ರಾಯಚೂರು ಜಿಲ್ಲೆಯ ಚಿಕ್ಕಸೂಗೂರು ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ಚಿಕ್ಕಸುಗೂರು ಶಾಖೆಯ ಜೆಸ್ಕಾಂ ಶಾಖಾಧಿಕಾರಿ ನಜೀರ್ ಸಾಬ್ ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿಲ್ಲ, ರೈತರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಪರಶುರಾಮ ಅವರಿಗೆ ಮನವಿ ಸಲ್ಲಿಸಿದರು.
ಜೆಸ್ಕಾಂ ಅಧಿಕಾರಿ ನಜೀರಸಾಬ್ ಪರಿಶಿಷ್ಠ ಜಾತಿ ಎಸ್.ಸಿ.ಯ ರೈತರಿಗೆ , ಎಸ್ ಸಿ ಸಮುದಾಯವನ್ನು ಉದ್ದೇಶವಿಟ್ಟುಕೊಂಡು ಜಮೀನುಗಳಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜು ಮಾಡದಿರುವುದರಿಂದ ಹೊಲಗಳಲ್ಲಿ ರೈತರು ತುಂಬಾ ನೋವು ಎದುರಿಸುತ್ತಿದ್ದಾರೆ. ವಿದ್ಯುತ್ ಸರಬರಾಜು ಮಾಡದೆ ರೈತರಿಗೆ ಮೋಸ ಮತ್ತು ವಂಚನೆ ಮಾಡುತ್ತಿದ್ದಾರೆ ಎಂದು ದೂರಿದರು.
ಪರಿಶಿಷ್ಟ ಜಾತಿಗೆ ಸೇರಿದ ಮಾರೆಪ್ಪ ಇವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಮತ್ತು ವಿದ್ಯುತ್ ಮೀಟರ್ ಅಳವಡಿಸಿದೆ. ಪರಿಶಿಷ್ಟ ಜಾತಿಯವರ ಹೊಲಗಳಿಗೆ ಉದ್ದೇಶಪೂರ್ವಕವಾಗಿ ಲೋಡ್ ಶೆಡ್ಡಿಂಗ್ ಮಾಡದೇ ಪ್ರಭಾವಿ ಮತ್ತು ದೊಡ್ಡ ರೈತರುಗಳಿಗೆ ಲೋಡ್ ಶೇಡ್ಡಿಂಗ್ ಇಲ್ಲದ ಸಂಪೂರ್ಣ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಡ ರೈತರು ಜೆ.ಇ.ರವರಿಗೆ ಪೋನ್ ಮಾಡಿದರೆ ಪೋನ್ ತೆಗೆಯುತ್ತಿಲ್ಲ. ಒಂದು ವೇಳೆ ಕರೆ ಸ್ವೀಕರಿಸಿದರೂ ಕೂಡ ಹಾರಿಕೆಯ ಉತ್ತರ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಸೂಗೂರು ಶಾಖಾಧಿಕಾರಿ ನಜೀರ್‌ಸಾಬ್ ಈ ಹಿಂದೆ ಸಿರವಾರ, ಅರಕೇರಾ, ಯರಗೇರಾ ಶಾಖೆಗಳಲ್ಲಿ ಇವರು ಕಾರ್ಯನಿರ್ವಹಿಸಿದ್ದರು. ಅಲ್ಲಿಯೂ ಕೂಡ ಇವರ ವಿರುದ್ಧ ಅನೇಕ ಸಾರಿ ಕೆಲ ಸಂಘಟನೆಗಳು ಮತ್ತು ರೈತರು ದೂರು ನೀಡಿದ್ದಾರೆ. ಅಧಿಕಾರಿ ವಿರುದ್ಧ ಅಕ್ರಮ ಟಿ.ಸಿ.ಗಳು, ವಿದ್ಯುತ್ ಕಂಬಗಳು ಮಾರಾಟ ಮಾಡುತ್ತಾರೆಂದು ಅನೇಕರು ದೂರು ನೀಡಿದ್ದಾರೆ. ಅದನ್ನೇ ಇಲ್ಲಿಯೂ ಮುಂದುವರಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ವಿಶೇಷ | ಹರಿಯಾಣ ಫಲಿತಾಂಶದಿಂದ ರಾಜ್ಯ ಕಾಂಗ್ರೆಸ್ ಪಾಠ ಕಲಿಯುತ್ತದೆಯೇ?
ತಕ್ಷಣ ಅಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಂಡು ಕೆಳ ಭಾಗದ ರೈತರಿಗೆ ವಿದ್ಯುತ್ ವ್ಯತ್ಯಯವಾಗದಂತೆ ಹಾಗೂ ಸರಿಯಾದ ಸಮಯಕ್ಕೆ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾರೆಪ್ಪ ಅರಷಿಕಣಿಗಿ, ಶರಣಪ್ಪ ನೀಲಗಲ್, ರಾಜು ಬೊಮ್ಮನಾಳ, ಹನುಮೇಶ, ಮೈಬೂಬು, ಮಲ್ಲೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
