ಬೌದ್ಧರ ಅಹಿಂಸಾ ಮಾರ್ಗಕ್ಕೆ ಹೆದರಿ ವೈದಿಕರು ಗೋಮಾಂಸ ತಿನ್ನುವುದನ್ನು ತ್ಯಜಿಸಿದರೇ?

Date:

Advertisements

ವೈದಿಕರು ಬುದ್ಧಪೂರ್ವದಲ್ಲಿ ವೇದಗಳನ್ನು ಅನುಸರಿಸುತ್ತಾ ಎತ್ತು, ಹಸು ಮುಂತಾದ ಪ್ರಾಣಿಗಳನ್ನು ಹೋಮ ಹವನಗಳ ಹೆಸರಿನಲ್ಲಿ ಬಲಿಕೊಟ್ಟು ಅವುಗಳ ಮಾಂಸವನ್ನು ಭಕ್ಷಿಸುತ್ತಿದ್ದರು. ಹೋಮಕ್ಕೆ ಹಸು ಬಲಿ ಕೊಡುವುದು ವೈದಿಕರ ಧರ್ಮಾಚರಣೆ ಮಾತ್ರವಲ್ಲದೆ ನೆಲಮೂಲಿಗರ ಕೃಷಿಯನ್ನು ನಾಶಗೊಳಿಸುವ ಹುನ್ನಾರವೂ ಹೌದು. ಆದರೆ ಬೌದ್ದರ ಅಹಿಂಸಾ ಮಾರ್ಗಕ್ಕೆ ಹೆದರಿ ವೈದಿಕರು ಹಸುವಿನ ಮಾಂಸ ತಿನ್ನುವುದನ್ನು ನಿಲ್ಲಿಸಿದ್ದಾರೆ.

ನಮ್ಮ ನೆಲದ ಸಾಹಿತ್ಯ ಸಂಸ್ಕೃತಿಯು ಆರಂಭದಲ್ಲಿ ಜನಪದರಿಂದ ಹುಟ್ಟುಪಡೆದಿದೆ. ಸಾಹಿತ್ಯವನ್ನು ಶಾಸ್ತ್ರೀಯವಾಗಿ ವಿಶ್ವವಿದ್ಯಾಲಯದಲ್ಲಿ ಓದುವ ಅವಕಾಶಗಳು ಇನ್ನೂ ಅಭಿವೃದ್ಧಿ ಹೊಂದುವ ಬಹುಪೂರ್ವದಲ್ಲಿಯೇ ಈ ನೆಲದ ನಿರಕ್ಷರಿ ಕಾಯಕ ಸಂಸ್ಕೃತಿಯ ಜನಪದರು ಅಪೂರ್ವವಾದ ಸಾಹಿತ್ಯವನ್ನು ಸೃಷ್ಠಿಸಿದ್ದಾರೆ. ಹಾಗಾಗಿ ಜನಪದ ಸಾಹಿತ್ಯವು ಅಧುನಿಕ ಸಾಹಿತ್ಯದ ತಾಯಿಬೇರು ಎನ್ನುವುದು ವಿವಾದಾತೀತ ಸತ್ಯ. ಒಗಟುಗಳು, ಒಡಪುಗಳು, ನಾಣ್ನುಡಿಗಳು, ಗಾದೆಗಳು ಕುಟ್ಟುವ, ಬೀಸುವ, ಹಂತಿ, ಸುಗ್ಗಿ ಮುಂತಾದ ಶ್ರಮದಾಯಕ ಕಾಯಕದಿಂದಾಗುವ ದೈಹಿಕ ಆಯಾಸವನ್ನು ನೀಗಿಕೊಳ್ಳಲು ಹುಟ್ಟಿದ ಹಾಡು ಪ್ರಕಾರಗಳು, ಮದುವೆ, ಸೋಬಾನೆ, ನಾಮಕರಣ, ಸೀಮಂತ, ಋತುಚಕ್ರ ಮುಂತಾದ ಶುಭಕಾರ್ಯಗಳಲ್ಲಿ ಹಾಡುವ ಹಾಡುಗಳುˌ ಶ್ರಾವಣ ಮಾಸ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಹಾಡುವ ಭಜನೆಯ ಪದಗಳು, ಮಕ್ಕಳ ಪದಗಳು ಇವು ನಮ್ಮ ಜನಪದರ ಬದುಕಿನಲ್ಲಿ ಸ್ವಾಭಾವಿಕವಾಗಿ ಮೈದಳೆದ ಸಾಹಿತ್ಯ ಪುಷ್ಪಗಳು. ಇವು ಗುರುಕುಲದಲ್ಲಿ ಓದಿದ ಸಂಸ್ಕೃತ ಪಂಡಿತರ ಗ್ರಾಂಥಿಕ ಜ್ಞಾನದಿಂದ ಉದಿಸಿದ ವೇದ, ಆಗಮ, ಪುರಾಣ, ಶಾಸ್ತ್ರ, ಉಪನಿಷತ್ ಮುಂತಾದ ಪಾಂಡಿತ್ಯ ಪ್ರದರ್ಶನೋದ್ದೇಶಿತ ಸಾಹಿತ್ಯಗಳಿಗಿಂತ ಮುಂಚಿತವಾಗಿ ಜನಪದರ ಜೀವನಾನುಭಾವದ ಮೂಸೆಯಿಂದ ಮೂಡಿದ ಮಹಾನ್ ಪ್ರತಿಮೆಗಳು.

ಆದರೆ, ಭಾರತದ ಜೀವನ ಪದ್ಧತಿಯನ್ನು ಇಡಿಯಾಗಿ ಆವರಿಸಿಕೊಳ್ಳಲು ಇಂದಿಗೂ ತೀವ್ರವಾಗಿ ಹವಣಿಸುತ್ತಿರುವುದು ಮಾತ್ರ ಜೀವನಾನುಭವದ ಕೊರತೆಯುಳ್ಳ ಪಂಡಿತರು ಕೃತಕವಾಗಿ ಸೃಷ್ಠಿಸಿದ ವೇದಾದಿ ವೈದಿಕ ಸಾಹಿತ್ಯಗಳು. ಈ ವೇದಗಳ ಪರಿಕಲ್ಪನೆಯ ಮೂಲವೂ ಕೂಡ ಜನಪದ ಸಾಹಿತ್ಯವೆ ಆಗಿದೆ. ವೇದಗಳು ಯಾವಾಗ ಸೃಷ್ಠಿಯಾದವು ಎನ್ನುವುದು ಇದುವರೆಗೆ ತಿಳಿದಿಲ್ಲ. ವೇದಗಳ ಸೃಷ್ಠಿಯ ಕಾಲವು ಒಂದು ವಿವಾದಾತ್ಮಕ ಸಂಗತಿ. ವೇದಗಳ ನಿರ್ದಿಷ್ಟ ಲೇಖಕರ ಹೆಸರುಗಳು ಅಲಭ್ಯ. ವೇದವನ್ನು ಪ್ರಮಾಣವೆಂದು ನಂಬುವ ಜನರು ಅವು ಸಾಕ್ಷಾತ್ ಬ್ರಹ್ಮನಿಂದ ಸೃಷ್ಠಿಯಾದವು ಎಂದು ಸಾರುತ್ತ ಬಂದಿದ್ದಾರೆ. ಈ ಬ್ರಹ್ಮ ಒಬ್ಬ ಕಾಲ್ಪನಿಕ ವ್ಯಕ್ತಿಯೇ ಹೊರತು ಐತಿಹಾಸಿಕ ವ್ಯಕ್ತಿಯಂತೂ ಖಂಡಿತ ಅಲ್ಲ. ವೇದಗಳು ಸಂಸ್ಕೃತ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಒಂದು ವೇಳೆ ನಾವು ಸಂಸ್ಕೃತ ಭಾಷೆಯ ಮೂಲ, ಉಗಮ, ವಿಕಾಸಗಳ ಕುರಿತು ಐತಿಹಾಸಿಕ ನೆಲೆಯಲ್ಲಿ ಸಂಶೋಧನಾತ್ಮಕವಾಗಿ ಗಮನಿಸಿದರೆ ಆ ಭಾಷೆಯ ಮೂಲವು ಮಧ್ಯಪ್ರಾಚ್ಯದ ಸಿರಿಯಾ ಮುಂತಾದ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ. ಅದು ಭಾರತಕ್ಕೆ ಮೂರು ಸಾವಿರ ವರ್ಷಗಳ ಹಿಂದೆ ವಲಸೆ ಬಂದ ಇಂಡೊ-ಯುರೋಪಿಯನ್ ಕುಟುಂಬಕ್ಕೆ ಸೇರಿದ ಭಾಷೆಯಾಗಿದ್ದು ಭಾರತೀಯ ಮೂಲದ ದ್ರಾವಿಡ ಭಾಷೆಗಳು, ಪಾಲಿ ಮತ್ತು ಪ್ರಾಕೃತ ಭಾಷೆಗಳ ಸತ್ವವನ್ನು ಹೀರಿಕೊಂಡು ಕ್ರಮೇಣವಾಗಿ ವಿಕಸನ ಹೊಂದಿದ ಒಂದು ಲಿಪಿರಹಿತ ಭಾಷೆಯಾಗಿದೆ. ಅದರ ವಿಕಸಿತ ರೂಪದ ಕಾಲಮಾನವು ಕ್ರಿಸ್ತಶಕ ಎರಡನೇ ಶತಮಾನದ ತರುವಾಯವೆಂಬುದು ಮನನವಾಗುತ್ತದೆ.

Advertisements

ಸಂಸ್ಕೃತದಲ್ಲಿ ಬರೆಯಲ್ಪಟ್ಟ ಈ ವೇದಗಳಲ್ಲಿರುವ ಅನೇಕ ಸಂಗತಿಗಳು ನಮ್ಮ ಜನಪದರ ಆದಿಮ ನಂಬಿಕೆಗಳ ನಕಲುಗಳಂತೆ ಕಾಣುತ್ತವೆ. ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದಗಳಲ್ಲಿನ ಹಾಗೂ ಪಾರ್ಸಿಗಳ ಧರ್ಮಗ್ರಂಥ ಅವೆಸ್ತಾದಲ್ಲಿರುವ ಅನೇಕ ಸಂಗತಿಗಳು ವೇದಗಳಲ್ಲಿ ಪುನರಾವರ್ಥನೆಗೊಂಡಿವೆ. ಸ್ಲಾವಿಕ್ ಆರ್ಯನ್ನರ ವಿಷನ್ ಮತ್ತು ರೋಧ್ ಎನ್ನುವ ಆದಿಮ ದೇವತೆಗಳೆ ಅನುಕ್ರಮವಾಗಿ ವೈದಿಕರ ವಿಷ್ಣು ಮತ್ತು ರುದ್ರ ಎಂದು ಅರ್ಥೈಸಲಾಗುತ್ತದೆ. ಅವೆಸ್ತಾದಲ್ಲಿ ಬರುವ ಪಾರ್ಸಿಗಳ ಯಸ್ನಾ ಆಚರಣೆಯು ವೈದಿಕರ ಯಜ್ಞವನ್ನು ಹೋಲುತ್ತದೆ. ಯಸ್ನಾ ಮತ್ತು ಯಜ್ಞ ಎರಡರಲ್ಲೂ ಯಜ್ಞಕರ್ತರು ಸೋಮರಸ ಕುಡಿಯುವ ಸಂಗತಿಗಳ ಪ್ರಸ್ತಾಪವಿದೆ. ಆದ್ದರಿಂದ ವೇದಗಳು ಸಂಪೂರ್ಣ ಭಾರತೀಯ ಮೂಲದವು ಎಂದು ಒಪ್ಪಿಕೊಳ್ಳಲಾಗದು. ಇನ್ನು ಗ್ರಾಂಥಿಕ ವೇದಗಳ ನಿಖರವಾದ ಕಾಲಮಾನ ತಿರ್ಮಾನವಾಗಿಲ್ಲ. ಅವು ಮೂರು ಸಾವಿರ ವರ್ಷಗಳ ಹಿಂದಿನಿಂದ ಅಸ್ತಿತ್ವದಲ್ಲಿದ್ದು ಬರಹ ರೂಪಕ್ಕೆ ಬರುವ ತನಕ ಬಾಯಿಂದ ಬಾಯಿಗೆ ಹರಿದು ಬಂದಿವೆ ಎಂದು ವೈದಿಕರು ಪ್ರತಿಪಾದಿಸುತ್ತಾರೆ. ಬೃಹತ್ ಪ್ರಮಾಣದ ವೇದಗಳು ಸಾವಿರಾರು ವರ್ಷಗಳಿಂದ ಬಾಯಿಂದ ಬಾಯಿಗೆ ಹರಿದು ಬಂದು ತಮ್ಮ ಮೂಲ ಸ್ವರೂಪವನ್ನು ಮಕ್ಕಾಗದಂತೆ ಕಾಯ್ದುಕೊಂಡವು ಎನ್ನುವುದು ಸ್ಪಷ್ಟವಾಗಿ ನಂಬಿಕೆಗೆ ಅನರ್ಹವಾದ ಸಂಗತಿ.

Indus
ಸಿಂಧೂ ಕಣಿವೆಯ ನಾಗರಿಕತೆಯ ಅವಶೇಷ

ಇತ್ತೀಚಿನ ದಿನಗಳಲ್ಲಿ ಹಿಂದುತ್ವವಾದಿಗಳು ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ಸಾಹಿತ್ಯ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸಿಂಧೂ ಕಣಿವೆಯ ನಾಗರಿಕತೆಯ ಉತ್ಖನನದಲ್ಲಿ ದೊರೆತ ಕುರುಹುಗಳು ಹಾಗೂ ಗುಹೆಗಳಲ್ಲಿ ದೊರೆತ ಸಾಂಕೇತಿಕ ಲಿಪಿಗಳು ಭಾರತದ ಮೊಟ್ಟ ಮೊದಲ ಲಿಪಿ ಹಾಗೂ ಸಾಹಿತ್ಯದ ಕುರುಹುಗಳು ಎನ್ನುವುದರಲ್ಲಿ ಸಂದೇಹವಿಲ್ಲ. ಬುದ್ದೋತ್ತರ ಕಾಲದ ಮೌರ್ಯರ ಆಡಳಿತದ ಪಾಲಿ ಭಾಷೆಯಲ್ಲಿನ ಶಾಸನಗಳು ಮತ್ತು ಸಾಹಿತ್ಯಗಳು ಭಾರತದಲ್ಲಿ ಬರಹರೂಪದಲ್ಲಿ ದೊರೆತ ಮೊಟ್ಟ ಮೊದಲ ಪರಿಪೂರ್ಣ ಸಾಹಿತ್ಯದ ಕುರುಹುಗಳು ಎನ್ನುವ ಸಂಗತಿ ವಿವಾದಾತೀತವಾಗಿದೆ. ವೇದಗಳು, ಉಪನಿಷತ್ತು, ಮಹಾಕಾವ್ಯ ಹಾಗೂ ಪುರಾಣ ಮುಂತಾದ ವೈದಿಕ ಸಾಹಿತ್ಯಗಳು ಬುದ್ದೋತ್ತರ ಕಾಲಘಟ್ಟಿದಲ್ಲಿ ಸೃಷ್ಠಿಯಾಗಿವೆ ಎಂದು ಖಚಿತವಾಗಿ ಹೇಳಲು ಅನೇಕ ಪುರಾವೆಗಳಿವೆ. ಐತಿಹಾಸಿಕ ವ್ಯಕ್ತಿ ಬುದ್ದ ವೈದಿಕರ ಕಲ್ಪಿತ ವಿಷ್ಣುವಿನ ಒಂಬತ್ತನೇ ಅವತಾರವೆಂದು ಹೇಳುವ ವೈದಿಕ ಸಾಹಿತ್ಯವು ಖಂಡಿತವಾಗಿ ಬುದ್ದನ ತರುವಾಯವೇ ಸೃಷ್ಠಿಯಾಗಿದೆ. ವೇದಗಳೂ ಸೇರಿದಂತೆ ಇತರ ವೈದಿಕ ಸಾಹಿತ್ಯಗಳ ಕುರಿತು ಇಲ್ಲಿಯವರೆಗೆ ಯಾವುದೇ ಬಗೆಯ ಪ್ರಾಚ್ಯವಸ್ತು ಕುರುಹುಗಳು ಲಭ್ಯವಾಗಿಲ್ಲವೆನ್ನುವುದು ಗಮನಾರ್ಹ ಸಂಗತಿ.

ಇಡೀ ಜಗತ್ತಿನಲ್ಲಿ ಪ್ರಾಚೀನವೆನ್ನುವ ಧರ್ಮ ಯಾವುದು ಎನ್ನುವ ಜಿಜ್ಞಾಸೆ ಇಂದಿಗೂ ನಿಂತಿಲ್ಲ. ವೈದಿಕ ಆರ್ಯರು ಭಾರತಕ್ಕೆ ಬರುವ ಮುಂಚೆಯೆ ಇಲ್ಲಿ ದ್ರಾವಿಡ ಶಿವಸಂಸ್ಕೃತಿ ಅಥವಾ ಜೀವನಮಾರ್ಗ ಅಸ್ತಿತ್ವದಲ್ಲಿತ್ತು. ಆದರೆ ಭಾರತೀಯರಿಗೆ ಒಂದು ನಿರ್ಧಿಷ್ಟ ಧರ್ಮ ಎನ್ನುವುದಿರಲಿಲ್ಲ. ಇಡೀ ಉಪಖಂಡದಾದ್ಯಂತ ಬಹುಬಗೆಯ ಆದಿಮ ನಂಬಿಕೆಗಳು ಜನಮಾನಸದಲ್ಲಿ ರೂಢಿಯಲ್ಲಿದ್ದವು. ಶಿವನನ್ನು ಅಂದಿನ ಜನರು ಈ ನೆಲದ ಆದಿಮ ದೇವತೆಯಾಗಿ ಪರಿಗಣಿಸುತ್ತಿದ್ದರು ಎನ್ನಲು ಸಿಂಧೂ ಕಣಿವೆಯ ನಾಗರಿಕತೆಯ ಉತ್ಖನನದ ಕುರುಹುಗಳೆ ಸಾಕ್ಷಿ. ಆನಂತರ ವೇದಗಳ ಕಾಲ ಆರಂಭವಾಯಿತು ಎಂದು ಇತಿಹಾಸಕಾರರು ದಾಖಲಿಸಿದರೂ ಆಗ ವೇದಗಳು ಗ್ರಂಥ ರೂಪದಲ್ಲಿರಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಒಂದು ನಿರ್ದಿಷ್ಟ ಸಿದ್ಧಾಂತವನ್ನು ದಿಕ್ಕರಿಸಿ ಅದಕ್ಕೆ ತದ್ವಿರುದ್ಧವಾದ ಇನ್ನೊಂದು ನಿರ್ದಿಷ್ಟ ಸಿದ್ಧಾಂತ ಹೊಂದಿದ ಧರ್ಮ ಗೌತಮ ಬುದ್ಧನಿಂದ ಸ್ಥಾಪಿತವಾಯಿತು. ಅದಕ್ಕೆ ಸ್ವಲ್ಪ ಮೊದಲು ಜೈನ ಧರ್ಮವು ಮಹಾವೀರನ ಮುಖೇನ ಪ್ರವರ್ಧಮಾನಕ್ಕೆ ಬಂದಿತು. ಜನಪ್ರಿಯತೆ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಜೈನ ಧರ್ಮಕ್ಕಿಂತ ಬೌದ್ಧ ಧರ್ಮವು ಹೆಚ್ಚು ವ್ಯಾಪಕವಾಗಿ ಹರಡಿಕೊಂಡಿತು. ಹಾಗಾಗಿ ಜೈನ ಹಾಗೂ ಬೌದ್ಧ ಧರ್ಮಗಳನ್ನು ಭಾರತದ ಮೊಟ್ಟ ಮೊದಲ ಧರ್ಮಗಳು ಎನ್ನಬಹುದು.

Saiva

ಬೌದ್ದ ಸಾಹಿತ್ಯಕ್ಕೆ ಹೆದರಿ ಹೌಹಾರಿದ ವೈದಿಕರು ಬುದ್ದೋತ್ತರ ಕಾಲಘಟ್ಟದಲ್ಲಿ ಕುಳಿತು ವೇದ, ಪುರಾಣ ಇತ್ಯಾದಿ ವೈದಿಕ ಸಾಹಿತ್ಯಗಳನ್ನು ಸೃಷ್ಟಿಸಿಕೊಂಡರು. ಭಗವದ್ಗೀತೆಯಾದಿಯಾಗಿ ಎಲ್ಲಾ ಬಗೆಯ ವೈದಿಕ ಸಾಹಿತ್ಯಗಳ ನಿರ್ಮಾಣವು ಕ್ರಿಸ್ತಶಕ ಒಂದನೇ ಶತಮಾನದಿಂದ ಹಿಡಿದು ಶಂಕರಾಚಾರ್ಯರ ಜೀವಿತಾವಧಿಯ ಎಂಟನೇ ಶತಮಾನದವರೆಗಿನ ಕಾಲಘಟ್ಟದಲ್ಲಿ ಆಗಿದೆ ಎಂದು ಹೇಳಬಹುದು. ವೈದಿಕ ಆರ್ಯರು ತಮ್ಮ ಪಿತೃಭೂಮಿಯಾಗಿರುವ ಮಧ್ಯಪ್ರಾಚ್ಯದಿಂದ ಹೊತ್ತು ತಂದ ಅಪೂರ್ಣವಾಗಿದ್ದ ಆರಂಭಿಕ ಸಂಸ್ಕೃತ ಅಥವಾ ಇಂಡಿಕ್ ಭಾಷೆಯನ್ನು ಪುನರುತ್ಥಾನಗೊಳಿಸಿ ವೇದಗಳನ್ನು ಗ್ರಂಥರೂಪಕ್ಕೆ ಪರಿಪರ್ತಿಸಿದರು ಎಂದು ಹೇಳಬಹುದು. ಅವರು ಕೇವಲ ತಮ್ಮ ಧರ್ಮಕ್ಕೆ ಪರಿಪೂರ್ಣತೆಯ ಸ್ವರೂಪ ನೀಡುವುದಕ್ಕೆ ಮಾತ್ರ ಪ್ರಾಶಸ್ತ್ಯ ಕೊಡದೆ ಇಲ್ಲಿನ ಜನರ ಆದಿಮ ನಂಬಿಕೆಗಳನ್ನು ತಮ್ಮ ವೈದಿಕ ಸಂಸ್ಕೃತಿಯ ಆವರಣಕ್ಕೆ ಸೇರಿಸಿಕೊಳ್ಳುವ ದುಸ್ಸಾಹಸವನ್ನು ಕೂಡ ಮಾಡಿದರು ಹಾಗೂ ಆ ಕುಕೃತ್ಯವನ್ನು ಈಗಲೂ ಅವರು ಮುಂದುವರೆಸಿದ್ದಾರೆ. ಅನ್ಯ ಸಂಸ್ಕೃತಿಗಳನ್ನು ಆಪೋಷನಕೊಳ್ಳುವ ಆರ್ಯ ವೈದಿಕರ ಪ್ರವೃತ್ತಿಯು ಅವರ ಅನ್ಯ ಧರ್ಮದ ಬಗೆಗಿರುವ ಅಸಹನೆˌ ಭಯˌ ಮತ್ಸರಗಳಿಂದ ಹುಟ್ಟಿದ್ದು ಎನ್ನುವುದು ಸ್ಪಷ್ಟ.

ವೇದಗಳು ಸುಳ್ಳುಗಳಿಂದ ಕೂಡಿವೆ ಎನ್ನುವುದಕ್ಕೆ ಅವು ಕಲ್ಪಿತ ವ್ಯಕ್ತಿ ಬ್ರಹ್ಮನಿಂದ ಸ್ಪಷ್ಟವಾಗಿವೆ ಅಥವಾ ಅವು ಸ್ವಯಂಭೂ ಎನ್ನುವ ವೈದಿಕರ ಅತಿರೇಕದ ಪ್ರತಿಪಾದನೆಯೇ ಸಾಕ್ಷಿ. ವೇದಗಳು ಇಡೀ ಭಾರತೀಯರ ಜೀವನವನ್ನು ಪ್ರಭಾವಿಸಲಿಲ್ಲ ಹಾಗೂ ಅವರ ಬದುಕಿಗೆ ಸಕಾರಾತ್ಮಕವಾಗಿ ಅನ್ವಯಿಸಲೂ ಅಲ್ಲ. ಭಾರತದಲ್ಲಿ ವೈದಿಕರು ಮಾತ್ರ ವೇದಗಳನ್ನು ಪ್ರಮಾಣವೆಂದು ನಂಬುತ್ತಾರೆ ಹಾಗೂ ಅವರು ಹಾಗೇ ಬದುಕುವಂತೆ ನಟಿಸುತ್ತಾರೆ. ವೇದಗಳು ಜಾತಿ ತಾರತಮ್ಯ, ವರ್ಣಬೇಧ, ಜನಾಂಗಬೇಧ ಸ್ತ್ರೀ ಪುರುಷ ಬೇಧ ಹಾಗೂ ಜೀವವಿರೋಧಿ ಸಿದ್ಧಾಂತಗಳನ್ನು ಮತ್ತು ಕರ್ಮಕಾಂಡಗಳನ್ನು ಹೇಳುತ್ತವೆ. ವೇದಗಳಲ್ಲಿ ಇಲ್ಲಿನ ಜನರು ಕಲ್ಪಿತ ಬ್ರಹ್ಮನ ಬೇರೆ ಬೇರೆ ಅಂಗಾಂಗಗಳಿಂದ ಹುಟ್ಟಿದವರು ಎಂದು ವಿಂಗಡಿಸುವ ಜನಾಂಗಬೇಧ ನೀತಿಯು ಪರಿಹಾಸ್ಯದಿಂದ ಕೂಡಿದೆ. ವೈದಿಕರು ಬುದ್ದಪೂರ್ವದಲ್ಲಿ ವೇದಗಳನ್ನು ಅನುಸರಿಸುತ್ತಾ ಎತ್ತು, ಹಸು ಮುಂತಾದ ಪ್ರಾಣಿಗಳನ್ನು ಹೋಮ ಹವನಗಳ ಹೆಸರಿನಲ್ಲಿ ಬಲಿಕೊಟ್ಟು ಅವುಗಳ ಮಾಂಸವನ್ನು ಭಕ್ಷಿಸುತ್ತಿದ್ದರು. ಹೋಮಕ್ಕೆ ಹಸು ಬಲಿ ಕೊಡುವುದು ವೈದಿಕರ ಧರ್ಮಾಚರಣೆ ಮಾತ್ರವಲ್ಲದೆ ನೆಲಮೂಲಿಗರ ಕೃಷಿಯನ್ನು ನಾಶಗೊಳಿಸುವ ಹುನ್ನಾರವೂ ಹೌದು. ಆದ್ದರಿಂದ ವೈದಿಕ ಆರ್ಯರ ಋಷಿ ಸಂಸ್ಕೃತಿಯು ನೆಲಮೂಲದ ಕೃಷಿ ಸಂಸ್ಕೃತಿಯ ವಿರೋಧಿ. ಆದರೆ ಬೌದ್ದರ ಅಹಿಂಸಾ ಮಾರ್ಗಕ್ಕೆ ಹೆದರಿ ವೈದಿಕರು ಹಸುವಿನ ಮಾಂಸ ತಿನ್ನುವುದನ್ನು ನಿಲ್ಲಿಸಿದ್ದಾರೆ.

the vedas

ಇಡೀ ಭಾರತೀಯರು ಮಾತ್ರವಲ್ಲದೆ ಜಗತ್ತಿನ ಎಲ್ಲರು ವೇದಗಳನ್ನು ಪ್ರಾಚೀನ ಹಾಗೂ ಪವಿತ್ರ ಗ್ರಂಥಗಳೆಂದು ಪರಿಗಣಿಸಲು ವೈದಿಕರು ಒತ್ತಾಯಿಸುತ್ತಾರೆ. ಆದರೆ ವೇದಗಳು ಹುಸಿ ಎನ್ನುವುದನ್ನು ಭಾರತದ ಶೇಕಡ 90 ರಷ್ಟು ಜನ ನಂಬಿದ್ದಾರೆ. “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವ ನಾಣ್ನುಡಿಯು ನಮ್ಮ ಜನಪದರು ತಮ್ಮ ಅನನ್ಯ ಅನುಭವ ಪ್ರಮಾಣದಿಂದ ಹೇಳಿದ್ದಾರೆ.

ವೇದಗಳು ಯಾವ ಕಾಲದಲ್ಲೂ ಇಡೀ ಭಾರತೀಯರಿಗೆ ಪ್ರಾಚೀನವಾಗಲಿ, ಪವಿತ್ರವಾಗಲಿ, ಅಥವಾ ಪ್ರಮಾಣವಾಗಲಿ ಆಗಿರಲಿಲ್ಲ, ಮುಂದೆ ಆಗುವುದೂ ಇಲ್ಲ. ವೇದಗಳಲ್ಲಿನ ಪ್ರಾಣಿವಧೆಯನ್ನು ಹಾಗೂ ಇತರ ಜೀವವಿರೋಧಿ ಅಂಶಗಳನ್ನು ವಿರೋಧಿಸಿಯೇ ಜೈನ, ಬೌದ್ದ ಮತ್ತು ಇತರ ದರ್ಶನಗಳು ಈ ನೆಲದಲ್ಲಿ ಅರಳಿವೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಹುಟ್ಟಿದ ವಚನದರ್ಶನ ಕೂಡ ವೇದಭಂಜಕ ದರ್ಶನವಾಗಿ ಜನಪ್ರಿಯವಾಗಿದೆ. ಶರಣರು ವೇದಗಳಲ್ಲಿನ ಟೊಳ್ಳುತನವನ್ನು ಹಾಗೂ ಜೀವವಿರೋಧಿ ಅಂಶಗಳನ್ನು ಬಲವಾಗಿ ಮತ್ತು ನೇರವಾಗಿ ವಿರೋಧಿಸಿದ ಸುಮಾರು 500ಕ್ಕೂ ಹೆಚ್ಚು ವಚನಗಳು ಲಭ್ಯವಾಗಿವೆ. ಪರೋಕ್ಷವಾಗಿ ವೇದಸಂಬಂಧಿತ ವೈದಿಕ ಸಿದ್ಧಾಂತಗಳನ್ನು ಶರಣರು ವಿರೋಧಿಸಿದ ಅಸಂಖ್ಯಾತ ವಚನಗಳಿವೆ. ಹಾಗಾಗಿ ಲಿಂಗಾಯತ ಧರ್ಮವು ಒಂದು ಪರಿಪೂರ್ಣ ವೇದಭಂಜಕ ಅವೈದಿಕ ಧರ್ಮವಾಗಿ ಈ ನೆಲದಲ್ಲಿ ಮೈದಳೆದಿದೆ.

ಇದನ್ನೂ ಓದಿ ಸಾವರ್ಕರ್‌ ಹಿಂದುತ್ವವಾದಿ ಹಾಗೂ ಹಿಂದೂ ವಿರೋಧಿ

ವೇದಗಳು ಸುಳ್ಳು ಎಂದು ಹೇಳಲು ಪಂಡಿತರೆ ಆಗಬೇಕೆಂದೇನಿಲ್ಲ. ಜನಸಾಮಾನ್ಯರೆ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವ ನಾಣ್ನುಡಿಯನ್ನು ಕಟ್ಟಿರುವುದು ಇದಕ್ಕೆ ಸಾಕ್ಷಿ. ವಚನ ಚಳವಳಿ ವೇದಭಂಜಕ ಚಳುವಳಿ ಎಂದು ಜನಪದರೂ ಸಹ ಹೇಳಿದ್ದಾರೆ. ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು, ದೇಶದೇಶಕ್ಕೆಲ್ಲ ಹೊಸಮಾತು ಕೇಳಿದವು , ಮಾಸಿದವು ವೇದ ಹುಸಿಯೆಂದು ಎನ್ನುವ ಜನಪದ ತ್ರಿಪದಿಯು ಲಿಂಗಾಯತವೆಂಬ ಹೊಸ ಧರ್ಮ ಹುಟ್ಟಿ ಅದರಿಂದ ದೇಶಕ್ಕೆಲ್ಲ ಹೊಸ ಮಾತು ಕೇಳಿದವು ಎನ್ನುತ್ತದಲ್ಲದೆ ಆ ಹೊಸ ಧರ್ಮದ ತತ್ವಗಳು ವೇದವು ಸುಳ್ಳೆಂದು ಸ್ಪಷ್ಟವಾಗಿ ಸಾರುತ್ತದೆ. ವೇದಗಳು ಸುಳ್ಳು ಮತ್ತು ಅವುಗಳ ಸುಳ್ಳುತನವನ್ನು ವಚನ ಚಳುವಳಿ ಸಾಬೀತುಪಡಿಸಿದೆ ಎಂದು ಹೇಳುವ ಅನೇಕ ಜನಪದ ತ್ರಿಪದಿಗಳು ನಮಗೆ ಸಿಗುತ್ತವೆ. “ಸಾದು ಸಾದೆಲೆ ಬಸವˌ ಓದು ಕಲಿಯಿತು ಜನವುˌ ಹೋದಹೋದಲ್ಲೆಲ್ಲ ಹೊಸಮಾತು ಕೇಳಿದವು. ಮೇದಿನಿಗೆ ಬಂತು ಹೊಸಬೆಳಕು” ಎನ್ನುವ ಜನಪದ ತ್ರಿಪದಿಯಂತೂ ವಚನ ಚಳುವಳಿಯು ಒಂದು ಸಾಕ್ಷರತಾ ಆಂದೋಲನವಾಗಿದ್ದು ಅದು ಅಕ್ಷರವಂಚಿತ ಸಮುದಾಯಕ್ಕೆ ಅಕ್ಷರವನ್ನು ಕಲಿಸಿದ ಕಾರಣ ಭೂಮಿಗೆ ಹೊಸ ಬೆಳಕು ಬಂತು ಎಂದು ಸೂಚ್ಯವಾಗಿ ಹೇಳಿದೆ.

ಇದನ್ನೂ ಓದಿ ಮುಡಾ ಪ್ರಕರಣದಲ್ಲಿದ್ದ ಆಸಕ್ತಿ ಪೋಕ್ಸೊ ಪ್ರಕರಣದಲ್ಲಿ ಯಾಕಿಲ್ಲ? ; ನ್ಯಾಯಾಲಯಗಳ ನಡೆ ಅನುಮಾನಕ್ಕೆ ಎಡೆ

ಮೇಲಿನ ತ್ರಿಪದಿಯಲ್ಲಿನ “ಮೇದಿನಿಗೆ ಬಂತು ಹೊಸ ಬೆಳಕು” ಎನ್ನುವ ಸಾಲು ಬಸವಣ್ಣನವರು ಲಿಂಗಾಯತವೆಂಬ ಹೊಸ ಧರ್ಮವನ್ನು ಸ್ಥಾಪಿಸಿರುವ ಕುರಿತು ಮಾತನಾಡುತ್ತದೆ. ಹೀಗಾಗಿ ನಮ್ಮ ಜನಪದ ಸಾಹಿತ್ಯದ ಅನುಭಾವಿ ನೆಲೆಯ ಮಾತುಗಳನ್ನು ರಷ್ಯಾದ ಸ್ಲಾವಿಕ್ ಆರ್ಯನ್ನರ ವೇದಗಳನ್ನು ಹಾಗೂ ಪಾರ್ಸಿಗಳ ಅವೆಸ್ತಾದ ಅನೇಕ ಸಂಗತಿಗಳನ್ನು ಕ್ರೂಢೀಕರಿಸಿ ವೈದಿಕ ಆರ್ಯರು ವೇದಗಳನ್ನು ಕೃತಕವಾಗಿ ರಚಿಸಿದರು ಎನ್ನುವುದು ಇದರಿಂದ ತಿಳಿಯುತ್ತದೆ. ವೇದಗಳನ್ನು ನಮ್ಮ ಜನಪದರು ಯಾವತ್ತೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆ ಕಾರಣದಿಂದಲೇ ಅವರು ವೇದಗಳು ಸುಳ್ಳು ಎಂದು ತಮ್ಮ ದೈನಂದಿನ ಆಡು ಮಾತುಗಳಲ್ಲಿ ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ವೇದಗಳನ್ನೇ ನಂಬಿಕೊಂಡು ಬದುಕುತ್ತಿರುವ ಆರ್ಯರ ವೇದಗಳ ನೆಲೆ ಯಾವುದು? ಅವುಗಳ ಮೂಲ ಯಾವುದು? ಕಾಲಮಾನ ಯಾವುದು? ಯಾರು ಬರೆದರು? ಯಾವಾಗ ಬರೆದರು? ಮುಂತಾದ ಪ್ರಶ್ನೆಗಳು ಕೇವಲ ಪ್ರಶ್ನೆಯಾಗಿ ಉಳಿಯಬಲ್ಲವೇ ಹೊರತು ವಿತಂಡವಾದ ರಹಿತ ಸೂಕ್ತ ಮತ್ತು ತಾರ್ಕಿಕ ಉತ್ತರ ದೊರೆಯಲಾರದು. ಹಾಗಾಗಿ ವೇದಗಳು ಹಸಿ ಸುಳ್ಳು ಮತ್ತು ಗಾದೆಗಳು ಸುಳ್ಳಲ್ಲ ಎನ್ನುವ ನಮ್ಮ ಜನಪದರ ಮಾತು ಸೂರ್ಯ-ಚಂದ್ರರಷ್ಟೇ ಸತ್ಯವಾಗಿದೆ

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

2 COMMENTS

  1. But no person in the world will think of destroying farming as it feeds all humans including the so called destroyer. Moreover Vaidiks used to rear cows in their own. During homa and Pooja if it involved animal sacrifice they would sacrifice from animal from their own shed. How it amounts to destroying farming.
    If one wants to see everything associated to any particular community with yellow eyes then this type of argument arises.
    Windows is not even 50 years old but still every year new version is released. Same with mobile phones. It applies to any religious texts. It captures the perspective of that time period. Vaidiks themselves are not obsessed with Vedas this much.
    Hindu as a religion has well evolved by embracing many beliefs. Much broader than any other faith. But as a society we have not evolved. We need an equal and equitable society. I hope that can be achieved even by not showing anyone’s belief in bad light.
    Babasaheb also supported the same and hence provided for right of freedom to follow one faith and belief in dignity. But in social life we should strictly deny hierarchical structure.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X