ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಲುಗೆ ಬೆಳೆಸಿ, ಬಳಿಕ ಬ್ಲಾಕ್‌ಮೇಲ್ ಮಾಡುತ್ತಿದ್ದ ತಮ್ಮ ಮಾಜಿ ಪ್ರೇಮಿಯ ಮೇಲೆ ಯುವತಿಯೊಬ್ಬರು ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ಅಲಿಗರ್‌ನಲ್ಲಿ ನಡೆದಿದೆ.
ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಯುವಕ ವಿವೇಕ್‌ನನ್ನು ಭೇಟಿ ಮಾಡಲು ರೆಸ್ಟೋರೆಂಟ್‌ಗೆ ಕರೆದಿದ್ದ ಯುವತಿ, ಮಾತನಾಡುತ್ತಿದ್ದ ಸಮಯದಲ್ಲಿ ಬಾಟಲಿಯದ್ದ ತಂದಿದ್ದ ಆ್ಯಸಿಡ್ಅನ್ನು ಆತನ ಮೇಲೆರಚಿದ್ದಾರೆ. ಘಟನೆಯಲ್ಲಿ ಯುವಕನಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಆ ಯುವಕ ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ, ನನಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಪದೇ-ಪದೇ ಹಣ ಕೊಡುವಂತೆ ಪೀಡಿಸುತ್ತಿದ್ದ ಆತನ ಕಿರುಕುಳ ಸಹಿಸಲಾಗದೆ, ಆ್ಯಸಿಡ್ ಎರಚದ್ದೇನೆ” ಎಂದು ಯುವತಿ ಹೇಳಿದ್ದಾರೆ.
ಯುವಕನ ಕೈಗೆ ಸುಟ್ಟ ಗಾಯಗಳಾಗಿವೆ. ಪೊಲೀಸರು ಬರುವಷ್ಟರಲ್ಲಿ ಆತ ತನ್ನ ಶರ್ಟ್ ತೆಗೆದು ರೆಸ್ಟೋರೆಂಟ್ ನಿಂದ ಪರಾರಿಯಾಗಿದ್ದ. ಏತನ್ಮಧ್ಯೆ, ಮಹಿಳೆ ಮತ್ತು ಆಕೆಯ ತಾಯಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮಹಿಳೆಗೂ ಸುಟ್ಟ ಗಾಯಗಳಾಗಿದ್ದು, ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಯುವಕ ಮತ್ತು ಯುವತಿ ಒಬ್ಬರಿಗೊಬ್ಬರು ಪರಿಚಿತರಿದ್ದರು. ಅವರಿಬ್ಬರಿಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದವು. ಘಟನೆ ಬಳಿಕ ಯುವಕ ಪರಾರಿಯಾಗಿದ್ದಾನೆ” ಎಂದು ಸಹಾಯಕ ಪೊಲೀಸ್ ಕಮಿಷನರ್ ಮಯಾಂಕ್ ಪಾಠಕ್ ಹೇಳಿದ್ದಾರೆ.