ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಾಗಲವಾಡ ಮುಖ್ಯರಸ್ತೆಯು ತೆಗ್ಗು ಗುಂಡಿಯಿಂದ ಕೆಸರುಮಯವಾಗಿ ಪೂರ್ತಿ ಹದಗೆಟ್ಟಿದ್ದು, ರಸ್ತೆ ದುರಸ್ತಿ ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಿರವಾರ ತಾಲೂಕ ಘಟಕದಿಂದ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ರಸ್ತೆಗೆ 2 ಕೋಟಿ ಅನುದಾನ ಬಿಡುಗಡೆಯಾಗಿ 2 ವರ್ಷ ಕಳೆದರು ಕಾಮಗಾರಿ ಪ್ರಾರಂಭಿಸಿಲ್ಲ, ಚರಂಡಿ ಮತ್ತು ರಸ್ತೆ ನಿರ್ಮಾಣ, ರಸ್ತೆ ಅಗಲೀಕರಣ ಮಾಡಬೇಕೆಂದು ಒತ್ತಾಯಿಸಿದರು.
ಬಾಗಲವಾಡ ಗ್ರಾಮದ ಮುಖ್ಯ ರಸ್ತೆ ಕನಕ ಶ್ರೀ ಪೆಟ್ರೋಲ್ ಬಂಕ್ ನಿಂದ ಶಿವರಾಜ ಮಂತ್ರಿಕಿ ಇವರ ಮನೆಯವರೆಗೆ 2 ಕಿಲೋ ಮೀಟರ್‌ನವರೆಗೆ 2 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹಿಂದಿನ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಶಾಮೀಲಪ್ಪ, ಗ್ರಾಮದ ಮುಖಂಡರು ಸೇರಿಕೊಂಡು ಗುದ್ದಲಿ ಪೂಜೆ ನೆರವೇರಿಸಿದ್ದರು. ಎರಡು ವರ್ಷ ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವು ಬಾರಿ ರಸ್ತೆ ದುರಸ್ತಿ ಬಗ್ಗೆ ಸಾಕಷ್ಟು ಮನವಿ, ಅಧಿಕಾರಗಳ ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ಬಾಗಲವಾಡ ಗ್ರಾಮದಿಂದ ಕವಿತಾಳ, ಸಿರವಾರ ಹಾಗೂ ಇನ್ನಿತರ ಗ್ರಾಮಗಳಿಗೆ ಮುಖ್ಯ ರಸ್ತೆಯು ಪೂರ್ತಿ ಹದಗೆಟ್ಟು ಹೋಗಿದೆ. ದಿನನಿತ್ಯ ಶಾಲಾ ವಾಹನಗಳು , ಹಲವಾರು ವಾಹನಗಳು ಸಂಚರಿಸುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.
ಮಳೆಗಾಲದ ಸಮಯದಲ್ಲಿ ರಸ್ತೆಯು ಕೆಸರು ಗದ್ದೆ, ತೆಗ್ಗುಗಳಲ್ಲಿ ನೀರು ನಿಂತು ಗುಂಡಿಗಳು ಕಾಣಿಸದೆ ಅಪಘಾತಗಳು ಸಂಭವಿಸಿವೆ. ಸಾರ್ವಜನಿಕರಿಗೆ ರಸ್ತೆ ಓಡಾಡಲು ಕಷ್ಟವಾಗಿದೆ. ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ. ಆದ ಕಾರಣ ಅಧಿಕಾರಿಗಳು ರಸ್ತೆ ಅಗಲೀಕರಣ ಚರಂಡಿ ರಸ್ತೆ ನಿರ್ಮಾಣ ಕೂಡಲೆ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು.
ಕೆಲವು ಹೊತ್ತಿನ ನಂತರ ಅಧಿಕಾರಿಗಳು ಧರಣಿನಿರತ ಭೇಟಿ ನೀಡಿ ಒಂದು ವಾರದೊಳಗೆ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.
ಮಲ್ಲನಗೌಡ ಪೋಲಿಸ್ ಪಾಟೀಲ್, ಅಮರೇಶ ಸಿಡಿ, ಬೀರಪ್ಪ ಸಾಹುಕಾರ, ಗುರುಪ್ಪ ಸಾಹುಕಾರ, ಅಮರೇಶ ನಾಯಕ. ಬಸವರಾಜ್ ದ್ಯಾವಣ್ಣರು, ಬಸವ ಸಿಡಿ, ಗಂಗಾಧರ ಬಾಗಲವಾಡ. ಮೌನೇಶ ಕೋರಿ, ನಾಗರಾಜ್ ಹಿಂದಿ ನಮನೆ, ಜಗದೀಶ ಸಾಲಮನಿ, ಮಹಾದೇವಪ್ಪ ಕೋರಿ, ನಾಗರಾಜ್ ಭೋವಿ. ಮೌಲಾಸಾಬ್ ಇನ್ನಿತರರು ಹಾಜರಿದ್ದರು.
