ಪೋಕ್ಸೊ ಪ್ರಕರಣದ ಸಂತ್ರಸ್ತೆಯ ವಿರುದ್ಧವೇ 304 ಸೇರಿ ಹಲವು ಸೆಕ್ಷನ್‌ನಡಿ ಎಫ್‌ಐಆರ್ ದಾಖಲಿಸಿದ ಘಟನೆ ಚಿತ್ರದುರ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕಳೆದ ಸೆ.13 ರಂದು ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಮರುದಿನ ಸೆ.14 ರಂದು ಆರೋಪಿಗಳ ಸಂಬಂಧಿಯೊಬ್ಬರು ನೀಡಿದ ದೂರಿನಂತೆ ಸಂತ್ರಸ್ತ ಬಾಲಕಿಯ ಮೇಲೆ ಪೊಲೀಸರು 304 ಸೇರಿ ಇತರ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಿಸಿದ್ದಾರೆ. ಅದರಲ್ಲಿ ಅಪ್ರಾಪ್ತೆ ಎಂದು ನಮೂದಿಸದಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.
ಘಟನೆಯ ವಿವರ
ಸೆ.13ರಂದು ಸಂತ್ರಸ್ತ ಬಾಲಕಿ ಕಾಲೇಜು ಮುಗಿಸಿ ಅಗಸನ ಕಲ್ಲಿನ ತನ್ನ ಮನೆಗೆ ಹೋಗುವಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಕೆಲ ಯುವಕರು ಜ್ಞಾನ ವಿಕಾಸ ಶಾಲೆ ಬಳಿ ನಿರ್ಜನ ಪ್ರದೇಶದಲ್ಲಿ ಕೈಹಿಡಿದು ಎಳೆದು ಕಾರಿನಲ್ಲಿ ಎಳೆದೊಯ್ಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಿರುಚಾಟ ನಡೆಸಿದ ಬಾಲಕಿ ತಪ್ಪಿಸಿಕೊಂಡು, ಆಟೋದವರ ಸಹಾಯ ಪಡೆದು ಮನೆಗೆ ತಲುಪಿ ಪೋಷಕರಿಗೆ ವಿಷಯ ತಿಳಿಸಿದ್ದಳು. ಪೋಷಕರು ಮತ್ತು ಪರಿಚಯದವರು ವಾಪಸ್ ಆ ಸ್ಥಳಕ್ಕೆ ಹೋದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಬಾಲಕಿ ಸೇರಿದಂತೆ ಸಾರ್ವಜನಿಕರು ಆರೋಪಿಗಳನ್ನು ಥಳಿಸಿ ಹತ್ತಿರದ ಕೋಟೆ ಪೊಲೀಸ್ ಠಾಣೆಗೆ ಒಪ್ಪಿಸಿ ದೂರನ್ನು ನೀಡಿದಾಗ ಬಾಲಕಿ ಅಪ್ರಾಪ್ತಳೆಂದು ತಿಳಿದು ಮಹಿಳಾ ಪೊಲೀಸ್ ಠಾಣೆಗೆ ಕಳುಹಿಸಲಾಗಿತ್ತು. ನಂತರ ಆರೋಪಿಗಳ ವಿರುದ್ಧ ಪೋಕ್ಸೊ ಕೇಸು ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಮರುದಿನ ಆರೋಪಿಗಳನ್ನು ಸಾರ್ವಜನಿಕರು ಥಳಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಆರೋಪಿಯ ಸಂಬಂಧಿಯೊಬ್ಬರು ಸಂತ್ರಸ್ತ ಬಾಲಕಿ ಮತ್ತು ಆಕೆಗೆ ಸಹಾಯ ಮಾಡಿದವರ ವಿರುದ್ಧ ಮಾರಣಾಂತಿಕ ಹಲ್ಲೆ ಸೇರಿ ಇತರ ಆರೋಪಗಳಡಿ ದೂರು ನೀಡಿದ್ದಾರೆ. ಅದನ್ನು ಸ್ವೀಕರಿಸಿದ ಪೊಲೀಸರು ಸೆಕ್ಷನ್ 304 ಹಾಗೂ ಇತರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ನೊಂದಿರುವ ಬಾಲಕಿ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದಾಳೆ. ಅಲ್ಲದೆ ತನ್ನ ಮೇಲೆ ದಾಖಲಿಸಿರುವ ಮೊಕದ್ದಮೆಗೆ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ. ಈ ಪ್ರಕರಣದಿಂದ ತನ್ನದಲ್ಲದ ತಪ್ಪಿಗೆ ಅಮಾಯಕ ಕುಟುಂಬವೊಂದು ಸಾಮಾಜಿಕವಾಗಿ ಅವಮಾನ ಮತ್ತು ಕಾನೂನು ಸಂಕಷ್ಟ ಎದುರಿಸುವಂತಾಗಿದೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಬಾಲಕಿಯ ತಂದೆ, “ನಾವು ಕೂಲಿ ಕೆಲಸ ಮಾಡೋರು. ನಾನು ಕೃಷಿ ಮಾರುಕಟ್ಟೆಯಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಹಮಾಲಿ ಕೆಲಸ ಮಾಡುತ್ತೇನೆ. ನಮಗೆ ಪೊಲೀಸ್, ಕೋರ್ಟ್, ಕಾನೂನು ಅರಿವು ಇಲ್ಲ. ಕೂಲಿ ದುಡಿದರಷ್ಟೇ ಹೊಟ್ಟೆ ಬಟ್ಟೆಗೆ ಆಸರೆ. ಇಂತಹ ಸಂದರ್ಭದಲ್ಲಿ ಕೂಲಿ ಮಾಡುವುದೂ ಕಷ್ಟವಾಗುತ್ತಿದೆ” ಎಂದು ಅಳಲನ್ನು ತೋಡಿಕೊಂಡರು.
ಸಂತ್ರಸ್ತ ಬಾಲಕಿಯ ಕುಟುಂಬದ ಸ್ನೇಹಿತರಾದ ಫಾತಿಮಾ ಮಾತನಾಡಿ, “ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿರುವ ದೂರನ್ನು ಹಿಂತೆಗೆದುಕೊಳ್ಳಲು ಒತ್ತಡ ಹೇರುವ ಸಲುವಾಗಿ ಸಂತ್ರಸ್ತ ಬಾಲಕಿ ಮತ್ತು ಆಕೆಗೆ ಸಹಾಯ ಮಾಡಿದ ಪರಿಚಯದವರ ಮೇಲೆ ಕೇಸ್ ದಾಖಲಿಸಿದ್ದಾರೆ. ಪರಿಚಯದವರ ಮತ್ತು ರಾಜಕೀಯ ಮುಖಂಡರ ಮೂಲಕ ರಾಜೀ ಸಂಧಾನಕ್ಕೆ ಮತ್ತು ಕೇಸ್ ಹಿಂತೆಗೆದುಕೊಳ್ಳಲು ಬಾಲಕಿಯರ ಮನೆಯವರನ್ನು ಸಂಪರ್ಕಿಸಲಾಗುತ್ತಿದೆ. ಕೇಸ್ ಹಿಂಪಡೆದಲ್ಲಿ ಅವರು ಕೂಡ ಬಾಲಕಿ ಮತ್ತು ಇತರರ ವಿರುದ್ಧ ದಾಖಲಿಸಿರುವ ಕೇಸನ್ನು ಹಿಂಪಡೆಯುವುದಾಗಿ ತಿಳಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಲಕಿಯ ಸಂಬಂಧಿಯೊಬ್ಬರು ಮಾತನಾಡಿ, “ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳಿಬ್ಬರಿಗೂ ನ್ಯಾಯಾಲಯ ಜಾಮೀನು ನೀಡಿರುವುದಾಗಿ ತಿಳಿದು ಬಂದಿದೆ. ಪೋಕ್ಸೊ ಪ್ರಕರಣದಲ್ಲಿ ಪ್ರಕರಣ ದಾಖಲಾಗಿ ಕೇವಲ 25 ದಿನಗಳಲ್ಲಿ ಆರೋಪಿಗಳಿಬ್ಬರಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದರೆ ನೊಂದ ಬಾಲಕಿಯ ಪರವಾಗಿ ನ್ಯಾಯ ಕೊಡಿಸುವ ಹೊಣೆ ಹೊತ್ತಿರುವ ಪೊಲೀಸರ ಮತ್ತು ಸರ್ಕಾರಿ ಅಭಿಯೋಜಕರ ಕರ್ತವ್ಯವನ್ನು ಪ್ರಶ್ನಿಸುವ ಅನಿವಾರ್ಯತೆ ಎದುರಾಗಿದೆ” ಎಂದರು.
ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಸವಿತಾ ಅವರನ್ನು ಮಾತನಾಡಿಸಿದಾಗ “ಪೋಕ್ಸೊ ಕೇಸ್ ದಾಖಲಾಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದ್ದು. ಸಂತ್ರಸ್ತೆಯ ವಿರುದ್ಧ ಹಲ್ಲೆ ಕೇಸ್ ದಾಖಲಿಸಿರುವ ಬಗ್ಗೆ ನಮಗೆ ಇದುವರೆಗೂ ಮಾಹಿತಿ ಇಲ್ಲ. ಹಾಗೂ ಕಾನೂನಿನ ಅಥವಾ ಇತರ ನೆರವು ಬೇಕೆಂದರೆ ನಮ್ಮಲ್ಲಿ ಸಂಪರ್ಕಿಸಿದರೆ ನಾವು ನೆರವು ನೀಡುತ್ತೇವೆ. ಆದರೆ ಈವರೆಗೂ ಅವರು ನಮ್ಮನ್ನು ಯಾವುದೇ ನೆರವಿಗೆ ಸಂಪರ್ಕಿಸಿಲ್ಲ. ಆದ ಕಾರಣ ನಾವು ಕೂಡ ಯಾವುದೇ ಕಾನೂನು ನೆರವು ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ. ಹಾಗೂ ಸಂತ್ರಸ್ತೆಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ವಿರುದ್ಧ ಕೇಸ್ ದಾಖಲಾದರೂ ಆಕೆಯನ್ನು ಬಾಲಮಂದಿರ ಅಥವಾ ಅಬ್ಸರ್ವೇಷನ್ ಸೆಂಟರ್‌ಗೆ ಕಳಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಪೊಲೀಸರು ಯಾವ ರೀತಿ ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಪೊಲೀಸರನ್ನು ಸಂಪರ್ಕಿಸುತ್ತೇವೆ” ಎಂದು ಪ್ರತಿಕ್ರಿಯಿಸಿದರು.

ಈ ಬಗ್ಗೆ ಮಾತನಾಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಸದಸ್ಯರಾದ ಡಾ. ಪ್ರಭಾಕರ್, “ಈ ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಯವರು ನಮ್ಮ ಗಮನಕ್ಕೆ ತಂದಿಲ್ಲ. ಹಾಗೂ ಪೋಕ್ಸೊ ಸಂತ್ರಸ್ತೆಯ ವಿರುದ್ಧ ದಾಖಲಿಸಿರುವ ಮಾರಣಾಂತಿಕ ಹಲ್ಲೆಯ ಪ್ರಕರಣ ಕೂಡ ನನ್ನ ಗಮನಕ್ಕೆ ಬಂದಿಲ್ಲ. ಬಾಲಕಿಯ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಕೋಟೆ ಠಾಣೆಯ ಪೊಲೀಸರು ಯಾವ ರೀತಿ ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಮೇಲ್ನೋಟಕ್ಕೆ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಈ ಕೂಡಲೇ ಸಂತ್ರಸ್ತೆಯನ್ನು ಭೇಟಿ ಮಾಡಿ ಕಾನೂನು ನೆರವು ನೀಡಲು ಕಾರ್ಯ ಪ್ರವೃತ್ತರಾಗುತ್ತೇವೆ” ಎಂದು ತಿಳಿಸಿದರು.
ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕರಾದ ಗೋಪಾಲ್ ನಾಯಕ್ ಅವರನ್ನು ಪ್ರಕರಣದ ಬಗ್ಗೆ ಕೇಳಿದಾಗ “ನಮ್ಮಲ್ಲಿ ಕಳೆದ ಸೆಪ್ಟೆಂಬರ್ 13ರಂದು ಸಂಜೆ 7ಗಂಟೆಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ. ದೂರು ದಾಖಲಿಸುವಾಗ ನಾವು ಬಾಲಕಿಯ ವಯಸ್ಸಿಗೆ ಸಂಬಂಧಿಸಿದಂತೆ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿ ಹದಿನೇಳು ವರ್ಷ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೊ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಗದಗ | ನಟ ದರ್ಶನ್ ಅಭಿಮಾನಿಗಳಿಂದ ಶ್ರವಣ ಶಕ್ತಿ ಕಳೆದುಕೊಂಡೆ: ಹಿರಿಯ ಸಾಹಿತಿ ಗೊ.ರು.ಚ
ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯ ನಿರೀಕ್ಷಕರನ್ನು ಮಾತನಾಡಿಸಿದಾಗ, “ಸೆಪ್ಟೆಂಬರ್ 14ರಂದು ದಾಖಲಾಗಿರುವ ದೂರಿಗೆ ಸಂಬಂಧಪಟ್ಟಂತೆ ಪಿರ್ಯಾದಿಯೊಬ್ಬರು ಹುಡುಗಿ ಸೇರಿದಂತೆ ನಾಲ್ಕೈದು ಜನರ ವಿರುದ್ಧ ಸಹೋದರನಿಗೆ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ದೂರನ್ನು ನೀಡಿದ್ದು ಅವರ ಮಾಹಿತಿಯಂತೆ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. “ದೂರಿನಲ್ಲಿರುವ ಹುಡುಗಿ ಅಪ್ರಾಪ್ತೆ, ಆದರೆ ದೂರಿನಲ್ಲಿ ವಯಸ್ಕಳು ಎಂದು ದಾಖಲಿಸಿಕೊಂಡಿದ್ದೀರಿ” ಎನ್ನುವ ಪ್ರಶ್ನೆಗೆ, “ಅವರು ಹುಡುಗಿಯ ವಯಸ್ಸಿನ ಬಗ್ಗೆ ಯಾವುದೇ ದಾಖಲೆ, ಮಾಹಿತಿ ನೀಡಿಲ್ಲ. ಹಾಗಾಗಿ ನಾವು ಕೋರ್ಟ್‌ಗೆ ವರದಿಯನ್ನು ಸಲ್ಲಿಸುವಾಗ ಮೂಲ ದಾಖಲಾತಿಗಳನ್ನು ಪರಿಶೀಲಿಸಿ ಬಾಲಕಿಯಾಗಿದ್ದಲ್ಲಿ ಅದರಂತೆ ವರದಿ ನೀಡುತ್ತೇವೆ” ಎಂದು ತಿಳಿಸಿದರು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು
Genuine report