ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ಅಧಿಕಾರಕ್ಕೆ ಬಂದರೆ ಗೋಮಾಂಸ ಮಾರಾಟಕ್ಕೆ ಪರವಾನಗಿ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಬೀದರ್‌ನ ಹುಮನಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗೋ ಹತ್ಯೆ ನಿಷೇಧ ಕಾಯ್ದೆಯಿಂದಾಗಿ ರಾಜ್ಯದಲ್ಲಿ ರೈತರು ಕಂಗಾಲಾಗಿದ್ದಾರೆ. ಹೈನುಗಾರಿಕೆ ಮಾಡುವುದಕ್ಕಾಗಿ ರೈತರು 60–70 ಸಾವಿರ ರೂ. ನೀಡಿ ಹಸುಗಳನ್ನು ಖರೀದಿಸಿರುತ್ತಾರೆ. ಅದು ಹಾಲು ನೀಡದಿದ್ದರೆ ಮಾರಾಟ ಮಾಡಿ ಮತ್ತೊಂದು ಹಸು ತರಲು ಅನುಕೂಲ ಆಗಲಿದೆ” ಎಂದಿದ್ದಾರೆ.
“ಆದರೆ, ಈ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಇರುವುದರಿಂದ ರೈತರು ಯಾರಿಗೆ ಮಾರಾಟ ಮಾಡಬೇಕು? ಜೆಡಿಎಸ್ ಅಧಿಕಾರಕ್ಕೆ ಬಂದರೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಲಾಗುವುದು” ಎಂದರು.
“ಮಣಿಪುರದ ಬಿಜೆಪಿ ಸಚಿವರೊಬ್ಬರು ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಾರೆ. ಅವರಿಗೆ ಬಿಜೆಪಿಯವರು ಏನು ಮಾಡಿದ್ದೀರಿ?” ಎಂದು ಪ್ರಶ್ನಿಸಿದರು.
ಚುನಾವಣೆ ಹೊಸ್ತಿಲಲ್ಲಿ ಸಿ ಎಂ ಇಬ್ರಾಹಿಂ ಅವರು ನೀಡಿರುವ ಹೇಳಿಕೆ ಕುರಿತು ಪರ – ವಿರೋಧ ಚರ್ಚೆಗಳು ಆರಂಭವಾಗಿವೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ | ಶೆಟ್ಟರ್ ಅಸ್ತ್ರಕ್ಕೆ ‘ಕಮಲ’ ಕಂಪನ