ಮಲೆನಾಡು ಭಾಗದಲ್ಲಿ ಜನವಿರೋಧಿ ಅರಣ್ಯ ಕಾಯಿದೆಯಿಂದ ಅರಣ್ಯ ಒತ್ತುವರಿ ತೆರವು ಕಾರ್ಯ ನಡೆಯುತ್ತಿರುವುದಕ್ಕೆ ಬೇಸತ್ತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗೂರಿನಲ್ಲಿ ನಡೆದಿದೆ.
ಕರುಣಾಕರ(53) ಎಂಬ ರೈತ ಮೃತಪಟ್ಟ ದುರ್ದೈವಿ. ಕರುಣಾಕರ ಅವರು ತಮ್ಮ ಬದುಕಿಗಾಗಿ ಅಲ್ಪ ಪ್ರಮಾಣದ ಒತ್ತುವರಿ ಮಾಡಿಕೊಂಡಿದ್ದರು. ಸ್ಥಳೀಯ ಸೊಸೈಟಿ ಹಾಗೂ ಬ್ಯಾಂಕ್ ಮತ್ತು ಒಂದಷ್ಟು ಕೈಸಾಲ ಮಾಡಿಕೊಂಡಿದ್ದರು. ಇದರ ನಡುವೆ ಮಗಳ ಮದುವೆ ಮಾಡಬೇಕಾಗಿದ್ದು, ಬದುಕಿಗಾಗಿ ಜಮೀನಿನ ಆದಾಯದ ಮೇಲೆ ಅವಲಂಬಿತವಾಗಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಒತ್ತುವರಿ ತೆರವು ವಿಷಯದ ಸುದ್ದಿ ಕೇಳಿ ಚಿಂತಿತರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹500 ಕೋಟಿ ಅನುದಾನ ನೀಡುವಂತೆ ಒತ್ತಾಯ
ಸಧ್ಯದಲ್ಲೇ ಒತ್ತುವರಿ ತೆರವು ಮಾಡೇ ಮಾಡುತ್ತಾರೆ, ಮಗಳ ಮದುವೆಯಾಗಿಲ್ಲ. ಸಾಲ ತೀರಿಸಲು ಬೇರೆ ದಾರಿಯಿಲ್ಲ ಎಂದೆಲ್ಲ ಕುಟುಂಬಸ್ಥರು ಹಾಗೂ ಸ್ಥಳೀಯರ ಬಳಿ ನೋವು ತೋಡಿಕೊಂಡಿದ್ದರು. ನಿನ್ನೆಯ ದಿನ ಮನೆಯ ಹತ್ತಿರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.