ಕಾಂಗ್ರೆಸ್ ಗೆದ್ದರೆ ಹುಡ್ಡಾ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಪುನಃ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಮೆರೆಯಲಿದೆ ಎಂಬ ಬಿಜೆಪಿ ಪ್ರಚಾರ ಜಾಟ್ ಜನಾಂಗದ ವಿನಾ ಉಳಿದ ಜಾತಿಗಳನ್ನು ಕಾಂಗ್ರೆಸ್ ಪಕ್ಷದಿಂದ ದೂರ ಮಾಡಿದೆ. ಚುನಾವಣಾ ಪ್ರಚಾರದಿಂದ ದೂರ ಉಳಿದಿರುವ ದಲಿತ ನಾಯಕಿ ಕುಮಾರಿ ಸೆಲ್ಜಾ ಇನ್ನೇನು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿಗಳನ್ನು ಹುಟ್ಟುಹಾಕಿತು
ಎಲ್ಲ ಚುನಾವಣಾ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ ಸತತ ಮೂರನೆಯ ಸಲ ವಿಧಾನಸಭಾ ಚುನಾವಣೆಗಳನ್ನು ಗೆದ್ದಿರುವ ಬಿಜೆಪಿ ಸರ್ಕಾರ ರಚಿಸುವ ಹಾದಿಯಲ್ಲಿದೆ. ದೊಡ್ಡ ಗೆಲುವು ಸಾಧಿಸಲಿದೆ ಎಂಬ ರಾಜಕೀಯ ನಿರೀಕ್ಷಕರ ಲೆಕ್ಕಾಚಾರವನ್ನು ಕಾಂಗ್ರೆಸ್ ಸುಳ್ಳಾಗಿಸಿದೆ.
ವಿಶೇಷವೆಂದರೆ 2019ರಲ್ಲಿ 40 ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಜನನಾಯಕ ಜನತಾ ಪಾರ್ಟಿಯ ಬೆಂಬಲ ಪಡೆದು ಸರ್ಕಾರ ರಚಿಸಿತ್ತು. ಈ ಸಲ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ.
ಬಿಜೆಪಿ ಹರಿಯಾಣದ ಚುನಾವಣೆಗಳನ್ನು ಮೊದಲ ಸಲ ಗೆದ್ದದ್ದು 2014ರಲ್ಲಿ. ನಾಲ್ಕು ಸ್ಥಾನಗಳಿಂದ 47 ಸ್ಥಾನಗಳಿಗೆ ಜಿಗಿದಿತ್ತು. ಮನೋಹರಲಾಲ್ ಖಟ್ಟರ್ ಎಂಬ ಪಂಜಾಬಿ ಖತ್ರಿ ಜನಾಂಗದ ಆರೆಸ್ಸೆಸ್ ಪ್ರಚಾರಕರೊಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿತ್ತು. ಬಲಿಷ್ಠ ಜಾಟ್ ಜನಾಂಗವನ್ನು ಪಕ್ಕಕ್ಕೆ ಸರಿಸಿದ್ದರು. ಆ ಹೊತ್ತಿಗೆ ಜಾಟ್ ಜನಾಂಗದ ಭೂಪಿಂದರ್ ಸಿಂಗ್ ಹುಡ್ಡಾ ಸತತ ಎರಡು ಸಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಜಾತಿಗಣಿತವನ್ನು ನೆಚ್ಚಿದ್ದ ಅಮಿತ್ ಶಾ ಜಾಟರ ಗೊಡವೆ ಬಿಟ್ಟು ಶೇ.40ರಷ್ಟಿರುವ ಹಿಂದುಳಿದ ವರ್ಗಗಳ ಜಾತಿಗಳನ್ನು ಬಿಜೆಪಿ ಪರವಾಗಿ ಒಗ್ಗೂಡಿಸಿದ್ದರು. ಪರಿಶಿಷ್ಟರಲ್ಲಿ ಮಾಯಾವತಿಯವರ ಜಾಟವ ಒಳಪಂಗಡವನ್ನು ಕೈ ಬಿಟ್ಟು ಉಳಿದ ಜನಾಂಗಗಳನ್ನು ತಮ್ಮ ಪಕ್ಷದ ಪರ ಹೆಣೆದಿದ್ದರು.
ಒಂಬತ್ತೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಮನೋಹರಲಾಲ್ ಖಟ್ಟರ್. ಅವರು ಗಳಿಸಿದ್ದ ಆಡಳಿತವಿರೋಧಿ ಭಾವನೆಯನ್ನು ತೊಡೆದು ಹಾಕುವ ಕ್ರಮವಾಗಿ ಆರು ತಿಂಗಳ ಹಿಂದೆ ಖಟ್ಟರ್ ಅವರನ್ನು ಕೆಳಗಿಳಿಸಿ ನಾಯಬ್ ಸಿಂಗ್ ಸೈನಿ ಎಂಬ ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕರನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸಲಾಯಿತು.

ಮೋದಿ 2014ರಲ್ಲಿ ಪ್ರಧಾನಮಂತ್ರಿಯಾದಾಗ, ಗುಜರಾತಿನ ಮುಖ್ಯಮಂತ್ರಿ ಹುದ್ದೆಗೆ ಆನಂದಿ ಬೆನ್ ಪಟೇಲ್ ಅವರನ್ನು ತರಲಾಗಿತ್ತು. ಆನಂದಿ ಬೆನ್ ಗುಜರಾತಿನ ಬಲಿಷ್ಠ ಪಾಟೀದಾರ್ ಜನಾಂಗದ ಮೀಸಲಾತಿ ಚಳವಳಿಯನ್ನು ಎದುರಿಸಬೇಕಾಯಿತು. 2016ರ ವಿಧಾನಸಭೆ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಮುಖ್ಯಮಂತ್ರಿ ಆನಂದಿ ಅವರನ್ನು ಕೆಳಗಿಳಿಸಿ ವಿಜಯ ರೂಪಾಣಿ ಅವರನ್ನು ಕುಳ್ಳಿರಿಸಲಾಗಿತ್ತು. 2017ರ ಚುನಾವಣೆಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ರೂಪಾಣಿ ಅವರನ್ನು ಅವಧಿಗೆ ಮುನ್ನವೇ ಕೆಳಗಿಳಿಸಿ ಪ್ರಭಾವಿ ಪಾಟೀದಾರ ಸಮುದಾಯಕ್ಕೆ ಸೇರಿದ ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಯಿತು. ಅಚ್ಚರಿಯ ನೇಮಕವಿದು. ಪಟೇಲ್ ಮೊದಲ ಸಲ ಶಾಸಕರಾಗಿದ್ದವರು ಒಮ್ಮೆಗೇ ಮುಖ್ಯಮಂತ್ರಿಯಾದರು. ಪಟೇಲ್ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯ ಆಸುಪಾಸಿನಲ್ಲಿ ಕೆಳಗಿಳಿಸಿದರೆ ಆಶ್ಚರ್ಯಪಡಬೇಕಿಲ್ಲ.
ಗುಜರಾತಿನ ಇದೇ ಸೂತ್ರವನ್ನು ಹರಿಯಾಣದಲ್ಲೂ ಅಳವಡಿಸಿದೆ ಬಿಜೆಪಿ. ವ್ಯತ್ಯಾಸವೆಂದರೆ ಖಟ್ಟರ್ ಅವರನ್ನು ಎರಡನೆಯ ಅವಧಿಗೂ ಮುಂದುವರೆಸಿ ಮೂರನೆಯ ಅವಧಿಗೆ ಚುನಾವಣೆಗಳು ಆರು ತಿಂಗಳಿದ್ದಾಗ ಹೊಸ ಮುಖ ಸೈನಿ ಅವರನ್ನು ತರಲಾಯಿತು.
ಭೂಪಿಂದರ್ ಸಿಂಗ್ ಹುಡ್ಡಾ 2005ರಲ್ಲಿ ಮುಖ್ಯಮಂತ್ರಿಯಾಗಿದ್ದವರು, 2009ರಲ್ಲಿ ಮುಖ್ಯಮಂತ್ರಿಯಾದವರು, ಆನಂತರ ಹರಿಯಾಣ ವಿಧಾನಸಭೆಯ ಪ್ರತಿಪಕ್ಷಗಳ ನಾಯಕರಾಗಿರುವವರು. ಈ ಸಲ ಕಾಂಗ್ರೆಸ್ ಗೆದ್ದರೆ ಅವರೇ ಮುಖ್ಯಮಂತ್ರಿ ಎಂಬುದು ಅನಧಿಕೃತ ತಿಳಿವಳಿಕೆಯಾಗಿತ್ತು. ಈ ಅಂಶವನ್ನು ಪಕ್ಷದ ಹೈಕಮಾಂಡ್ ಒಪ್ಪಿದಂತಿತ್ತು. ಜಾಟ್ ಜನಾಂಗವೇನೋ ಭೂಪಿಂದರ್ ಹುಡ್ಡಾ ಹಿಂದೆ ನಿಂತಿತು. ಆದರೆ ಆ ಬೆಂಬಲವೂ ಕಾಂಗ್ರೆಸ್ಸಿಗೆ ಇಡಿಯಾಗಿ ದಕ್ಕಲಿಲ್ಲ. ಫಲಿತಾಂಶಗಳ ವಿಶ್ಲೇಷಣೆಯಿಂದ ಈ ಅಂಶ ನಿಚ್ಚಳಗೊಂಡಿದೆ.
ಹರಿಯಾಣ ಮತ್ತೊಮ್ಮೆ ಬಲಿಷ್ಠ ಜಾತಿಯ ಜಾಟ್ ಆಡಳಿತಕ್ಕೆ ಒಳಪಡುತ್ತದೆಂಬ ಸಂದೇಶ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗೆ ರವಾನೆ ಆಗಿತ್ತು. ಬಹುತೇಕ ಪರಿಶಿಷ್ಟರು (ಮಾಯವತೀ ಅವರ ಜಾಟವ್ ಜನಾಂಗದ ವಿನಾ ಉಳಿದ ದಲಿತರು) ಮತ್ತು ಹಿಂದುಳಿದ ವರ್ಗಗಳ ಜನರಿಗೆ ಜಾಟ್ ದಬ್ಬಾಳಿಕೆ ಚಿರಪರಿಚಿತ. ಈ ಜನಾಂಗಗಳು ಜಾಟ್ ಧೃವೀಕರಣದ ವಿರುದ್ಧ ಪ್ರತಿ ಧೃವೀಕರಣಗೊಂಡರು. ಜಾಟ್, ಮುಸ್ಲಿಮ್ ಮತ್ತು ಪರಿಶಿಷ್ಟರ ಬೆಂಬಲವನ್ನು ಇಡಿಯಾಗಿ ನೆಚ್ಚಿತ್ತು ರಾಹುಲ್ ಅವರ ಕಾಂಗ್ರೆಸ್ ಪಕ್ಷ. ಜೊತೆಗೆ ಅತ್ಯಾಕರ್ಷಕ ಗ್ಯಾರಂಟಿಗಳು ತಮ್ಮನ್ನು ಗೆಲುವಿನ ದಡ ಮುಟ್ಟಿಸುತ್ತವೆಂದು ನೆಚ್ಚಿತ್ತು. ಸದ್ದಿಲ್ಲದ ನಡೆದಿದ್ದ ಪ್ರತಿಧೃವೀಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಕಾಂಗ್ರೆಸ್ ಗೆದ್ದರೆ ಹುಡ್ಡಾ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಪುನಃ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಮೆರೆಯಲಿದೆ ಎಂಬ ಬಿಜೆಪಿ ಪ್ರಚಾರ ಜಾಟ್ ಜನಾಂಗದ ವಿನಾ ಉಳಿದ ಜಾತಿಗಳನ್ನು ಕಾಂಗ್ರೆಸ್ ಪಕ್ಷದಿಂದ ದೂರ ಮಾಡಿದೆ. ಚುನಾವಣಾ ಪ್ರಚಾರದಿಂದ ದೂರ ಉಳಿದಿರುವ ದಲಿತ ನಾಯಕಿ ಕುಮಾರಿ ಸೆಲ್ಜಾ ಇನ್ನೇನು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿಗಳನ್ನು ಹುಟ್ಟಿ ಹಾಕಿತು.
ಹರಿಯಾಣ ಕಾಂಗ್ರೆಸ್ಸಿನ ಹಿರಿಯ ದಲಿತ ನಾಯಕಿ ಕುಮಾರಿ ಸೆಲ್ಜಾ. ಮುಖ್ಯಮಂತ್ರಿ ಹುದ್ದೆಗೆ ದಾವೇದಾರರು. ಹುಡ್ಡಾ ಅವರ ಕಳೆದ ಎರಡು ಅವಧಿಯ ಆಡಳಿತದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗಿದೆಯೆಂಬ ಅಸಮಾಧಾನ ಅವರದು. ಈ ಸಲ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಹುದ್ದೆ ತಮ್ಮದಾಗಬೇಕು ಎಂದು ವಾದಿಸಿದ್ದವರು. ಹರಿಯಾಣ ಕಾಂಗ್ರೆಸ್ಸಿನ ಆಗುಹೋಗುಗಳಲ್ಲಿ ಹುಡ್ಡಾ ಅವರದೇ ಅಂತಿಮ ನಿರ್ಧಾರ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೆಲ್ಜಾ ಅದನ್ನು ವಿರೋಧಿಸುತ್ತ ಬಂದಿದ್ದರು. ಇದೇ ಕಾರಣಕ್ಕಾಗಿ ಬನ್ಸೀಲಾಲ್ ಸೊಸೆಯಾಗಿದ್ದು, ಕಾಂಗ್ರೆಸ್ಸಿನ ಪ್ರಮುಖ ನಾಯಕಿಯೆನಿಸಿದ್ದ ಕಿರಣ್ ಚೌಧರಿ ಇತ್ತೀಚೆಗಷ್ಟೇ ಪಕ್ಷ ತೊರೆದಿದ್ದರು.
ವಿಧಾನಸಭಾ ಚುನಾವಣೆಗಳ ಟಿಕೆಟ್ ಹಂಚಿಕೆಯಲ್ಲಿ ಕೂಡ ಹುಡ್ಡಾ ಪರಿವಾರ ಮೇಲುಗೈ ಹೊಂದಿತ್ತು. 89 ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ 70 ಹುರಿಯಾಳುಗಳನ್ನು ಭೂಪಿಂದರ್ ಸಿಂಗ್ ಹುಡ್ಡಾ ಮತ್ತು ಅವರ ಮಗ ದೀಪಿಂದರ್ ಹುಡ್ಡಾ ಆರಿಸಿದ್ದರೆಂದು ಸೆಲ್ಜಾ ದೂರು. ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸಲಾಯಿತು ಎಂದು ಅವರು ಎರಡು ವಾರಗಳ ಕಾಲ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ರಾಹುಲ್ ಗಾಂಧೀಯವರು ಹುಡ್ಡಾ ಮತ್ತು ಸೆಲ್ಜಾ ಅವರನ್ನು ಒಂದು ಮಾಡಲು ಪ್ರಯತ್ನಿಸಿದರು. ಆ ಹೊತ್ತಿಗೆಗಾಗಲೇ ತಡವಾಗಿ ಹೋಗಿತ್ತು. ಬಹಿರಂಗ ಸಭೆಯೊಂದರಲ್ಲಿ ಹುಡ್ಡಾ ಮತ್ತು ಸೆಲ್ಜಾ ಕೈ ಮಿಲಾಯಿಸುವಂತೆ ಮಾಡಿದರು. ಆದರೆ ಮನಸ್ಸುಗಳನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಹರಿಯಾಣ ಕಾಂಗ್ರೆಸ್ಸಿನ ಒಳಜಗಳ ಗುಂಪುಗಾರಿಕೆ ಹುಡ್ಡಾ- ಸೆಲ್ಜಾಗೆ ಸೀಮಿತವಾಗಿಲ್ಲ.

ಜನನಾಯಕ ಜನತಾ ಪಾರ್ಟಿ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ ಚಂದ್ರಶೇಖರ ಆಜಾದ್, ರಾವಣ ಆಜಾದ್ ಸಮಾಜ್ ಪಾರ್ಟಿ ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿಯ ಜೊತೆ ಚುನಾವಣಾ ಮೈತ್ರಿಗಳನ್ನು ಮಾಡಿಕೊಂಡವು. ಈ ಮೈತ್ರಿಗಳ ಹಿಂದೆ ಬಿಜೆಪಿಯ ಕಾಣದ ಕೈಗಳಿವೆ ಎನ್ನಲಾಗಿದೆ. ಅದೇನೇ ಇದ್ದರೂ, ಈ ಮೈತ್ರಿಗಳ ಪರಿಣಾಮವಾಗಿ ದಲಿತ ಮತಗಳು ಕಾಂಗ್ರೆಸ್ ಗೆ ಇಡಿಯಾಗಿ ದಕ್ಕದೆ ಹೋದವು. ಆಮ್ ಆದ್ಮಿ ಪಾರ್ಟಿಯ ಜೊತೆಗೆ ಚುನಾವಣಾ ಮೈತ್ರಿಯನ್ನು ಕಾಂಗ್ರೆಸ್ ವರಿಷ್ಠರು ಬಯಸಿದ್ದರು. ಆದರೆ ಭೂಪಿಂದರ್ ಸಿಂಗ್ ಹುಡ್ಡಾ ಅವರ ಆಗ್ರಹದ ಮೇರೆಗೆ ಈ ಮೈತ್ರಿ ಕೈಗೂಡಲಿಲ್ಲ. ಹಲವಾರು ಪಕ್ಷಗಳ ಜೊತೆಗೆ ನೂರಾರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ ವಿರೋಧಿ ಮತಗಳು ಹರಿದು ಹಂಚಿ ಹೋದವು. ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿವೆ.
ಬಂಡಾಯ ಅಭ್ಯರ್ಥಿಗಳ ಮನ ಒಲಿಸಿ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುವಲ್ಲಿಯೂ ಕಾಂಗ್ರೆಸ್ ನಾಯಕತ್ವ ವಿಫಲವಾಯಿತು. ಈ ವೈಫಲ್ಯವು ಫಲಿತಾಂಶಗಳಲ್ಲಿ ಪ್ರತಿಫಲಿಸಿದೆ.
ಹತ್ತು ವರ್ಷಗಳಿಂದ ಅಧಿಕಾರದಿಂದ ದೂರವಿರುವ ಕಾಂಗ್ರೆಸ್ ಪಕ್ಷದ ಸಂಘಟನೆ ಹರಿಯಾಣದಲ್ಲಿ ಶಿಥಿಲವಾಗಿದೆ. ಬಿಜೆಪಿಯ ಸಂಘಟನೆ ಮತ್ತು ಸಮೃದ್ಧ ಸಂಪನ್ಮೂಲಗಳನ್ನು ಸರಿಗಟ್ಟಲಾರದಾಯಿತು. ಬಿಜೆಪಿ 150 ರ್ಯಾಲಿಗಳನ್ನು ನಡೆಸಿದರೆ ಕಾಂಗ್ರೆಸ್ಸಿನ ಬಹಿರಂಗ ಸಭೆಗಳು 70ರ ಆಸುಪಾಸಿಗೆ ಸೀಮಿತಗೊಂಡವು. ಯಾದವ ಮತಗಳನ್ನು ಸೆಳೆಯಲು ಬಿಹಾರದ ಮಿತ್ರಪಕ್ಷ ಆರ್.ಜೆ.ಡಿ.ಯ ಮುಖಂಡ ತೇಜಸ್ವಿ ಯಾದವ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಅವರನ್ನು ಕರೆತಂದು ಜಂಟಿ ಪ್ರಚಾರ ನಡೆಸುವ ಅಂಶವನ್ನು ಕಾಂಗ್ರೆಸ್ ನಾಯಕತ್ವ ಗಣನೆಗೇ ತೆಗೆದುಕೊಳ್ಳಲಿಲ್ಲ.
ಇದನ್ನೂ ಓದಿ ಹರಿಯಾಣ | ರಾಜಕೀಯ ʼಕುಸ್ತಿಯಂಗಳʼದಲ್ಲಿ ಗೆದ್ದ ವಿನೇಶ್ ಫೋಗಟ್; ಕಾನೂನು ಹೋರಾಟದಲ್ಲೂ ಗೆಲ್ಲುವರೇ?
ಬಿಜೆಪಿಗೆ ಕುತ್ತಾಗಿ ಪರಿಣಮಿಸಿದ್ದ ಪೈಲ್ವಾನ್, ಜವಾನ್, ಕಿಸಾನ್ ಸಂಘರ್ಷಗಳನ್ನು ಬೇರು ಮಟ್ಟಕ್ಕೆ ಒಯ್ದು ಮುಟ್ಟಿಸುವಲ್ಲಿ, ಎಲ್ಲ ಜನರಿಗೆ ಸಂಬಂಧಿಸಿದ ಚುನಾವಣಾ ವಿಷಯಗಳನ್ನಾಗಿಸುವಲ್ಲಿ ಕಾಂಗ್ರೆಸ್ ಅಸಾಮರ್ಥ್ಯ ತೋರಿದೆ.
ಅಭ್ಯರ್ಥಿಗಳ ಆಯ್ಕೆ ಮತ್ತು ಜಾತಿಗಣಿತದ ಸೂಕ್ಷ್ಮ ರಾಜಕಾರಣದಲ್ಲಿ (ಮೈಕ್ರೋ ಮ್ಯಾನೇಜ್ಮೆಂಟ್) ಕಾಂಗ್ರೆಸ್ ಹಿಂದೆ ಬಿದ್ದಿತು. ಗೆಲುವನ್ನು ಸೋಲಾಗಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ಸಿನ ಪ್ರವೃತ್ತಿಯೇ ಆಗಿ ಹೋಗಿದೆ. ಹರಿಯಾಣವೂ ಈ ಮಾತಿಗೆ ಹೊರತಾಗಿಲ್ಲ. ಹಲವಾರು ಕ್ಷೇತ್ರಗಳನ್ನು ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದೆ. ಗೆಲುವಿನ ಹೊಸ್ತಿಲಿನಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ.
ಗಂಟಲು ಏರಿಸಿ ಮಾತಾಡುವವರ ಗದ್ದಲದ ನಡುವೆ ದನಿ ಕಳೆದುಕೊಂಡವರ ಮನದ ಮಾತುಗಳನ್ನು ಕೇಳುವವರೇ ದಿಕ್ಕಿರುವುದಿಲ್ಲ. ಚುನಾವಣೆಗಳ ವಿಷಯದಲ್ಲಂತೂ ಈ ಮಾತು ದೊಡ್ಡ ಸತ್ಯ. ಈ ದನಿ ಕಳೆದುಕೊಂಡಿದ್ದವರನ್ನೇ ದಿವಂಗತ ದೇವರಾಜ ಅರಸು ಅದೃಶ್ಯ ಮತದಾರರು ಎಂದು ಕರೆದದ್ದು. ಅವರಿಗೆ ದನಿ ನೀಡುವ ಬಹು ದೊಡ್ಡ ಪ್ರಯತ್ನವನ್ನು ಅರಸು ಮಾಡಿದರು ಕೂಡ.
ಇದನ್ನೂ ಓದಿ ಹರಿಯಾಣ ಚುನಾವಣೆ | ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು: ಅರವಿಂದ್ ಕೇಜ್ರಿವಾಲ್
ಇದನ್ನೂ ಓದಿ ಹರಿಯಾಣ | ಎಕ್ಸಿಟ್ ಪೋಲ್‌ನಲ್ಲಿ ಗೆದ್ದಿದ್ದ ಕಾಂಗ್ರೆಸ್, ಮುಗ್ಗರಿಸಿದ್ದೇಕೆ?
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಕಾಂಗ್ರೆಸ್ಸಿನ ಭಜನ್ ಲಾಲ್ ಆಡಳಿತದ ನಂತರ ಕಾಂಗ್ರೆಸ್ ಪಕ್ಷ ಅತ್ತ ಹೊರಳಿ ಕೂಡ ನೋಡಲಿಲ್ಲ. ಸಣ್ಣ ಸಣ್ಣ ಅಸಂಖ್ಯ ಹಿಂದುಳಿದ ಜಾತಿಗಳನ್ನು ಹತ್ತಿರ ಕರೆದುಕೊಳ್ಳುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಬಿಜೆಪಿಯನ್ನು ಸೋಲಿಸಲು ಅದರ ವಿರುದ್ಧ ಆಡಳಿತ ವಿರೋಧಿ ಭಾವನೆಯೊಂದೇ ಸಾಲದು ಎಂಬುದನ್ನು ಈಗಲಾದರೂ ಅರಿತುಕೊಳ್ಳಬೇಕಿದೆ.
ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭೆ ಚುನಾವಣೆಗಳು ಬಾಗಿಲು ಬಡಿದಿರುವ ಈ ಹೊತ್ತಿನಲ್ಲಿ ಬಿಜೆಪಿ ಹರಿಯಾಣದಲ್ಲಿ ಸತತ ಮೂರನೆಯ ಸಲ ಗೆದ್ದಿದೆ. ಹರಿಯಾಣದ ಈ ಫಲಿತಾಂಶ ಮಹಾರಾಷ್ಟ್ರ- ಝಾರ್ಖಂಡ್ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಬಹಳ ಕಡಿಮೆ. ಆದರೆ ಕಾಂಗ್ರೆಸ್ಸಿನ ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸುವುದು ನಿಶ್ಚಿತ. ಹರಿಯಾಣದಲ್ಲಿ ಗೆದ್ದಿದ್ದರೆ ಮಹಾರಾಷ್ಟ್ರ- ಝಾರ್ಖಂಡ್ ಚುನಾವಣೆಗಳಲ್ಲಿ ಮಿತ್ರಪಕ್ಷಗಳೊಂದಿಗೆ ಹೆಚ್ಚಿನ ಸೀಟುಗಳಿಗಾಗಿ ಚೌಕಾಶಿ ಮಾಡಬಹುದಿತ್ತು. ಅಂತಹ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಚುನಾವಣೆಗಳ ಸೂಕ್ಷ್ಮ ನಿರ್ವಹಣೆಯಲ್ಲಿ ಕಾಂಗ್ರೆಸ್ ಇನ್ನೂ ಪಳಗಬೇಕಿದೆ. ಸಾಧನ ಸಂಪನ್ಮೂಲಗಳ ಕೊರತೆ ಮತ್ತು ತನಿಖಾ ಏಜೆನ್ಸಿಗಳ ಬೆಂಬಲ ಇಲ್ಲದೆಯೂ ಬಿಜೆಪಿಯನ್ನು ಎದುರಿಸುವ ತಾಖತ್ತನ್ನು ಕೈಗೂಡಿಸಿಕೊಳ್ಳಬೇಕಿದೆ.