ಉದ್ಯೋಗಕ್ಕಾಗಿ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್, ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಲಾಲು ಪ್ರಸಾದ್, ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್‌ಗೆ ಸಮನ್ಸ್ ನೀಡಲಾಗಿತ್ತು. ತಲಾ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ. ಮೂವರನ್ನು ಬಂಧಿಸಲಾಗಿಲ್ಲ. ಈ ಪ್ರಕರಣದ ಮುಂದಿನ ವಿಚಾರಣೆಯು ಅಕ್ಟೋಬರ್ 23 ಮತ್ತು 24ರಂದು ನಡೆಯಲಿದೆ.
ಇದನ್ನು ಓದಿದ್ದೀರಾ? ಉದ್ಯೋಗಕ್ಕಾಗಿ ಜಮೀನು ಪ್ರಕರಣ; ಲಾಲು ಮತ್ತು ತೇಜಸ್ವಿಗೆ ಇಡಿ ಹೊಸ ಸಮನ್ಸ್
ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಜಬಲ್‌ಪುರ (ಮಧ್ಯಪ್ರದೇಶ) ಪಶ್ಚಿಮ ಕೇಂದ್ರ ರೈಲ್ವೇ ವಲಯದಲ್ಲಿ ಗ್ರೂಪ್-ಡಿ ನೇಮಕಾತಿಯಲ್ಲಿ ಹಗರಣ ನಡೆಸಿದ್ದಾರೆ ಎಂಬ ಆರೋಪವಿದೆ. ತಮ್ಮ ಕುಟುಂಬಸ್ಥರು ಮತ್ತು ಸಹವರ್ತಿಗಳಿಗೆ ಉದ್ಯೋಗವನ್ನು ನೀಡಿ, ಅದರ ಬದಲಿಗೆ ಜಮೀನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, “ನಮಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ” ಎಂದು ಹೇಳಿದ್ದಾರೆ.
ಇನ್ನು ಪಿಟಿಐಗೆ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್, “ನಾವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇವೆ. ನ್ಯಾಯಾಲಯ ಇಂದು ನಮಗೆ ಜಾಮೀನು ನೀಡಿದೆ. ಅವರು (ಬಿಜೆಪಿ) ಸಾಮಾನ್ಯವಾಗಿ ರಾಜಕೀಯ ಪಿತೂರಿ ಮಾಡುತ್ತಾರೆ ಮತ್ತು ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಪ್ರಕರಣವು ಸುಳ್ಳು ಎಂಬುದು ಸಾಬೀತಾಗಿದೆ. ಇದು ನಮ್ಮ ಗೆಲುವು ದೃಢಪಡಿಸುತ್ತದೆ” ಎಂದು ಹೇಳಿದರು.
VIDEO | “We believe in the judiciary and the court has granted us bail today,” says RJD leader Tejashwi Yadav (@yadavtejashwi) on Delhi’s Rouse Avenue Court granting bail to him along with party chief Lalu Prasad and leader Tej Pratap Yadav in the land-for-jobs case earlier… pic.twitter.com/MZWehP6WTa
— Press Trust of India (@PTI_News) October 7, 2024
