ಇನ್ನೂ ಮುಡಾ ವಿಚಾರದ ಬಿಸಿ ಆರಿರದ ಸಂದರ್ಭದಲ್ಲೇ ಮೈಸೂರು ದಸರಾ ಮುಗಿಸಿ ರಾಯಚೂರು ಜಿಲ್ಲೆಗೆ ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನು ಉದ್ದೇಶ ಇತ್ತೋ ತಿಳಿದಿಲ್ಲ. ಆದರೆ, ಅಲ್ಲಿ ಸ್ಪಷ್ಟವಾದ ಒಂದು ಸಂಗತಿಯೆಂದರೆ, ಇವತ್ತಿಗೂ ಕರ್ನಾಟಕದ ಅತ್ಯಂತ ಜನಪ್ರಿಯ ರಾಜಕೀಯ ನಾಯಕ ಎಂದರೆ ಅದು ಸಿದ್ದರಾಮಯ್ಯನವರೇ…ಸಾಮಾನ್ಯವಾಗಿ ಯಾರೇ ಅಧಿಕಾರದಲ್ಲಿದ್ದರೂ, ಆ ರೀತಿಯ ʼಜನಪ್ರಿಯತೆʼ ಇರುತ್ತದೆ ಎಂದು ಹೇಳಬಹುದು. ವಿವಿಧ ಜನಾಭಿಪ್ರಾಯ ಸಂಗ್ರಹಗಳಲ್ಲಿ ನಾವು ಇದನ್ನು ನೋಡುತ್ತೇವೆ. ಅಧಿಕಾರದ ಜೊತೆಗೆ ಜನರು ಗುರುತಿಸಿಕೊಳ್ಳಲು ಬಯಸುವುದೂ ಅದಕ್ಕೆ ಒಂದು ಕಾರಣ. ಆದರೆ, ಅದನ್ನು ದಾಟಿ ಕೆಲವು ಅಂಶಗಳೂ ಕೆಲಸ ಮಾಡುತ್ತವೆ.
2013ರ ಚುನಾವಣೆ ಅಥವಾ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಅತ್ಯಂತ ಜನಪ್ರಿಯ ನಾಯಕ ಯಾರು ಎಂದು ನೀವು ನೋಡಿದಾಗ, ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರು ಇದ್ದರೂ, ಕುಮಾರಸ್ವಾಮಿಯವರು ತೀರಾ ಹಿಂದೆ ಇರಲಿಲ್ಲ. ಜೆಡಿಎಸ್ ಪಕ್ಷಕ್ಕೆ ಇರುವ ಜನಪ್ರಿಯತೆಗಿಂತ ಸಾಪೇಕ್ಷವಾಗಿ ಕುಮಾರಸ್ವಾಮಿಯವರನ್ನು ಜನರು ಮೆಚ್ಚಿಕೊಳ್ಳುತ್ತಿದ್ದರು. ಅದು ನಿಧಾನಕ್ಕೆ ಇಳಿದಿದೆ ಎಂಬುದು ವಾಸ್ತವವಾದರೂ, ಕೆಲವರನ್ನು ಜನರು ಸಾಕಷ್ಟು ಕಾಲ ಹಚ್ಚಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಅದಕ್ಕೆ ಕಾರಣಗಳು ಕೆಲವೊಮ್ಮೆ ಸುಲಭವಾಗಿ ಕಾಣದೆಯೇ ಇರಬಹುದು. ಜಾತಿ ಮತ್ತು ಜಾತಿಯ ಆಚೆಗೂ ಎಷ್ಟೋ ಕಾರಣಗಳು ಅದರ ಹಿಂದೆ ಇರುತ್ತವೆ. ಸಿದ್ದರಾಮಯ್ಯನವರ ಕುರಿತ ಜನಪ್ರಿಯತೆಗೂ ಮತ್ತು ಅವರ ಕುರಿತ ವಿರೋಧಕ್ಕೂ ಅಂತಹುದೇ ಕಾರಣಗಳಿವೆ. ಅವುಗಳನ್ನು ʼಖುದ್ದು ಕಂಡʼ ಅನುಭವಗಳ ಆಧಾರದಲ್ಲಿ, ಚುನಾವಣಾ ರಾಜಕಾರಣದ ಕೆಲವು ವೈಚಿತ್ರಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಇವಕ್ಕೆ ಸ್ಪಷ್ಟವಾದ ರಾಜಕೀಯ ಆಯಾಮವಲ್ಲದೇ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳೂ ಇರುವುದು ಮತ್ತೆ ಮತ್ತೆ ಅನುಭವಕ್ಕೆ ಬಂದಿದೆ.
ಕಳೆದ ಇಪ್ಪತ್ತು ವರ್ಷಗಳಲ್ಲಿ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ತೋರಿದ ಹಲವು ಸಂದರ್ಭಗಳು ಕಾಣಸಿಕ್ಕವು. ಆದರೆ, ಮುಡಾ ಪ್ರಕರಣವು ಅದನ್ನು ವಿಪರೀತವಾಗಿ ಕುಂದಿಸಿರಬಹುದು ಎನಿಸುತ್ತಿತ್ತು. ಏಕೆಂದರೆ, ಯಾವ ಕಾರಣಕ್ಕೆ ಸಿದ್ದರಾಮಯ್ಯನವರ ಕುರಿತು ಹಲವು ಸಮುದಾಯಗಳಿಗೆ (ಇವು ಕೇವಲ ಜಾತಿ ಸಮುದಾಯಗಳಲ್ಲ) ತೀರದ ಪ್ರೀತಿ ಇತ್ತೋ, ಆ ಕಾರಣಗಳಲ್ಲಿ ಒಂದು ಕುಸಿದು ಬಿದ್ದಿರಬಹುದು ಎಂಬ ಗುಮಾನಿ ಇತ್ತು. ಅದು ಕುಸಿದಿದೆಯೇ ಇಲ್ಲವೇ ಎಂಬುದನ್ನು ಚರ್ಚಿಸುವ ಮೊದಲು, ಸಿದ್ದರಾಮಯ್ಯನವರ ಕುರಿತ ಅಭಿಮಾನಕ್ಕೆ ಇರಬಹುದಾದ ಕಾರಣಗಳನ್ನು ತೋರುವ ಕೆಲವು ʼಅನುಭವʼಗಳನ್ನು ನೋಡೋಣ.

ಕಾಂಗ್ರೆಸ್-ಜೆಡಿಎಸ್ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗರು ಮುಖ್ಯಮಂತ್ರಿಯಾಗಿಯೂ, ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿಯೂ ಇದ್ದು, ದೇವೇಗೌಡರಿಗೂ ಸಿದ್ದರಾಮಯ್ಯನವರಿಗೂ ಹಳಸಿಕೊಳ್ಳಲು ಆರಂಭವಾಗಿತ್ತು. ಇನ್ನೂ ಅಹಿಂದ ಸಮಾವೇಶಗಳು ಶುರುವಾಗಿರಲಿಲ್ಲವಾದರೂ, ವೈಮನಸ್ಯ ಬಹಿರಂಗಕ್ಕೆ ಬರಲು ಶುರುವಾಗಿತ್ತು. ಆಗ, ಉಡುಪಿಯಲ್ಲಿ ಕನಕಗೋಪುರವನ್ನು ಕೆಡವಿದ್ದು ವಿವಾದಕ್ಕೆಡೆ ಮಾಡಿತ್ತು. ಅದರ ವಿರುದ್ಧ 2005ರ ಜನವರಿ 8ರಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಭಾರೀ ದೊಡ್ಡ ಸಮಾವೇಶ ನಡೆಯಿತು. ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯದ ಬಹುತೇಕ ಪ್ರಗತಿಪರ ಸಂಘಟನೆಗಳನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ವೇದಿಕೆಗೆ ಕರೆದಾಗ ಹೋಗದೇ, ಹೊರಗಿನ ದ್ವಾರದಲ್ಲಿ ನಿಂತಿದ್ದ ನಮಗೆ ಇದ್ದಕ್ಕಿದ್ದಂತೆ ಇಡೀ ಸಮಾವೇಶದಲ್ಲಿ ಅತ್ಯುತ್ಸಾಹವೇಕೆ ಉಕ್ಕಿತು ಎಂದು ಗೊತ್ತಾಗಲಿಲ್ಲ. ಹಿಂದೆ ತಿರುಗಿ ನೋಡಿದರೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರಿನಿಂದ ಇಳಿಯುತ್ತಿದ್ದರು. ಅಲ್ಲಿಂದ ವೇದಿಕೆಗೆ ಅವರು ಹೋಗುವವರೆಗೆ, ಯಾರಿಗೂ ಏನೂ ಕೇಳಿಸದ ಪ್ರಮಾಣದಲ್ಲಿ ಜನರ ಕೇಕೆ, ಅಬ್ಬರಗಳು ಇದ್ದವು. ಹೌದು, ಅಲ್ಲಿದ್ದದ್ದು ಶೇ.95ರಷ್ಟು ಕುರುಬ ಸಮುದಾಯ. ಆದರೆ, ಈ ಸಮುದಾಯ ಯಾಕಾಗಿ ಸಿದ್ದರಾಮಯ್ಯನವರನ್ನು ಈ ಪ್ರಮಾಣಕ್ಕೆ ಹಚ್ಚಿಕೊಂಡಿದೆ ಎಂಬುದಕ್ಕೆ ನಮ್ಮ ದೇಶದ ಸಾಮಾಜಿಕ ಚಲನೆಯನ್ನು ನೋಡಿದರೆ ಅರ್ಥವಾಗುತ್ತದೆ. ವಿವಿಧ ಸಮುದಾಯಗಳಿಗೆ ಮೇಲ್ಚಲನೆ ಶುರುವಾದಾಗ, ಅವರು ಗುರುತಿಸಿಕೊಳ್ಳಲು ಒಂದು ಐಕಾನ್ ಅಗತ್ಯ ಬೀಳುತ್ತದೆ. ಅದನ್ನು ಸಮರ್ಥವಾಗಿ ಪೂರೈಸಬಲ್ಲ ವ್ಯಕ್ತಿಯೊಬ್ಬರು ಆ ಸಂದರ್ಭದಲ್ಲಿದ್ದರೆ, ಬೇಷರತ್ತಾಗಿ ಅದರ ಜೊತೆಗೆ ದೀರ್ಘಕಾಲ ನಿಂತುಬಿಡುತ್ತಾರೆ. ವ್ಯಕ್ತಿಗಳಲ್ಲದೇ, ಕೆಲವೊಮ್ಮೆ ಸಂಘಟನೆಗಳ ಜೊತೆಗೆ, ಚಳವಳಿಗಳ ಜೊತೆಗೆ ಜನರು ಹಾಗೆ ನಿಂತಿದ್ದಿದೆ.
ಬಾಬಾಸಾಹೇಬ್ ಅಂಬೇಡ್ಕರರ ಜೀನಿಯಸ್ ಎನ್ನಬಹುದಾದ ಚಿಂತನೆ, ಬದ್ಧತೆ ಮತ್ತು ಸಾಮರ್ಥ್ಯಗಳ ಹೊರತಾಗಿಯೂ ಇಡೀ ದೇಶದ ದಲಿತ ಸಮುದಾಯದ ಐಕಾನ್ ಆಗಿದ್ದು, 80ರ ದಶಕದಲ್ಲಿ. ಏಕೆಂದರೆ, ಆ ಹೊತ್ತಿಗೆ ಆ ಸಮುದಾಯಗಳಲ್ಲಿ ಒಂದು ಸಣ್ಣ ವಿಭಾಗದ ಮೇಲ್ಚಲನೆ ಶುರುವಾಗಿತ್ತು. ಒಂದು ಸಣ್ಣ ಪ್ರಮಾಣದ ಮಧ್ಯಮವರ್ಗ ಮತ್ತು ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿ ಹುಟ್ಟಿಕೊಂಡಿತ್ತು. ಅದನ್ನು ದಾಟಿ ನಿಧಾನಕ್ಕೆ ಅಂಬೇಡ್ಕರರು ಸಮಸ್ತ ಶೋಷಿತ ಸಮುದಾಯಗಳ ಐಕಾನ್ ಆಗಿ ರೂಪುಗೊಳ್ಳುವುದಕ್ಕೆ ಸುಮಾರು ಮೂರು ದಶಕಗಳು ಹಿಡಿದವು. ಆದರೆ, 1990ರ ಆಸುಪಾಸಿಗೇ (ಕಾಕತಾಳೀಯವಾಗಿ ಅದು ಅವರು ಜನ್ಮಶತಾಬ್ದಿಯ ವರ್ಷವೂ ಹೌದು) ಇದು ಬೆಳೆದು ನಿಲ್ಲಲು ಆರಂಭಿಸಿದ್ದಕ್ಕೆ ಕಾರಣ ಸಮುದಾಯದ ಚಲನೆ.

ಅಷ್ಟು ಒಳ್ಳೆಯದಲ್ಲದ ಉದಾಹರಣೆ ನೀಡಬಹುದಾದರೆ, ಕರ್ನಾಟಕದ ನಾಯಕ (ವಾಲ್ಮೀಕಿ) ಸಮುದಾಯ ಮೇಲ್ಚಲನೆ ಕಾಣುವ ಹೊತ್ತಿಗೆ ಅವರಿಗೆ ಒದಗಿ ಬಂದಿದ್ದು ಶ್ರೀರಾಮುಲು. ಆದರೆ, ಯಾವ ರೀತಿಯಲ್ಲೂ ಆ ಸಮುದಾಯದ ಸಮಸ್ತರನ್ನು ಪ್ರತಿನಿಧಿಸುವ ಮತ್ತು ಮುಂದಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆಯಿಲ್ಲದ್ದಕ್ಕೆ ಅವರದ್ದೇ ಸ್ವಂತ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲೂ ಶ್ರೀರಾಮುಲು 2023ರಲ್ಲಿ ಸೋತರು. ಸೋತ ಅನುಕಂಪವೂ ಕೆಲಸಕ್ಕೆ ಬಾರದಂತೆ 2024ರ ಲೋಕಸಭಾ ಚುನಾವಣೆಯಲ್ಲೂ ಹತ್ತಿರತ್ತಿರ ಒಂದು ಲಕ್ಷಗಳ ಮತಗಳಲ್ಲಿ ಸೋತರು.
ಆದರೆ, ಸಿದ್ದರಾಮಯ್ಯನವರ ಜೊತೆಗೆ ಕುರುಬ ಸಮುದಾಯದ ನಿಷ್ಠೆ ಆ ರೀತಿಯದ್ದಲ್ಲ. ಅದು ಗೋಚರವಾದದ್ದು 2021ರ ಫೆಬ್ರವರಿ 7ರಂದು. ಅಂದು ಬಿಜೆಪಿಯಿಂದ ಪ್ರೇರಿತವಾದ ಕುರುಬರ ಎಸ್‌ಟಿ ಮೀಸಲಾತಿ ಸಮಾವೇಶ ನಡೆಯಿತು. ಇಡೀ ಸಮುದಾಯ ಆರಾಧಿಸುತ್ತಿದ್ದ ಸಿದ್ದರಾಮಯ್ಯನವರು ಸಕಾರಣಗಳಿಗಾಗಿ ಅಲ್ಲಿಗೆ ಹೋಗಲಿಲ್ಲ. ಅಂದು ಬಾಗಲಕೋಟೆಯಿಂದ ಬೆಂಗಳೂರಿಗೆ ಬರುತ್ತಿದ್ದವನಿಗೆ ನೆಲಮಂಗಲದಿಂದ ಮಾದಾವರದವರೆಗೆ ಸಾಲುಗಟ್ಟಿ ನಿಂತಿದ್ದ ಬಸ್ಸುಗಳು, ಟ್ರ್ಯಾಕ್ಸ್‌ಗಳಲ್ಲಿ ತುಂಬಿದ್ದ ಕುರುಬ ಸಮುದಾಯದ ಅಬ್ಬರ, ಕೇಕೆಗಳನ್ನು ನೋಡಿ ಆಶ್ಚರ್ಯವಾಗಿತ್ತು. ಕುರುಬರು ಸಿದ್ದರಾಮಯ್ಯನವರನ್ನು ಕೈಬಿಟ್ಟರು ಮತ್ತು ಬಿಜೆಪಿ ಯಶಸ್ವಿಯಾಯಿತು ಅನಿಸಿತು. ಆದರೆ, ಅಂದು ರಾತ್ರಿ ಕಾರ್ಯಕ್ರಮದ ವಿಡಿಯೋ ನೋಡಿದರೆ, ಇನ್ನೂ ಹೆಚ್ಚಿನ ಆಶ್ಚರ್ಯ ಕಾದಿತ್ತು. ಸಮಾವೇಶದಲ್ಲಿ ಮೊದಲು ಮಾತಾಡಿದ್ದ ಈಶ್ವರಪ್ಪ ಮತ್ತಿತರಾರೂ ಸಿದ್ದರಾಮಯ್ಯನವರ ಹೆಸರನ್ನು ತೆಗೆದುಕೊಂಡಿರಲಿಲ್ಲ. ಎಚ್.ಎಂ.ರೇವಣ್ಣನವರು ಮಾತಾಡುವ ವೇಳೆಗೆ ತಾನು ಮಂತ್ರಿಯಾದದ್ದು, ಈಶ್ವರಪ್ಪನವರು ಮಂತ್ರಿ, ಉಪಮುಖ್ಯಮಂತ್ರಿಯಾದದ್ದು ಸಮುದಾಯದ ಆಶೀರ್ವಾದದಿಂದ ಎಂದು ಹೇಳುತ್ತಾ, ಸಿದ್ದರಾಮಯ್ಯನವರೂ ಮಂತ್ರಿಯಾದದ್ದು – ಎಂದು ಹೇಳುವ ಹೊತ್ತಿಗೆ, ಆ ಹೆಸರು ಕೇಳಲೆಂದೇ ಕಾದಿದ್ದೆವು ಎನ್ನುವ ಹಾಗೆ ಸತತವಾಗಿ ಐದ್ಹತ್ತು ನಿಮಿಷಗಳ ಕಾಲ ಜನರು ಕೇಕೆ, ಚಪ್ಪಾಳೆಗಳನ್ನು ಹೊಡೆದರು. ಆ ಕೇಕೆಗಳ ಜೊತೆಗೇ ಬಿಜೆಪಿ ಪ್ರೇರಿತ ಕುರುಬರ ಎಸ್‌ಟಿ ಹೋರಾಟ ನಿಂತು ಹೋಗಿಬಿಟ್ಟಿತು.

ಇದರ ನಂತರ ಅಂತಹುದೇ ಆವೇಶ ಕುರುಬ ಸಮುದಾಯದ ಹೊರತಾಗಿಯೂ ಕಂಡಿದ್ದು 2022ರ ಆಗಸ್ಟ್ 8ರಂದು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ. ಜನರು ಯಾಕಾಗಿ ಅಷ್ಟು ಸಂಖ್ಯೆಯಲ್ಲಿ ಬಂದರು, ಹತ್ತು ಹದಿನೈದು ಕಿ.ಮೀ.ಗಟ್ಟಲೆ ಏಕೆ ನಡೆದರು? ಸಿದ್ದರಾಮಯ್ಯನವರ ಜೊತೆಗೆ ಅವರಿಗೇನು ಸಂಬಂಧ ಎಂಬುದು ಅಧ್ಯಯನಯೋಗ್ಯ ಸಂಗತಿ. ನಿಸ್ಸಂದೇಹವಾಗಿ ಅವರು ಇಂದು ಕರ್ನಾಟಕದಲ್ಲಿ ಕುರುಬ ಸಮುದಾಯ ಮಾತ್ರವಲ್ಲಾ, ಬಡವರ, ದಲಿತ ಸಮುದಾಯದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ದೊಡ್ಡ ನಾಯಕ. ವಾಸ್ತವದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು, ಯಾವ ಪಕ್ಷ ಗೆಲ್ಲಲಿದೆ ಎಂಬುದು ಅಂದೇ ನಿರ್ಧಾರವಾಗಿ ಹೋಗಿತ್ತು. ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕೆ ಟಿವಿಗಳಲ್ಲಿ ಅತಿ ಹೆಚ್ಚಿನ ಟಿಆರ್‌ಪಿ ಇದೆ ಎನ್ನುವುದಕ್ಕೆ ಆಧಾರವಾಗಿ, ಅವರ ಮಾತುಗಳಿರುವ ಯೂಟ್ಯೂಬ್ ವಿಡಿಯೋಗಳನ್ನು ಎಷ್ಟು ಜನ ನೋಡಿದ್ದಾರೆ ಎಂಬ ಲೆಕ್ಕ ನೋಡಬಹುದು.

ನಿಜ ಎಂದರೆ, ತನ್ನ ಸಹಜ ಸಂವೇದನೆಗಳ (natural instincts) ಹೊರತಾಗಿ ಸಿದ್ದರಾಮಯ್ಯನವರು ಬಹಳ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ, ಸಂಘಟಿತವಾಗಿ ಈ ಎಲ್ಲಾ ಸಮುದಾಯಗಳಿಗೆ ಭಾರೀ ದೊಡ್ಡ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲ. ಕಾಲದ ಒತ್ತಡ ಹಾಗೂ ಸಾಂದರ್ಭಿಕ ಕಾರಣಗಳಿಂದಾಗಿ ಕೆಲವು ಆಗಿವೆ ಅಷ್ಟೇ. ಅದರಲ್ಲೂ ಈ ಎಲ್ಲಾ ಸಮುದಾಯಗಳನ್ನು ವ್ಯವಸ್ಥಿತವಾಗಿ ಸಂಘಟಿಸುವ ಯಾವ ಪ್ರಯತ್ನವೂ ಅವರಿಂದ ಆದಂತಿಲ್ಲ. ಸಾಮಾಜಿಕ ನ್ಯಾಯದ ಪರವಾಗಿ ಅವರ instincts ಇವೆಯಾದರೂ, ಒಳಮೀಸಲಾತಿಯಂತಹ ವಿಚಾರದಲ್ಲಿ, ಜಾತಿಗಣತಿಯ ವಿಚಾರದಲ್ಲಿ ಸ್ಪಷ್ಟ, ದಿಟ್ಟ ಮತ್ತು ಶೀಘ್ರ ನಿಲುವು ಅವರಿಂದ ಬಂದಿಲ್ಲ. ಪ್ರಜ್ಞಾಪೂರ್ವಕ ಸಂಘಟನೆ, ತಂತ್ರಗಾರಿಕೆ, ಕಠಿಣ ಶ್ರಮ ಹಾಕಿ ಪ್ರಯತ್ನ ಮಾಡುವುದು ಅವರಿಗೆ ಎಂದೂ ಒಗ್ಗಿದಂತೆಯೇ ಇಲ್ಲ. ಚಾರಿತ್ರಿಕ ಹಾಗೂ ಸಾಂದರ್ಭಿಕ ಕಾರಣಗಳಿಂದ ತನಗೆ ಒದಗಿ ಬಂದಿರುವ ಈ ಅವಕಾಶವನ್ನು ಇನ್ನಷ್ಟು ಪ್ರಜ್ಞಾಪೂರ್ವಕವಾಗಿ ವಿಸ್ತರಿಸಿಕೊಳ್ಳಲು ಅವರು ಪ್ರಯತ್ನಿಸಿದಂತೆಯೂ ಕಾಣುವುದಿಲ್ಲ.
ಆದರೂ ಈ ಸಮುದಾಯಗಳು ಅವರೊಡನೆ ಗುರುತಿಸಿಕೊಳ್ಳುವುದಕ್ಕೆ ಇರುವ ಕಾರಣ ವಿಚಿತ್ರವಾದುದು. ಅವರು ಬಹುಶಃ ಕರ್ನಾಟಕದಲ್ಲಿ ಪಂಚೆ ಉಟ್ಟ ಕಡೆಯ ಮುಖ್ಯಮಂತ್ರಿ; ವಿವಿಧ ಕಾರಣಗಳಿಂದ ರಾಜ್ಯದ ಗ್ರಾಮೀಣ ಸಮುದಾಯ ಮತ್ತು ವಿವಿಧ ಶೋಷಿತ ಸಮುದಾಯಗಳು ಹಾಗೂ ಬಡವರ ಪರವಾಗಿರುವವರು ಎಂದಾಗಿಬಿಟ್ಟಂತಿದೆ. ಅದರಲ್ಲೂ ಬೇರೆ ಬೇರೆ ಕಾರಣಗಳಿಂದ ಈ ಸಮುದಾಯಗಳು ಬಲಾಢ್ಯರಿಂದ ದಬ್ಬಾಳಿಕೆಗೆ ಒಳಪಟ್ಟಿದ್ದರೆ, ಒಳಪಡುವ ಭಯ ಇದ್ದರೂ ಈ ನಾಯಕ ಅಥವಾ ನಾಯಕಿ ತಮ್ಮನ್ನು ರಕ್ಷಿಸಬಹುದು ಎಂದು ತಾವೇ ಅವರಿಗೆ ಆರೋಪಿಸಿಕೊಂಡೂ ಜೊತೆ ನಿಂತುಬಿಡುತ್ತಾರೆ. ಅವೆಲ್ಲದರ ಅನುಕೂಲ ಸಿದ್ದರಾಮಯ್ಯನವರಿಗೆ ದಕ್ಕಿದಂತಿದೆ.

ಅವರನ್ನು ವಿರೋಧಿಸುವವರಿಗೂ ಅಂತಹ ಕಾರಣಗಳಿದ್ದಂತಿದೆ. ಅದನ್ನು ನೋಡಿದ್ದು 2015ರಲ್ಲಿ ಮಂಡ್ಯದ ಹಳ್ಳಿಗಳಲ್ಲಿ. ಆ ವರ್ಷ ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ರೈತರ ಆತ್ಮಹತ್ಯೆಗಳು ಸಂಭವಿಸುತ್ತಿದ್ದವು. ಭತ್ತ, ಕಬ್ಬು, ರೇಷ್ಮೆ ಯಾವುದಕ್ಕೂ ಬೆಲೆ ಇರಲಿಲ್ಲ. ಸಕ್ಕರೆ ಕಾರ್ಖಾನೆಗಳೂ ತಡವಾಗಿ ಆರಂಭವಾದವು. ಸಂಕಷ್ಟ ಗಾಳಿಯಲ್ಲೇ ಗೋಚರವಾಗುತ್ತಿತ್ತು. ಮಂಡ್ಯ ಜಿಲ್ಲೆಯ 1586 ಹಳ್ಳಿಗಳ ಪೈಕಿ ಕನಿಷ್ಠ 750 ಹಳ್ಳಿಗಳಲ್ಲಿ ʼರೈತ ಹೋರಾಟ ಜಾಥಾʼ ಮಾಡಿ, ʼಆತ್ಮಹತ್ಯೆ ಪರಿಹಾರವಲ್ಲ, ಹೋರಾಟ ಪರಿಹಾರʼವೆಂದು ಹೇಳಿ, ಬೃಹತ್ ಸಮಾವೇಶ ಮಾಡಬೇಕೆಂದು ಹೊರಟಿದ್ದೆವು. ಪ್ರಚಾರಾಂದೋಲನದ ಭಾಗವಾಗಿ ಖುದ್ದಾಗಿ ಹಳ್ಳಿಗಳಿಗೆ ಹೋದಾಗ ಇನ್ನೊಂದು ಸಾಮಾಜಿಕ ವಾಸ್ತವದ ದರ್ಶನವಾಗಿತ್ತು. ಪೂರಾ ಮಣ್ಣಿನ ಮನೆಯ ಒಂದು ಭಾಗದಲ್ಲಿ ವಾಸಿಸುತ್ತಿದ್ದ, ಅತೀ ಸಣ್ಣ ಒಕ್ಕಲಿಗ ರೈತಾಪಿ ಕುಟುಂಬದ ಬಡ ಮಹಿಳೆ ಕರಪತ್ರ ತೆಗೆದುಕೊಂಡು ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ. ʼಏನ್ಮಾಡೋದಪ್ಪಾ, ಸಿದ್ರಾಮಯ್ಯ ಬರೀ ಹರಿಜನ್ರಿಗೇ ಎಲ್ಲಾ ಅನ್ಕೂಲ ಮಾಡ್ತಾನೆ. ನಮಗೇನು ಮಾಡ್ತಾನೆ?ʼ. ಅನ್ನಭಾಗ್ಯ ಎಲ್ಲಾ ಬಡವರ ಓಟು ತಂದುಕೊಡಲ್ಲ; ವಿವಿಧ ರೀತಿಯ ಸಂಕಷ್ಟವನ್ನು ಅನುಭವಿಸುತ್ತಿರುವವರಿಗೆ ಏನೆಲ್ಲಾ ಕನೆಕ್ಟ್ ಆಗುತ್ತದೆ ಎಂಬುದಕ್ಕೆ ಅಲ್ಲಿ ಉತ್ತರವಿತ್ತು.
ಈ ವರದಿ ಓದಿದ್ದೀರಾ?: ಸಿದ್ದರಾಮಯ್ಯ ಕೇಸಿಗೂ ನಿರ್ಮಲಾ ಸೀತಾರಾಮನ್ ಕೇಸಿಗೂ ಅಜಗಜಾಂತರ !
ಅದರ ಮುಂದಿನ ವರ್ಷ ಮೈಸೂರಿನ ಶಕ್ತಿಧಾಮದಲ್ಲೊಂದು ಕಾರ್ಯಕ್ರಮ. ಐಪಿಎಸ್ ಕೆಂಪಯ್ಯನವರೂ ತೊಡಗಿಕೊಂಡಿರುವ, ರಾಜ್‌ಕುಮಾರ್ ಅವರ ಕುಟುಂಬದವರು ಪೋಷಿಸುವ ಮಹಿಳೆಯರು ಮತ್ತು ಮಕ್ಕಳಿಗೆ ನೆಲೆಯೊದಗಿಸಿದ ಸಂಸ್ಥೆಯದು. ಶಿವರಾಜ್‌ಕುಮಾರ್‌ಗಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್‌ರನ್ನು ನೋಡಲು ಬಂದಿದ್ದ ಮೈಸೂರಿನ ಕಾಲೇಜು ಹುಡುಗಿಯರು ದೊಡ್ಡ ಸಂಖ್ಯೆಯಲ್ಲಿ ಇದ್ದರು. ಸಿದ್ದರಾಮಯ್ಯನವರು ಎದ್ದು ನಿಂತಾಗ ಆ ಕಾಲೇಜು ಹುಡುಗಿಯರು ಸಿದ್ದ ಸಿದ್ದ ಎಂದು ಕೈ ಕೆಳಗೆ ಮಾಡಿ (thumbs down) ಮಾಡಿ ಘೋಷಣೆ ಕೂಗಿದ್ದನ್ನು ಕಂಡೆವು. ಅದೇ ಹುಡುಗಿಯರು ಅದೇ ಸಂದರ್ಭದಲ್ಲಿ ಮೋದಿ ಮೋದಿ ಎಂದೂ ಕೂಗಿದರು. ಯಾವ ಕಾರಣಗಳಿಗಾಗಿ ʼಸಹಜವಾಗಿʼ ಸಿದ್ದರಾಮಯ್ಯನವರು ಕೆಲವು ಸಮುದಾಯಗಳಿಗೆ ಇಷ್ಟವಾಗುತ್ತಾರೋ, ಅಂತಹದೇ ಕಾರಣಗಳಿಗಾಗಿ ʼಸಹಜವಾಗಿʼ Urban, elite, Urbanish, Upper casteಗಳಿಗೆ ಅವರನ್ನು ಕಂಡರೆ ಸಿಟ್ಟೂ ಇದೆ. ಈ ಎರಡನ್ನೂ ಅವರು ಮುಖಾಮುಖಿಯಾಗುವುದು instincts ಇಂದ ಮಾತ್ರ. ಇದನ್ನು ಬದಲಿಸಿಕೊಳ್ಳಲು ಅಗತ್ಯವಿರುವ ಪ್ರಜ್ಞಾಪೂರ್ವಕವಾದ ಕಾರ್ಯಕ್ರಮಗಳಿಂದ ಅಲ್ಲ ಎನ್ನುವುದು ಅವರ ಮಿತಿಯೂ ಹೌದು; ಈ ಹೊತ್ತಿನ ವಾಸ್ತವವೂ ಹೌದು.

ಹೀಗಿರುವಾಗ, ಇದುವರೆಗೆ ಯಾವ ದೊಡ್ಡ ಹಗರಣಗಳಲ್ಲೂ ಭಾಗಿಯಾದ ಪುರಾವೆಯಿಲ್ಲದ ಸಿದ್ದರಾಮಯ್ಯನವರ ಮೇಲೆ ಮುಡಾದಂತಹ ಮೇಲ್ನೋಟಕ್ಕೆ ದೊಡ್ಡ ತಪ್ಪೂ ಕಾಣದ, ಸಣ್ಣ ಆರೋಪಕ್ಕೆ ಗುರಿಯಾಗಿದ್ದಾರೆ. ಆದರೆ, ಫೋನೂ ಇಲ್ಲವಂತೆ, ಬ್ಯಾಂಕ್ ಖಾತೆ ಕೂಡಾ ಇಲ್ಲವಂತೆ ಎಂಬ ದಂತಕತೆಗಳೂ ಕೆಲವೆಡೆ ಚಾಲ್ತಿಯಲ್ಲಿರುವ ಒಬ್ಬ ವ್ಯಕ್ತಿಯ ಮೇಲೆ, 14 ಸೈಟು ತಗೊಂಡ್ರು ಅನ್ನೋದು ಜನಪ್ರಿಯತೆ ಕುಂದಿಸಲು ಬೇಕಾದಷ್ಟು ಸರಕಾಗಿಬಿಡುತ್ತದೆ. ಅದರಲ್ಲೂ ಮೇಲೆ ಹೇಳಲಾದ ಸಮಾಜದ ʼಪ್ರಭಾವೀʼ ಸಮುದಾಯಗಳು, ಮಾಧ್ಯಮದ ಮೇಲೆ ಹಿಡಿತ ಹೊಂದಿರುವ ಸಮುದಾಯಗಳು ವಿರುದ್ಧ ನಿಂತಿದ್ದರಂತೂ ಬಲಿಪಶು ಮಾಡಲು ಬೇಕಾದಷ್ಟು ಸಾಧ್ಯತೆಗಳಿವೆ.
ಹೀಗಿದ್ದೂ ಸಿದ್ದರಾಮಯ್ಯನವರ ಜನಪ್ರಿಯತೆ ಅಷ್ಟಾಗಿ ಕುಗ್ಗಿಲ್ಲ ಎನ್ನುವುದಕ್ಕೆ ಕೆಲವು ನಿದರ್ಶನಗಳು ಎದ್ದು ಕಾಣುತ್ತಿವೆ. ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ ಬಿಜೆಪಿ-ಜೆಡಿಎಸ್ ನಾಯಕರುಗಳ ʼಹೋರಾಟʼಕ್ಕೆ ಜನ ಉತ್ಸಾಹದಿಂದ ಪ್ರತಿಕ್ರಿಯಿಸಲಿಲ್ಲ. ಅದಕ್ಕೆದುರಾಗಿ ಕಾಂಗ್ರೆಸ್ಸಿಗರು ನಡೆಸಿದ ಪ್ರತಿಕ್ರಿಯಾತ್ಮಕ ಕಾರ್ಯಕ್ರಮಕ್ಕೇ ಹೆಚ್ಚಿನ ಜನ ಸೇರಿದಂತಿತ್ತು. ಬಹುಶಃ ಕುಮಾರಸ್ವಾಮಿಯವರ ಜನಪ್ರಿಯತೆ ಇಳಿಯುತ್ತಿರುವುದು, ಬಿಜೆಪಿಯಲ್ಲಿ ವಿಜಯೇಂದ್ರ ಅಥವಾ ಆರ್.ಅಶೋಕ್ ಅಂತಹ ಯಾವ ಅಲೆಯನ್ನೂ ಸೃಷ್ಟಿಸಲು ಸಾಧ್ಯವಿಲ್ಲದೇ ಇರುವುದೂ ಅದಕ್ಕೆ ಕಾರಣವಿರಬಹುದು. ಈ ಮಧ್ಯೆ ರಾಯಚೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಕಾರ್ಯಕ್ರಮಗಳಿಗೆ ಜನರು ತೋರಿದ ಸ್ಪಂದನೆಯು ಈಗಲೂ ಅವರೇ ಕರ್ನಾಟಕದ ಅತ್ಯಂತ ಜನಪ್ರಿಯ ನಾಯಕ ಎಂಬುದನ್ನು ಸಾಬೀತು ಮಾಡಿದೆ. ಒಳ್ಳೆಯದು ಅಥವಾ ಕೆಟ್ಟದ್ದಿರಬಹುದು; ಆದರೆ, ಪ್ರಜಾಪ್ರಭುತ್ವದಲ್ಲಿ ಜನಪ್ರಿಯ ನಾಯಕ, ನಾಯಕಿಯರು ರಾಜಕಾರಣದ ಕೇಂದ್ರದಲ್ಲಿರುತ್ತಾರೆ. ಅವರಿದ್ದೂ ಚುನಾವಣೆಯಲ್ಲಿ ಸೋಲಬಹುದು. ಅದರಾಚೆಗೆ ಜಾತಿ, ಸಿದ್ಧಾಂತ, ದುಡ್ಡು, ಭಾವನಾತ್ಮಕ ಧ್ರುವೀಕರಣ, ಆಡಳಿತದ ರೀತಿ, ಸಾಂಪ್ರದಾಯಿಕ ನೆಲೆ, ಸಂಘಟನಾ ಶಕ್ತಿಗಳೂ ಪಾತ್ರ ವಹಿಸುವುದರಿಂದ ಹಾಗಾಗುತ್ತದೆ. ಅವೆಲ್ಲವೂ ಕಾಂಗ್ರೆಸ್ಸಿನ ಪರವಾಗಿ ಇರದ ಹೊತ್ತಿನಲ್ಲಿ ಜನಪ್ರಿಯ ನಾಯಕತ್ವವೂ ಒಂದು ಬಲವಾಗಿ ಅದರೊಂದಿಗೆ ಉಳಿದುಕೊಂಡಿದೆ.
ಅದೇನೇ ಇದ್ದರೂ 2023ರ ವಿಧಾನಸಭಾ ಚುನಾವಣೆಯಲ್ಲಿ ಜನಾದೇಶ ತಮಗೇಕೆ ಸಿಕ್ಕಿತು ಎಂಬುದನ್ನು ಕಾಂಗ್ರೆಸ್ ಪಕ್ಷ ಮತ್ತು ಸಚಿವ ಸಂಪುಟ ಅರಿಯುವ ಅಗತ್ಯವಂತೂ ಇದೆ. ದುರಾಡಳಿತ, ಭ್ರಷ್ಟಾಚಾರ, ಕೋಮು ರಾಜಕಾರಣ ಹಾಗೂ ಒಳಜಗಳದ ವಿರುದ್ಧದ ಮತ ಅದಾಗಿತ್ತು; ಅದರ ಜೊತೆಗೆ ಶೋಷಿತ ಸಮುದಾಯಗಳು ಒಂದೆಡೆಗೆ ನಿಂತಿದ್ದು ದೊಡ್ಡ ಬಹುಮತವನ್ನೇ ಕಾಂಗ್ರೆಸ್ಸಿಗೆ ತಂದಿತ್ತಿತ್ತು. ಆ ನಿಟ್ಟಿನಲ್ಲಿ ಈ ಸರ್ಕಾರದ ಇದುವರೆಗಿನ ನಡೆಗಳು ಅತ್ಯಂತ ಪರಿಣಾಮಕಾರಿಯಾಗಿಯೇನೂ ಇಲ್ಲ. ನಾಯಕರ ಜನಪ್ರಿಯತೆಯೊಂದೇ ಗುರಿ ಮುಟ್ಟಿಸುವುದಿಲ್ಲ; ಗುರಿ ಮುಟ್ಟಿಸುವ ನಾಯಕ ಸಂಘಟಕನೂ ಆಗಿ ನಾವೆಯನ್ನು ಒಯ್ಯಬೇಕಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆರೋಪ-ಪ್ರತ್ಯಾರೋಪಗಳೆಷ್ಟು ಕಾಲ? ಆಡಳಿತ, ಅಭಿವೃದ್ಧಿ, ಕಲ್ಯಾಣಕ್ಕೆಷ್ಟು ಸಮಯ?
ಇದು ಕಾಂಗ್ರೆಸ್ಸಿಗೆಷ್ಟು ಅಗತ್ಯವಿದೆಯೋ ತಿಳಿಯದು; ಕರ್ನಾಟಕಕ್ಕೆ ಅಗತ್ಯವಿದೆ. ಅದನ್ನು ಕೊಡಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗದೇ ಇದ್ದಲ್ಲಿ, ಅವರ ಎಲ್ಲ ಜನಪ್ರಿಯತೆಯ ಹೊರತಾಗಿಯೂ ಕರ್ನಾಟಕ ನಿರಾಶೆ ಅನುಭವಿಸುತ್ತದೆ. ಹಾಗಾಗದೇ, ಸಿದ್ದರಾಮಯ್ಯನವರ ನೇತೃತ್ವದ ಸಚಿವ ಸಂಪುಟ ಹಾಗೂ ಕಾಂಗ್ರೆಸ್ಸಿನ ನಾಯಕತ್ವವು ಕರ್ನಾಟಕಕ್ಕೆ ಅಗತ್ಯವಿರುವ ಮುನ್ನೋಟವನ್ನೂ, 2023ರ ಜನಾದೇಶಕ್ಕೆ ನ್ಯಾಯವನ್ನೂ ಸಲ್ಲಿಸಲಿದೆಯೇ ಎಂಬುದನ್ನು ಅರಿಯಲು ಮೂರು ವರ್ಷ ಕಾಯಬೇಕಿಲ್ಲ. ಎರಡನೇ ವರ್ಷದ ಉಳಿದಿರುವ ತಿಂಗಳುಗಳಲ್ಲಿ ಅದು ಗೊತ್ತಾಗಲಿದೆ.
ಈಗಂತೂ ಅವರ ಮೇಲಿನ ಎಲ್ಲಾ ದಾಳಿಗಳ ಹೊರತಾಗಿಯೂ ಅವರೇ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ.