ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗಂಗಾವತಿ ಮಾರ್ಗವಾಗಿ ಹೋಗುವ ಸಂದರ್ಭದಲ್ಲಿ ಶಾಸಕರಾದ ಜನಾರ್ದನ ರೆಡ್ಡಿಯವರು, ಮುಖ್ಯಮಂತ್ರಿಗಳ ಬೆಂಗಾವಲು ಪಡೆಯ ಭದ್ರತಾ ವ್ಯವಸ್ಥೆಯ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಕೊಪ್ಪಳ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತೆ ಶೈಲಜಾ ಹಿರೇಮಠ್ ಆಗ್ರಹಿಸಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಯಾವುದೇ ಪಕ್ಷದ ಮುಖ್ಯಮಂತ್ರಿಗಳಾಗಲಿ ಅವರ ಭದ್ರತೆಯ ವ್ಯವಸ್ಥೆಯನ್ನು ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಒಂದು ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬದಲಾಗಿ, ಪ್ರಧಾನಿ ನರೇಂದ್ರ ಮೋದಿಯವರು ಆಗಿದ್ದರೆ ಅವರ ಬೆಂಗಾವಲು ಪಡೆಯ ಶಿಷ್ಟಾಚಾರ ಉಲ್ಲಂಘನೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಮಾಡಿದ್ದಿದ್ದರೆ, ಬಿಜೆಪಿಯವರು ಗಂಟಲು ಕಿತ್ತುಹೋಗುವ ಹಾಗೆ, ಮಾಧ್ಯಮದ ಮುಂದೆ ಹೈಡ್ರಾಮಾ ಮಾಡುತ್ತಿದ್ದರು ಎಂದು ಹೇಳಿದರು.
ರಾತ್ರಿ ವೇಳೆ ಜನಾರ್ದನ ರೆಡ್ಡಿಯವರು ಝೀರೋ ಟ್ರಾಫಿಕ್ ಎಂದು ಗೊತ್ತಿದ್ದರೂ ಡಿವೈಡರ್ ಹತ್ತಿಸಿ, ಒನ್ ವೇ ಮೂಲಕ ವಿರುದ್ಧ ದಿಕ್ಕಿನಲ್ಲಿ ಹೋಗಿದ್ದು ಉದ್ಧಟತನದ ಪರಮಾವಧಿ. ಅಹಿತಕರ ಘಟನೆ ಸಂಭವಿಸಿದ್ದಿದ್ದರೆ ಭಾರೀ ಅನಾಹುತ ಎದುರಿಸಬೇಕಾಗುತ್ತಿತ್ತು ಎಂದು ಶೈಲಜಾ ಹಿರೇಮಠ್ ತಿಳಿಸಿದರು.
ಇದನ್ನು ಓದಿದ್ದೀರಾ? ಕೊಪ್ಪಳ | ಸಿಎಂ ಬರುವ ದಾರಿಯಲ್ಲಿ ವಿರುದ್ಧ ದಿಕ್ಕಿಗೆ ಸಾಗಿದ ಜನಾರ್ದನ ರೆಡ್ಡಿ ಕಾರು : ತಪ್ಪಿದ ಅನಾಹುತ
ಜನಾರ್ದನ ರೆಡ್ಡಿಯವರು ಈ ರೀತಿ ಕಾನೂನು ಉಲ್ಲಂಘನೆ ಮಾಡುವ ಮೂಲಕ ತಮ್ಮೊಳಗಿನ ಪೈಶಾಚಿಕ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ಇವರ ಅನುಚಿತ ವರ್ತನೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಯಾವುದೇ ಮುಲಾಜಿಲ್ಲದೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಶೈಲಜಾ ಹಿರೇಮಠ್ ಒತ್ತಾಯಿಸಿದ್ದಾರೆ.
