ಸುಪ್ರೀಂ ಕೋರ್ಟ್‌ನ ಮುಖ್ಉ ನ್ಯಾಯಮೂರ್ತಿಯಾಗಿರುವ ಡಿ.ವೈ ಚಂದ್ರಚೂಡ್ ಅವರು ಇನ್ನೊಂದು ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ. ಚುನಾವಣಾ ಬಾಂಡ್, ಒಳಮೀಸಲಾತಿ ವಿಚಾರದಲ್ಲಿ ಅವರು ನೀಡಿರುವ ತೀರ್ಪು ದೇಶದ ಗಮನ ಸೆಳೆದಿದೆ. ಅಲ್ಲದೆ, ಗಣಪತಿ ಪೂಜೆಗಾಗಿ ತಮ್ಮ ನಿವಾಸಕ್ಕೆ ಪ್ರಧಾನಿ ಮೋದಿ ಅವರನ್ನು ಕರೆಸಿಕೊಂಡಿದ್ದಕ್ಕಾಗಿ ಟೀಕೆಗೂ ಗುರಿಯಾಗಿದ್ದಾರೆ. ಇದೀಗ, ಅವರು ತಮ್ಮ ಅಧಿಕಾರಾವಧಿಯ ಬಗ್ಗೆ ಮಾತನಾಡಿದ್ದು, ಮುಂದಿನ ಇತಿಹಾಸದಲ್ಲಿ ತಮ್ಮ ಅಧಿಕಾರಾವಧಿಯನ್ನು ದೇಶವು ಯಾವ ರೀತಿ ನೋಡುಬಹುದು ಎಂಬ ಬಗ್ಗೆ ಆತಂಕ ಇರುವುದಾಗಿ ಹೇಳಿಕೊಂಡಿದ್ದಾರೆ.
ಭೂತಾನ್‌ನ ಪಾರೋದಲ್ಲಿ ಜೆಎಸ್‌ಡಬ್ಲ್ಯೂ ಕಾನೂನು ಶಾಲೆಯ ಘಟಿಕೋತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದಾರೆ. “ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ದೇಶಕ್ಕೆ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನ್ನ ಅಧಿಕಾರಾವಧಿಯು ನವೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಭಾರತದಲ್ಲಿ ನಾನು ಮಾಡಬೇಕಾದ ಎಲ್ಲವನ್ನೂ ನಾನು ಸಾಧಿಸಿದ್ದೇನೆಯೇ? ನ್ಯಾಯಾಧೀಶರು ಮತ್ತು ಕಾನೂನು ವೃತ್ತಿಪರರನ್ನು ಒಳಗೊಂಡ ಭವಿಷ್ಯದ ಪೀಳಿಗೆಗೆ ನಾನು ಯಾವ ಪರಂಪರೆ ಬಿಟ್ಟು ಹೋಗುತ್ತಿರುವೆ ಎಂಬ ಬಗ್ಗೆ ಚಿಂತಿಸುತ್ತಿದ್ದೇನೆ” ಎಂದಿದ್ದಾರೆ.
“ಭಾರತಕ್ಕಾಗಿ ಅತ್ಯಂತ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ ಎಂಬುದು ನನಗೆ ತೃಪ್ತಿ ನೀಡಿದೆ. ಅದರೊಂದಿಗೆ ಸಮಾಧಾನ ಹುಡುಕಿಕೊಳ್ಳುತ್ತಿದ್ದೇನೆ. ಆದರೂ, ನನ್ನಲ್ಲಿ ಹುಟ್ಟುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರಗಳು ನನ್ನ ನಿಯಂತ್ರಣದಲ್ಲಿಲ್ಲ. ಈ ಕೆಲವು ಪ್ರಶ್ನೆಗಳಿಗೆ ನಾನು ಎಂದಿಗೂ ಉತ್ತರಗಳನ್ನು ಕಂಡುಕೊಳ್ಳುವುದಿಲ್ಲ” ಎಂದಿದ್ದಾರೆ.