ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಹಿನ್ನೆಡೆ ಅನುಭವಿಸಿದೆ. ಸೋಲಿನ ಭೀತಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರದ ಜನರು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವಾಗ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಲೆಫ್ಟಿನೆಂಟ್ ಗವರ್ನರ್ಗೆ ವಿಶೇಷ ಅಧಿಕಾರ ನೀಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಸದ್ಯ ಈ ವಿಷಯವು ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ. ಸೋಲಿನ ಭೀತಿಯಲ್ಲಿರುವ ಬಿಜೆಪಿ, ಹೇಗಾದರೂ ಮಾಡಿ, ಸರ್ಕಾರ ರಚಿಸಬೇಕೆಂದು ಇಂತಹ ಮೂರನೇ ದರ್ಜೆಯ ರಾಜಕಾರಣಕ್ಕಿಳಿದಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಎರಡು ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು 90 ಸ್ಥಾನಗಳನ್ನು ಹೊಂದಿದ್ದು, ಸರ್ಕಾರ ರಚಿಸಲು ಬಹುಮತಕ್ಕೆ ಕನಿಷ್ಠ 46 ಸ್ಥಾನಗಳ ಅಗತ್ಯವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮಾಡಿಕೊಂಡಿದ್ದು, ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ ಸೋಲು ಖಚಿತ ಎಂಬುದು ಸ್ಪಷ್ಟವಾಗಿದೆ.
ಹೀಗಾಗಿಯೇ, ಜಮ್ಮು-ಕಾಶ್ಮೀರದ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು, ತಮ್ಮ ಅಣತಿಯಲ್ಲಿ ಕೆಲಸ ಮಾಡುವ ಲೆಫ್ಟಿನೆಂಟ್ ಗವರ್ನರ್ಗೆ ವಿಶೇಷಾಧಿಕಾರ ನೀಡಿದ್ದು, 5 ಶಾಸಕರನ್ನು ನಾಮನಿರ್ದೇಶನ ಮಾಡಲು ಮೋದಿ ಸರ್ಕಾರ ಹೊಂಚು ಹಾಕಿದೆ.
ಲೆಫ್ಟಿನೆಂಟ್ ಗವರ್ನರ್ ಈಗ ತಲಾ ಇಬ್ಬರು ಮಹಿಳೆಯರು, ಕಾಶ್ಮೀರಿ ವಲಸಿಗರು ಹಾಗೂ ಒಬ್ಬ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ನಿರಾಶ್ರಿತರನ್ನು ಒಳಗೊಂಡಂತೆ ಐದು ವ್ಯಕ್ತಿಗಳನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲಿದ್ದಾರೆ.
ಕೆ. ಲಕ್ಷ್ಮೀನಾರಾಯಣನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯಲ್ಲಿನ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲೆಟ್ಪಿನೆಂಟ್ ಗವರ್ನರ್ಗೆ ವಿಶೇಷ ಅಧಿಕಾರ ನೀಡಿದೆ. ಈ ಅಧಿಕಾರದ ಅಡಿಯಲ್ಲಿ ಗವರ್ನರ್ 5 ಶಾಸಕರನ್ನು ನಾಮನಿರ್ದೇಶನ ಮಾಡಲು ಜಮ್ಮು ಮತ್ತು ಕಾಶ್ಮೀರದ ಸಂಪುಟ ಸಭೆಯ ಅಭಿಪ್ರಾಯ ಪಡೆಯುವ ಅಗತ್ಯವಿಲ್ಲ ಮತ್ತು ಈ ಸದಸ್ಯರು ಸದನದಲ್ಲಿ ಎಲ್ಲ ವಿಷಯಗಳ ಮೇಲೆ ಮತದಾನದ ಹಕ್ಕನ್ನು ಹೊಂದಿರುತ್ತಾರೆ.
“ಈ ಐವರು ಶಾಸಕರು ಕೇಂದ್ರಾಡಳಿತ ಪ್ರದೇಶದ ಸರ್ಕಾರ ರಚನೆ ಸೇರಿದಂತೆ ಎಲ್ಲ ವಿಷಯಗಳಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ಚುನಾವಣೆ ಫಲಿತಾಂಶದ ನಂತರ ಮತ್ತು ಎಲ್ಲ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಮೊದಲು ಅವರನ್ನು ಲೆಪ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡುತ್ತಾರೆ” ಎಂದು ಜಮ್ಮು ಮತ್ತು ಕಾಶ್ಮೀರ್ ಬಿಜೆಪಿ ಘಟಕದ ವಕ್ತಾರ ಮತ್ತು ವಕೀಲ ಸುನಿಲ್ ಸೇಥಿ ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಪ್ರತಿಪಕ್ಷಗಳು ಬಹುಮತವನ್ನು ದಾಟಲು ವಿಫಲವಾದಲ್ಲಿ ಸರ್ಕಾರ ರಚನೆಯಲ್ಲಿ ಈ ಸದಸ್ಯರು ಪ್ರಮುಖ ಪಾತ್ರವನ್ನು ಹೊಂದಿರುತ್ತಾರೆ ಎಂದು ಹೇಳಿದ್ದಾರೆ.
ಹೌದು, ಒಂದು ವೇಳೆ ಫಲಿತಾಂಶದಲ್ಲಿ ಅತಂತ್ರ ವಿಧಾನಸಭೆ ಉಂಟಾದರೆ, ಲೆಫ್ಟಿನೆಂಟ್ ಗವರ್ನರ್ ಮೂಲಕ ನಾಮನಿರ್ದೇಶನಗೊಳ್ಳುವ ಈ ಐವರು ಶಾಸಕರು ಮತಚಲಾಯಿಸುವ ಹಕ್ಕು ಹೊಂದಿರುತ್ತಾರೆ. ಇವರು ಬಿಜೆಪಿ ಪರವಾಗಿ ಮತಚಲಾಯಿಸುತ್ತಾರೆ. ಹಿಂಬಾಗಿಲಿನಿಂದ ಬಿಜೆಪಿ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲಿದೆ. ಈ ನಾಮನಿರ್ದೇಶನಗಳು ಸದನದಲ್ಲಿ ಬಿಜೆಪಿಯ ಬಲವನ್ನು ಹೆಚ್ಚಿಸುವುದಲ್ಲದೆ, ಪ್ರತಿಪಕ್ಷಗಳಿಗೆ ಬಹುಮತದ ಅಂಕವನ್ನು ಸಹ ಹೆಚ್ಚಿಸುತ್ತವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 90 ಸದಸ್ಯರಲ್ಲಿ, ಒಂದು ರಾಜಕೀಯ ಪಕ್ಷ ಅಥವಾ ಒಕ್ಕೂಟವು ತನ್ನ ಬಹುಮತವನ್ನು ಸಾಬೀತುಪಡಿಸಲು 46 ಸ್ಥಾನಗಳ ಅಗತ್ಯವಿದೆ. ಆದಾಗ್ಯೂ, ಐದು ಶಾಸಕರ ನಾಮನಿರ್ದೇಶನದ ಪರಿಣಾಮಕಾರಿಯಾಗಿ ಸದನದ ಬಲವನ್ನು 95ಕ್ಕೆ ಕೊಂಡೊಯ್ಯುತ್ತದೆ. ಬಹುಮತದ ಮಿತಿಯನ್ನು 46ರ ಬದಲಿಗೆ 48ಕ್ಕೆ ಹೆಚ್ಚಿಸುತ್ತದೆ.
ಇದರರ್ಥ ಪ್ರತಿಪಕ್ಷ ಎನ್ಸಿ-ಕಾಂಗ್ರೆಸ್ ಸರ್ಕಾರ ರಚಿಸಲು 48 ಚುನಾಯಿತ ಶಾಸಕರನ್ನು ಹೊಂದಿರಬೇಕು. ಮತ್ತೊಂದೆಡೆ, ಈಗಾಗಲೇ ತನ್ನ ಬುಟ್ಟಿಯಲ್ಲಿ ಐದು ನಾಮನಿರ್ದೇಶಿತ ಶಾಸಕರಿದ್ದು, ಬಿಜೆಪಿ ಬಹುಮತದ ಮಾರ್ಕ್ 48 ಅನ್ನು ತಲುಪಲು ಕೇವಲ 43 ಚುನಾಯಿತ ಶಾಸಕರ ಅಗತ್ಯವಿದೆ.
ಲೆಫ್ಟಿನೆಂಟ್ ಗವರ್ನರ್ಗೆ ಈ ವಿಶೇಷಾಧಿಕಾರ ನೀಡಿರುವುದನ್ನು ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ವಿರೋಧಿಸಿವೆ. ಈ ನಡೆ, ಜನಾದೇಶವನ್ನು ಉಲ್ಲಂಘಿಸುತ್ತದೆ. ಇದು ಬಿಜೆಪಿಗೆ ಲಾಭವಾಗುತ್ತದೆ ಎಂದು ಎಂದು ಆರೋಪಿಸಿವೆ. ಅಲ್ಲದೇ, ಈ ಕ್ರಮವನ್ನು ‘ಪ್ರಜಾಪ್ರಭುತ್ವ ವಿರೋಧಿ’ ಮತ್ತು ‘ಅಸಂವಿಧಾನಿಕ’ ಎಂದು ಟೀಕಿಸಿವೆ.
“ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಒಕ್ಕೂಟದ ಚುನಾಯಿತ ಶಾಸಕರು ಬಹುಮತ ಗಳಿಸಿದರೆ ಹೊಸ ಸರ್ಕಾರ ರಚಿಸುವ ಹಕ್ಕು ಇರುತ್ತದೆ. ಜೆ & ಕೆ ಯುಟಿಯಲ್ಲಿ ಸರ್ಕಾರ ರಚನೆಯ ಮೊದಲು ಯಾವುದೇ ನಾಮನಿರ್ದೇಶನಗಳನ್ನು ಮಾಡಿದರೆ, ಅದು ಪ್ರಜಾಪ್ರಭುತ್ವ ಮತ್ತು ಜನಾದೇಶಕ್ಕೆ ವಂಚನೆಯಾಗುತ್ತದೆ” ಎಂದು ಕಾಂಗ್ರೆಸ್ನ ಜಮ್ಮು ಮತ್ತು ಕಾಶ್ಮೀರ್ ಘಟಕದ ವಕ್ತಾರ ರವೀಂದರ್ ಶರ್ಮಾ ತಿಳಿಸಿದ್ದಾರೆ.
“ಐದು ಶಾಸಕರನ್ನು ನಾಮನಿರ್ದೇಶನ ಮಾಡುವ ಅಧಿಕಾರವು ಚುನಾಯಿತ ಸರ್ಕಾರಕ್ಕೆ ಮಾತ್ರ ಇರುತ್ತದೆ” ಎಂದಿರುವ ನ್ಯಾಷನಲ್ ಕಾನ್ಫರೆನ್ಸ್ ಕೂಡ ಈ ಕ್ರಮವನ್ನು ಖಂಡಿಸಿದೆ.
“ಜಮ್ಮು-ಕಾಶ್ಮೀರ ವಿಧಾನಸಭೆಗೆ ನಾಮನಿರ್ದೇಶನಗಳನ್ನು ಮಾಡಲು ಲೆಫ್ಟಿನೆಂಟ್ ಗವರ್ನರ್ ಅಧಿಕಾರವಿಲ್ಲ. ಜನರ ಆದೇಶವನ್ನು ಗೌರವಿಸಬೇಕು. ಚುನಾವಣಾ ಪ್ರಕ್ರಿಯೆಯು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರಬೇಕು. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕು” ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.
“ಚುನಾಯಿತ ಸರ್ಕಾರದ ಅನುಪಸ್ಥಿತಿಯಲ್ಲಿ ಲೆಪ್ಟಿನೆಂಟ್ ಗವರ್ನರ್ನಿಂದ ಈ ಅಧಿಕಾರಗಳನ್ನು ಚಲಾಯಿಸಲಾಗುವುದಿಲ್ಲ” ಎಂದು ಎನ್ಸಿಯ ಪ್ರಾಂತೀಯ ಅಧ್ಯಕ್ಷ ರತ್ತನ್ ಲಾಲ್ ಗುಪ್ತಾ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಸುನಾಮಿಗೆ ಕೊಚ್ಚಿಹೋಯ್ತಾ ಮೋದಿ ಅಲೆ?
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕೂಡ ಈ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇದು ‘ಅನುಮತಿಸದ’ ಜಮ್ಮು ಮತ್ತು ಕಾಶ್ಮೀರ ಜನರ ಮೇಲೆ ‘ದಾಳಿ’ ಎಂದು ಹೇಳಿದೆ.
“ಈ ಕ್ರಮವು ಆರೋಗ್ಯಕರವಲ್ಲ, ಆದರೆ, ಇದು ಪ್ರದೇಶದ ಪ್ರಜಾಪ್ರಭುತ್ವ ಸಂಸ್ಥೆಗೆ ಅವಮಾನವಾಗಿದೆ. ಬಿಜೆಪಿಯು ಚುನಾವಣೆಯ ಸಾರವನ್ನು ಹಾಳು ಮಾಡುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ಅಪಾಯಕಾರಿ ಆಟವಾಡುತ್ತಿರುವಂತೆ ತೋರುತ್ತಿದೆ” ಎಂದು ಹಿರಿಯ ಪಿಡಿಪಿ ನಾಯಕ ಡಾ. ಮೆಹಬೂಬ್ ಬೇಗ್ ತಿಳಿಸಿದ್ದಾರೆ.
ಇನ್ನು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರ್ದ ನಿರಾಶ್ರಿತರನ್ನು ಪ್ರತಿನಿಧಿಸುವ ಸಂಸ್ಥೆಗಳು ಜಮ್ಮು ಕಾಶ್ಮೀರ್ ವಿಧಾನಸಭೆಯಲ್ಲಿ ಅವರಿಗೆ ಮೀಸಲಾದ ಸ್ಥಾನಕ್ಕೆ ರಾಜಕೀಯ ನಾಮನಿರ್ದೇಶಿತರನ್ನು ನೇಮಿಸುವುದರ ವಿರುದ್ಧ ಲೆಪ್ಟಿನೆಂಟ್ ಗವರ್ನರ್ಗೆ ಎಚ್ಚರಿಕೆ ನೀಡಿವೆ.
ಲೆಪ್ಟಿನೆಂಟ್ ಗವರ್ನರ್ಗೆ ಸಲ್ಲಿಸಿದ ಜ್ಞಾಪನಾ ಪತ್ರದಲ್ಲಿ, ಪಿಒಜೆಕೆ ನಿರಾಶ್ರಿತರ ಸಂಘಟನೆಯ ಮುಖ್ಯಸ್ಥ ರಾಜೀವ್ ಚುನಿ, “ಈ ಸ್ಥಾನಕ್ಕೆ ಯಾವುದೇ ರಾಜಕೀಯ ನೇಮಕಾತಿಯು ಪಿಒಜೆಕೆ ಸ್ಥಳಾಂತರಗೊಂಡ ವ್ಯಕ್ತಿಗಳು ಸುಮಾರು ಮೂರು ದಶಕಗಳ ಹೋರಾಟದ ನಂತರ ಭಾಗಶಃ ಪಡೆದುಕೊಂಡಿರುವ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ” ಎಂದು ಹೇಳಿದ್ದಾರೆ.
“ಇದು ಬದಲಿಗೆ ಸ್ಥಳಾಂತರಗೊಂಡ ಸಮುದಾಯದ ಹಿತಾಸಕ್ತಿಗಳನ್ನು ಪ್ರಾಮಾಣಿಕವಾಗಿ ಪ್ರತಿನಿಧಿಸುವ ತನ್ನ ಉದ್ದೇಶಿತ ಉದ್ದೇಶವನ್ನು ಪೂರೈಸಬೇಕು. ಸರ್ಕಾರವು ನಿಜವಾಗಿಯೂ ಪಿಒಜೆಕೆ ನಿರಾಶ್ರಿತರ ಅಗತ್ಯಗಳನ್ನು ಪರಿಹರಿಸಲು ಬಯಸಿದರೆ, ರಾಜಕೀಯೇತರ ನಾಮಿನಿಯನ್ನು ಪರಿಗಣಿಸಬೇಕು. ಅನೇಕ ರಾಜಕೀಯ ವ್ಯಕ್ತಿಗಳು ಈ ಸಮುದಾಯವನ್ನು ವಿಧಾನಸಭೆ ಮತ್ತು ಮೇಲ್ಮನೆ ಎರಡರಲ್ಲೂ ಪ್ರತಿನಿಧಿಸಿದ್ದಾರೆ. ಆದರೂ ಅವರು ಅರ್ಥಪೂರ್ಣ ಫಲಿತಾಂಶಗಳನ್ನು ನೀಡಲು ವಿಫಲರಾಗಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ, ಯಾವುದೇ ರಾಜ್ಯ ವಿಧಾನಸಭೆಯಲ್ಲಿ ಶಾಸಕರ ನಾಮನಿರ್ದೇಶನಕ್ಕೆ ಅವಕಾಶವಿಲ್ಲ. ಈ ನಿಬಂಧನೆಗಳು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ (ಮೂರು ನಾಮನಿರ್ದೇಶಿತ ಶಾಸಕರು) ಮತ್ತು ಜಮ್ಮು ಮತ್ತು ಕಾಶ್ಮೀರ (ಐದು ನಾಮನಿರ್ದೇಶಿತ ಶಾಸಕರು) ವಿಧಾನಸಭೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆ.
ಹಿಂದಿನ ಜಮ್ಮು ಮತ್ತು ಕಾಶ್ಮೀರ್ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಇಬ್ಬರು ಮಹಿಳೆಯರನ್ನು ನಾಮನಿರ್ದೇಶನ ಮಾಡುವ ನಿಬಂಧನೆಯನ್ನು ಕೇಂದ್ರ ಸರ್ಕಾರವು ಉಳಿಸಿಕೊಂಡಿದೆ.
2019ರಲ್ಲಿ ಮರುಸಂಘಟನೆ ಕಾಯ್ದೆಯನ್ನು ಜಾರಿಗೊಳಿಸುವ ಸಮಯದಲ್ಲಿ, ಕಾಶ್ಮೀರಿ ವಲಸಿಗರಿಗೆ ಎರಡು ಮತ್ತು ಪಿಒಜೆಕೆ ನಿರಾಶ್ರಿತರಿಗೆ ಒಂದು ಸ್ಥಾನವನ್ನು ನಾಮನಿರ್ದೇಶನ ಮಾಡುವ ಅವಕಾಶವನ್ನು ನ್ಯಾಯಮೂರ್ತಿ (ನಿವೃತ್ತ) ರಂಜನಾ ದೇಸಾಯಿ ನೇತೃತ್ವದ ಡಿಲಿಮಿಟೇಶನ್ ಆಯೋಗದ ಶಿಫಾರಸುಗಳ ಮೇರೆಗೆ 2023ರಲ್ಲಿ ಮರುಸಂಘಟನೆ ಕಾಯಿದೆಯಲ್ಲಿ ಅಳವಡಿಸಲಾಯಿತು.
2018 ರಲ್ಲಿ, ಕೆ.ಲಕ್ಷ್ಮೀನಾರಾಯಣನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾದಲ್ಲಿ ಸುಪ್ರೀಂ ಕೋರ್ಟ್ ಪುದುಚೇರಿ ವಿಧಾನಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಕೇಂದ್ರ ಸರ್ಕಾರವು ಚುನಾಯಿತ ಸರ್ಕಾರವನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಇದಲ್ಲದೆ, ಚುನಾಯಿತ ಸದಸ್ಯರಂತೆ ನಾಮನಿರ್ದೇಶಿತ ಸದಸ್ಯರಿಗೂ ಮತದಾನದ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ಪುದಿಚೇರಿ ವಿಧಾನಸಭೆಗೂ ಕೂಡ ಈ ಹಿಂದೆ ಲೆಫ್ಟಂನೆಟ್ ಗವರ್ನರ್ ಇದೇ ರೀತಿ ನಾಮನಿರ್ದೇಶನ ಮಾಡಿದ್ದರು. 2021ರಲ್ಲಿ ನಡೆದ ಚುನಾವಣೆಯ ಬಳಿಕ, ಪುದುಚೇರಿ ವಿಧಾನಸಭೆಗೆ ಮೂವರು ಶಾಸಕರನ್ನು ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡಿದ್ದರು. ಅವರು ಬಿಜೆಪಿಗರೇ ಆಗಿದ್ದಾರೆ. ಬಿಜೆಪಿ ಶಾಸಕರೆಂದು ಹೇಳಿಕೊಳ್ಳುತ್ತಿದ್ದಾರೆ. ಇದೀಗ, ಜಮ್ಮು-ಕಾಶ್ಮೀರಕ್ಕೆ ಐವರು ಶಾಸಕರನ್ನು ನಾಮನಿರ್ದೇಶನ ಮಾಡಲು ಮೋದಿ ಸರ್ಕಾರ ಮುಂದಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಈವೆರೆಗೆ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಿಲ್ಲ. 2015ರಲ್ಲಿ ಚುನಾವಣೆ ನಡೆದಾಗ, ಅತಂತ್ರ ವಿಧಾನಸಭೆ ಎದುರಾಗಿತ್ತು. ಅಗ ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚಿಸಿತ್ತು. ಆದರೆ, ಬಿಜೆಪಿಯ ಧೋರಣೆಯಿಂದ ಅಸಮಾಧಾನಗೊಂಡಿದ್ದ ಪಿಡಿಪಿ 2018ರಲ್ಲಿ ಮೈತ್ರಿ ತೊರೆದಿತ್ತು. ಅಂದಿನಿಂದ, ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವಿಲ್ಲ.
ಇದೇ ವೇಳೆ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಮೋದಿ ಸರ್ಕಾರ ರದ್ದುಗೊಳಿಸಿತು. ರಾಜ್ಯವನ್ನು ಇಬ್ಬಾಗ ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಘೋಷಿಸಿತು. ಇದೀಗ, 10 ವರ್ಷಗಳ ಬಳಿಕ ಮತ್ತೆ ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಿದೆ