ವಿನೇಶ್ ಫೋಗಟ್ ಸೆಪ್ಟಂಬರ್ 6ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅಷ್ಟರಲ್ಲೇ ಜುಲಾನ ಕ್ಷೇತ್ರದ ಟಿಕೆಟ್ ವಿನೇಶ್‌ಗೆ ಘೋಷಣೆಯಾಗಿತ್ತು. ಒಂದೇ ತಿಂಗಳಲ್ಲಿ ಆಕೆ ರಾಜಕೀಯ ಅಖಾಡದಲ್ಲಿ ಗೆದ್ದು ವಿಜಯ ಮಾಲೆ ಧರಿಸಿದ್ದಾರೆ. ಅನ್ಯಾಯದ ವಿರುದ್ಧ ಬೀದಿಯಲ್ಲಿ ಹೋರಾಡಿದ್ದ ಛಲಗಾತಿ ವಿನೇಶ್ ಈಗ ಶಾಸನ ಸಭೆಗೆ ಅಡಿಯಿಟ್ಟಿದ್ದಾರೆ. ಆ ಮೂಲಕ ಅವರ ರಾಜಕೀಯ ಹೋರಾಟಕ್ಕೂ ಬಲ ಬಂದಂತಾಗಿದೆ.
ಹರಿಯಾಣದ ಕುಸ್ತಿಪಟು ವಿನೇಶ್ ಫೋಗಟ್ ರಾಜಕೀಯ ಕುಸ್ತಿಯಲ್ಲಿ ಚೊಚ್ಚಲ ಗೆಲುವು ಸಾಧಿಸಿದ್ದಾರೆ. ಒಲಿಂಪಿಕ್ ನಲ್ಲಿ ಚಿನ್ನದ ಪದಕ ವಂಚಿತರಾಗಿ ತವರಿಗೆ ಮರಳಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ವಿನೇಶ್ ಫೋಗಟ್ ಅವರು ಹರಿಯಾಣದ ಜುಲಾನ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿ ಯೋಗೀಶ್ ಬೈರಾಗಿ ಅವರ ವಿರುದ್ಧ 6 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಹರಿಯಾಣದಲ್ಲಿ ಹತ್ತು ವರ್ಷಗಳ ಬಿಜೆಪಿ ಆಡಳಿತದ ವಿರುದ್ಧ ಭಾರೀ ಆಡಳಿತ ವಿರೋಧಿ ಅಲೆ ಇದೆ ಎಂದೂ, ಅದರಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ ಎಂದೇ ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದರು. ಮೊನ್ನೆ ಹರಿಯಾಣದಲ್ಲಿ ಮತದಾನ ಮುಗಿಯುತ್ತಿದ್ದಂತೆ ಹೊರಬಿದ್ದ ಎಲ್ಲ ಎಕ್ಸಿಟ್ ಪೋಲ್‌ಗಳೂ ಅದನ್ನೇ ಹೇಳಿದ್ದವು. ಆದರೆ ಈಗ ಎಲ್ಲ ವಿಶ್ಲೇಷಣೆ, ಸಮೀಕ್ಷೆಗಳು ಸುಳ್ಳಾಗಿವೆ. ಬಿಜೆಪಿಯನ್ನು ಹರಿಯಾಣದ ಜನ ಗೆಲ್ಲಿದ್ದಾರೆ. ಹಾಗೆಯೇ ಚರ್ಕಿ ದಾದ್ರಿ ಎಂಬ ಗ್ರಾಮದ ಗಟ್ಟಿಗಿತ್ತಿ ಮಗಳು ವಿನೇಶ್ ಫೋಗಟ್‌ಳನ್ನೂ ಗೆಲ್ಲಿಸಿದ್ದಾರೆ ಎಂಬುದೊಂದು ಸಮಾಧಾನದ ಸಂಗತಿ.
ವಿನೇಶ್ ಫೋಗಟ್ ಸೆಪ್ಟಂಬರ್ 6ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅಷ್ಟರಲ್ಲೇ ಜುಲಾನ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿನೇಶ್‌ಗೆ ಘೋಷಣೆಯಾಗಿತ್ತು. ಒಂದೇ ತಿಂಗಳಲ್ಲಿ ಆಕೆ ರಾಜಕೀಯ ಅಖಾಡದಲ್ಲಿ ಗೆದ್ದು ವಿಜಯ ಮಾಲೆ ಧರಿಸಿದ್ದಾರೆ. ವಿನೇಶ್ ರಾಜಕೀಯ ಸೇರ್ಪಡೆಯನ್ನು ಆಕೆಯ ದೊಡ್ಡಪ್ಪ, ಕುಸ್ತಿ ತರಬೇತುದಾರ ಮಹಾವೀರ್ ಫೋಗಟ್ ಕೂಡಾ ವಿರೋಧಿಸಿದ್ದರು. ಮುಂದಿನ ಒಲಿಂಪಿಕ್‌ಗೆ ವಿನೇಶ್ ಪ್ರಯತ್ನ ಮಾಡುವ ಅವಕಾಶ ಇತ್ತು. ಅದು ಬಿಟ್ಟು ರಾಜಕೀಯ ಸೇರಿದ್ದು ಸರಿಯಲ್ಲ ಎಂದಿದ್ದರು. ಆಕೆ ಕಾಂಗ್ರೆಸ್ ಸೇರುತ್ತಿದ್ದಂತೆ ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್‌ಭೂಷಣ್ ಶರಣ ಸಿಂಗ್ ಅಜ್ಞಾತದಿಂದ ಎದ್ದು ಬಂದು, “ನಾನು ಅಂದೇ ಹೇಳಿದ್ದೆ. ಇದೆಲ್ಲ ರಾಜಕೀಯ ಷಡ್ಯಂತ್ರ ಎಂದು. ಈಗ ಅದು ನಿಜವಾಗಿದೆ. ಕಾಂಗ್ರೆಸ್ ಸೇರಲು ಇಷ್ಟೆಲ್ಲ ನಾಟಕ ಮಾಡಿದ್ದಳು” ಎಂದು ಹೇಳಿದ್ದ. ಬಿಜೆಪಿ ಬೆಂಬಲಿಗರು ನಾನಾ ರೀತಿಯಲ್ಲಿ ಕುಹಕವಾಡಿದ್ದರು. ಈ ಎಲ್ಲದರ ನಡುವೆ ವಿನೇಶ್‌ಳನ್ನು ಕ್ಷೇತ್ರದ ಜನತೆ ಗೆಲ್ಲಿಸಿದ್ದಾರೆ. ಒಂದು ವೇಳೆ ಆಕೆ ಸೋತಿದ್ದರೆ ಬಿಜೆಪಿ ಬೆಂಬಲಿಗರು ಆಕೆ ಒಪಿಂಪಿಕ್‌ನಲ್ಲಿ ಅನರ್ಹರಾದಾಗ ಸಂಭ್ರಮಿಸಿದಷ್ಟೇ ಸಂಭ್ರಮಿಸುತ್ತಿದ್ದರು. ಆದರೆ ಈಗ ಅದು ಸಾಧ್ಯವಿಲ್ಲ. ಹಾಗೆಯೇ ಅಧಿಕಾರದ ಮದದಲ್ಲಿ ಮೆರೆದಾಡುತ್ತಿದ್ದ ಬ್ರಿಜ್‌ಭೂಷಣ್ ಈಗ ಮನೆಯಲ್ಲಿದ್ದಾನೆ. ಆತನ ವಿರುದ್ಧ ಬೀದಿಯಲ್ಲಿ ಹೋರಾಡಿದ ಛಲಗಾತಿ ವಿನೇಶ್ ಈಗ ಶಾಸನ ಸಭೆಗೆ ಅಡಿಯಿಟ್ಟಿದ್ದಾರೆ. ಆ ಮೂಲಕ ವಿನೇಶ್ ಕಾನೂನು ಹೋರಾಟಕ್ಕೂ ಬಲ ಬಂದಂತಾಗಿದೆ.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ವಿನೇಶ್ ಫೋಗಟ್, ”ಕಷ್ಟದ ಸಮಯದಲ್ಲಿ ಯಾರು ಜತೆಗಿರುತ್ತಾರೆ ಎಂಬುದು ಬ್ರಿಜ್ ಭೂಷಣ್ ವಿರುದ್ಧದ ಹೋರಾಟದ ವೇಳೆ ಕಂಡುಕೊಂಡೆ. ಅಂದು ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ನಮ್ಮ ಜತೆಗಿದ್ದವು. ನಮಗೆ ಬೆಂಬಲ ನೀಡಿದ ಕಾಂಗ್ರೆಸ್‌ಗೆ ಧನ್ಯವಾದ ಹೇಳ ಬಯಸುವೆ. ನಾವು ಬಹಳ ನೋವು ಅನುಭವಿಸಿದ್ದೇವೆ. ನೋವುಂಡವರ ಪರ ನಾವಿರುತ್ತೇವೆ. ನನ್ನ ದೇಶದ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಇದು ಹೊಸ ಇನಿಂಗ್ಸ್. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದ್ದರು. ಹಾಗಾಗಿ ಈ ಗೆಲುವು ಬ್ರಿಜ್‌ಭೂಷಣ್ ವಿರುದ್ಧದ ಹೋರಾಟಕ್ಕೆ ಬಲ ತುಂಬಲಿದೆಯಾ ಕಾದು ನೋಡಬೇಕಿದೆ. ಈಗ ಆಕೆಗೊಂದು ರಾಜಕೀಯ ಶಕ್ತಿ ಬಂದಿದೆ. ಈಗ ಅಧಿಕಾರ ಸ್ಥಾನದಲ್ಲಿ ವಿನೇಶ್ ಇದ್ದರೆ, ಆಗ ಸಂಸದನಾಗಿದ್ದ ಆರೋಪಿ ಈಗ ಸಂಸದನಲ್ಲ, ಆರೋಪಿಯಷ್ಟೇ ಆಗಿದ್ದಾನೆ.
ಇದನ್ನೂ ಓದಿ ಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣ ಜನ ತಿರಸ್ಕರಿಸಿದ್ದಾರೆ: ಸಂಸದ ಬೊಮ್ಮಾಯಿ
ಕುಸ್ತಿ ಅಂಗಳದಲ್ಲಿ ಸತತ ಒಂದೊಂದೇ ಗೆಲುವಿನ ಮೆಟ್ಟಿಲೇರಿದ ಛಲಗಾರ್ತಿಗೆ ಒಲಿಂಪಿಕ್‌ನಲ್ಲಿ ಪದಕ ಗಳಿಸಿ ನಿವೃತ್ತರಾಗಬೇಕು ಎಂಬ ಗುರಿಯಿತ್ತು. ಅದರ ಸಮೀಪಕ್ಕೆ ಹೋಗಿ ಪದಕಕ್ಕೆ ಕೊರಳೊಡ್ಡಬೇಕಿತ್ತು ಎನ್ನುವಷ್ಟರಲ್ಲಿ ಅನರ್ಹತೆಯ ಭೂತ ಎದುರಾಗಿ ಪದಕದ ಕನಸು ಹುಸಿಯಾಗಿತ್ತು. ಆದರೆ ಹೊಸ ಹೋರಾಟದ ಹಾದಿಯಲ್ಲಿ ಅವರು ಮೊದಲ ಗೆಲುವು ದಾಖಲಿಸಿದ್ದಾರೆ. ಈಗ ವಿನೇಶ್ ಫೋಗಟ್ ಶಾಸಕಿಯಾಗಿದ್ದಾರೆ. ಕುಸ್ತಿಯಂಗಳದ ಛಲಗಾತಿಗೆ ಕ್ಷೇತ್ರದ ಜನ ತೋರಿದ ಪ್ರೀತಿಗೆ, ಅವರ ಪ್ರತಿನಿಧಿಯಾಗಿ ವಿನೇಶ್ ಎಷ್ಟು ಗಟ್ಟಿಯಾಗಿ ನಿಲ್ಲುತ್ತಾರೆ, ಜನರ ನಾಡಿಮಿಡಿತ ಅರಿಯುವಲ್ಲಿ ಎಷ್ಟು ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.