ಹೊಣೆಯಾಗಲಿದೆ ಎಂದು ಕಿರಿಯ ವೈದ್ಯರು ಎಚ್ಚರಿಸಿದ್ದಾರೆ.
“ಜನರ ಬೆಂಬಲವು ನಮ್ಮ ಸಹೋದ್ಯೋಗಿಯ ಭೀಕರ ಹತ್ಯೆಯ ವಿರುದ್ಧದ ನಮ್ಮ ಪ್ರತಿಭಟನೆಯನ್ನು ಮುಂದುವರಿಸಲು ಧೈರ್ಯ ಮತ್ತು ಉತ್ಸಾಹ ನೀಡಿದೆ. ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೂ, ಇನ್ನೂ ನ್ಯಾಯ ಸಿಕ್ಕಿಲ್ಲ ಎಂಬುದನ್ನು ಜನರು ಮರೆತಿಲ್ಲ” ಎಂದು ಪ್ರತಿಭಟನಾನಿರತ ವೈದ್ಯರಲ್ಲಿ ಒಬ್ಬರಾದ ದೇಬಾಶಿಶ್ ಹಲ್ದರ್ ಹೇಳಿದ್ದಾರೆ.