ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಏಜೆನ್ಸಿ ಜಾಹೀರಾತಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ತುಂಬಿಕೊಳ್ಳುವುದಕ್ಕೆ ಅರ್ಜಿ ಆಹ್ವಾನಿಸಿದ್ದಾರೆ. ಈ ಪ್ರಕ್ರಿಯೆ ಕರ್ನಾಟಕ ಸರ್ಕಾರಕ್ಕೆ ಗೊತ್ತಿದೆಯೋ ಅಥವಾ ಗೊತ್ತಿದ್ದೂ ಸರ್ಕಾರವೇ ಖಾಸಗಿಯವರಿಗೆ ಕೊಟ್ಟಿದೆಯೇ ಎಂದು ಸಾಮಾಜಿಕ ಹೋರಾಟಗಾರ ಮುತ್ತು ಬಿಳಿಯಲಿ ಪ್ರಶ್ನಿಸಿದ್ದಾರೆ.
“ಇಷ್ಟು ದಿನ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ನಿಯಮಗಳ ಪ್ರಕಾರ ಚಾಲಕರ ಖಾಲಿ ಹುದ್ದೆಗಳಿಗೆ ಸರ್ಕಾರವೇ ಅರ್ಜಿ ಕರೆದು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ನಮಗೆಲ್ಲರಿಗೂ ಗೊತ್ತಿರುವ ವಿಷಯ. ಆದರೆ ಸಂಸ್ಥೆಯ ಹೆಸರು ಹಾಳು ಮಾಡುವುದಕ್ಕೆ ಯಾರೋ ಈ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ಖಚಿತ ಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಮುತ್ತು ಬಿಳಿಯಲಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಖಾಲಿ ಹುದ್ದೆಗೆ ಅರ್ಜಿ ಕರೆದಿರುವ ಜಾಹೀರಾತಿನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ʼಇದು ನಿಜವಾದ ಜಾಹೀರಾತು, ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯಿದೆ. ಈಗಾಗಲೇ ಸಾಕಷ್ಟು ಅರ್ಜಿಗಳು ಬರುತ್ತಿವೆ. ಸಮಯ ಮೀರುವ ಮುನ್ನ ಬೇಗ ಬಂದು ಅರ್ಜಿ ಸಲ್ಲಿಸಿರೆಂದು ತಿಳಿಸಿದ್ದಾರೆ” ಎಂದು ಹೇಳಿದರು.
“ರಾಜ್ಯದಲ್ಲಿ ಅನೇಕ ವಿದ್ಯಾವಂತ ಯುವಕ, ಯುವತಿಯರು ಸರ್ಕಾರಿ ನೌಕರಿಯ ಕನಸನ್ನು ಕಟ್ಟಿಕೊಂಡು ಹಗಲು ರಾತ್ರಿ ಓದಿ ನೌಕರಿ ಪಡೆದುಕೊಳ್ಳುವ ಹಂಬಲದಲ್ಲಿದ್ದಾರೆ. ಈ ರೀತಿ ಸರ್ಕಾರಿ ಉದ್ಯೋಗಗಳನ್ನು ಖಾಸಗಿಯವರಿಗೆ ಕೊಟ್ಟು ಸರ್ಕಾರ ರಾಜ್ಯದ ನಿರುದ್ಯೋಗಿ ಯುವಜನರಿಗೆ ದ್ರೋಹ ಮಾಡುತ್ತಿದೆ. ಈಗ ಕೇವಲ ಚಾಲಕರ ಹುದ್ದೆಗೆ ಮಾತ್ರ ಸೀಮಿತವಾಗಿದೆ. ಮುಂದೊಂದು ದಿನ ಇಡೀ ಸಂಸ್ಥೆಯನ್ನು ಖಾಸಗೀಕರಣ ಮಾಡಿದರೆ ಆಶ್ಚರ್ಯಪಡಬೇಕಾಗಿಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಕ್ಕಳ ಪ್ರತಿಭೆ ಅನಾವರಣಕ್ಕೆ ಮಕ್ಕಳ ದಸರಾ ಉತ್ತಮ ವೇದಿಕೆ: ಸಚಿವ ಹೆಚ್ ಸಿ ಮಹದೇವಪ್ಪ
“ಕರ್ನಾಟಕ ಸರ್ಕಾರ ಕೂಡಲೇ ಈ ಪ್ರಕ್ರಿಯೆಯನ್ನು ರದ್ದುಗೊಳಿಸಿ ಸರ್ಕಾರದ ವತಿಯಿಂದ ನೇಮಕಾತಿ ಪ್ರಕ್ರಿಯೆ ಮಾಡಬೇಕು” ಎಂದು ದಲಿತ ಸಂಘಟನೆಗಳ ಒಕ್ಕೂಟದ ಪರವಾಗಿ ಮುತ್ತು ಬಿಳಿಯಲಿ ಆಗ್ರಹಿಸಿದ್ದಾರೆ.