ಮುಡಾ ಪ್ರಕರಣದಲ್ಲಿದ್ದ ಆಸಕ್ತಿ ಪೋಕ್ಸೊ ಪ್ರಕರಣದಲ್ಲಿ ಯಾಕಿಲ್ಲ? ; ನ್ಯಾಯಾಲಯಗಳ ನಡೆ ಅನುಮಾನಕ್ಕೆ ಎಡೆ

Date:

Advertisements

ಮುಡಾ ಪ್ರಕರಣದಲ್ಲಿ ವಿಪಕ್ಷಗಳ ಆರೋಪಕ್ಕೆ ಅಷ್ಟೇ ತುರ್ತಾಗಿ ರಾಜ್ಯಪಾಲರು ಸ್ಪಂದಿಸುತ್ತಾರೆ, ನ್ಯಾಯಾಲಯಗಳೂ ತರಾತುರಿಯಲ್ಲಿ ಅರ್ಜಿ ವಿಚಾರಣೆ ನಡೆಸಿ ತನಿಖೆಗೆ ಆದೇಶ ನೀಡುತ್ತವೆ. ಆದರೆ, ಒಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಎಲ್ಲರೂ ಸೇರಿ ರಕ್ಷಿಸುತ್ತಾರೆ. ಇದು ನ್ಯಾಯಾಂಗ ವ್ಯವಸ್ಥೆ ನಂಬಿಕೆ ಕಳೆದುಕೊಳ್ಳುವ ನಡೆ

ಪೋಕ್ಸೊ ಕಾಯ್ದೆ ಬಂದಾಗ ಮೂಡಿಸಿದ್ದ ಭರವಸೆ ಈ ಹತ್ತು ವರ್ಷಗಳಲ್ಲಿ ನುಚ್ಚು ನೂರಾಗಿದೆ. ಪೋಕ್ಸೊ ಪ್ರಕರಣದ ಸಿಲುಕಿದ ಆರೋಪಿಗಳ ಪ್ರತಿಷ್ಠೆಯ ಮಟ್ಟಕ್ಕನುಗುಣವಾಗಿ ಹೇಗೆ ಬೇಕೋ ಹಾಗೆ ನ್ಯಾಯಾಲಯಗಳು ವರ್ತಿಸುತ್ತಿವೆ. ಇದಕ್ಕೆ ತಾಜಾ ಉದಾಹರಣೆ ರಾಜ್ಯದ ಹಿರಿಯ ಬಿಜೆಪಿ ಮುಖಂಡ ಬಿ ಎಸ್‌ ಯಡಿಯೂರಪ್ಪ ಅವರ ಪ್ರಕರಣ. ಈ ಪ್ರಕರಣದಲ್ಲಿ ಆರೋಪಿಯ ಬಂಧನಕ್ಕೆ ತಡೆ ನೀಡುವಾಗ ನ್ಯಾಯಮೂರ್ತಿಗಳು, “ಅವರು ಸಾಮಾನ್ಯ ವ್ಯಕ್ತಿಯಲ್ಲ, ರಾಜ್ಯ ಮುಖ್ಯಮಂತ್ರಿಯಾಗಿದ್ದವರು. ಹಾಗೆಲ್ಲ ಬಂಧನ ಮಾಡುವಂತಿಲ್ಲ” ಎಂದಿರುವುದು ಪೋಕ್ಸೊ ಕಾಯ್ದೆಯ ಎಲ್ಲ ಮಾನದಂಡಗಳನ್ನು ಮುರಿದಂತಾಗಿದೆ. ಅವರು ಮಾಜಿ ಮುಖ್ಯಮಂತ್ರಿಯಾಗಿದ್ದರೆ ಲೈಂಗಿಕ ಕಿರುಕುಳ ಕೊಟ್ಟರೂ ಬಂಧನ ಮಾಡುವಂತಿಲ್ಲ ಎಂದು ಪೋಕ್ಸೊ ಕಾಯ್ದೆ ಹೇಳುತ್ತದೆಯೇ? ಯಡಿಯೂರಪ್ಪ ಅವರ ವಿರುದ್ಧದ ವಿಡಿಯೋ-ಆಡಿಯೋ ಸಾಕ್ಷ್ಯ ಸಂಬಂಧ ಧ್ವನಿ ಪರೀಕ್ಷೆ ನಡೆಸಲಾಗಿದೆ. ಫೊರೆನ್ಸಿಕ್‌ ವರದಿಯೂ ಅದು ಅವರದ್ದೇ ಎಂದು ಹೇಳಿದೆ ಎಂಬ ಮಾಹಿತಿಯಿದೆ. ಹೀಗಿರುವಾಗ ಮಾಜಿ ಮುಖ್ಯಮಂತ್ರಿ ಅಥವಾ ವಯೋವೃದ್ಧ ಎಂಬುದೆಲ್ಲ ಕಾನೂನಿನ ಸಡಿಲಿಕೆಗೆ ಕಾರಣವಾಗಬಾರದು. ಇಲ್ಲದಿದ್ದರೆ ಕಾನೂನಿನ ಮೇಲೆ ಬಡವರು, ಸಾಮಾನ್ಯ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ ನ್ಯಾಯಾಲಯಗಳು, ನ್ಯಾಯಾಧೀಶರೂ ನಂಬಿಕೆಗೆ ಯೋಗ್ಯರಲ್ಲ ಎಂಬ ಭಾವನೆ ಬರುತ್ತದೆ.

ಮಾರ್ಚ್‌ನಲ್ಲಿ ಬಿಜೆಪಿಯ ಹಿರಿಯ ಮುಖಂಡ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಿತ್ತು ಸರ್ಕಾರ. ಸಿಐಡಿ ಅಧಿಕಾರಿಗಳು ಜೂನ್‌ವರೆಗೂ ಏನೂ ಮಾಡಿಲ್ಲ. ಜೂನ್‌ನಲ್ಲಿ ದೂರುದಾರೆ ಮೃತಪಟ್ಟಿದ್ದಾರೆ. ನಂತರ ಆಕೆಯ ಪುತ್ರ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ ನಂತರ ಹೈಕೋರ್ಟ್‌ ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್‌ ಜಾರಿ ಮಾಡಿತ್ತು. ಮೂರು ದಿನ ತಲೆಮರೆಸಿಕೊಂಡು ದೆಹಲಿಯಲ್ಲಿದ್ದ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಪಡೆದು ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇನ್ನೂ ಮುಗಿದಿಲ್ಲ. ಪೋಕ್ಸೊ ಪ್ರಕರಣದಲ್ಲಿ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂಬ ನಿಯಮವನ್ನು ಯಡಿಯೂರಪ್ಪ ಪ್ರಕರಣದಲ್ಲಿ ಪೊಲೀಸರು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಕೋರ್ಟ್‌ ಕೂಡಾ ಜೂನ್‌ 14ರಂದು ಯಡಿಯೂರಪ್ಪ ಅವರ ಬಂಧನ ಮಾಡದಂತೆ ಆದೇಶ ನೀಡಿದೆ.

Advertisements
BS Yediyurappa 1

ಈಗ ಸಿಐಡಿ ಪೊಲೀಸರು ಯಡಿಯೂರಪ್ಪ ಅವರ ಬಂಧನ ತಡೆ ತೆರವಿಗೆ ಅರ್ಜಿ ಸಲ್ಲಿಸಿ ತಿಂಗಳು ಕಳೆದಿದೆ. ಅದು ಇನ್ನಷ್ಟೇ ವಿಚಾರಣೆಗೆ ಬರಲಿದೆ. ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ನ್ಯಾಯಾಧೀಶರಿಗೇ ಮನವರಿಕೆಯಾಗಿ ಪ್ರತಿವಾದಿ ವಕೀಲರಿಗೆ “ಅರ್ಜಿದಾರರ ವಿರುದ್ಧ ಯಾವ ಪುರಾವೆಯೂ ಇಲ್ವಲ್ಲ” ಎಂದು ಕೋರ್ಟ್‌ ಕಲಾಪದಲ್ಲಿ ಕೇಳಿದ್ದು ರಾಜ್ಯದ ಜನ ನೋಡಿದ್ದಾರೆ. ಆದರೂ “ರಾಜ್ಯಪಾಲರ ಕ್ರಮ ಸರಿಯಿದೆ, ತನಿಖೆ ನಡೆಸಬಹುದು” ಎಂದು ನ್ಯಾಯಾಧೀಶರು ಆದೇಶ ಕೊಡುತ್ತಾರೆ. ಆದರೆ ಪೋಕ್ಸೊ ಪ್ರಕರಣದಲ್ಲಿ ಮಾಡಿದ ಕೃತ್ಯ ಒಪ್ಪಿಕೊಂಡ ವಿಡಿಯೋ ದಾಖಲೆ ಇದ್ದರೂ, “ಅವರು ಸಾಮಾನ್ಯ ವ್ಯಕ್ತಿಯಲ್ಲ. ಮಾಜಿ ಮುಖ್ಯಮಂತ್ರಿ ಎಂಬ ಕಾರಣ ನೀಡಿ, ಹಾಗೆಲ್ಲ ಬಂಧಿಸುವಂತಿಲ್ಲ” ಎಂದು ನ್ಯಾಯಾಧೀಶರೇ ಹೇಳುತ್ತಾರೆ ಎಂದರೆ ಪೋಕ್ಸೊದಂತಹ ಕಾಯ್ದೆ ತಂದು ಏನು ಪ್ರಯೋಜನ? ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ ಅತ್ಯಾಚಾರ ತಡೆಯುವಲ್ಲಿ ನ್ಯಾಯಾಲಯಗಳ ಪಾತ್ರವೇ ಮಹತ್ವದ್ದು. ಯಡಿಯೂರಪ್ಪ ಪ್ರಕರಣದಲ್ಲಿ ನ್ಯಾಯಾಲಯ ನಡೆದುಕೊಳ್ಳುತ್ತಿರುವ ರೀತಿ ಅನುಮಾನ ಹುಟ್ಟಿಸುವಂತಿದೆ. ನಿರೀಕ್ಷಣಾ ಜಾಮೀನು ನೀಡುವುದು, ಬಂಧನಕ್ಕೆ ತಡೆ ಕೊಡುವುದು, ಮತ್ತೆ ಮತ್ತೆ ವಿಸ್ತರಿಸುವುದು ಕಾನೂನು ಉಳ್ಳವರ ಪರವಾಗಿದೆ ಎಂಬುದನ್ನು ಸಾರಿ ಸಾರಿ ಹೇಳುತ್ತದೆ.

ಹಿರಿಯ ವಕೀಲರಾದ ಎಸ್‌ ಬಾಲನ್‌ ಅವರು ಈ ಪ್ರಕರಣವನ್ನು ನಡೆಸುತ್ತಿದ್ದಾರೆ. ಪಟ್ಟು ಬಿಡದ ಅವರ ಛಲ ಪ್ರಕರಣವನ್ನು ಜೀವಂತವಾಗಿಟ್ಟಿದೆ. ವಿಪಕ್ಷಗಳು ಈಗಲೂ ಸರ್ಕಾರವನ್ನು ಅತಂತ್ರಗೊಳಿಸಲು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಮುಡಾ ಪ್ರಕರಣದಲ್ಲಿ ವಿಪಕ್ಷಗಳ ಆರೋಪಕ್ಕೆ ಅಷ್ಟೇ ತುರ್ತಾಗಿ ರಾಜ್ಯಪಾಲರು ಸ್ಪಂದಿಸುತ್ತಾರೆ, ನ್ಯಾಯಾಲಯಗಳೂ ತರಾತುರಿಯಲ್ಲಿ ಅರ್ಜಿ ವಿಚಾರಣೆ ನಡೆಸಿ ತನಿಖೆಗೆ ಆದೇಶ ನೀಡುತ್ತವೆ. ಆದರೆ, ಒಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ರಕ್ಷಿಸುತ್ತಿದೆ. ನ್ಯಾಯಾಧೀಶರು ಆರಂಭದಲ್ಲಿಯೇ “ಅವರು ಮುಖ್ಯಮಂತ್ರಿಯಾಗಿದ್ದವರು, ಅವರನ್ನು ಬಂಧಿಸದೇ ವಿಚಾರಣೆ ನಡೆಸಬಹುದು” ಎಂದು ಷರಾ ಬರೆದುಬಿಟ್ಟಿದ್ದಾರೆ. ಇದೇ ಆದೇಶವನ್ನು ಉಲ್ಲೇಖಿಸಿ ಮುಂದೆ ಬೇರೆ ಬೇರೆ ಪೋಕ್ಸೊ ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ನ್ಯಾಯಾಧೀಶರು ತಡೆ ನೀಡಿದರೂ ಅಚ್ಚರಿಯಿಲ್ಲ. ಮುಂದೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾದರೆ ಇದೇ ಆದೇಶ ಅನ್ವಯವಾದೀತು.

balan 3
ಸಂತ್ರಸ್ತೆ ಪರ ವಕೀಲರಾದ ಎಸ್‌ ಬಾಲನ್‌

ಈ ಪೋಕ್ಸೊ ಪ್ರಕರಣದಲ್ಲಿ ಬಾಲಕಿಯ ಪರ ವಕೀಲರಾದ ಎಸ್‌ ಬಾಲನ್‌ ಅವರು ʼಈ ದಿನʼದ ಜೊತೆ ಮಾತನಾಡುತ್ತ, “ಈ ಪ್ರಕರಣ ಬಹಳ ಆಸಕ್ತಿಕರವಾಗಿದೆ. ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಾಲಕಿಯ ತಾಯಿ ಜೊತೆ ಯಡಿಯೂರಪ್ಪ ಮಾತನಾಡಿರುವ ವಿಡಿಯೋ ಇದೆ, ನಂತರ ತಾಯಿ ಮಗಳನ್ನು ಕಾರಿನಲ್ಲಿ ಎತ್ತಾಕೊಂಡು ಹೋಗಿರೋ ವಿಡಿಯೋ ಇದೆ. ಈ ಬಗ್ಗೆ ಲಾಯರ್‌ ಸಂಪರ್ಕಿಸಿದ್ದಕ್ಕೆ ಸಾಕ್ಷ್ಯ ಇದೆ. ಪೊಲೀಸ್‌ ಎಂಟ್ರಿ ಪುಸ್ತಕದಲ್ಲಿ ತಾಯಿ ಮಗಳು ಯಡಿಯೂರಪ್ಪ ಮನೆಗೆ ಬಂದಿರುವ ದಾಖಲೆ, ಯಡಿಯೂರಪ್ಪ ಮತ್ತು ಆ ಮಹಿಳೆಯ ಮೊಬೈಲ್‌ ಲೊಕೇಷನ್‌ ಒಂದೇ ಕಡೆ ಇತ್ತು. ಈ ಎಲ್ಲಾ ಪುರಾವೆ ಇದ್ದರೂ ನ್ಯಾಯಾಧೀಶರು ಇದುವರೆಗೆ ಪ್ರಕರಣವನ್ನು ತಳ್ಳುತ್ತಲೇ ಇದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗದವರು. ಹಾಗಾಗಿ ಅವರ ವಿರುದ್ಧ ಪುರಾವೆ ಇಲ್ಲದಿದ್ದರೂ ತರಾತುರಿಯಲ್ಲಿ ತೀರ್ಮಾನ ಆಗುತ್ತದೆ. ಯಡಿಯೂರಪ್ಪ ಬಂಧನಕ್ಕೆ ನೀಡಿರುವ ತಡೆಯನ್ನು ತೆರವುಗೊಳಿಸಬೇಕು ಎಂಬ ನಮ್ಮ ಅರ್ಜಿ ಅ. 30ರಂದು ವಿಚಾರಣೆಗೆ ಬರಲಿದೆ. ಅವರು ಪಾರಾಗಲು ಸಾಧ್ಯವೇ ಇಲ್ಲ” ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯ

ಯಡಿಯೂರಪ್ಪ ಪ್ರಕರಣವನ್ನು ಸರಿಯಾಗಿ ನಿಭಾಯಿಸುವಲ್ಲಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಲಿಂಗಾಯತರ ಅಗ್ರಗಣ್ಯ ನಾಯಕನನ್ನು ಜೈಲಿಗೆ ಕಳಿಸಿದರೆ, ಆ ಸಿಟ್ಟಿಗೆ ಲಿಂಗಾಯತ ಮತಗಳು ತಮ್ಮ ಪಕ್ಷಕ್ಕೆ ಬೀಳದೇ ಇರಬಹುದು ಎಂಬ ಸ್ವಾರ್ಥ ಅಷ್ಟೇ ಯಡಿಯೂರಪ್ಪ ವಿರುದ್ಧ ಕ್ರಮ ಜರುಗಿಸಲು ಸರ್ಕಾರವನ್ನು ತಡೆದಿತ್ತು. ಹಿಂದೆ ಇದೇ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹೊಸನಗರದ ರಾಘವೇಶ್ವರ ಭಾರತೀ ಸ್ವಾಮಿ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾದಾಗಲೂ ಕಾಂಗ್ರೆಸ್‌ ಸರ್ಕಾರ ಹೀಗೇ ನಡೆದುಕೊಂಡಿತ್ತು. ಆಗ ಸ್ವಾಮೀಜಿ ಬಂಧನವಾಗದಂತೆ ಅದೇ ಸಮುದಾಯದ ಆರ್‌ ವಿ ದೇಶಪಾಂಡೆ ಪ್ರಭಾವ ಬೀರಿದ್ದರು ಎಂಬ ಗುಸುಗುಸು ಇತ್ತು. ಹೀಗೇ ಅವರಿವರ ಮಾತು ಕೇಳಿ ಕಾನೂನಿಗೆ ವಿರುದ್ಧವಾಗಿ, ಆತ್ಮಸಾಕ್ಷಿಗೆ ವಿರುದ್ಧ ನಡೆದುಕೊಳ್ಳುವುದು ಸಿದ್ಧರಾಮಯ್ಯ ತರಹದ ಸಮಾಜವಾದಿ ನಾಯಕರಿಗೆ ಶೋಭೆ ತರಲ್ಲ. ಯಡಿಯೂರಪ್ಪ ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡ ರೀತಿ ಸರಿಯಿಲ್ಲ. ರಾಜ್ಯದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡಿದ ಕಳಂಕ ಸರ್ಕಾರಕ್ಕೆ ತಟ್ಟಲಿದೆ.

Siddaramaiah Yediyurappa

ಇದು ಒಬ್ಬ ಹೆಣ್ಣುಮಗಳ ಸಮಸ್ಯೆ ಅಲ್ಲ. ಈಗಾಗಲೇ ಹಲವು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಮಠದಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿ ಜೈಲುಪಾಲಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿಸ್ವಾಮಿ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಬಚಾವ್‌ ಮಾಡಲು ನೋಡಿತ್ತು. ಆದರೆ, ಮಕ್ಕಳ ಪರ ಮೈಸೂರಿನ ಒಡನಾಡಿ ಸಂಸ್ಥೆ ಇದ್ದ ಕಾರಣ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. “ಸ್ವಾಮೀಜಿಯ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಅವರು ಕಳಂಕಮುಕ್ತರಾಗಿ ಬರಲಿದ್ದಾರೆ” ಎಂದು ಇದೇ ಯಡಿಯೂರಪ್ಪ ಅವರು ಬ್ಯಾಟು ಬೀಸಿದ್ದರು. ಮುರುಘಾ ಸ್ವಾಮಿಗೆ ಚಿತ್ರದುರ್ಗದ 2ನೇ ಸತ್ರ ನ್ಯಾಯಾಲಯ ಅ. 7ರಂದು ಜಾಮೀನು ನೀಡಿದೆ.

ಇದನ್ನೂ ಓದಿ ಸಾವರ್ಕರ್‌ ʼಹಿಂದುತ್ವದ ಪಿತಾಮಹʼ ಎಂದು ಆರಾಧಿಸುವ ಗೋಡ್ಸೆ ಭಕ್ತರು ಗಾಂಧೀಜಿ ʼರಾಷ್ಟ್ರಪಿತʼ ಎಂದು ಯಾಕೆ ಒಪ್ಪಲ್ಲ ಗೊತ್ತೇ? 

ಕಾಂಗ್ರೆಸ್‌ನ ಹೊಂದಾಣಿಕೆ ರಾಜಕಾರಣ, ಉದಾಸೀನತೆ, ಉಡಾಫೆಯ ನಡವಳಿಕೆ ಯಡಿಯೂರಪ್ಪ ಪ್ರಕರಣದಲ್ಲಿ ಮಾತ್ರವಲ್ಲ ಹಿಂದೂ ಕೋಮುವಾದಿಗಳ ವಿರುದ್ಧವೂ ಎದ್ದು ಕಾಣುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ಟನಂತಹ ಸಮಾಜದ ಶಾಂತಿ ಕದಡುವ ವ್ಯಕ್ತಿಯನ್ನು, ಮುಸ್ಲಿಂ ಮಹಿಳೆಯರ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಂಧನ ಮಾಡಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸುತ್ತದೆ. ಪುನೀತ್‌ ಕೆರೆಹಳ್ಳಿಗೆ ಸಾತನೂರಿನ ಇದ್ರಿಸ್‌ ಪಾಷ ಕೊಲೆ ಪ್ರಕರಣದಲ್ಲಿ ಜಾಮೀನು ಸಿಗುತ್ತದೆ, ಜಾಮೀನಿಗೆ ತಡೆ ಕೋರುವ ಅರ್ಜಿ ಸರ್ಕಾರ ಸಲ್ಲಿಸಲ್ಲ. ಆಗ ಇದ್ದ ಬಿಜೆಪಿ ಸರ್ಕಾರದ ಪ್ರಭಾವದಿಂದಾಗಿ ಇದ್ರಿಸ್‌ ಪಾಷ ಹೃದಯಾಘಾತದಿಂದ, ಸಹಜ ಸಾವಾಗಿದೆ ಎಂದು ಮರಣೋತ್ತರ ವರದಿಯಲ್ಲಿ ಬರೆಯಲಾಗಿದೆ. ಇದರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಪುನೀತ್‌ ಕೆರೆಹಳ್ಳಿಯನ್ನು ಕಂಬಿ ಹಿಂದೆ ತಳ್ಳಲು ಈ ಪ್ರಕರಣ ಸಾಲದೇ? ಆನಂತರ ಆತನನ್ನು ಸರಿಯಾದ ಕ್ರಮದಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸದೇ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿತ್ತು ಸಿದ್ದರಾಮಯ್ಯ ಸರ್ಕಾರ. ಮತ್ತೆ ಮತ್ತೆ ಆತ ಸಮಾಜಘಾತಕ ಕೃತ್ಯ ಎಸಗುತ್ತಿದ್ದರೂ ಸರ್ಕಾರ ಮೌನವಾಗಿದೆ. ಮಂಗಳೂರಿನ ವಿಎಚ್‌ಪಿ ಮುಖಂಡ ಶರಣ್‌ ಪಂಪ್ವೆಲ್‌ನನ್ನು ಒಂದೇ ಒಂದು ಪ್ರಕರಣದಲ್ಲಿ ಬಂಧನ ಮಾಡಿಲ್ಲ. ಹೀಗೆ ಗೂಂಡಾಗಳನ್ನು ಬೀದಿಯಲ್ಲಿ ಅಡ್ಡಾಡಲು ಬಿಟ್ಟು ಕಾಂಗ್ರೆಸ್‌ ಸರ್ಕಾರ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದೆ? ಅತ್ತ ಅಲ್ಪಸಂಖ್ಯಾತರಿಗೂ ರಕ್ಷಣೆ ಇಲ್ಲ, ಇತ್ತ ಕಾನೂನಿನ ಉಲ್ಲಂಘನೆ ಮಾಡುವವರಿಗೆ ಶಿಕ್ಷೆಯೂ ಇಲ್ಲ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X