ಜನ ಪ್ರಕಾಶನ, ಬೆಂಗಳೂರು ವಿಜ್ಞಾನ ವೇದಿಕೆ ಹಾಗೂ ಬೆಂಗಳೂರು ಸಮಾಜ ವಿಜ್ಞಾನ ವೇದಿಕೆಯು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೂಪ ಹಾಸನ ರಚನೆಯ ‘ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ’ ಕೃತಿ ಬಿಡುಗಡೆಗೊಳಿಸಲಾಯಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ, ಪುಸ್ತಕದಲ್ಲಿ ಜಲ ಸರಂಕ್ಷಣೆ, ಪರಿಸರ ರಕ್ಷಣೆ ಕುರಿತ ಮಾಹಿತಿ ನೀಡಲಾಗಿದೆ. ಮಳೆ ಬರಬೇಕಾದಾಗ ಬರುತ್ತಿಲ್ಲ. ಯಾವ ಕಾಲಕ್ಕೆ ಏನು ಆಗಬೇಕೋ ಅದು ಆಗುತ್ತಿಲ್ಲ. ಕಾರ್ಖಾನೆಗಳ ಕಲುಷಿತ ನೀರನ್ನು ನದಿ, ಕೆರೆಗಳಿಗೆ ಬಿಡುತ್ತಿರುವುದರಿಂದ ಜಲಚರಗಳು ಸಾಯುತ್ತಿವೆ. ಈ ನೀರನ್ನು ಕುಡಿದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ದುರಾಸೆ ಪ್ರಾಕೃತಿಕ ಸಂಪತ್ತಿನ ನಾಶಕ್ಕೆ ಕಾರಣವಾಗುತ್ತಿದ್ದು, ‘ಮಳೆ-ಬೆಳೆ’ ಎಂಬ ಜೋಡಿ ಪದವನ್ನು ಬಳಸಲು ಸಾಧ್ಯವಾಗದ ಹಂತಕ್ಕೆ ತಲುಪಿದ್ದೇವೆ ಎಂದು ವಿಷಾದಿಸಿದರು.

‘ಸಹಜ ಸಾಗುವಳಿ’ ಸಂಪಾದಕಿ ವಿ.ಗಾಯತ್ರಿ ಮಾತನಾಡಿ, ಪರಿಸರದಲ್ಲಿ ಅಸಮತೋಲನ ಯಾಕಾಗಿ ಆಗುತ್ತಿವೆ ಎಂಬ ಪ್ರಶ್ನೆಗಳು ಜನರಲ್ಲಿ ಉದ್ಭವಿಸಬೇಕಿದೆ. ಪ್ರಶ್ನಿಸುವ ಮನೋಭಾವ ಹೊಸ ತಲೆಮಾರಿನ ಜನರಿಂದ ವ್ಯಕ್ತವಾದಾಗ ಆಳುವ ಸರ್ಕಾರಗಳು ಪರಿಸರ ಉಳಿಸುವ ಕ್ರಮದ ಬಗ್ಗೆ ಚಿಂತಿಸುತ್ತವೆ. ಪ್ರಸ್ತುತ ಸನ್ನಿವೇಶದಲ್ಲಿ ಪ್ರಕೃತಿಯ ಕಾಳಜಿ ಹೊಂದಿರುವ ಜನಾಂಗದ ಅಗತ್ಯವಿದೆ. ಪರಿಸರದಲ್ಲಿ ಅಸಮತೋಲನಕ್ಕೆ ಕಾರಣಗಳೇನು, ಮನುಷ್ಯನ ಲಾಭಕೋರತನ, ಪರಿಸರದ ಸಮತೋಲನ ಉಳಿಸಿಕೊಂಡು ಹೇಗೆ ಬದುಕಬಹುದು ಇತ್ಯಾದಿ ಚಿಂತನೆಗಳಿಗೆ ‘ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ’ ಕೃತಿಯಲ್ಲಿ ಉತ್ತರವಿದೆ ಎಂದರು.
ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ, “ನಮ್ಮ ದೇಶದಲ್ಲಿ ಅಭಿವೃದ್ಧಿ ಪರ ಹಾಗೂ ವಿರೋಧ ಎಂಬ ವರ್ಗ ಸೃಷ್ಟಿಯಾಗಿದೆ. ಪರಿಸರ ಚಳುವಳಿಗಾರರು ಎಂದಾಕ್ಷಣ ಅಭಿವೃದ್ಧಿ ವಿರೋಧಿಗಳು ಎಂಬ ಪಟ್ಟ ಕಟ್ಟಲಾಗುತ್ತಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಸರ ನಾಶಕ್ಕೆ ಕಾರಣವಾಗಿರುವ ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಕಂಪನಿಗಳು, ಇಂದು ಸಿಎಸ್‌ಆರ್ ನಿಧಿ ಮೂಲಕ ಪ್ರಕೃತಿ ಉಳಿಸುವ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಎಲ್ಲರ ಸ್ವತ್ತಾಗಿದ್ದ ಪ್ರಕೃತಿ, ಸರ್ಕಾರದ ಸ್ವತ್ತಾದ ಪರಿಣಾಮ ಪರಿಸರ ನಾಶ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
“ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಇದೇ ರೀತಿ ಮುಂದುವರೆದರೆ ಮಾನವ ಸಂಕುಲಕ್ಕೆ ಉಳಿಗಾಲವಿಲ್ಲ” ಎಂದು ಎಚ್ಚರಿಸಿದರು.

ಲೇಖಕಿ ರೂಪ ಹಾಸನ ಮಾತನಾಡಿ, ಪ್ರಕೃತಿ ಮತ್ತು ಮಹಿಳೆಯ ಗಾಢ ಮೌನದ ಧ್ವನಿ ಆಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಸರ್ಕಾರ ಒಳ್ಳೆಯ ಯೋಜನೆ ಜಾರಿಗೆ ತಂದರೆ ಬದಲಾವಣೆ ಸಾಧ್ಯವ ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಕೆಆರ್‌ಎಸ್ ಅಣೆಕಟ್ಟೆಯ ಹಳೆಯ ಕ್ರಸ್ಟ್‌ಗೇಟ್ ಕಡಿಮೆ ಬೆಲೆಗೆ ಮಾರಾಟ: ರೈತ ಮುಖಂಡರ ಆರೋಪ
ಕಾರ್ಯಕ್ರಮದಲ್ಲಿ ಬೆಂಗಳೂರು ವಿಜ್ಞಾನ ವೇದಿಕೆ ಕಾರ್ಯದರ್ಶಿ ಎಂ. ಸುಚರಿತ ಚಂದ್ರ, ಬೆಂಗಳೂರು ಸಮಾಜ ವಿಜ್ಞಾನ ವೇದಿಕೆ ಕಾರ್ಯದರ್ಶಿ ಪಿ.ಎಸ್.ಪ್ರತಿಮಾ, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ, ವಿ ಗಾಯತ್ರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
