ಹಸಿರೆಂದರೆ ಉಸಿರು. ಎಲ್ಲೆಡೆ ಮುಗಿಲೆತ್ತರಕ್ಕೆ ಏರುತ್ತಿರುವ ಕಟ್ಟಡಗಳ ನಡುವೆ ಹಸಿರಾದ ಪ್ರದೇಶವನ್ನು ಕಂಡರೆ ಪ್ರಕೃತಿ ಪ್ರೇಮಿಗಳಿಗೆ ಸಂತಸ. ಅಂಟಾರ್ಟಿಕವೂ ಈಗ ಹಸಿರಾಗುತ್ತಿದೆ. ಆದರೆ, ಇದು ಮಾತ್ರ ನಾವು ಖುಷಿ ಪಡುವ ಸಂಗತಿಯೇ ಅಲ್ಲ. ವಿಜ್ಞಾನಿಗಳ ಪ್ರಕಾರ ಇದು ಹವಾಮಾನದಲ್ಲಿ ಅಪಾಯಕಾರಿ ಬದಲಾವಣೆಯಾಗಿರುವ ಮತ್ತು ಜಾಗತಿಕವಾಗಿ ತಾಪಮಾನ ಏರಿಕೆಯಾಗುತ್ತಿರುವ ಪರಿಣಾಮದಿಂದಾಗಿ ಆಗುತ್ತಿರುವ ಹಸಿರು.
ವಿಶ್ವದ ಐದನೇ ಅತೀ ದೊಡ್ಡ ಖಂಡವಾದ ಅಂಟಾರ್ಟಿಕದಲ್ಲಿ ಸುಮಾರು 34-35 ಮಿಲಿಯನ್ ವರ್ಷಗಳ ಹಿಂದೆ ಮಂಜುಗಡ್ಡೆಗಳು ರೂಪುಗೊಳ್ಳಲು ಪ್ರಾರಂಭಿಸಿತ್ತು. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಭೂಖಂಡ ಸರಿತವೂ ಕಾರಣ ಎಂಬ ಪರಿಕಲ್ಪನೆಯಿದೆ. ಅಂದರೆ ಖಂಡಗಳು ಈ ಹಿಂದೆ ಇದ್ದ ಸ್ಥಾನದಿಂದ ಸರಿದು ಇನ್ನೊಂದು ಸ್ಥಾನಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತದೆ.
ಇದನ್ನು ಓದಿದ್ದೀರಾ? ಮತ್ತೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎನಿಸಿಕೊಂಡ ದೆಹಲಿ, ಭಾರತಕ್ಕೆ 3ನೇ ಸ್ಥಾನ
ವಿಜ್ಞಾನಿಗಳ ಪ್ರಕಾರ ಲಕ್ಷಾಂತರ ವರ್ಷಗಳಿಂದ ಅಂಟಾರ್ಟಿಕದೊಂದಿಗೆ ಸಂಪರ್ಕ ಹೊಂದಿದ್ದ ದಕ್ಷಿಣ ಅಮೆರಿಕ ಮತ್ತು ಟ್ಯಾಸ್ಮೆನಿಯಾ ಉತ್ತರಕ್ಕೆ ತೇಲಿದೆ. ಇದರಿಂದಾಗಿ ದಕ್ಷಿಣ ಅಮೆರಿಕ ಮತ್ತು ಅಂಟಾರ್ಟಿಕಾ ನಡುವಿನ ಜಲಸಂಧಿಯಾದ ಡ್ರೇಕ್ ಪ್ಯಾಸೇಜ್ ತೆರೆದು, ಅಂಟಾರ್ಟಿಕಾದ ಸುತ್ತಲೂ ನೀರು ಹರಿಯುವಂತೆ ಮಾಡಿದೆ. ಇದು ಕ್ರಮೇಣವಾಗಿ ಮಂಜುಗಡ್ಡೆಯಾಗಿ ರಚನೆಯಾಗಿದೆ. ಆದರೆ ಮಿಲಿಯಾಂತರ ವರ್ಷಗಳ ಹಿಂದೆ ರೂಪುಗೊಂಡ ಈ ಮಂಜುಗಡ್ಡೆ ಈಗ ಕರಗುತ್ತಿದೆ.
ಜಾಗತಿಕವಾಗಿ ತಾಪಮಾನ ಬದಲಾಗುತ್ತಿದೆ. ಅತೀದೊಡ್ಡ ಮರುಭೂಮಿ ಸಹರಾ ಹಾಗೂ ಸೌದಿ ಮರುಭೂಮಿಯು ಅತಿಯಾದ ಮಳೆಯಿಂದಾಗಿ ಹಸಿರಾಗುತ್ತಿದೆ. ಮರುಭೂಮಿ ಹಸಿರಾಗುವುದು ಉತ್ತಮ ಸೂಚನೆ ಅಂದುಕೊಂಡರೂ, ಈ ಪ್ರದೇಶದಲ್ಲಾದ ಹವಾಮಾನ ಬದಲಾವಣೆಯನ್ನು, ಅದರಿಂದ ಅಲ್ಲಿರುವ ಜೀವಿಗಳಿಗೆ ಆಗುವ ಬಾಧೆಯನ್ನು ನಾವು ಬದಿಗೆ ತಳ್ಳುವಂತಿಲ್ಲ. ಮರುಭೂಮಿ ಹಸಿರಾಗುತ್ತಿರುವ ಜೊತೆಗೆ ಮಂಜುಗಡ್ಡೆಯಿಂದ ಆವರಿಸಿದ ಪ್ರದೇಶವೂ ಕೂಡಾ ಹಸಿರಾಗುತ್ತಿದೆ. ಇದು ಸಕಲ ಜೀವಿಗಳಿಗೆ ಅಪಾಯ ಎನ್ನುತ್ತಾರೆ ವಿಜ್ಞಾನಿಗಳು.
ಮಂಜುಗಡ್ಡೆ ರೂಪುಗೊಳ್ಳುವ ಮುನ್ನ ಅಂಟಾರ್ಟಿಕವು ಕಾಡುಗಳಿಂದ ಕೂಡಿದ ಉತ್ತರ ಕೆನಡಾದಂತೆಯೇ ಇತ್ತು. ಜಾಗತಿಕ ತಾಪಮಾನ ಹೆಚ್ಚಾಗಿ ಹವಾಮಾನ ಬದಲಾವಣೆಯಾಗುತ್ತಿರುವುದರಿಂದ ಖಂಡಗಳಾದ್ಯಂತ ನೈಸರ್ಗಿಕ ಪರಿಸರ, ಸಸ್ಯ ಸಂಕುಲಗಳು ಸೃಷ್ಟಿಯಾಗುತ್ತಿದೆ. ಮಂಜುಗಡ್ಡೆಗಳು ಅಪಾಯಕಾರಿ ಮಟ್ಟದಲ್ಲಿ ಕರಗುತ್ತಿದೆ.
ಹೊಸ ಸಂಶೋಧನೆಯೊಂದರ ಪ್ರಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಟಾರ್ಟಿಕದಲ್ಲಿ ಸಸ್ಯವರ್ಗವು ಹತ್ತು ಪಟ್ಟು ಅಧಿಕವಾಗಿದೆ. ಮಂಜುಗಡ್ಡೆಗಳು ಅತೀ ವೇಗವಾಗಿ ಕರಗುತ್ತಿವೆ. 2016ರಿಂದ ಅಂಟಾರ್ಟಿಕಾದಲ್ಲಿ ಸಸ್ಯಸಂಕುಲ ಬೆಳೆಯುತ್ತಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಘಟ್ಟಗಳ ಬಗ್ಗೆ ಕೇಂದ್ರದ ಕರಡು ಘೋಷಣೆ: ಗ್ರಾಮ, ವಾರ್ಡ್ ಸಭೆ ನಿರ್ಧರಿಸಲಿ; ಕೃಷಿ ತಜ್ಞರ ಸಲಹೆ
ಅಂಟಾರ್ಟಿಕವು ಹೇಗೆ ಹಸಿರಾಗಿ ಬದಲಾಗುತ್ತಿದೆ ಎಂಬ ಬಗ್ಗೆ ಎಕ್ಸೆಟರ್ ಮತ್ತು ಹರ್ಟ್‌ಫೋರ್ಡ್‌ಶೈರ್ ವಿಶ್ವವಿದ್ಯಾಲಯ, ಬ್ರಿಟಿಷ್ ಅಂಟಾರ್ಟಿಕಾ ಸಮೀಕ್ಷೆ ನಡೆಸಿವೆ. ಈ ಸಮೀಕ್ಷೆಗಾಗಿ ಉಪಗ್ರಹ ಡೇಟಾವನ್ನು ಬಳಸಿದೆ. ಉಪಗ್ರಹ ಡೇಟಾ ಪ್ರಕಾರ 1986ರಲ್ಲಿ 1 ಚದರ ಕಿಲೋ ಮೀಟರ್‌ಗಿಂತ ಕಡಿಮೆ ಪ್ರದೇಶದಲ್ಲಿದ್ದ ಹಸಿರು ಹೊದಿಕೆಯು 2021ರ ವೇಳೆಗೆ ಸುಮಾರು 12 ಚ.ಕಿ.ಮೀ.ಗೆ ವಿಸ್ತರಿಸಿದೆ. ಇಷ್ಟು ಮಾತ್ರವಲ್ಲದೆ ಈ ಬದಲಾವಣೆಯ ವೇಗವೂ ಹೆಚ್ಚಾಗಿದೆ.
ಸಮುದ್ರಮಟ್ಟ ಏರಿಕೆಯ ಅಪಾಯ
ಅಂಟಾರ್ಟಿಕಾವು ಹಸಿರಾಗುತ್ತಿದೆ ಎಂದರೆ ಮಂಜುಗಡ್ಡೆ ಕರಗುತ್ತಿದೆ ಎಂಬ ಸಂಕೇತವಾಗಿದೆ. ಇದು ವಿಜ್ಞಾನಿಗಳಲ್ಲಿ ಗಂಭೀರವಾದ ಕಳವಳವನ್ನು ಉಂಟು ಮಾಡಿದೆ. ಮಂಜುಗಡ್ಡೆ ಕರಗಿದ್ದಂತೆ ಸಮುದ್ರ ಮಟ್ಟವೂ ಕೂಡಾ ಏರಿಕೆಯಾಗುವ ಅಪಾಯವಿದೆ. ಇದರಿಂದಾಗಿ ಜಾಗತಿಕ ಸಮುದ್ರ ಮಟ್ಟವು ಸರಿಸುಮಾರು 60 ಮೀಟರ್‌ಗಳಷ್ಟು ಹೆಚ್ಚಾಗಬಹುದು.
2016ರ ಅಧ್ಯಯನವೊಂದರ ಪ್ರಕಾರ ಅಂಟಾರ್ಟಿಕಾದ ಮಂಜು ಕರಗಿ 2100ರ ವೇಳೆಗೆ ಒಂದು ಮೀಟರ್‌ಗಿಂತಲೂ ಹೆಚ್ಚು ಸಮುದ್ರ ಮಟ್ಟ ಏರಿಕೆಯಾಗಬಹುದು. 2500ರ ವೇಳೆಗೆ 15 ಮೀಟರ್‌ಗಳಿಗಿಂತ ಹೆಚ್ಚು ಏರಿಕೆಯಾಗಬಹುದು. ಸಮುದ್ರ ಮಟ್ಟವು ಹೆಚ್ಚಾದಂತೆ ನಗರಗಳಿಗೆ ನೀರು ನುಗ್ಗುತ್ತದೆ. ಅಂತಿಮವಾಗಿ ಕರಾವಳಿ ನಗರಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಸಮುದ್ರವಾಗಿ ಪರಿವರ್ತನೆಯಾಗುತ್ತದೆ.
ಇದರಿಂದಾಗಿ ಪೆಂಗ್ವಿನ್‌ಗಳು ಮತ್ತು ಸೀಲ್‌ಗಳಂತಹ ಅಂಟಾರ್ಟಿಕದ ಪ್ರಾಣಿಗಳು ಸಂಪೂರ್ಣವಾಗಿ ಅಳಿದುಹೋಗಬಹುದು. ಈ ಎಲ್ಲ ಅಪಾಯಗಳನ್ನು ಗಮನಿಸಿ ನಾವು ಈಗಲಾದರೂ ಎಚ್ಚೆತ್ತುಕೊಂಡು ಪ್ರಕೃತಿ ಬದಲಾವಣೆಗೆ ಕಾರಣವಾಗುವ ಅತ್ಯಭಿವೃದ್ಧಿಯಿಂದ ಹಿಂದೆ ಸರಿಯುವ ಬಗ್ಗೆ ಚಿಂತನೆ ನಡೆಸಬೇಕು.
ಹಸಿರು ಉಸಿರಾದರೂ ಉತ್ತಮವಲ್ಲ!
ಹಸಿರು ಉಸಿರಾದರೂ ಕೂಡಾ ಅಂಟಾರ್ಟಿಕದಲ್ಲಿ ಹಸಿರು ಹೊದಿಕೆ ಕಾಣಿಸಿಕೊಂಡಿರುವುದು ಉತ್ತಮ ಸಂಕೇತವಲ್ಲ, ಬದಲಾಗಿ ಜಾಗತಿಕ ತಾಪಮಾನ ಏರಿಕೆಯ ಸಂಕೇತವಾಗಿದೆ. ಇದರಿಂದಾಗಿ ಹಲವಾರು ಕೆಟ್ಟ ಪರಿಣಾಮಗಳು ಜಾಗತಿಕವಾಗಿ ಉಂಟಾಗುತ್ತದೆ.
ಇದನ್ನು ಓದಿದ್ದೀರಾ? ಸುರಕ್ಷಿತ ಮಟ್ಟಕ್ಕಿಂತ ಕೆಟ್ಟದಾದ ಬೆಂಗಳೂರಿನ ವಾಯು ಗುಣಮಟ್ಟ: ವರದಿ
ಸಸ್ಯ ಸಂಕುಲ ಬೆಳೆಯಲು ಮಣ್ಣು ಮುಖ್ಯ. ಅಂಟಾರ್ಟಿಕವು ಹಸಿರಾದಂತೆ ಮಣ್ಣಿನ ಪ್ರಮಾಣವು ವಿಸ್ತಾರವಾಗುತ್ತಾ ಸಾಗಬಹುದು. ಇದರಿಂದಾಗಿ ಸ್ಥಳೀಯ ವನ್ಯಜೀವಿಗಳಿಗೆ ಹಾನಿಯಾಗುತ್ತದೆ. ಹೆಚ್ಚು ತಾಪಮಾನವಿರುವ ಪ್ರದೇಶದಲ್ಲಿ ಬೆಳೆದ ನಮಗೆ ಮಂಜು ಆವರಿಸಿದ ಪ್ರದೇಶದಲ್ಲಿ ವಾಸಿಸಲು ಎಷ್ಟು ಕಷ್ಟವಾಗುತ್ತದೆಯೋ ಹಾಗೆಯೇ ಪ್ರಾಣಿ, ಪಕ್ಷಿಗಳ ಮೇಲೂ ಹವಾಮಾನ ಬದಲಾವಣೆ ಪ್ರಭಾವ ಬೀರುತ್ತದೆ. ಇದರಿಂದಾಗಿ ಹಲವು ಪ್ರಭೇದಗಳು ಅಳಿಸಿ ಹೋಗಬಹುದು.
ಸರಿಸುಮಾರು ಫ್ರಾನ್ಸ್‌ನಷ್ಟು ಗಾತ್ರದ ಮಂಜುಗಡ್ಡೆ ಕರಗಿದರೆ ನೀರಿನ ಮಟ್ಟ ಏರಿಕೆಯಾಗಿ ಸಾಕಷ್ಟು ಹಾನಿಯಾಗುವುದು ಖಂಡಿತ. ಈ ಎಲ್ಲಾ ಅಪಾಯಗಳನ್ನು ಅರಿತ ಬಳಿಕವಾದರೂ ಮಾನವ ಸಂಕುಲ ಬದಲಾಗದಿದ್ದರೆ, ನಮ್ಮ ಅಳಿವಿಗೆ ನಾವೇ ಮುನ್ನುಡಿ ಬರೆಯುವುದಲ್ಲದೆ ಸಕಲ ಜೀವ ಸಂಕುಲದ ನಾಶಕ್ಕೆ ಕಾರಣೀಭೂತರಾಗುತ್ತೇವೆ. ಮುಗಿಲೆತ್ತರಕ್ಕೆ ಏರಿದ ಕಟ್ಟಡ ನೆಲಕ್ಕುರುಳಿದರೆ ಎಷ್ಟು ಭೀಕರ ಪರಿಣಾಮವಾಗುತ್ತದೆಯೋ ಹಾಗೆಯೇ ಈ ಅಭಿವೃದ್ಧಿಯಿಂದಾಗುವ ಹವಾಮಾನ ಬದಲಾವಣೆಯೂ ಕೂಡಾ ಗಂಭೀರವಾದುದ್ದು.