ಪೋಷಣ್ ಆ್ಯಪ್‌ಅನ್ನು ಹ್ಯಾಕ್ ಮಾಡುವ ಮೂಲಕ, ಗರ್ಭಿಣಿಯರು, ಬಾಣಂತಿಯರಿಗೆ ಲಿಂಕ್ ಕಳುಹಿಸುವ ಮೂಲಕ ನಿಮ್ಮ ಹಣ ವಂಚಿಸುತ್ತಾರೆ. ಅವರು ಕಳಿಸದ ಲಿಂಕ್ಅನ್ನು ಒತ್ತಿದರೆ ಖಾತೆಯಿಂದ ಹಣ ಹೋಗುತ್ತದೆ. ಈ ಕುರಿತು ಎಚ್ಚರವಿರಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗರ್ಭಿಣಿಯರು ಬಾಣಂತಿಯರು ಮತ್ತು ಅವರ ಕುಟುಂಬದವರು, ಸಾರ್ವಜನಿಕರು ಇದರ ಬಗ್ಗೆ ಎಚ್ಚರ ವಹಿಸಬೇಕು ಈ ವಂಚನೆ ಪ್ರಕರಣದ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ, ಹಾಗೂ 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೂಲಕವೂ ಸಂದೇಶ ಕಳುಹಿಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಪ್ರಕರಣ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಲೂ ದೂರು ದಾಖಲಾಗಿದ್ದು, ಬೆಳಗಾವಿಯಲ್ಲಿ ಐವರು ಮಹಿಳೆಯರ ಖಾತೆಗಳನ್ನು ಹ್ಯಾಕ್ ಮಾಡಿ ₹82 ಸಾವಿರ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕೂಡ ಸ್ಪಷ್ಟಪಡಿಸಿದ್ದಾರೆ.