ವಿಶ್ವವಿಖ್ಯಾತ ಮೈಸೂರು ದಸರಾದ ಐದನೇ ದಿನದಂದು ಯೋಗ ದಸರಾ ಉಪಸಮಿತಿಯಿಂದ ಅರಮನೆಯ ಆವರಣದಲ್ಲಿ “ಯೋಗ ಸರಪಳಿ, ಪ್ರಜಾಪ್ರಭುತ್ವಕ್ಕಾಗಿ ಯೋಗ” ಕಾರ್ಯಕ್ರಮ ಆಯೋಜಿಸಲಾಗಿದ್ದು, ಯೋಗ ದಸರಾ ಉಪಸಮಿತಿ ಅಧ್ಯಕ್ಷ ಎಂ ಮಹೇಶ್ ಉದ್ಘಾಟನೆ ಮಾಡಿದರು.
ಸಂವಿಧಾನ ಪೀಠಿಕೆ ಬೋಧನೆ, ಪ್ರಜಾಪ್ರಭುತ್ವದ ಆಶಯಗಳನ್ನು ಸಾರಿದ ಯೋಗ ಗುಚ್ಛ ಪ್ರದರ್ಶನ, ಯೋಗ ಗುಚ್ಛ ನೃತ್ಯ, ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಪ್ರದರ್ಶನ ಸೇರಿದಂತೆ ಇತರ ಕಾರ್ಯಕ್ರಮಗಳಿಂದ ನೆರದಿದ್ದ ಜನರನ್ನು ರಂಜಿಸಲಾಯಿತು.
ಯೋಗಪಟುಗಳಿಂದ ಯೋಗ ಸರಪಳಿಯ ನಿರ್ಮಾಣ, ಸೂರ್ಯ ನಮಸ್ಕಾರ, ವಜ್ರಾಸನ, ತ್ರಿಕೋನಾಸನ, ಸಿದ್ಧಾಸನ, ಅರ್ಧಚಕ್ರಾಸನ ಸೇರಿದಂತೆ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ಯೋಗ ಸರಪಳಿಯಲ್ಲಿ ಯೋಗಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಮೈಸೂರಿನ ವಿವಿಧೆಡೆಯಿಂದ ಸರಿ ಸುಮಾರು 4000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಬೆಳಿಗ್ಗೆ 6ರಂದು ಅರಮನೆಯ ಮೈದಾನ ಜನರಿಂದ ತುಂಬಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಸ್ತೆ ದುರಸ್ತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಕಾರ್ಯಕ್ರಮದಲ್ಲಿ ಜೆಎಸ್ಎಸ್ ಸಮೂಹದ ಮುಖ್ಯಸ್ಥ ಶ್ರೀಹರಿ, ಯೋಗ ದಸರಾ ಉಪಸಮಿತಿಯ ವಿಶೇಷಾಧಿಕಾರಿ ಕೆ ರಮ್ಯ, ಕಾರ್ಯಾಧ್ಯಕ್ಷ ಅನಂತರಾಜು, ಕಾರ್ಯದರ್ಶಿಗಳಾದ ಪುಷ್ಪ ಸೇರಿದಂತೆ ಇತರ ಸದಸ್ಯರು ಇದ್ದರು.