ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ತಾಲ್ಲೂಕು ಮಹಿಳಾ ಘಟಕ, ಯುವ ಘಟಕ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗು ಎಲ್ಲ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅ.13 ರಂದು ಬಸವ ಜಯಂತಿ, ಅಭಿನಂಧನಾ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ತುರುವೇಕೆರೆ ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ ತಿಳಿಸಿದರು.
ತುರುವೇಕೆರೆ ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಶಾಸಕ ಎಂ.ಟಿ.ಕೃಷ್ಣಪ್ಪನವರು ಉದ್ಘಾಟಿಸುವರು. ವಿರಕ್ತಮಠದ ಕರಿವೃಷಭದೇಶಿ ಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಹಾಗು ಗೋಡೆಕೆರೆಯ ಮೃತ್ಯುಂಜಯ ದೇಶಿ ಕೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ಶಂಕರ್ ಎಂ.ಬಿದರಿಯವರನ್ನು ಅಭಿನಂದಿಸಲಾಗುವುದು ಎಂದರು.
ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಮ್ ಅವರು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲ್ಲೂಕಿನ ವೀರಶೈವ ಲಿಂಗಾಯತ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ಅಂದು ಅಕ್ಕನ ಬಳಗದವರಿಂದ ವಚನಗಾಯನ ಕಾರ್ಯಕ್ರಮವು ನಡೆಯಲಿದೆ.
ಅನೇಕ ಗಣ್ಯರು, ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಲ್ಲೂಕಿನ ಎಲ್ಲಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಎಸ್.ಎಂ.ಕುಮಾರಸ್ವಾಮಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾರಾಣಿ ರಾಜಶೇಖರ್, ಸದಸ್ಯ ಯಜಮಾನ್ ಮಹೇಶ್, ಸಂಘದ ಖಜಾಂಚಿ ಡಿ.ಎಂ.ಸುರೇಶ್, ಕಾರ್ಯದರ್ಶಿ ಶಿವಾನಂದಯ್ಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
