“ಲೋಕಾಯುಕ್ತ ಪೊಲೀಸ್ ಪ್ರಕರಣ ಸಂಖ್ಯೆ 16/2014ರ ಆರೋಪಿ ಹೆಚ್ ಡಿ ಕುಮಾರಸ್ವಾಮಿ ಅವರು ವಿಶೇಷ ತನಿಖಾ ದಳದ ಮುಖ್ಯಸ್ಥರಾದ ಎಡಿಜಿಪಿ ಚಂದ್ರಶೇಖರ್ ಅವರಿಗೆ ಬೆದರಿಕೆ, ವೈಯಕ್ತಿಕ ನಿಂದನೆ ಮಾಡಿ ಕರ್ತವ್ಯಕ್ಕೆ ಮತ್ತು ತನಿಖೆಗೆ ಅಡ್ಡಿಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ಸಂಸ್ಥೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ಇಂದು(ಸೋಮವಾರ)ನೈಜ ಹೋರಾಟಗಾರರ ವೇದಿಕೆಯ ಮುಖ್ಯಸ್ಥ ಸಾಮಾಜಿಕ ಹೋರಾಟಗಾರ ಎಚ್ ಎಂ ವೆಂಕಟೇಶ್ ನೇತೃತ್ವದ ನಿಯೋಗ ಲೋಕಾಯುಕ್ತರನ್ನು ಖುದ್ದು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.
“ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ ಕಂಪನಿಗೆ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ರವರು ಈ ಮೇಲ್ಕಂಡ ವಿಷಯದ ಪ್ರಕರಣದ ವಿಚಾರಣೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿ ನಂತರ ಪತ್ರಿಕಾ ಗೋಷ್ಠಿಯಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡದ ಮುಖ್ಯಸ್ಥ ಎಂ. ಚಂದ್ರಶೇಖರ್, ಐಪಿಎಸ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಇವರ ಬಗ್ಗೆ ಏಕವಚನದ ಪದಗಳನ್ನು ಬಳಸಿ ನಿಂದಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಭಯ ಹುಟ್ಟಿಸುವ ರೀತಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ವೇದಿಕೆ ಒತ್ತಾಯಿಸಿದೆ.
“ಈ ಮೇಲಿನ ವಿಷಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವರಾದ “ಎಚ್.ಡಿ. ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಕಂಪನಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದ ಪ್ರಕರಣದ ಸಂಖ್ಯೆ ನಂ 16/2014 ಬಗ್ಗೆ ಲೋಕಾಯುಕ್ತ ಸಂಸ್ಥೆಯಲ್ಲಿ ತನಿಖೆ ನಡೆದು ಪ್ರಾಸಿಕ್ಯೂಷನ್ ಸ್ಯಾಂಕ್ಷನ್‌ಗೆ ಗೌರವಾನ್ವಿತ ರಾಜ್ಯಪಾಲರ ಮುಂದೆ ಲೋಕಾಯುಕ್ತವು ಅನುಮತಿ ಕೇಳಿ ಬರೆದಿರುವ ಪತ್ರ ಸೋರಿಕೆಯಾಗಿರುವುದು ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಎಡಿಜಿಪಿ ಚಂದ್ರಶೇಖರ್ ರವರು ಮಾಡುತ್ತಿರುವ ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಪ್ರಕರಣದಲ್ಲಿ ಆರೋಪಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಎಸ್ಐಟಿ ತಂಡದ ಮುಖ್ಯಸ್ಥರ ವಿರುದ್ಧ ವೈಯಕ್ತಿಕವಾಗಿ ನಿಂದನೆ ಹಾಗೂ ಆಧಾರ ರಹಿತವಾದ ಆರೋಪವನ್ನು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವುದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಿಗೆ ಈ ರೀತಿ ಬೆದರಿಕೆ ಹಾಕುವುದರ ಮೂಲಕ ತನಿಖೆಯ ದಾರಿ ತಪ್ಪಿಸುವುದು ಹಾಗೂ ತನಿಖಾಧಿಕಾರಿಗಳ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಆರೋಪಿ ಸ್ಥಾನದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿ ರವರು ಬಹಿರಂಗವಾಗಿ ಮಾಡಿರುತ್ತಾರೆ.
ಸಾಮಾನ್ಯ ವ್ಯಕ್ತಿಗಳ ಮೇಲೆ ಇಂತಹ ಆರೋಪಗಳು ಬಂದಲ್ಲಿ ಅವರು ತೆಗೆದುಕೊಂಡ ಜಾಮೀನನ್ನು ರದ್ದುಪಡಿಸಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಅವರ ಮೇಲೆ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ. ಆದರೆ ಪ್ರಭಾವಿ ರಾಜಕಾರಣಿಗಳು ತನಿಖಾ ಸಂಸ್ಥೆಯ ಮುಖ್ಯಾಧಿಕಾರಿಗಳ ಮೇಲೆ ಮಾಡಿರುವ ಆರೋಪದ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದೇ ಇರುವ ಲೋಕಾಯುಕ್ತ ಸಂಸ್ಥೆಯ ಮೇಲೆ ಸಾರ್ವಜನಿಕರಲ್ಲಿ ಸಂಶಯ ಮತ್ತು ಅನುಮಾನ ಮೂಡಿಸುತ್ತಿದೆ.
ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಮುಂದಾಗಿರುವ ಅಧಿಕಾರಿಗಳಿಗೆ ಈ ರೀತಿ ವಾಮ ಮಾರ್ಗದಲ್ಲಿ ಬೆದರಿಸುವ ತಂತ್ರ ನಡೆಸುತ್ತಿರುವ ಕುಮಾರಸ್ವಾಮಿ ರವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೊಲೀಸರ ಕರ್ತವ್ಯಕ್ಕೆ ಮತ್ತು ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಪತ್ರಿಕಾಗೋಷ್ಠಿಯನ್ನು ಕರೆದು ಬಹಿರಂಗವಾಗಿಯೇ ಎಂ ಚಂದ್ರಶೇಖರ್ ರವರನ್ನು ನಿಂದಿಸಿರುತ್ತಾರೆ ಮತ್ತು ಅವರ ವಿರುದ್ಧ ಆರೋಪಗಳ ಸರಮಾಲೆಯನ್ನೇ ಮಾಡಿರುತ್ತಾರೆ. ಒಂದು ವೇಳೆ ತನಿಖಾ ಅಧಿಕಾರಿ ಚಂದ್ರಶೇಖರ್ ಮೇಲೆ ಯಾವುಧೇ ರೀತಿ ಗುರುತರ ಆರೋಪಗಳಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬಹುದಾಗಿದೆ. ಆದರೆ ಅವರ ಮೇಲಿನ ಆರೋಪಗಳನ್ನು ಸುಳ್ಳು ಎಂದು ಈಗಾಗಲೇ ಚಂದ್ರಶೇಖರ್ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಪ್ರಕರಣವು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ತಾವು ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥರಿಗೆ ಆರೋಪಿ ಸ್ಥಾನದಲ್ಲಿರುವವರು ಬೆದರಿಕೆ ಹಾಕಿದ್ದರು ಸಹ ಲೋಕಾಯುಕ್ತ ನ್ಯಾಯಮೂರ್ತಿಗಳಾದ ತಾವು ಮೌನವಹಿಸಿರುವುದು ನಮಗೆ ಆಶ್ಚರ್ಯ ಮತ್ತು ದಿಗ್ಭ್ರಮೆ ಮೂಡಿಸಿದೆ.
ಲೋಕಾಯುಕ್ತ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಆದರೆ ಈ ಅಧಿಕಾರವನ್ನು ದುರ್ಬಲಗೊಳಿಸುವ ತಂತ್ರವನ್ನು ಎಚ್.ಡಿ.ಕುಮಾರಸ್ವಾಮಿ ರವರು ಮಾಡುತ್ತಿರುವುದು ಕಂಡುಬಂದಿದೆ. ಎಚ್ ಡಿ ಕುಮಾರಸ್ವಾಮಿ ವಿರುದ್ಧ ಯಾರೇ ಆರೋಪ ಮಾಡಿದರೂ ಅವರ ವಿರುದ್ಧ ಪ್ರತ್ಯಾರೋಪ ಮಾಡುವುದು ಕುಮಾರಸ್ವಾಮಿರವರ ದೌರ್ಬಲ್ಯವಾಗಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಶ್ರೀ ಚಂದ್ರಶೇಖರ್ ಅವರ ಬಗ್ಗೆ ಕುಮಾರಸ್ವಾಮಿ ಅವರು ಮಾಡಿರುವ ಆರೋಪ ಅವರ ತನಿಖೆಯ ದಾರಿಯನ್ನು ತಪ್ಪಿಸುವ ತಂತ್ರಗಾರಿಕೆಯಾಗಿದೆ.
ಆದುದರಿಂದ ಗೌರವಾನ್ವಿತ ಲೋಕಾಯುಕ್ತರಾಗಿರುವ ತಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾನೂನು ಅಡಿಯಲ್ಲಿ ತಪ್ಪಿಸಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾವು ಸೂಕ್ತ ನಿರ್ದೇಶನ ನೀಡಬೇಕು ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ತಮ್ಮದೇ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ರಕ್ಷಣೆಗೆ, ತನಿಖಾದಳದ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳ ಬೆನ್ನಿಗೆ ನಿಲ್ಲಬೇಕಾದ ಗುರುತರ ಜವಾಬ್ದಾರಿ ಮತ್ತು ಕರ್ತವ್ಯ ಗೌರವಾನ್ವಿತ ಲೋಕಾಯುಕ್ತರಾದ ತಮ್ಮ ಮೇಲೆ ಇದೆ ಎಂದು ನಾವು ಭಾವಿಸಿದ್ದೇವೆ.
ಯಾರೇ ತಪ್ಪಿತಸ್ಥ ಅಧಿಕಾರಿ ಇರಲಿ ರಾಜಕಾರಣಿ ಮತ್ತು ಉನ್ನತ ಹುದ್ದೆಯಲ್ಲಿರಲಿ ಅವರ ವಿರುದ್ಧ ಕಾನೂನಾತ್ಮಕವಾಗಿ ತನಿಖೆ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದು ತನಿಖಾ ಸಂಸ್ಥೆಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ರಕ್ಷಣೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಮುಂದಾಗ ಬೇಕಾಗಿದೆ ಮತ್ತು ತನಿಖಾ ತಂಡದ ಮುಖ್ಯಸ್ಥರಾದ ಚಂದ್ರಶೇಖರ್ ರವರಿಗೆ ತಕ್ಷಣ ರಕ್ಷಣೆ ಒದಗಿಸಬೇಕಾಗಿದೆ. ಈ ವಿಷಯ ಮತ್ತು ಉಲ್ಲೇಖವನ್ನು ಗಂಭೀರವಾಗಿ ಪರಿಗಣಿಸಿ ತಮ್ಮದೇ ಸಂಸ್ಥೆಯ ತನಿಖಾ ತಂಡದ ಮುಖ್ಯಸ್ಥರಿಗೆ ರಕ್ಷಣೆ ಒದಗಿಸಬೇಕು ಮತ್ತು ಆರೋಪಿ ಸ್ಥಾನದಲ್ಲಿರುವ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ನೈಜ ಹೋರಾಟಗಾರರ ವೇದಿಕೆಯು ತಮ್ಮಲ್ಲಿ ವಿನಯ ಪೂರ್ವಕವಾಗಿ ಆಗ್ರಪಡಿಸುತ್ತದೆ” ಎಂದು ಮನವಿ ಮಾಡಿದ್ದಾರೆ.