ಜನರಿಗೆ ಹೊಸ ಆಫರ್ ನೀಡುವ ಉದ್ದೇಶದಿಂದ ದಸರಾದಲ್ಲಿ ನಂದಿನಿ ಉತ್ಪನ್ನಗಳನ್ನು ಶೇ.10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಆರ್ ಚೆಲುವರಾಜ್ ಹೇಳಿದರು.
ಮೈಸೂರು ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಮಳಿಗೆ ಉದ್ಘಾಟಿಸಿ ಮಾತನಾಡಿದರು.
“ಮೈಮುಲ್ ಉತ್ಪನ್ನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಚಾಕೊಲೆಟ್ ಹಾಗೂ ಪನ್ನೀರ್ ತಯಾರು ಮಾಡುವ ಯೋಜನೆ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಾಗುವುದು. ಇನ್ನೂ ಪ್ರಸ್ತುತ ಮೈಮುಲ್ ಡೇರಿಯಲ್ಲಿ ಬರೋಬ್ಬರಿ 9 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 4 ಲಕ್ಷ ಲೀಟರ್ ಹಾಲನ್ನು ಜನತೆ ಬಳಸುತ್ತಿದ್ದಾರೆ. ಉಳಿದ ಹಾಲನ್ನು ಪುಡಿ ಮಾಡಿ ಶೇಖರಿಸಿ ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಹೀಗಾಗಿ ರೈತರ ಹಿತರ ದೃಷ್ಟಿಯಿಂದ ಚಾಕೊಲೆಟ್, ಪನ್ನೀರ್, ಚೀಸ್ ಸೇರಿದಂತೆ ಹಲವು ಉಪ ಉತ್ಪನ್ನಗಳ ತಯಾರಿಕೆಗೆ ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.
“ಕೇರಳದಲ್ಲಿ 20 ಸಾವಿರ ಲೀಟರ್ ಹಾಲು ಮಾರಾಟ ಮಾಡುತ್ತಿದ್ದೇವೆ. ತಮಿಳುನಾಡಿನ ಚೆನೈನಲ್ಲಿ 50 ಸಾವಿರ ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಐದು ದಶಕದ ಹಿಂದೆ ಪ್ರಾರಂಭಗೊಂಡ ಮೈಮುಲ್‌ನಲ್ಲಿ ಈಗ 1,205 ಸಂಘಗಳಾಗಿವೆ. 398 ಮಹಿಳಾ ಸಂಘಗಳಿವೆ. ರೈತರು ಇನ್ನೂ ಶೇ.25 ರಷ್ಟು ಪಾಲಿಸಿಯ ಮೊತ್ತ ಹಾಗೂ ಜಿಎಸ್‌ಟಿ ಕಟ್ಟಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಮೊತ್ತ ಕಟ್ಟಬೇಡಿ” ಎಂದು ತಿಳಿಸಿದರು.
“ನಮ್ಮೆಲ್ಲ ರೈತರು ಮೈಸೂರಿನ ನಂದಿನಿ ಉತ್ಪನ್ನಗಳಾದ ಪೇಡಾ, ಮೈಸೂರು ಪಾಕ, ಕೇಸರಿ ಪೇಡಾ, ಬರ್ಫಿ, ಗೋದಿ ಲಾಡು ಹಾಗೂ ಕ್ಯಾಷೋ ಬರ್ಫಿ, ಮ್ಯಾಂಗೋ ಲಸ್ಸಿ ಸೇರಿದಂತೆ ಇತರೆ ತಂಪು ಪಾನೀಯಗಳನ್ನು ಹೆಚ್ಚೆಚ್ಚು ಬಳಸಬೇಕು” ಎಂದು ಕರೆ ನೀಡಿದರು.
ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, “ನಂದಿನಿ ಉತ್ಪನ್ನ ನಮ್ಮೆಲ್ಲರ ಹೆಮ್ಮೆಯಾಗಿದೆ. ಇದರ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಮಳಿಗೆ ತೆರೆಯಲಾಗಿದೆ. ದೇಶದ ದುಬೈ ಸೇರಿ ಅನೇಕ ಕಡೆಗಳಲ್ಲಿ ಮಾರಾಟ ಮಾಡುತ್ತಿರುವುದು ಸಂತಸದ ವಿಚಾರ ಮತ್ತಷ್ಟು ಮಂದಿ ಇದರ ಬಳಕೆ ಮಾಡುವ ಮೂಲಕ ನಮ್ಮ ರೈತರ ಜೀವನಕ್ಕೆ ನೆರವಾಗೋಣ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪೌರಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯ
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಸುರೇಶ್ ನಾಯ್ಕ್, ಒಕ್ಕೂಟ ನಿರ್ದೇಶಕ ಎ ಟಿ ಸೋಮಶೇಖರ್, ಕೆ ಜಿ ಮಹೇಶ್, ಕೆ ಉಮಾಶಂಕರ್, ಕೆ ಈರೇಗೌಡ, ಸಿ ಓಂಪ್ರಕಾಶ್, ಕೆ ಎಸ್ ಕುಮಾರ್, ಪಿ ಎಂ ಪ್ರಸನ್ನ, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ ಕೆ ನಾಗರಾಜು, ಬಿ ನೀಲಾಂಬಿಕೆ ಮಹೇಶ್ ಕುರಹಟ್ಟಿ, ಎ ಶಿವಗಾಮಿ ಷಣ್ಮುಗಂ, ಬಿ ಎನ್ ಸದಾನಂದ, ಬಿ ಗುರುಸ್ವಾಮಿ, ಬಿ ಎ ಪ್ರಕಾಶ್, ಎ ಬಿ ಮಲ್ಲಿಕಾ ರವಿಕುಮಾರ್, ಸಿ ಪ್ರಸಾದ್ ರೆಡ್ಡಿ, ಪಶುಸಂಗೋಪನ ಇಲಾಖೆ ಪ್ರತಿನಿಧಿ ಡಾ ನಾಗರಾಜು, ಎಚ್ ಎಸ್ ಮಂಜುನಾಥ್, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಪ್ರತಿನಿಧಿ ರಜನಿ ತ್ರಿಪಾಠಿ ಸೇರಿದಂತೆ ಇತರರು ಇದ್ದರು.