ಸಿಎಂ ಸಿದ್ದರಾಮಯ್ಯ ಐದು ವರ್ಷ ಸಂಪೂರ್ಣವಾಗಿ ಅಧಿಕಾರ ನಡೆಸಲಿದ್ದಾರೆ, ಈ ಬಗ್ಗೆ ಅನುಮಾನವೇ ಇಲ್ಲ. ಏಕೆಂದರೆ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ನಗರದ ವಿವಿಧ ಕಾರ್ಯಕ್ರಮಗಳ ಭೇಟಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಆಗಲು ಮುಸ್ಲಿಂ, ದಲಿತ, ಒಕ್ಕಲಿಗರಿಗೆ ಸೇರಿದಂತೆ ಎಲ್ಲರಿಗೂ ಆಸೆ ಇದೆ. ಆದರೆ, ಕುರ್ಚಿ ಖಾಲಿ ಇಲ್ಲ. ಸದ್ಯ ಸಿದ್ದರಾಮಯ್ಯನವರು ಕುರ್ಚಿ ಮೇಲೆ ಕೂತಿದ್ದಾರೆ. ಐದು ವರ್ಷ ಅವರೇ ಸಿಎಂ ಆಗಿರಲಿದ್ದಾರೆ. ಸಿಎಂ ಸ್ಥಾನ ಉಳಿಸಲು ಎ,ಬಿ,ಸಿ ಎನ್ನುವ ಯಾವುದೇ ಪ್ಲಾನ್ ಗಳು ಇಲ್ಲ ಎಂದರು.
ಮೂಡಾ ಹಗರಣ ಮುಚ್ಚಲು ಜಾತಿ ಗಣತಿ ಪ್ರಸ್ತಾಪ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ವರ್ಷದ ಕೆಳಗೆ ನಮ್ಮ ನಾಯಕ ರಾಹುಲ್ ಗಾಂಧಿಯವರು ತೆಗೆದುಕೊಂಡ ನಿರ್ಧಾರ ಎಂದು ತಿಳಿಸಿದರು.
ಶಾಸಕ ಜಿ.ಟಿ.ದೇವೇಗೌಡ ಕೂಡ ನಮ್ಮ ಪಕ್ಷದವರೇನಲ್ಲ. ಆದರೆ ಅವರಿಗೆ ಮೂಡಾ ಪ್ರಕರಣದ ಸತ್ಯಾಂಶ ಗೊತ್ತಿದೆ. ಈ ಹಿನ್ನಲೆಯಲ್ಲಿ ದಸರಾ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾತನಾಡಿದ್ದಾರೆ. ಕೇಂದ್ರ ಮಂತ್ರಿ ಕುಮಾರಸ್ವಾಮಿ ಕೂಡ ಬೇಲ್ ಮೇಲೆ ಇದ್ದಾರೆ. ಎಫ್ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕು ಎಂದು ಯಾವ ಕಾನೂನಿನಲ್ಲೂ ಇಲ್ಲ, ದೇವರಾಜ್ ಅರಸ್ ಅವರ ನಂತರ ಎರಡನೇ ಬಾರಿ ಹಿಂದುಳಿದ ವರ್ಗದ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ.
ರಾಜ್ಯದಲ್ಲಿ ಮೋದಿ ಅವರಿಗಿಂತ ಸಿದ್ದರಾಮಯ್ಯ ಜನಪ್ರಿಯರಾಗಿದ್ದು, ದಾವಣಗೆರೆಯಲ್ಲಿ ಜನುಮದಿನ ಆಚರಿಸಿಕೊಂಡಾಗ ಸಾಬೀತಾಗಿದೆ. ಅದ್ದರಿಂದ ಬಿಜೆಪಿಗೆ ಹೊಟ್ಟೆ ಹುರಿ ಎಂದರು.
ಇದನ್ನು ಓದಿದ್ದೀರಾ? ಗದಗ | ಕಪ್ಪತಗುಡ್ಡದ ಜೀವ ವೈವಿಧ್ಯತೆ ಕಾಪಾಡಬೇಕಿದೆ: ಸಂಸದ ಬೊಮ್ಮಾಯಿ
ಬಿಜೆಪಿ ಅಡಳಿತಾವಧಿಯಲ್ಲಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ನಿವೇಶನ ಕೊಟ್ಟಿದ್ದು, ಸಿದ್ದರಾಮಯ್ಯನವರ ಒಂದು ಕೇಸ್ ಕೂಡ ಇಲ್ಲ. ಆದ್ದರಿಂದ ಈ ನಿವೇಶನ ಪ್ರಕರಣ ಹಿಡಿದಿದ್ದಾರೆ. ಇಡಿ, ಐಟಿ ಬರಲಿ, ಯಾವುದೇ ತನಿಖೆ ಬರಲಿ ಸಿದ್ದರಾಮಯ್ಯ ಹೆದರುವುದಿಲ್ಲ ಎಂದರು.