ತೆಲುಗು ಸಿನಿರಂಗದ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜಾನಿ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಾದ ಹಿನ್ನಲೆ, ಅವರಿಗೆ ಘೋಷಿಸಲಾಗಿದ್ದ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂಪಡೆದಿರುವುದಾಗಿ ವರದಿಯಾಗಿದೆ.
ಜಾನಿ ಮಾಸ್ಟರ್ ವಿರುದ್ಧ ಅವರ ಮಾಜಿ ಸಹೋದ್ಯೋಗಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ತಮಗೆ ಜಾನಿ ಮಾಸ್ಟರ್ ಹಲವಾರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅವರ ದೂರಿದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಜಾನಿ ಅವರನ್ನು ಬಂಧಿಸಿದ್ದಾರೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದಾಗ್ಯೂ, ತಮಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದ್ದರಿಂದ, ಅದನ್ನು ಪಡೆಯಲು ಕಾರ್ಯಕ್ರಮಕ್ಕೆ ತೆರಳುವುದಕ್ಕಾಗಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು.
ಜಾನಿ ಮಾಸ್ಟರ್, ‘ತಿರುಚಿತ್ರಂಬಲಂ’ನ ಚಿತ್ರದ ‘ಮೇಘಮ್ ಕರುಕ್ಕಥಾ’ಹಾಡಿಗೆ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದರು. ಆದರೆ, ಇದೀಗ, ಪ್ರಶಸ್ತಿಯನ್ನು ಅಮಾನತುಗೊಳಿಸಲಾಗಿದೆ ಎಂಧು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೋಶ ತಿಳಿಸಿದೆ.
ಜಾನಿ ಮಾಸ್ಟರ್ ವಿರುದ್ಧ ದೂರು ದಾಖಲಿಸಿರುವ ಯುವತಿ, “ತಾನು ಅಪ್ರಾಪ್ತೆಯಾಗಿದ್ದಾಗಲೇ ತನಗೆ ಲೈಂಗಿಕ ಕಿರುಕುಳ ನೀಡಲು ಜಾನಿ ಮಾಸ್ಟರ್ ಆರಂಭಿಸಿದ್ದರು. ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಾನು ಜಾನಿ ಮಾಸ್ಟರ್‌ಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದೆ. ಆಗ, ವಿವಿಧ ನಗರಗಳಲ್ಲಿ ತಮ್ಮ ಚಿತ್ರೀಕರಣಕ್ಕೆ ತೆರಳಿದ್ದಾಗ ಅನೇಕ ಬಾರಿ ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಮಾತ್ರವಲ್ಲದೆ, ಬೇರೆಲ್ಲಿಯೂ ಉದ್ಯೋಗಾವಕಾಶ ಸಿಗದಂತೆ ಮಾಡುತ್ತೇನೆಂದು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ” ಎಂದೂ ಮಹಿಳೆ ದೂರಿದ್ದಾರೆ.