ಎಲ್ಲಾ ರಾಜ್ಯಗಳಂತೆ ಹರಿಯಾಣದಲ್ಲಿಯೂ ಸಹ ಹೂಡಾ ಕುಟುಂಬ ಮತ್ತು ದಲಿತ ಮುಂಖಡರಾದ ಕುಮಾರಿ ಸೆಲ್ಜಾ ನಡುವೆ ಕಳೆದ ಹತ್ತು ವರ್ಷಗಳಿಂದ ತೀವ್ರವಾದ ಭಿನ್ನಭಿಪ್ರಾಯಗಳಿದ್ದವು. ಇದರ ಅರಿವಿದ್ದೂ ಸಹ ಹೈಕಮಾಂಡ್ ಎರಡೂ ಬಣಗಳ ನಡುವೆ ಸಂಧಾನ ನಡೆಸಲಿಲ್ಲ, ಜಗಳವನ್ನು ಹಾಗೆಯೇ ಉಳಿಯಲು ಬಿಟ್ಟರು.
ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್‌ನ ಪರಿಸ್ಥಿತಿಯನ್ನು ʼಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲʼ ಎನ್ನುವುದಕ್ಕಿಂತಲೂ ʼಕೊಟ್ಟ ಕುದುರೆಯ ಏರದವರು ವೀರರು ಅಲ್ಲ, ಧೀರರು ಅಲ್ಲʼ ಎನ್ನುವ ವಚನದ ಸಾಲುಗಳು ಹೆಚ್ಚು ಸೂಕ್ತವಾಗುತ್ತದೆ. ಕಾಂಗ್ರೆಸ್ ಕಳೆದ ಎಪ್ಪತ್ತು ವರ್ಷಗಳಿಂದ ಚುನಾವಣಾ ರಾಜಕಾರಣದಲ್ಲಿದ್ದರೂ ಸಹ ಅದರ ಮೂಲ ಲೆಕ್ಕಾಚಾರಗಳಲ್ಲಿ ಮುಗ್ಗರಿಸುತ್ತಾರೆ ಎನ್ನುವ ವಾಸ್ತವ ಅಲ್ಲಿನ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸುತ್ತಿದೆ. 2014ರಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಎರಡನೇ ಬಾರಿ 2019ರಲ್ಲಿ ಚುನಾವಣೆಯಲ್ಲಿ ಎಲ್ಲವೂ ಸರಿಯಿರಲಿಲ್ಲ, ಆಗಲೂ ಎಡವಿದ ಕಾಂಗ್ರೆಸ್ ಈ ಬಾರಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದರೂ ಅದನ್ನು ಬಳಸಿಕೊಳ್ಳಲು ವಿಫಲಗೊಂಡಿದೆ.
ಈ ಬಾರಿ ಬಿಜೆಪಿ ಶೇ.39.9ರಷ್ಟು ಮತ ಪಡೆದುಕೊಂಡರೆ ಕಾಂಗ್ರೆಸ್ ಶೇ.39.3ರಷ್ಟು ಮತ ಪಡೆದುಕೊಂಡಿದೆ. ಕೇವಲ 0.6ರಷ್ಟು ಹೆಚ್ಚು ಮತ ಗಳಿಸಿದರೂ ಸಹ ಬಿಜೆಪಿ 11 ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ಗಿಂತ ಶೇ.30ರಷ್ಟು ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ʼಫಸ್ಟ್ ಪಾಸ್ಟ್ ದ ಪೋಸ್ಟ್ʼ ವ್ಯವಸ್ಥೆಯಲ್ಲಿ ಇದು ಸಾಮಾನ್ಯ ಸಂಗತಿಯಾಗಿದೆ. ಮಧ್ಯ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಶೇ.5ರಷ್ಟು ಹೆಚ್ಚು ಪ್ರಮಾಣದಲ್ಲಿ ಮತ ಪಡೆದಿದ್ದರೂ ಸಹ ಎರಡೂ ಪಕ್ಷಗಳು ತಲಾ 20 ಸ್ಥಾನ ಪಡೆದುಕೊಂಡಿದ್ದಾರೆ. ಉತ್ತರ ಮತ್ತು ದಕ್ಷಿಣ ಹರಿಯಾಣದಲ್ಲಿ ಬಿಜೆಪಿ ಪಕ್ಷವು ಕಾಂಗ್ರೆಸ್‌ಗಿಂತ ಶೇ.5ರಷ್ಟು ಹೆಚ್ಚು ಪ್ರಮಾಣದಲ್ಲಿ ಮತ ಪಡೆದಿದೆ ಮತ್ತು ಬಿಜೆಪಿ 28 ಹಾಗೂ ಕಾಂಗ್ರೆಸ್ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಭಾಗದ ಫಲಿತಾಂಶವು ಅಲ್ಲಿನ ರಾಜಕಾರಣದ ಚಿತ್ರಣವನ್ನು ಬದಲಿಸಿದೆ.
ದಕ್ಷಿಣ ಹರಿಯಾಣದ ಅಹಿರ್ವಾಲ್ ಭಾಗದಲ್ಲಿನ ಗುರಗಾಂವ್, ರೇವರಿ, ಫರಿದಾಬಾದ್ ಮುಂತಾದ ಲೋಕಸಭಾ ಕ್ಷೇತ್ರಗಳು ಹಾಗೂ ಭಿವಾನಿ, ಮಹೇಂದ್ರ ಘರ್ ಭಾಗದ ಒಟ್ಟು 28 ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಪರವಾಗಿ ಮತ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷವು ಜಾಟ್ ಜಾತಿಯಲ್ಲದ ಇತರೆ ಜಾತಿಗಳು ಮತ್ತು ವಲಸಿಗರು ವಾಸಿಸುವ ನಗರ-ಪಟ್ಟಣ ಪ್ರದೇಶದ ಈ ಭಾಗಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿಲ್ಲ ಎನ್ನುವ ಮಾತುಗಳು ನಿಜವಾಗಿದ್ದರೆ ಇದು ಬೇವಾಬ್ದಾರಿ ಎಂದು ಕರೆಯಬೇಕಾಗುತ್ತದೆ. ಇವರ ಚುನಾವಣಾ ತಂತ್ರಗಾರಿಕೆ ಕುರಿತು ಅನುಮಾನ ಶುರುವಾಗುತ್ತದೆ.

ಎಲ್ಲಾ ರಾಜ್ಯಗಳಂತೆ ಹರಿಯಾಣದಲ್ಲಿಯೂ ಸಹ ಹೂಡಾ ಕುಟುಂಬ ಮತ್ತು ದಲಿತ ಮುಂಖಡರಾದ ಕುಮಾರಿ ಸೆಲ್ಜಾ ನಡುವೆ ಕಳೆದ ಹತ್ತು ವರ್ಷಗಳಿಂದ ತೀವ್ರವಾದ ಭಿನ್ನಭಿಪ್ರಾಯಗಳಿದ್ದವು. ಇದರ ಅರಿವಿದ್ದೂ ಸಹ ಹೈಕಮಾಂಡ್ ಎರಡೂ ಬಣಗಳ ನಡುವೆ ಸಂಧಾನ ನಡೆಸಲಿಲ್ಲ, ಜಗಳವನ್ನು ಹಾಗೆಯೆ ಉಳಿಯಲು ಬಿಟ್ಟರು. ಹುಡ್ಡಾ ಬದಲಿಗೆ ಹೊಸ ಮುಖಂಡರನ್ನು ರೂಪಿಸಲಿಲ್ಲ. ಇಂತಹ ಆತ್ಮಹತ್ಯಾತ್ಮಕ ನಡೆಯು ಈ ಬಾರಿಯ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಹೂಡಾ ಕುಟುಂಬವು ಬ್ಲಾಕ್‌ಮೇಲ್ ತಂತ್ರದ ಮೂಲಕ ತಮ್ಮ ಜೊತೆಗೆ ಕಾಂಗ್ರೆಸ್ ಪಕ್ಷವನ್ನೂ ಸಹ ಮಕಾಡೆ ಮಲಗಿಸಿದರು.
ಫ್ಯೂಡಲ್ ಕುಟುಂಬದ ಹೂಡಾರಂತಹ ಅವಕಾಶವಾದಿ ರಾಜಕಾರಣಿಯ ಮಾತುಗಳನ್ನು ನಂಬಿ ಕೇವಲ ಜಾಟ್ ಮತಗಳನ್ನು ನೆಚ್ಚಿಕೊಂಡ ಕಾಂಗ್ರೆಸ್ ಈ ಬಾರಿ ಮತ್ತೊಮ್ಮೆ ಮುಗ್ಗರಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಬಲಿಷ್ಠ ಜಾಟ್ ಜಾತಿಯಿಂದ ಮುಖ್ಯಮಂತ್ರಿಯಾಗಿರಲಿಲ್ಲ ಎನ್ನುವ ಸಂಗತಿ ಜಾಟ್‌ರಲ್ಲಿ ಆಕ್ರೋಶ ಮೂಡಿಸಿತ್ತು ನಿಜ. ಜಾಟ್ ಜಾತಿಯ ಬಿಜೆಪಿ ವಿರುದ್ಧದ ಈ ನಿಲುವಿನಿಂದಾಗಿ 18ನೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 5 ಸ್ಥಾನಗಳು ಲಭಿಸಿದ್ದು ಸತ್ಯ. ಆದರೆ ಇದನ್ನೇ ನಂಬಿ ಅಭ್ಯರ್ಥಿಗಳ ಆಯ್ಕೆಯನ್ನು ಹೂಡಾ ಅವರಿಗೆ ಬಿಟ್ಟುಕೊಟ್ಟ ಹೈಕಮಾಂಡ್ ಆ ಮೂಲಕ ಮೊದಲ ತಪ್ಪು ಹೆಜ್ಜೆ ಇಟ್ಟಿತು. ಈ ಹೂಡಾ ಯಾವುದೇ ಸಾಧನೆ ಇಲ್ಲದೇ ಹೋದರೂ ಸಹ ಶೇ.22ರಷ್ಟಿರುವ ಜಾಟ್ ಜಾತಿಯಲ್ಲಿ ಪ್ರಭಾವಶಾಲಿ ಎನ್ನುವ ನೆಪ ಮಾಡಿಕೊಂಡು 90 ಕ್ಷೇತ್ರಗಳ ಪೈಕಿ 72 ಸ್ಥಾನಗಳಲ್ಲಿ ತನ್ನ ಹಿಂಬಾಲಕರನ್ನು ಅಭ್ಯರ್ಥಿಗಳಾಗಿ ಆರಿಸಿದರು. ಇದು ಸಹಜವಾಗಿ ಆ ರಾಜ್ಯದ ಪ್ರಮುಖ ನಾಯಕಿಯಾದ ದಲಿತ ಸಮುದಾಯದ ಸೆಲ್ಜಾ ಅವರಲ್ಲಿ ಕೋಪ ಮತ್ತು ಹತಾಶೆಗೆ ಕಾರಣವಾಯಿತು. ಆರಂಭದ ವಾರಗಳಲ್ಲಿ ಪ್ರಚಾರದಿಂದಲೇ ದೂರವುಳಿದ ಸೆಲ್ಜಾ ನಂತರ ಭಾಗವಹಿಸಿದರೂ ಸಹ ಆಗಲೇ ಸಾಕಷ್ಟು ಹಾನಿಯಾಗಿತ್ತು.
ಹೂಡಾ ಮಾತು ನಂಬಿ ಕಾಂಗ್ರೆಸ್ ಹೈಕಮಾಂಡ್ 27 ಜಾಟ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಇದು ಇತರೆ ಹಿಂದುಳಿದ ವರ್ಗಗಳಲ್ಲಿ ʼಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ಹೂಡಾ ಮುಖ್ಯಮಂತ್ರಿಯಾಗುತ್ತಾರೆ, ಜಾಟ್‌ಗಳ ಪ್ರಾಬಲ್ಯ ಮುಂದುವರೆಯುತ್ತದೆ, ತಾವು ಅಧಿಕಾರದಿಂದ ವಂಚಿತರಾಗಬೇಕಾಗುತ್ತದೆʼ ಎನ್ನುವ ಭಾವನೆ ಗಟ್ಟಿಯಾಗತೊಡಗಿತು. ಇದು ಸ್ಪಷ್ಟವಾಗಿ ಜಾಟ್ ವರ್ಸಸ್ ಇತರೆ ಹಿಂದುಳಿದ ಜಾತಿಗಳು ಎಂದು ಧೃವೀಕರಣಕ್ಕೆ ಕಾರಣವಾಯಿತು. ಈ ಹಿಂದೆ ಮೀಸಲಾತಿಗೆ ಸಂಬಂಧಿಸಿದಂತೆ ಇದೇ ಜಾಟ್ ಜಾತಿಯ ಮುಖಂಡರು ತಮ್ಮ ಮೇಲೆ ಯಾವ ಬಗೆಯ ಹಿಂಸೆಯನ್ನು ಪ್ರಯೋಗಿಸಿದ್ದರು ಎನ್ನುವ ಅನುಭವ ಇತರೆ ಜಾತಿಗಳ ಮನಸ್ಸಿನಲ್ಲಿ ಇನ್ನೂ ಹಸಿಯಾಗಿತ್ತು. ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿದ್ದರೂ ರಾಜ್ಯ ಚುನಾವಣೆಯ ವ್ಯಾಕರಣವೇ ಬೇರೆಯಾಗಿದ್ದರಿಂದ ಈ ಬಾರಿ ಜಾಟ್ ಪರವಿರುವ ಕಾಂಗ್ರೆಸ್ ಗೆ ವಿರೋಧವಾಗಿ ಮತ ಚಲಾಯಿಸಿದರು. ಇದರ ಪರಿಣಾಮವಾಗಿ ಕಾಂಗ್ರೆಸ್‌ನ 27 ಜಾಟ್ ಅಭ್ಯರ್ಥಿಗಳ ಪೈಕಿ ಕೇವಲ 13 ಜನ ಮಾತ್ರ ಗೆಲುವು ಸಾಧಿಸಿದರು. ಅತ್ತ ಬಿಜೆಪಿ ಪಕ್ಷವು ಜಾಟ್ ಹೊರತಾದ ರಾಜಕಾರಣಕ್ಕೆ ಮುಂದಾಗಿ 2014ರಲ್ಲಿ ಖತ್ರಿ ಜಾತಿಯ ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರು. 2024ರ ಚುನಾವಣೆಗೆ ಕೆಲವೇ ತಿಂಗಳುಗಳ ಮುಂಚೆ ಆಡಳಿತ ವಿರೋಧಿ ಅಲೆಯನ್ನು ಗ್ರಹಿಸಿದ ಬಿಜೆಪಿ ಅವರನ್ನು ಕೆಳಗಿಳಿಸಿ ಮತ್ತೊಬ್ಬ ಒಬಿಸಿ ಮುಖಂಡರಾದ ನಾಯಬ್ ಸಿಂಗ್ ಸೈನಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರು. ಈ ಜಾಟ್ ಹೊರತುಪಡಿಸಿದ ಇತರೆ ಹಿಂದುಳಿದ ವರ್ಗಗಳ ರಾಜಕಾರಣ ಲೋಕಸಭಾ ಚುನಾವಣೆಯಲ್ಲಿ ಅಂತಹ ಫಲ ಕೊಡದಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಭರಪೂರ ಲಾಭ ತಂದುಕೊಟ್ಟಿದೆ.

ಉತ್ತರ ಭಾರತದ ಇತರೆ ರಾಜ್ಯಗಳಂತೆ ಜಾತಿ ಸಮೀಕರಣವು ಹರಿಯಾಣ ರಾಜಕಾರಣದ ಭಾಗವಾಗಿದೆ. ಇದರ ಒಳಹೊರಗನ್ನು ಗ್ರಹಿಸದ ಕಾಂಗ್ರೆಸ್ ಶೇ.35ರಷ್ಟಿರುವ ಇತರೆ ಹಿಂದುಳಿದ ಜಾತಿಗಳ ಬೆಂಬಲ ಪಡೆಯಲು ವಿಫಲರಾಗಿರುವುದು ಅವರ ರಾಜಕಾರಣದ ಮಿತಿಯನ್ನು ತೋರಿಸುತ್ತದೆ. ಇಲ್ಲಿ ಶೇ.22ರಷ್ಟಿರುವ ದಲಿತರು ದಬ್ಬಾಳಿಕೆ ನಡೆಸುವ ಬಲಿಷ್ಠ ಜಾಟ್ ಜಾತಿ ಕೇಂದ್ರಿತ ಪ್ರಚಾರವನ್ನು ಅನುಮಾನಿಸುತ್ತಾರೆ. ಜೊತೆಗೆ ಜಾಟ್ ಜಾತಿಯ ಹೂಡಾ ಹಾಗೂ ಚಮ್ಮಾರ್ ಸಮುದಾಯದ ಸೆಲ್ಜಾ ನಡುವಿನ ಒಳಜಗಳವೂ ಸಹ ದಲಿತರಿಗೆ ಜಾಟ್ ಕುರಿತು ಅಸಹನೆ ಹೆಚ್ಚಾಗಲು ಕಾರಣವಾಗಿದೆ. ಇದರ ಪರಿಣಾಮವಾಗಿ ಜಾಟ್ ವಿರೋಧಿ ಎಂದು ಬಿಂಬಿಸಿಕೊಂಡ ಬಿಜೆಪಿಗೆ ನಿರ್ದಿಷ್ಟ ಪ್ರಮಾಣದ ದಲಿತರ ಮತ ದಕ್ಕಿದೆ. ಮತ್ತೊಂದೆಡೆ ದಲಿತ ಸಮುದಾಯದಲ್ಲಿ ಬಾಲ್ಮೀಕಿ, ಧನಕ, ಮಜಬೀ ಸಿಖ್ ಮುಂತಾದ ದಮನಿತ ಪರಿಶಿಷ್ಟ ಜಾತಿ ಮತ್ತು ಚಮ್ಮಾರ್, ಜಾಟವ್, ರೆಹ್ಗಾರ್, ರಾಯಗರ್ ಮುಂತಾದ ಇತರೇ ಪರಿಶಿಷ್ಟ ಜಾತಿ ಎಂದು ಎರಡು ವರ್ಗೀಕರಣವಿದೆ. ಅಲ್ಲಿನ ಬಿಜೆಪಿ ಸರಕಾರವು ದಮನಿತ ಪ.ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಿದೆ. ಇದರಿಂದ ಜನಸಂಖ್ಯೆಯಲ್ಲಿ ಎರಡನೆಯವರಾದ ಬಾಲ್ಮೀಕಿ ಸಮುದಾಯವು ಬಿಜೆಪಿ ಪರ ವಾಲಿರುವ ಸಾಧ್ಯತೆಗಳಿವೆ. ಈ ಮತಕ್ಷೇತ್ರದಲ್ಲಿನ ವ್ಯಾಕರಣದ ಬದಲಾವಣೆಗಳಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ ಪ್ರಮಾಣದಲ್ಲಿ ಕೇವಲ ಶೇ.0.6ರಷ್ಟು ವ್ಯತ್ಯಾಸವಿದ್ದರೂ ಸಹ ಬಿಜೆಪಿಗೆ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಿದೆ. ಆದರೆ ರಾಹುಲ್ ಗಾಂಧಿ ಈ ಸಮೀಕರಣವನ್ನು ಗ್ರಹಿಸದೆ ಕೇವಲ ಬಾಯಿ ಮಾತಿನಲ್ಲಿ ಜಾತಿ ಗಣತಿ ಎಂದು ಹೇಳಿದ್ದು ಯಾವುದೇ ಪರಿಣಾಮ ಬೀರಲಿಲ್ಲ.

ಮುಖ್ಯವಾಗಿ ಒಳ ಮೀಸಲಾತಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಕಾಂಗ್ರೆಸ್ ಮೌನ ವಹಿಸಿದ್ದು ಸಹ ದಮನಿತ ಪ.ಜಾತಿಯವರಲ್ಲಿ ಅಸಹನೆಗೆ ಕಾರಣವಾಗಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ಸಂವಿಧಾನ ರಕ್ಷಣೆ ಕುರಿತು ಹೆಚ್ಚಿನ ಪ್ರಾಮುಖ್ಯತೆ ನೀಡಿದರೂ ಸಹ ರಾಜ್ಯ ಚುನಾವಣೆ ಕಾರಣ ಒಳ ಮೀಸಲಾತಿಯ ಚರ್ಚೆ ಮುನ್ನೆಲೆಗೆ ಬಂದು ಕಾಂಗ್ರೆಸ್ ಇದರ ವಿರುದ್ಧವಿದೆ ಎನ್ನುವ ಬಿಜೆಪಿಯ ಪ್ರಚಾರವೂ ಸಹ ಅವರಿಗೆ ಮುಳುವಾಗಿರುವ ಸಾಧ್ಯತೆಗಳಿವೆ.
ಇದನ್ನೂ ಓದಿ ‘ಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?
ಮೋದಾನಿ ಆರ್ಥಿಕ ನೀತಿಯಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿರುವ ಹರಿಯಾಣದಲ್ಲಿ ಶೇ.25ರಷ್ಟು ನಿರುದ್ಯೋಗವಿದೆ, ಹಣದುಬ್ಬರದಿಂದ ಬಡವರಿಗೆ ಬದುಕಿನ ಬವಣೆ ಹೆಚ್ಚಾಗಿದೆ, ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ. ಆದರೆ ಈ ವಿಚಾರಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿಲ್ಲ ಎಂದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಈ ವಿಷಯದಲ್ಲಿ ಎಡವಿದೆ ಮತ್ತು ಗ್ರಾಮೀಣ ಭಾಗದಲ್ಲಿಯೂ ನಿರೀಕ್ಷಿತ ಗೆಲುವು ಸಾಧಿಸಲಿಲ್ಲ ಗಾಯದ ಮೇಲೆ ಬರೆ ಇಟ್ಟಂತೆ ಅತಿಯಾದ ಆತ್ಮವಿಶ್ವಾಸದಿಂದ ಬೀಗಿದ ಕಾಂಗ್ರೆಸ್ ಪ್ರಚಾರದಲ್ಲಿ ಹಿಂದುಳಿದು ರಾಹುಲ್ ಗಾಂಧಿಯಂತಹ ಸ್ಟಾರ್ ಪ್ರಚಾರಕರು ಅಂತಿಮ ಹಂತದಲ್ಲಿ ಪ್ರವೇಶಿಸಿ ಕೇವಲ ಮೂರ್ನಾಲ್ಕು ಸಮಾವೇಶದಲ್ಲಿ ಭಾಗವಹಿಸಿದ್ದು ಸಹ ಈ ಹಿನ್ನಡೆಗೆ ಕಾರಣವಾಗಿದೆ.
ಅಂತಿಮವಾಗಿ ಕಾಂಗ್ರೆಸ್ ನ ಈ ಹರಾಕಿರಿಯು ಮುಂದೆ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಯಲ್ಲಿ ಪರಿಣಾಮ ಬೀರಬಹುದೇ ಎನ್ನುವ ಪ್ರಶ್ನೆಯನ್ನು ಯಾರಿಗೆ ಕೇಳುತ್ತಿದ್ದೇವೆ, ಯಾರು ಉತ್ತರಿಸಬೇಕು ಎಂಬುದರ ಮೇಲೆ ಅದಕ್ಕೆ ಉತ್ತರ ದೊರಕುತ್ತದೆ.

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ