ಆಹಾರ ಹುಡುಕುತ್ತ ಕಾಡಿನಿಂದ ಬಂದು ರೈತರ ಜಮೀನಿನಲ್ಲಿ ಹಾದು ಹೋಗುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಕರಡಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಅರಸೀಕೆರೆ ತಾಲೂಕಿನ ಕಲ್ಲುಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭಾರೀ ಮಳೆ-ಗಾಳಿಗೆ ರೈತರ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದೇ ಜಾಗದಲ್ಲಿ ಆಹಾರ ಹುಡುಕುತ್ತ ಬರುತ್ತಿದ್ದ ಮೂರು ಕರಡಿಗಳಲ್ಲಿ ಗಂಡು ಕರಡಿ ರೈತರೊಬ್ಬರ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದೆ. 6ರಿಂದ 7ವರ್ಷದ ಒಂದು ಗಂಡು, ಒಂದು ಹೆಣ್ಣು ಹಾಗೂ ಒಂದು ವರ್ಷದ ಮರಿ ಕರಡಿ ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟಿವೆ.
ರೈತರು ಸ್ಥಳಕ್ಕೆ ಬಂದಾಗ ಕರಡಿಗಳು ಮೃತಪಟ್ಟಿರುವುದನ್ನು ದೂರದಿಂದಲೇ ಗಮನಿಸಿದ ಅವರು ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ. ಕರಡಿಗಳ ಶವ ಕಂಡು ಮುನ್ನೆಚ್ಚರಿಕೆ ವಹಿಸಿ ಸೆಸ್ಕ್‌ಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಶಾಲೆ ಮುಂದೆ ಜಿಲೆಟಿನ್ ಕಡ್ಡಿ ಸ್ಫೋಟ: ವಿದ್ಯಾರ್ಥಿಯ ಕೈಗೆ ಗಂಭೀರ ಗಾಯ
ಒಂದು ವೇಳೆ ಕರಡಿಗಳು ವಿದ್ಯುತ್ ಆಘಾತಕ್ಕೆ ಬಲಿಯಾಗದಿದ್ದರೆ ಬೆಳಿಗ್ಗೆ ಹೊಲಕ್ಕೆ ಬಂದ ರೈತರು ವಿದ್ಯುತ್ ತಂತಿ ತುಂಡಾಗಿರುವ ವಿಷಯ ತಿಳಿಯದೇ ವಿದ್ಯುತ್ ತಂತಿ ತುಳಿದು ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.