ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬೈಲಹೊಂಗಲ, ಗೋಕಾಕ, ಕಿತ್ತೂರು, ಬೆಳಗಾವಿ ತಾಲೂಕುಗಳಲ್ಲಿ ರೈತರು ಸೋಯಾಬೀನ್ ಬೆಳೆ ಬೆಳೆದಿದ್ದು, ಸರಿಯಾದ ಇಳುವರಿ ಮತ್ತು ಬೆಲೆ ಸಿಗದೆ ಸಂಕಷ್ಟದಲ್ಲಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜೊತೆ ಸೊಯಾಬೀನ್ ಬೆಳೆಗಾರರಾದ ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಶೇಖಪ್ಪ ಅಕ್ಕನ್ನವರ ಮಾತನಾಡಿ, ಈ ವರ್ಷದ ಅತಿಯಾದ ಮಳೆಯಿಂದ ತಂಪಾಗಿ ಹೂವು ಉದುರಿ, ಕೆಂಪು ರೋಗ ಬಂದಿದೆ. ಇದರಿಂದ ಇಳುವರಿಯೂ ಕಡಿಮೆ ಬಂದಿದೆ. ಇದರ ಜೊತೆಗೆ ಸೋಯಾಬೀನ್ ಬೆಳೆಗೆ ಸರಿಯಾದ ಬೆಲೆಯೂ ಇಲ್ಲ ಎಂದು ತಿಳಿಸಿದ್ದಾರೆ.
ಒಂದು ಎಕರೆಯಲ್ಲಿ ಒಳ್ಳೆಯ ಇಳುವರಿ ಬಂದರೆ 8ರಿಂದ 9 ಕ್ವಿಂಟಾಲ್ ಬರುತ್ತದೆ. ಆದರೆ ಈ ವರ್ಷ ಕೇವಲ 3ರಿಂದ 4 ಕ್ವಿಂಟಲ್ ಇಳುವರಿ ಬಂದಿದೆ. ಹಿಂದಿನ ವರ್ಷ ಒಂದು ಕ್ವಿಂಟಾಲ್ ಸೋಯಾಬೀನ್‌ಗೆ 7 ರಿಂದ 8 ಸಾವಿರದವರೆಗೆ ಮಾರಾಟವಾಗಿತ್ತು. ಈ ವರ್ಷ 4 ಸಾವಿರದವರೆಗೆ ಮಾತ್ರ ಬೆಲೆ ಇದೆ. ಒಂದು ಎಕರೆ ಸೋಯಾಬೀನ್ ಬೆಳೆಯಲು ಸುಮಾರು 15 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಈ ವೆಚ್ಚವನ್ನು ಸಹ ಭರಿಸಲು ಆಗುವುದಿಲ್ಲ. ಸೋಯಾಬೀನ್ ಬೆಳೆ ಬೆಳೆದ ರೈತರ ಬದುಕು ಮೂರಾಬಟ್ಟೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕೃಷಿಕ ಸಮಾಜದ ಮುಖಂಡರಾದ ಸಿದಗೌಡ ಮೋದಗಿ ಮಾತನಾಡಿ, ಸೋಯಾಬೀನ್ ಸೂಕ್ಷ್ಮ ಹವಾಮಾನದಲ್ಲಿ ಬೆಳೆಯುವಂತಹ ಬೆಳೆ. ಹಿಂದಿನ ವರ್ಷ ಬರಗಾಲದಿಂದ ಸೋಯಾಬಿನ್ ಇಳುವರಿ ಕಡಿಮೆ ಆಗಿತ್ತು. ಈ ವರ್ಷ ಅತಿಯಾದ ಮಳೆಯಿಂದ ಉತ್ಪನ್ನ ಕುಂಠಿತವಾಗಿದೆ ಎಂದು ತಿಳಿಸಿದ್ದಾರೆ.
ಸೋಯಾಬೀನ್ ಮಾರಾಟಕ್ಕೆ ಒಂದು ಸೂಕ್ತ ಮಾರುಕಟ್ಟೆ ಇಲ್ಲ. ದಲ್ಲಾಳಿಗಳು ನೇರವಾಗಿ ರೈತರ ಊರುಗಳಲ್ಲಿ ಬಂದು ಖರಿದಿಸುತ್ತಾರೆ ಹಾಗೂ ತೂಕದಲ್ಲಿ ಮೋಸ ಮಾಡುತ್ತಾರೆ. ನಾವು ಈ ಕುರಿತು ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಿ ಸರ್ಕಾರಿ ಮಾರುಕಟ್ಟೆಯನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ರೈತರು ಸಹ ಕೃಷಿ ಮಾರುಕಟ್ಟೆಗೆ ಬಂದು ಮಾರಾಟ ಮಾಡುವಂತಾಗಬೇಕು ಹಾಗೂ ಸರ್ಕಾರ ಸೋಯಾಬೀನ್ ಬೆಳೆದ ರೈತರಿಗೆ 10 ಸಾವಿರ ಬೆಂಬಲ ಬೆಲೆ ಕೊಡಬೇಕು ಎಂದು ಹೇಳಿದರು
ಬೆಳಗಾವಿ ಜಿಲ್ಲೆಯಲ್ಲಿ ಸೋಯಾಬೀನ್ ಬೆಳೆದ ರೈತರು ಬಿತ್ತನೆಗೆ ಮಾಡಿದ ಬೀಜ ಗೊಬ್ಬರ ಔಷಧಿ, ಆಳುಗಳ ಖರ್ಚು ಸಹ ಭರಿಸಲು ಸಾಧ್ಯವಿಲ್ಲದೆ ಕಂಗಾಲಾಗಿದ್ದಾರೆ ಸರ್ಕಾರವು ರೈತರ ನೆರವಿಗೆ ಬರುವುದು ಅವಶ್ಯವಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು