ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಒಳಗೊಂಡ ‘ಇಂಡಿಯಾ’ ಮೈತ್ರಿಕೂಟ ಗೆಲುವು ಸಾಧಿಸಿದೆ. ಕೇಂದ್ರ ಸರ್ಕಾರದ ಧೋರಣೆಯಿಂದ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ‘ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚಿಸಿದರೂ, ಕಣಿವೆ ರಾಜ್ಯವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಪಿಮುಷ್ಠಿಯಲ್ಲಿ ಸಿಕ್ಕಿಕೊಂಡಿದೆ. ಹೀಗಾಗಿ, ಮುಂದಿನ ಆಡಳಿತವು ವಿಭಿನ್ನವಾಗಿರಲಿದೆ. ರಾಜ್ಯ ಸರ್ಕಾರದ ಹಕ್ಕು, ಅಧಿಕಾರಗಳಿಗೆ ಲೆಫ್ಟಿನೆಂಟ್ ಗವರ್ನರ್ ಮೂಲಕ ಬಿಜೆಪಿ ಕೊಕ್ಕೆ ಹಾಕಲಿದೆ.
2019ರ ಆಗಸ್ಟ್‌ನಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನವನ್ನು ಮೋದಿ ಸರ್ಕಾರ ಕಸಿದುಕೊಂಡಿತು. ಮಾತ್ರವಲ್ಲದೆ, ರಾಜ್ಯದ ಸ್ಥಾನವನ್ನೂ ಕಿತ್ತುಕೊಂಡು, ರಾಜ್ಯವನ್ನು ಇಬ್ಬಾಗ ಮಾಡಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತು. ಯಾವುದೇ ಪಕ್ಷ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚಿಸಿದರೂ, ತನ್ನ ಅಣತಿ, ಅಧಿಕಾರ ಇರುವಂತೆ ಮಾಡಿಕೊಂಡಿತು.
ಇದೇ ಅಧಿಕಾರದ ಮೇಲೆ, ಈಗ ಚುನಾವಣಾ ಫಲಿತಾಂಶ ಹೊರಬರುವುದಕ್ಕೂ ಮುನ್ನವೇ ಲೆಫ್ಟಿನೆಂಟ್ ಗವರ್ನರ್‌ಗೆ ವಿಶೇಷ ಅಧಿಕಾರ ನೀಡುವ ಮೂಲಕ, ಐವರು ಶಾಸಕರನ್ನು ಜಮ್ಮು-ಕಾಶ್ಮೀರ ವಿಧಾನಸಭೆಗೆ ನಾಮನಿರ್ದೇಶನ ಮಾಡಿಸಿದೆ. ಈ ಐವರೂ ಬಿಜೆಪಿಗರೇ ಆಗಿದ್ದಾರೆ. ಈ ಮೂಲಕ, ವಿಧಾನಸಭೆಯಲ್ಲಿ ತನ್ನ ಬಲಾಢ್ಯತೆಯನ್ನು ಬಿಜೆಪಿ ಉಳಿಸಿಕೊಳ್ಳಲಿದೆ.
ಇದೊಂದೇ ಅಲ್ಲದೆ, ಇಂತಹ ನಾನಾ ಪಿತೂರಿಗಳನ್ನು ಕೇಂದ್ರ ಸರ್ಕಾರ ಇನ್ನೂ ಮಾಡಲಿದೆ. ಈ ಪಿತೂರಿಗಳು ಮಾತ್ರವಲ್ಲದೆ, ಕೇಂದ್ರಾಡಳಿತ ಪ್ರದೇಶ ಎಂದ ಕೂಡಲೇ ರಾಜ್ಯ ಸರ್ಕಾರದ ಅಧಿಕಾರವೂ ಸೀಮಿತವಾಗಿರಲಿದೆ. ಪೊಲೀಸ್ ಸೇರಿದಂತೆ ಪ್ರಮುಖ ಆಡಳಿತ ಚುಕ್ಕಾಣಿ ಕೇಂದ್ರದ ಅಧೀನದಲ್ಲಿರಲಿದೆ.
ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನದ 239ನೇ ವಿಧಿಯಡಿ ರಾಷ್ಟ್ರಪತಿಗೆ ವಿಶೇಷ ಅಧಿಕಾರ ಇರಲಿದೆ. ಅವರು, ತಮ್ಮ ವಿವೇಚನೆಗೆ ತಕ್ಕಂತೆ ಅಲ್ಲಿನ ಆಡಳಿತವನ್ನು ಲೆಫ್ಟಿನೆಂಟ್ ಗವರ್ನರ್ (ಆಡಳಿತಾಧಿಕಾರಿ) ಮೂಲಕ ನಡೆಸುತ್ತಾರೆ. ಅಲ್ಲದೆ, 239ಎ ವಿಧಿಯಡಿ ಪುದುಚೇರಿಗೆ ಅನ್ವಯಿಸುವ ಎಲ್ಲ ನೀತಿ, ನಿರ್ಬಂಧ, ಹಕ್ಕುಗಳು ಜಮ್ಮು-ಕಾಶ್ಮೀರಕ್ಕು ಅನ್ವಯಿಸುತ್ತವೆ.
ಈಗ, ಜಮ್ಮು ಕಾಶ್ಮೀರದ ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೋಲಿಸ್ ಇಲಾಖೆ ಹಾಗೂ ಭ್ರಷ್ಟಾಚಾರ ನಿಗ್ರಹ ಘಟಕಗಳು ಲೆಫ್ಟಿನೆಂಟ್ ಗವರ್ನರ್ ಅಡಿಯಲ್ಲಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುತ್ತದೆ. ಪೊಲೀಸ್ ಇಲಾಖೆಯ ನಿಯಂತ್ರಣ, ಕಾರ್ಯನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.
ಈ ವರದಿ ಓದಿದ್ದೀರಾ?: ಮೋದಿ-ಆರ್‌ಎಸ್‌ಎಸ್ ಒಳಜಗಳ: ಕಗ್ಗಂಟಾಗಿಯೇ ಉಳಿದ ಬಿಜೆಪಿ ಅಧ್ಯಕ್ಷ ಹುದ್ದೆ!
ಅಲ್ಲದೆ, ಹಣಕಾಸು ಮಸೂದೆಯೂ ಸೇರಿದಂತೆ ಹಣಕಾಸು ಬಾಧ್ಯತೆಯ ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲು, ಅಂಗೀಕರಿಸಲು ಮೊದಲೇ ಆಡಳಿತಾಧಿಕಾರಿಯಿಂದ ಸಮ್ಮತಿ ಪಡೆಯಬೇಕು. ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಪಡೆಯದೆ, ಇಂತಹ ಮಸೂದೆಗಳನ್ನು ಮಂಡಿಸಲು ಸಾಧ್ಯವಾಗುವುದಿಲ್ಲ. ವಾಸ್ತವದಲ್ಲಿ, ಭಾಗಶಃ ಎಲ್ಲ ಮಸೂದೆಗಳು ಹಣಸಾಕು ಬಾಧ್ಯತೆಯನ್ನು ಹೊಂದಿರುತ್ತವೆಯಾದ್ದರಿಂದ, ಇದರ ಸಂಪೂರ್ಣ ನಿಯಂತ್ರಣ ಆಡಳಿತಾಧಿಕಾರಿ ಮೂಲಕ ಕೆಂದ್ರದ ಕೈಯಲ್ಲಿರುತ್ತದೆ.
ಅಡ್ವೊಕೇಟ್ ಜನರಲ್ ಮತ್ತು ಕಾನೂನು ಅಧಿಕಾರಿಗಳ ನೇಮಕ ಹಾಗೂ ಕಾನೂನು ಕ್ರಮಗಳು ಮತ್ತು ಮಂಜೂರಾತಿಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನೂ ಆಡಳಿತಾಧಿಕಾರಿ ತೆಗೆದುಕೊಳ್ಳುತ್ತಾರೆ. ಜೊತೆಗೆ, ಆಡಳಿತಾಧಿಕಾರಿಯು ತನ್ನ ವಿವೇಚನಾ ಅಧಿಕಾರದ ಮೇಲೆ ಯಾವುದೇ ವಿಷಯದ ಮೇಲೆ ನಿರ್ಧರವನ್ನು ತೆಗೆದುಕೊಳ್ಳಬಹುದು. ಅವರ ನಿರ್ಧಾರವೇ ಅಂತಿಮವಾಗಿರುತ್ತದೆ.
ಹೀಗಾಗಿ, ಜಮ್ಮು-ಕಾಶ್ಮೀರದ ಬಹುತೇಕ ಆಡಳಿತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈಯಲ್ಲಿರುತ್ತದೆ. ಒಮರ್ ಅಬ್ದುಲ್ಲಾ ಅವರು ಮುಂದಿನ ಮುಖ್ಯಮಂತ್ರಿ ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಘೋಷಿಸಿದ್ದಾರೆ. ಒಮರ್ ಅಬ್ಲುಲ್ಲಾ ಅವರು ಈ ಹಿಂದೆಯೇ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಸ್ವತಂತ್ರವಾಗಿ ಆಡಳಿತ ನಡೆಸಿದ್ದರು. ಆದರೆ, ಈಗ ಅವರು ಕೇಂದ್ರದ ಹಿಡಿತಕ್ಕೊಳಪಟ್ಟು ಆಡಳಿತ ನಡೆಸಬೇಕಾಗುತ್ತದೆ. ಅವರ ಹಿಂದಿನ ಆಡಳಿತಕ್ಕೂ, ಮುಂದಿನ ಆಡಳಿತಕ್ಕೂ ಭಾರೀ ವ್ಯತ್ಯಾಸವಿರಲಿದೆ. ಈ ನಡುವೆ, ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಮರು ಸ್ಥಾಪಿಸಬೇಕೆಂಬ ಒತ್ತಾಯವು ಹೆಚ್ಚಾಗುತ್ತಿದೆ. ಜಮ್ಮು-ಕಾಶ್ಮೀರ ವಿಭಿನ್ನ ಪರಿಸ್ಥಿತಿಯನ್ನು ಎದುರಿಸುತ್ತಿದೆ.