ಹುಬ್ಬಳ್ಳಿ ಧಾರವಾಡ ಮಾರ್ಗಮಧ್ಯದಲ್ಲಿ ಸಂಚರಿಸುವ ಬೇಂದ್ರೆ ನಗರ ಸಾರಿಗೆ ಬಸ್ ಗಳ ಸಂಚಾರ ರದ್ದುಗೊಳಿಸಲೇಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಆಗ್ರಹ ಮಾಡಿದ್ದಾರೆ.
ಅವಳಿ ನಗರದಲ್ಲಿ ಸಂಚರಿಸುವ ಬೇಂದ್ರೆ ಬಸ್ ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಶೆಟ್ಟರ್, ಮಿಶ್ರ ಸಂಚಾರ ಮಾರ್ಗದಲ್ಲಿ ಬೇಂದ್ರೆ ಬಸ್‌ಗಳಿಂದಾಗಿಯೇ ಸಮಸ್ಯೆಯಾಗುತ್ತಿದೆ. ಬೇಂದ್ರೆ ಬಸ್‌ಗಳು ಹಾಗೂ ಅವಳಿ ನಗರದ ಮಧ್ಯೆ ಸಂಚರಿಸುವ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಸ್ಪೀಡ್ ಸ್ಪರ್ಧೆಯಿಂದಾಗಿ ಸಂಚಾರ ಸಮಸ್ಯೆಯಾಗುತ್ತಿದೆ. ಟ್ರಾಫಿಕ್ ಜಾಮ್ ಆಗಲು ಬೇಂದ್ರೆ ಬಸ್‌ಗಳೇ ಮುಖ್ಯ ಕಾರಣವಾಗಿವೆ. ಬೇಂದ್ರೆ ಬಸ್‌ಗಳನ್ನು ಎಲ್ಲಿ ಬೇಕಾದಲ್ಲಿ ನಿಲುಗಡೆ ಮಾಡುತ್ತಾರೆ. ಹಲವು ಬಾರಿ ಅವರಿಗೆ ಸೂಚನೆ ನೀಡಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಬೇಂದ್ರೆ ಸಾರಿಗೆ ರದ್ದುಪಡಿಸಬೇಕು ಎಂದು ತಿಳಿಸಿದ್ದಾರೆ.
ಬೇಂದ್ರೆ ಸಾರಿಗೆಯನ್ನು ಉಳಿಸುವ ಲಾಬಿಯೊಂದು ಕೆಲಸ ಮಾಡುತ್ತಿದೆ ಎನಿಸುತ್ತದೆ. ಆ ಕಾರಣದಿಂದ ಎಷ್ಟೇ ಸಮಸ್ಯೆಗಳಾದರೂ ಬೇಂದ್ರೆ ಸಾರಿಗೆ ರದ್ದು ಮಾಡುತ್ತಿಲ್ಲ. ಬಿಆರ್‌ಟಿಎಸ್ ಸಾರಿಗೆ ಇದ್ದರೂ ಬೇಂದ್ರೆ ಸಾರಿಗೆಯನ್ನು ಯಾಕೆ ರದ್ದು ಮಾಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ. ಬೇಂದ್ರೆ ಸಾರಿಗೆಯನ್ನು ರದ್ದುಪಡಿಸಲು ಈಗಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ಪಾದಚಾರಿಗೆ ಚಿಗರಿ ಬಸ್ ಡಿಕ್ಕಿ: ವ್ಯಕ್ತಿ ಸಾವು
ಜನರ ಒಳಿತಿಗಾಗಿ ಬಿಆರ್‌ಟಿಎಸ್ (ಚಿಗರಿ ಬಸ್) ಯೋಜನೆ ಜಾರಿಗೊಳಿಸಲಾಗಿದೆ. ಅದಕ್ಕೆ ಪೂರಕವಾಗಿ ಅವಳಿ ನಗರದ ಮಧ್ಯೆ ಬೇರೆ ಯೋಜನೆ ಜಾರಿಗೊಳಿಸಲು ಸಚಿವ ಸಂತೋಷ ಲಾಡ್ ಮುಂದಾದರೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಜನರ ಅಭಿಪ್ರಾಯ ಪಡೆದು ಯೋಜನೆ ಜಾರಿಗೊಳಿಸುವುದು ಸೂಕ್ತ ಎಂದಿದ್ದಾರೆ.